ದಲಿತರ ರಾಜಕೀಯ ಬಲವರ್ಧನೆಗೆ ಮುಖಂಡರ ಕರೆ
ಬೆಂಗಳೂರು, ಎ. 13: ಸಾಮಾಜಿಕ ಮತ್ತು ಆರ್ಥಿಕ ದೃಷ್ಟಿಯಿಂದ ದಲಿತರು ಒಗ್ಗೂಡುವ ಜೊತೆಗೆ ರಾಜಕೀಯ ಶಕ್ತಿ ನಿರ್ಮಿಸಬೇಕಾಗಿದೆ ಎಂದು ದಲಿತ ಮುಖಂಡರು ಇಂದಿಲ್ಲಿ ಕರೆ ನೀಡಿದ್ದಾರೆ.
ಬುಧವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಕರ್ನಾಟಕ ಸ್ವಾಭಿಮಾನಿ ವೇದಿಕೆ ವತಿಯಿಂದ ಏರ್ಪಡಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್‌ರ 125ನೆ ಜನ್ಮದಿನಾಚರಣೆ ಅಂಗವಾಗಿ ಅಂಬೇಡ್ಕರ್ ರಾಜಕೀಯ ಚಿಂತನೆ ಹಾಗೂ ದಲಿತ ಜನಾಂಗವು ಆಳುವ ವರ್ಗವಾಗುವ ಸವಾಲು ಮತ್ತು ಸಾಧ್ಯತೆ ಕುರಿತು ದುಂಡು ಮೇಜಿನ ಸಭೆ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತ ನಾಡಿದ ದಲಿತ ಮುಖಂಡ ಹಾಗೂ ಬಿಎಸ್ಪಿ ರಾಜ್ಯ ಉಸ್ತುವಾರಿ ಸಂಯೋಜಕ ಮಾರಸಂದ್ರ ಮುನಿಯಪ್ಪ, ದಲಿತರು ಭಾಷೆ, ಪ್ರದೇಶ ಸೇರಿ ಇನ್ನಿತರೆ ಕಾರಣಗಳಿಂದ ದೂರವಾಗಿದ್ದಾರೆ. ಆದರೆ, ಇಂದಿನಿಂದ ಯಾರು ಎಲ್ಲೆಯಿದ್ದರೂ ಒಗ್ಗೂಡುವ ಜೊತೆಗೆ ರಾಜಕೀಯ ಶಕ್ತಿ ನಿರ್ಮಿಸಲು ಮುಂದಾಗಬೇಕೆಂದು ಕರೆ ನೀಡಿದರು.
ಕಾಂಗ್ರೆಸ್, ಬಿಜೆಪಿ ಸೇರಿ ಇನ್ನಿತರೆ ರಾಷ್ಟ್ರೀಯ ಪಕ್ಷಗಳು ದಲಿತ ಮತ್ತು ಅಲ್ಪಸಂಖ್ಯಾತರನ್ನು ಮತ ಬ್ಯಾಂಕ್‌ಗಳಂತೆ ಬಳಕೆ ಮಾಡುತ್ತಿದ್ದಾರೆ. ಇಂತಹ ಆತಂಕಕಾರಿ ಬೆಳವಣಿಗೆಯ ವಿರುದ್ಧ ಅರಿವು ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದ ಅವರು, ಅಲ್ಪಸಂಖ್ಯಾತರಿಗೆ ಇಂದಿಗೂ ಸೂಕ್ತ ಮೂಲಸೌಕರ್ಯವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಆರ್‌ಪಿಐ ರಾಜ್ಯಾಧ್ಯಕ್ಷ ಡಾ.ಎಂ.ವೆಂಕಟ ಸ್ವಾಮಿ ಮಾತನಾಡಿ, ದಲಿತರು ಇಂದಿಗೂ ಜಾತಿನಿಂದನೆಯಿಂದ ಹೊರಬಂದಿಲ್ಲ. ಆಡಳಿತ ನಡೆಸುವ ಸರಕಾರದಲ್ಲಿ ದಲಿತ ಸಮುದಾಯದ ಜನಪ್ರತಿನಿಧಿಗಳಿದ್ದರೂ, ತಳಮಟ್ಟದಲ್ಲಿ ಬದಲಾವಣೆ ಕಾಣಲು ಸಾಧ್ಯವಾಗಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು ಅಧಿಕಗೊಳ್ಳುತ್ತಿವೆ ಎಂದು ಹೇಳಿದರು.
ಸಭೆಯಲ್ಲಿ ಲೋಕಾ ಜನಶಕ್ತಿ ಪಕ್ಷದ ರಾಜ್ಯಾಧ್ಯಕ್ಷೆ ಎಂ.ಪ್ರಭಾವತಿ, ಜಾನಪದ ಅಕಾಡಮಿ ಮಾಜಿ ಅಧ್ಯಕ್ಷ ಡಾ.ಬಾನಂದೂರು ಕೆಂಪಯ್ಯ, ದಲಿತ ಚಿಂತಕ ಸಿದ್ದರಾಜು, ಕಾರ್ಮಿಕ ಮುಖಂಡ ಎಂ.ಶ್ರೀನಿವಾಸ್, ಎಸ್‌ಎಸ್‌ಡಿ ಮುಖಂಡರಾದ ಡಾ.ಜಿ.ಗೋವಿಂದಯ್ಯ, ನರಸಿಂಗ್ ಪಟೇಲ್ ಸೇರಿ ಪ್ರಮುಖರು ಉಪಸ್ಥಿತರಿದ್ದರು.