ಸಂಚಾರ ದಟ್ಟಣೆ-ವಾಯುಮಾಲಿನ್ಯ ಸಮಸ್ಯೆಗಳಿಗೆ ಶಾಶ್ವತ ಕಡಿವಾಣ

Update: 2016-03-21 18:11 GMT

ಬೆಂಗಳೂರು, ಮಾ. 21: ಬೃಹತ್ ಬೆಂಗಳೂರು ಮಹಾನಗರ ವ್ಯಾಪ್ತಿಯಲ್ಲಿ ಸಂಚಾರ ದಟ್ಟಣೆ ಹಾಗೂ ವಾಯುಮಾಲಿನ್ಯ ಸಮಸ್ಯೆಗಳಿಗೆ ಶಾಶ್ವತವಾಗಿ ಕಡಿವಾಣ ಹಾಕುವ ಉದ್ದೇಶದಿಂದಾಗಿ ಇಸ್ರೇಲ್ ದೇಶದ ಪದ್ಧತಿಯನ್ನು ಅಳವಡಿಸಿಕೊಳ್ಳಲು ತೀರ್ಮಾನಿಸಲಾಗಿದೆ ಎಂದು ಪಾಲಿಕೆ ಮೇಯರ್ ಮಂಜುನಾಥ್‌ರೆಡ್ಡಿ ತಿಳಿಸಿದ್ದಾರೆ.

 ಸೋಮವಾರ ಬಿಬಿಎಂಪಿಗೆ ಭೇಟಿ ನೀಡಿದ ಹಾಶ್ವಿಟ್ ನೇತೃತ್ವದ ಇಸ್ರೇಲ್ ನಿಯೋಗದೊಂದಿಗೆ ಮಾತುಕತೆ ನಡೆಸಿದ ನಂತರ ಮಾತನಾಡಿದ ಅವರು, ಬೆಂಗಳೂರು ಮಾಹಿತಿ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಸಾಧನೆಗಳನ್ನು ಮಾಡಿದೆ. ಆದರೆ, ಅಧಿಕಗೊಳ್ಳುತ್ತಿರುವ ಜನಸಂಖ್ಯೆಯಿಂದ ಸಂಚಾರ ದಟ್ಟಣೆ ಹಾಗೂ ವಾಯುಮಾಲಿನ್ಯದಂತಹ ಸಮಸ್ಯೆಯನ್ನು ಎದುರಿಸುತ್ತಿದ್ದೇವೆ ಎಂದು ಹೇಳಿದರು.

ಈಗಾಗಲೇ ಸಂಚಾರ ಮತ್ತು ವಾಯು ಮಾಲಿನ್ಯ ನಿಯಂತ್ರಿಸುವಲ್ಲಿ ಇಸ್ರೇಲ್ ದೇಶ ಯಶಸ್ವಿಯಾಗಿದೆ. ಅಲ್ಲಿನ ಪದ್ಧತಿ ಮತ್ತು ಇಸ್ರೇಲಿಯರ ಅನುಭವವನ್ನು ನಗರದಲ್ಲಿ ಅಳವಡಿಸಿಕೊಳ್ಳಲು ತೀರ್ಮಾನಿಸಲಾಗಿದೆ. ಮುಂದೆ ಬೆಂಗಳೂರು ನಾಗರಿಕರಿಂದ ಉತ್ತಮ ಪ್ರತಿಕ್ರಿಯೆ ದೊರೆಯಲಿದೆ ಎಂದು ಮೇಯರ್ ತಿಳಿಸಿದರು.

ಇಸ್ರೇಲ್‌ನ ಕಾನ್‌ಸ್ಯೂಲೇಟ್ ಜನರಲ್ ಹಾಶ್ವಿಟ್ ಮಾತನಾಡಿ, ಇಸ್ರೇಲ್‌ನಲ್ಲಿ ಜಲಸಂರಕ್ಷಣೆ, ಕೃಷಿ ಮತ್ತು ತ್ಯಾಜ್ಯ ನಿರ್ವಹಣಾ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆಯಾಗಿದೆ. ದೇಶದ ಶೇ.80ರಷ್ಟು ನೀರು ಕುಡಿಯಲು ಯೋಗ್ಯವಾಗಿದ್ದು, ಶುದ್ಧ ನೀರನ್ನು ವಿದೇಶಗಳಿಗೂ ರಫ್ತು ಮಾಡಲಾಗುತ್ತದೆ ಎಂದು ಹೇಳಿದರು.

 ಜಲಸಂರಕ್ಷಣೆ ಕುರಿತಂತೆ ನಮ್ಮ ದೇಶದ ತಜ್ಞರ ಅನುಭವಗಳನ್ನು ಬೆಂಗಳೂರು ನಗರದೊಂದಿಗೆ ಹಂಚಿಕೊಳ್ಳುವುದು ಹೆಮ್ಮೆಯ ವಿಷಯವಾಗಿದೆ ಎಂದ ಅವರು, ಮುಂದಿನ ದಿನಗಳಲ್ಲಿ ಇಸ್ರೇಲ್ ಮತ್ತು ಬೆಂಗಳೂರು ನಗರದೊಂದಿಗೆ ಸಮನ್ವಯದೊಂದಿಗೆ ಕಾರ್ಯನಿರ್ವಹಿಸಲಿದ್ದೇವೆ ಎಂದು ಮಾಹಿತಿ ನೀಡಿದರು.

ಆಡಳಿತ ಪಕ್ಷದ ನಾಯಕ ಸತ್ಯನಾರಾಯಣ್, ಆಯುಕ್ತ ಕುಮಾರ್‌ನಾಯಕ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News