ಪನಾಮಾ ಲೀಕ್ಸ್ ಪಟ್ಟಿಯಲ್ಲಿ 31 ಬೆಂಗಳೂರಿಗರು!

Update: 2016-04-14 17:06 GMT

 ಬೆಂಗಳೂರು, ಎ.14:ತೆರಿಗೆಗಳ್ಳರ ಸ್ವರ್ಗವೆಂಬ ಕುಖ್ಯಾತಿ ಪಡೆದಿರುವ ಬ್ರಿಟಿಶ್ ವರ್ಜಿನ್ ಐಲ್ಯಾಂಡ್ಸ್ (ಬಿವಿಐ)ನ ವಿವಿಧ ಕಂಪೆನಿಗಳಲ್ಲಿ , ಬೆಂಗಳೂರಿನ ಕನಿಷ್ಠ 31 ಕುಟುಂಬಗಳು ಹಣ ಹೂಡಿಕೆ ಮಾಡಿರುವುದು ಇದೀಗ ಬೆಳಕಿಗೆ ಬಂದಿದೆ. ಇತ್ತೀಚೆಗೆ ತನಿಖಾ ಪತ್ರಕರ್ತರ ಅಂತಾರಾಷ್ಟ್ರೀಯ ಒಕ್ಕೂಟ (ಐಸಿಐಜೆ)ವು ಸೋರಿಕೆ ಮಾಡಿದ್ದ ತಥಾಕಥಿತ ಪನಾಮಾ ದಾಖಲೆಪತ್ರಗಳಲ್ಲಿ ಈ ವಿಷಯ ಬೆಳಕಿಗೆ ಬಂದಿದೆ.

   ಆದರೆ ಅವರ ಹೂಡಿಕೆಗಳು ಕಾನೂನುಬದ್ಧವೇ ಅಥವಾ ಸೋಗಿನದ್ದೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಅಲ್ಲದೆ ಹೂಡಿಕೆದಾರರ ಪಟ್ಟಿಯಲ್ಲಿ ಒಬ್ಬನೇ ಒಬ್ಬ ರಾಜಕಾರಣಿಯ ಹೆಸರಿಲ್ಲದಿರುವುದು ಸಂದೇಹಗಳಿಗೆ ಕಾರಣವಾಗಿದೆ. ಹೂಡಿಕೆದಾರರ ಪೈಕಿ ಹೆಚ್ಚಿನವರು ಕಾರ್ಪೊರೇಟ್ ಉದ್ಯಮಿಗಳೆಂದು ತಿಳಿದುಬಂದಿದೆ.

  ವಿವಿಧ ಬ್ಯಾಂಕ್‌ಗಳಿಗೆ 9 ಸಾವಿರ ಕೋಟಿ ರೂ. ಸಾಲ ಪಾವತಿಸದೆ, ಸುಸ್ತಿದಾರರಾಗಿ ವಿದೇಶಕ್ಕೆ ಪರಾರಿಯಾದ ಮದ್ಯ ದೊರೆ ವಿಜಯ್‌ಮಲ್ಯ ಅಲ್ಲದೆ ಯುಬಿ ಗ್ರೂಪಿನ ಉನ್ನತ ಮಾಜಿ ಅಧಿಕಾರಿಗಳಾದ ಅಯಾನಿ ಕುರುಸಿ ರವೀಂದ್ರನಾಥ್ ನೆಡುಂಗಾಡಿ (ಮಾಜಿ ಹಣಕಾಸು ಅಧಿಕಾರಿ), ಅಟಿಕುಕ್ಕೆ ಹರೀಶ್ ಭಟ್ ( ಯುಬಿ ಹೋಲ್ಡಿಂಗ್ಸ್‌ನ ಮಾಜಿ ಆಡಳಿತ ನಿರ್ದೇಶಕ) ಹಾಗೂ ಪಾದೈ ಅನಂತಸುಬ್ರಹ್ಮಣ್ಯನ್ ಮುರಳಿ ( ಯುನೈಟೆಡ್ ಸ್ಪಿರಿಟ್ಸ್ ಲಿ.ನ ಮಾಜಿ ಮುಖ್ಯ ಹಣಕಾಸು ಅಧಿಕಾರಿ) ಬಿವಿಬಿಯ ವಿವಿಧ ಕಂಪೆನಿಗಳಲ್ಲಿ ಹೂಡಿಕೆ ಮಾಡಿರುವ ಬೆಂಗಳೂರಿಗರ ಪಟ್ಟಿಯಲ್ಲಿದ್ದಾರೆ.

 ಸೋರಿಕೆಯಾದ ದಾಖಲೆಗಳ ಪ್ರಕಾರ ರವೀಂದ್ರನಾಥ್ ನೆಡುಂಗಾಡಿ, ಮೊಡೆಸ್ಟೊ ಗ್ರೂಪ್ ಲಿ.ಸಂಸ್ಥೆಯ ಶೇರುದಾರರಾಗಿದ್ದಾರೆ. ಕಪ್ಪು ಹಣ ಬಿಳುಪುಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಮಲ್ಯ ವಿರುದ್ಧ ಜಾರಿ ನಿರ್ದೇಶನಾಲಯ ತನಿಖೆ ನಡೆಸಿದ್ದ ಸಂದರ್ಭದಲ್ಲಿ ರವೀಂದ್ರನಾಥ್ ನೆಡುಂಗಾಡಿಯವರನ್ನು ವಿಚಾರಣೆ ನಡೆಸಿತ್ತು.

    ಹರೀಶ್ ಭಟ್ ಹಾಗೂ ಅವರ ಪತ್ನಿ ಬೃಂದಾ ಭಟ್ ‘ಬ್ಲೇಝಿಂಗ್ ಹಾರಿಝಾನ್ ಲಿ.’ ಹಾಗೂ ಪಿ.ಎ. ಮುರಳಿ ಮತ್ತವರ ಪತ್ನಿ ರುಕ್ಮಿಣಿ ಮುರಳಿ, ‘ಡೈಮಂಡ್ ಡಸ್ಟ್ ’ಎಂಬ ಬಿವಿಐ ಮೂಲದ ಕಂಪೆನಿಗಳಲ್ಲಿ ಹೂಡಿಕೆ ಮಾಡಿದ್ದಾರೆ.

  ಈ ಬಗ್ಗೆ ಈ ನಾಲ್ವರು ಮಾಜಿ ಅಧಿಕಾರಿಗಳನ್ನು ಆಂಗ್ಲ ದೈನಿಕವೊಂದು ಸಂಪರ್ಕಿಸಲು ನಡೆಸಿದ ಪ್ರಯತ್ನಗಳೆಲ್ಲ ವಿಫಲವಾಗಿವೆ. ಅವರ ದೂರವಾಣಿ ಸಂಪರ್ಕ ಸಂಖ್ಯೆ ಹಾಗೂ ಇಮೇಲ್ ವಿಳಾಸಗಳು ಈಗ ಲಭ್ಯವಿಲ್ಲವೆಂದು ತಿಳಿದುಬಂದಿದೆ.ಇವರ ಹೊರತಾಗಿ ಬಳ್ಳಾರಿ ಮೂಲದ ಎರಡು ಗಣಿ ಉದ್ಯಮಿ ಕುಟುಂಬಗಳು ಕೂಡಾ ಬೆಂಗಳೂರು ವಿಳಾಸದೊಂದಿಗೆ ಬಿವಿಐನಲ್ಲಿ ಹೂಡಿಕೆ ಮಾಡಿವೆ.

ಬಿವಿಐ ಮೂಲದ ರಿಯಲ್‌ಎಸ್ಟೇಟ್, ಪುಷ್ಪೋದ್ಯಮ, ತಂತ್ರಜ್ಞಾನ ಮೂಲಸೌಕರ್ಯ ಹಾಗೂ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹೂಡಿಕೆ ಮಾಡಿದ ಉದ್ಯಮಿಗಳ ಹೆಸರುಗಳನ್ನು ಇಲ್ಲಿ ನೀಡಲಾಗಿದೆ.

ಎಕೆಆರ್ ನೆಡುಂಗಾಡಿ, ಆನಂದ್ ರೆಡ್ಡಿ, ಮಾರೆಡ್ಡಿ,ಗಂಗಿ ರೆಡ್ಡಿ, ಅನಿಲ್ ಸಿಂಗ್ ಹಾಗೂ ನಿತಿನ್ ಪಂಚಮಾಲ್, ಅಶೋಕ್ ಮಾಧವ್, ಅಲೋಕ್, ಅಲ್ಪನಾ, ಶಿವಾಂಗಿನಿ ಭಾರ್ತಿಯಾ, ಭವಾನಿ ಪ್ರಸಾದ್ ಟಪಾಲ್, ಬೊಳ್ಳಚೆಟ್ಟಿರಾ ಟಿ. ಅಪ್ಪಚ್ಚು, ವಿಜಯ್‌ಮಲ್ಯ, ಎಚ್.ಜೆ.ಶಿವಾನಿ ಹಾಗೂ ಎಂ.ಜೆ.ಶಿವಾನಿ, ಹರೀಶ್ ಹಾಗೂ ಬೃಂದಾ ಭಟ್, ಜಯಶ್ರೀ ರಾಲ್‌ಹಾನ್, ಕಪಿಲ್ ಸರಿನ್, ಕರುತೂರಿ ರಾಮಕೃಷ್ಣ, ಮಯೂಮತ್, ನಾಗರಾಜ್,ರವಿ, ಸಂಗಮನತ್ ಕುರುಗೋಡ್, ಮುನಕುಟ್ಲ ರಾಮಲಕ್ಷ್ಮಿ, ಮರಳಿ ಪಿ.ಎ., ರುಕ್ಮಣಿ ಮುರಳಿ, ಮುತ್ತುಸ್ವಾಮಿ ಪೂಬಾಲನ್, ಪವನ್ ಅರುಣ್ ಸಾಳ್ವೆ, ಪ್ರದೀಪ್ ರಾಮನರಸಿಂಹ ಶೆಟ್ಟಿ ಕಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News