ಅಗ್ರಿ ಗೋಲ್ಡ್ ವಿರುದ್ಧ ತನಿಖೆಗೆ ಹೈಕೋರ್ಟ್ ಆದೇಶ

Update: 2016-04-06 18:24 GMT

ಬೆಂಗಳೂರು, ಎ.6: ಅಗ್ರಿ ಗೋಲ್ಡ್ ಫಾರ್ಮ್ ಎಸ್ಟೇಟ್ ಇಂಡಿಯಾ ಲಿಮಿಟೆಡ್ ಕಂಪೆನಿ ವಿರುದ್ಧ ದಾಖಲಾಗಿರುವ ದೂರುಗಳ ಬಗ್ಗೆ ಸಿಐಡಿ ಸಮಗ್ರ ತನಿಖೆ ನಡೆಸಬೇಕು ಎಂದು ಹೈಕೋರ್ಟ್ ಅದೇಶ ನೀಡಿದೆ. ಕಂಪೆನಿ ವಿರುದ್ಧ ದೊಡ್ಡಬಳ್ಳಾಪುರ ಟೌನ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವನ್ನು ರದ್ದುಗೊಳಿಸಲು ಕೋರಿದ್ದ ಅರ್ಜಿಯನ್ನು ಮಾನ್ಯ ಮಾಡಿರುವ ನ್ಯಾ.ಪಿ.ಡಿ.ವೈಂಗಣ್‌ಕರ್ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ಹೊರಡಿಸಿದೆ. ಒಂದೇ ಬಗೆಯ ವಂಚನೆ ಪ್ರಕರಣಗಳಿಗೆ ಕಾನೂನು ಪ್ರಕಾರ ಎರಡನೆ ಎಫ್‌ಐಆರ್ ದಾಖಲಿಸುವಂತಿಲ್ಲ. ಹಾಗೊಂದು ವೇಳೆ ದಾಖಲಿಸಿದ್ದರೆ ಅದು ಸಂವಿಧಾನದ ಕಲಂ 21ಕ್ಕೆ ವಿರುದ್ಧವಾದದು. ಹಾಗಾಗಿ ಎರಡನೆ ಎಫ್‌ಐಆರ್ ಅಥವಾ ಹಲವು ಎಫ್‌ಐಆರ್‌ಗಳನ್ನು ರದ್ದುಗೊಳಿಸಬೇಕಾಗುತ್ತದೆ. ಆದರೆ ಉಡುಪಿ ಠಾಣೆಯಲ್ಲಿ ದಾಖಲಾಗಿದ್ದ ಮೊದಲನೆ ಪ್ರಕರಣದಡಿಯೇ ದೊಡ್ಡಬಳ್ಳಾಪುರದಲ್ಲಿ ದೂರು ನೀಡಿದ್ದ ಎಚ್.ಸಿ.ದೇವಕುಮಾರ್ ಹೇಳಿಕೆಯನ್ನು ಸಿಆರ್‌ಪಿಸಿ ಸೆಕ್ಷನ್ 161 ಹಾಗೂ 162ರನ್ವಯ ಪಡೆದ ತನಿಖೆ ನಡೆಸಬೇಕು ಎಂದು ಪೀಠ ಆದೇಶಿಸಿದೆ. ದೇವಕುಮಾರ್ ಅವರು 2015ರಲ್ಲಿ ಕಂಪೆನಿ ವಿರುದ್ಧ ದೊಡ್ಡಬಳ್ಳಾಪುರ ಟೌನ್ ಠಾಣೆಯಲ್ಲಿ ದೂರು ನೀಡಿದ್ದರು. ಕಂಪೆನಿಗೆ ಸೇರಿದ ರಮೇಶ್‌ಕುಮಾರ್ ಮತ್ತಿತರರು 750 ದಿನಗಳ ಕಾಲ ದಿನಕ್ಕೆ 20ರೂ.ನಂತೆ ಹಣ ಪಾವತಿಸಿದರೆ, ಅಂತಿಮವಾಗಿ ಬಡ್ಡಿ ಸೇರಿ ಹಣ ಹಿಂತಿರುಗಿಸಲಾಗುವುದು ಎಂದು ಹೇಳಿ ವಂಚನೆ ಎಸಗಿದ್ದಾರೆ ಎಂದು ಹೇಳಿದ್ದರು. ವಂಚನೆ ಸಂಬಂಧ ಕೃಷ್ಣಾ ನಾಯಕ್ ಎಂಬುವರು ಕಂಪೆನಿ ವಿರುದ್ಧ ಉಡುಪಿ ಟೌನ್ ಠಾಣೆಯಲ್ಲಿ. ತುಮಕೂರು ಹಾಗೂ ಸಂಪಂಗಿರಾಮನಗರ ಠಾಣೆಗಳಲ್ಲೂ ಕಂಪೆನಿ ವಿರುದ್ಧ ವಂಚನೆ ಪ್ರಕರಣಗಳು ದಾಖಲಾಗಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News