ಅತ್ತೆಯನ್ನು ಹತ್ಯೆಗೈದ ಸೊಸೆಗೆ ಜಾಮೀನು ನಿರಾಕರಣೆ

Update: 2016-04-15 18:16 GMT

ಬೆಂಗಳೂರು, ಎ.15: ಅತ್ತೆಯನ್ನು ಬೆಂಕಿ ಹಚ್ಚಿ ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಸೊಸೆಗೆ ಜಾಮೀನು ನೀಡಲು ಹೈಕೋರ್ಟ್ ನಿರಾಕರಿಸಿದೆ.
ಪತಿಯ ಆಸ್ತಿ ಮೊದಲನೆ ಹೆಂಡತಿಯ ಪಾಲಾಗುತ್ತದೆ ಎಂದು ಆಘಾತಗೊಂಡಿದ್ದ ಎರಡನೆ ಪತ್ನಿ ತನ್ನ ಅತ್ತೆಯನ್ನು ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿದ್ದಳು. ಈ ಬಗ್ಗೆ ನ್ಯಾಯಮೂರ್ತಿ ಎ.ವಿ. ಚಂದ್ರಶೇಖರ್ ಅವರಿದ್ದ ನ್ಯಾಯಪೀಠ ಸೊಸೆಗೆ ಜಾಮೀನು ಮಂಜೂರು ಮಾಡಲು ನಿರಾಕರಿಸಿದೆ. ಅಲ್ಲದೆ, ಈ ಸಂಬಂಧ ವಿಚಾರಣೆ ನಡೆಸುತ್ತಿರುವ ಅಧೀನ ನ್ಯಾಯಾಲಯಕ್ಕೆ ಆದಷ್ಟು ಶೀಘ್ರದಲ್ಲಿ ಪ್ರಕರಣದ ವಿಚಾರಣೆ ಪೂರ್ಣಗೊಳಿಸುವಂತೆಯೂ ಸೂಚಿಸಿದೆ.
ಪ್ರಕರಣದ ಹಿನ್ನೆಲೆ: ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಮತ್ತೂರು ಕೊಪ್ಪಲು ಗ್ರಾಮದ ನಿವಾಸಿ ಸಣ್ಣಮ್ಮ ಎಂಬವರ ಮಗ ಮಹದೇವ ಎಂಬಾತ ಗೌರಿಮಣಿ ಎಂಬಾಕೆಯನ್ನು ಮದುವೆಯಾಗಿದ್ದ. ಆದರೆ ಗೌರಿಮಣಿ ಕಾರಣಾಂತರಗಳಿಂದ ತಾಯಿ ಮನೆ ಸೇರಿದ್ದಳು.
ಮನೆ ನೋಡಿಕೊಳ್ಳುವುದಕ್ಕೆ ಯಾರೂ ಇಲ್ಲ ಎಂಬ ಕಾರಣದಿಂದ ಮಹದೇವ ರೇಣುಕಾ ಎಂಬಾಕೆಯನ್ನು ಎರಡನೆ ಮದುವೆಯಾಗಿದ್ದ. ಮಹದೇವನ ತಾಯಿ ಸಣ್ಣಮ್ಮ ಹಾಗೂ ರೇಣುಕಾ ನಡುವೆ ಆಗಾಗ ಸಣ್ಣಪುಟ್ಟ ಜಗಳಗಳಾಗುತ್ತಿತ್ತು. ರೇಣುಕಾ ಪತಿ ಮಹದೇವ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮಹದೇವ ವಿರುದ್ಧ ಪೊಲೀಸರು ವಾರಂಟ್ ಜಾರಿ ಮಾಡಿದ್ದರು. ಈ ನಡುವೆ ತನ್ನ ಮತ್ತು ಮಹದೇವ ನಡುವೆ ನಡೆಯುತ್ತಿದ್ದ ಜಗಳಕ್ಕೆಲ್ಲ ಅತ್ತೆ ಸಣ್ಣಮ್ಮನೇ ಕಾರಣ ಎಂದು ಭಾವಿಸಿದ ರೇಣುಕಾ, ಅತ್ತೆ ಸಣ್ಣಮ್ಮಗೆ ಸಮಯಕ್ಕೆ ಸರಿಯಾಗಿ ಊಟವನ್ನೂ ನೀಡದೆ, ಸಣ್ಣಪುಟ್ಟ ಕಾರಣಗಳಿಗೂ ಜಗಳ ತೆಗೆಯುತ್ತಿದ್ದಳು. ಈ ಮಧ್ಯೆ ಸಣ್ಣಮ್ಮ ಮತ್ತು ಮಹದೇವ ತಮ್ಮೆಲ್ಲ ಆಸ್ತಿಯನ್ನು ಗೌರಿಮಣಿ ಹೆಸರಿಗೆ ವರ್ಗಾವಣೆ ಮಾಡುವುದಾಗಿ ಹೇಳಿಕೊಂಡಿದ್ದರು.
    ಇದರಿಂದ ಕುಪಿತಗೊಂಡ ರೇಣುಕಾ 2014ರ ಆ.19ರಂದು ಬೆಳಗ್ಗೆ 7:30ಕ್ಕೆ ಅತ್ತೆ ಸಣ್ಣಮ್ಮನ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಳು. ದೇಹದ ಶೇ.40ರಷ್ಟು ಭಾಗ ಸುಟ್ಟಿದ್ದರಿಂದ ಸಣ್ಣಮ್ಮ ಚಿಕಿತ್ಸೆ ಫಲಕಾರಿಯಾಗದೆ ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು.
 ಈ ಸಂಬಂಧ ದೂರು ದಾಖಲಿಸಿಕೊಂಡಿದ್ದ ಪಿರಿಯಾಪಟ್ಟಣ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸಿ ಆರೋಪಿ ರೇಣುಕಾರ ವಿರುದ್ಧ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
 ಈ ಹಿನ್ನೆಲೆಯಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿದ್ದ ರೇಣುಕಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದು, ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

ಕೌಟುಂಬಿಕ ಕಲಹಗಳಲ್ಲಿ ಈ ರೀತಿಯ ಘಟನೆಗಳು ಸಾಮಾನ್ಯವಾಗಿರುತ್ತವೆ. ಇದೊಂದು ಕ್ರಿಮಿನಲ್ ಪ್ರಕರಣವಾಗಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೆಳ ಹಂತದ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದು, ಜಾಮೀನು ಮಂಜೂರು ಮಾಡಿದಲ್ಲಿ ಆರೋಪಿಗಳು ಕ್ರಿಮಿನಲ್ ವಿಚಾರಣೆಯಿಂದ ತಪ್ಪಿಸಿಕೊಳ್ಳುವುದಕ್ಕೆ ಅವಕಾಶವಿದೆ. ಹೀಗಾಗಿ, ಜಾಮೀನು ನಿರಾಕರಿಸಿರುವ ನ್ಯಾಯಾಲಯದ ಆದೇಶ ಸೂಕ್ತವಾಗಿದೆ.
                                                                              - ಹರೀಶ್‌ಚಂದ್ರ, ವಕೀಲರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News