ಬೆಲ್ಲ (ಗೂಡ್), ಗುರು ದ್ರೋಣಾಚಾರ್ಯ ಆದದ್ದು ಹೀಗೆ !

Update: 2016-04-14 10:41 GMT

ಗೂಡ್ ಅಂದರೆ ಬೆಲ್ಲ. ಗೂಡ್ ಮಾಡಲು ಕಬ್ಬು ಬೇಕು. ಹೆಚ್ಚು ಕಬ್ಬು ಬೆಳೆಯುತ್ತಿದ್ದ ಹಳ್ಳಿ ಗೂಡ್ ಗಾಂವ್. ಈಗಲೂ ಅಲ್ಲಿ ಬೆಲ್ಲ ಹಾಕಿ ಮಾಡುವ ಸಿಹಿ ತಿಂಡಿಗಳೇ ( ಉದಾ : ದೋಡಾ) ತುಂಬಾ ಜನಪ್ರಿಯ. ಈ ಗೂಡ್ ಗಾಂವ್ ಬ್ರಿಟಿಷರ ಆಡಳಿತಾವಧಿಯಲ್ಲಿ , ಕನ್ನಡ - ಕೆನರಾ ಆದಂತೆ, ಮಡಿಕೇರಿ ಮರ್ಕರಾ ಆದಂತೆ ( ಡ ದ ಸಮಸ್ಯೆ) ಗೂಡ್ ಗಾಂವ್ -ಗುರ್ಗಾಂವ್ ಆಯಿತು. ಬ್ರಿಟಿಷರ ತಪ್ಪು ಉಚ್ಚಾರಣೆಯನ್ನು ಆಧರಿಸಿಕೊಂಡು ಕೆಲವರು ಗುರು ಅಂದರೆ ಗುರು ದ್ರೋಣಾಚಾರ್ಯ ಅಂದರು. ಸರಿ! ಹೊಸ ಕತೆಗಳು ಸೃಷ್ಟಿಯಾಗುತ್ತಲೇ ಹೋದುವು. ಈಗ ಈ ತಪ್ಪನ್ನು ಆಧರಿಸಿ ಸರಕಾರ ಅದನ್ನು 'ಗುರು ಗ್ರಾಮ' ಅಂತ ಮಾಡಿದೆ. ಪರಿಣಾಮವಾಗಿ ತಪ್ಪು ಇಮ್ಮಡಿಗೊಂಡಿದೆ. 
ಗಾಂವ್ ಅಂದರೆ ಹಳ್ಳಿ. ಗ್ರಾಮವು ವಿಲೇಜ್ ಎಂಬರ್ಥದಲ್ಲಿ ಬಳಕೆಯಾಗುತ್ತಿದೆ. ಇಂದಿನ ಗುರುಗ್ರಾಮ ಹಳ್ಳಿಯೂ ಅಲ್ಲ, ವಿಲೇಜ್ ಕೂಡಾ ಅಲ್ಲ. ಅಲ್ಲಿ ದ್ರೋಣಾಚಾರ್ಯರಂತ, ಮಗನಿಗೆ ಹಾಲು ಕುಡಿಸಲು ಗತಿಯಿಲ್ಲದಂಥ ಬಡ ಬ್ರಾಹ್ಮಣನಿಗೆ ಯಾವ ಸ್ಥಾನವೂ ಇಲ್ಲ. 
ಗುರುಗ್ರಾಮದಲ್ಲಿ ಕಬ್ಬು ಬೆಳೆಯುವುದಕ್ಕೆ ಅನುಕೂಲವಾಗುವ ಹಾಗೆ ನೆಲದ ಮೇಲೆಯೇ ಬೇಕಾದಷ್ಟು ನೀರಿತ್ತು. 1998ರಲ್ಲಿ ನಾನು ಇಲ್ಲಿ ಕೆಲಸ ಮಾಡಲು ಆರಂಭಿಸಿದಾಗ ನೀರು 30 ಅಡಿಯೊಳಕ್ಕೆ ಸಿಗುತ್ತಿತ್ತು. ಈಗದು 600 ಅಡಿಗಳಿಗೆ ಇಳಿದಿದೆ. ಸಿಂಗಾಪೂರ ಮಾದರಿಯಲ್ಲಿ ಇಲ್ಲಿ ಗಗನ ಚುಂಬೀ ಕಟ್ಟಡಗಳು ತಲೆಯೆತ್ತಿವೆ. ಇಲ್ಲಿನ ಜಮೀನನ್ನು ಕಡಿಮೆ ಬೆಲೆಗೆ ಖರೀದಿಸಿದ ಎನ್ ಆರ್ ಐ ಗಳು ಬೃಹತ್ ಕಟ್ಟಡಗಳನ್ನು ಕಟ್ಟಿ ಅವನ್ನು ಬಹುರಾಷ್ಟ್ರೀಯ ಕಂಪೆನಿಗಳಿಗೆ ಬಾಡಿಗೆ ನೀಡಿ ಹಣ ಸಂಪಾದಿಸುತ್ತಿವೆ. 
ಗೂಡ್, ಗಾಂವ್ ಮತ್ತು ಗುರುಗಳು ಎಲ್ಲೋ ಕಾಣೆಯಾಗಿದ್ದಾರೆ.

ಕೃಪೆ : ಪುರುಷೋತ್ತಮ ಬಿಳಿಮಲೆ ಅವರ ಫೇಸ್ ಬುಕ್ ಪುಟದಿಂದ 

 

Writer - ಪುರುಷೋತ್ತಮ ಬಿಳಿಮಲೆ

contributor

Editor - ಪುರುಷೋತ್ತಮ ಬಿಳಿಮಲೆ

contributor

Similar News