ಪಿಯು ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಪಿಎಚ್.ಡಿ ವಿದ್ಯಾರ್ಥಿಗಳಿಬ್ಬರ ಬಂಧನ

Update: 2016-04-18 15:04 GMT

ಬೆಂಗಳೂರು, ಎ. 18: ದ್ವಿತೀಯ ಪಿಯುಸಿ ರಸಾಯನಶಾಸ್ತ್ರ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಸಂಬಂಧ ತನಿಖೆಯನ್ನು ಮುಂದುವರೆಸಿರುವ ಸಿಐಡಿ ಅಧಿಕಾರಿಗಳು ಪಿಎಚ್.ಡಿ ವಿದ್ಯಾರ್ಥಿಗಳಿಬ್ಬರನ್ನು ಸೋಮವಾರ ಬಂಧಿಸಿದ್ದಾರೆ.

ಸೋರಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧನವಾಗಿರುವ ಪಿಎಚ್.ಡಿ ವಿದ್ಯಾರ್ಥಿಗಳನ್ನು ಮೈಸೂರಿನ ಕುವೆಂಪು ನಗರ ಬಡಾವಣೆಯ ಕೆ.ನಾಗೇಂದ್ರ(37) ಎಂದು ಸಿಐಡಿ ಗುರುತಿಸಿದ್ದು, ಈತ ಬಯೋಕೆಮಿಸ್ಟ್ರಿ ಸಂಶೋಧನೆ ವಿಷಯದಲ್ಲಿ ಪಿಎಚ್‌ಡಿ ಪಡೆಯಲು ಬೆಂಗಳೂರು ವಿಶ್ವವಿದ್ಯಾಲಯದ ಸೆಂಟ್ರಲ್ ಕಾಲೇಜು ಕ್ಯಾಂಪಸ್‌ನಲ್ಲಿ ನೋಂದಣಿ ಪಡೆದಿದ್ದಾನೆ ಎಂದು ಸಿಐಡಿ ಪೊಲೀಸರು ಹೇಳಿದ್ದಾರೆ.

 ಪಿಎಚ್.ಡಿ. ವ್ಯಾಸಂಗದ ಜೊತೆಗೆ ಬೆಂಗಳೂರಿನ ನಾಗರಬಾವಿ ಸಮೀಪದಲ್ಲಿ ಇಂಟಲೆಕ್ಚುಯಲ್ ಕರೆಸ್‌ಪಾಂಡೆನ್ಸ್ ಕೋಚಿಂಗ್ ಸೆಂಟರ್ ಎಂಬ ಟ್ಯುಟೋರಿಯಲ್ ನಡೆಸುತ್ತಿದ್ದ. ಅದು ಅಲ್ಲದೆ, ಸೋರಿಕೆ ಪ್ರಕರಣದ ಕಿಂಗ್‌ಪಿನ್ ಶಿವಕುಮಾರ್ ಯಾನೆ ಶಿವುಗೂರೂಜಿ ಜೊತೆಗೂಡಿ ಪ್ರಶ್ನೆಪತ್ರಿಕೆಯ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿ ಸೋರಿಕೆಯಾದ ಪ್ರಶ್ನೆಪತ್ರಿಕೆಗಳನ್ನು ಹಣದ ಆಸೆಗಾಗಿ ವಿದ್ಯಾರ್ಥಿಗಳಿಗೆ ಮಾರಾಟ ಮಾಡಿದ್ದಾನೆ ಎಂದು ಸಿಐಡಿ ಮಾಹಿತಿ ನೀಡಿದೆ.

ಅದೇ ರೀತಿ, ಮೈಸೂರಿನ ಶಾರದಾನಗರದ ತಿಮ್ಮೇಗೌಡ ಯಾನೆ ಅರವೆಗೌಡ(37) ಎಂಬಾತ ಅರ್ಥಶಾಸ್ತ್ರ ಸಂಶೋಧನಾ ವಿಷಯದಲ್ಲಿ ಪಿಎಚ್.ಡಿ ಪಡೆಯಲು ಬೆಂಗಳೂರು ವಿವಿಯ ಜ್ಞಾನಭಾರತಿ ಆವರಣದಲ್ಲಿರುವ ಅರ್ಥಶಾಸ್ತ್ರ ವಿಭಾಗದಲ್ಲಿ ಪ್ರವೇಶ ಪಡೆದಿದ್ದು, ಕಿಂಗ್‌ಪಿನ್ ಶಿವಕುಮಾರ ಜೊತೆ ಏಳು ವರ್ಷಗಳಿಂದ ನಿಕಟ ಸಂಪರ್ಕ ಹೊಂದಿದ್ದ. ಅಲ್ಲದೆ, ಆರೋಪಿ ತಿಮ್ಮೇಗೌಡ ಸಹ ಹಣದ ಆಸೆಗಾಗಿ ಪ್ರಶ್ನೆಪತ್ರಿಕೆ ಸೋರಿಕೆ ಮಾಡಿದ್ದಾನೆ ಎಂದು ಸಿಐಡಿ ಖಚಿತಪಡಿಸಿದೆ.

ಸೋರಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಎಂಟು ಆರೋಪಿಗಳನ್ನು ಸಿಐಡಿ ಬಂಧಿಸಿದ್ದು, ಇದೀಗ ಪಿಎಚ್.ಡಿ. ವಿದ್ಯಾರ್ಥಿಗಳಿಬ್ಬರನ್ನು ಬಂಧಿಸಿರುವುದು ಸಿಐಡಿ ಅಧಿಕಾರಿಗಳ ತನಿಖೆ ಮತ್ತಷ್ಟು ತಿರುವು ಪಡೆದಿದೆ.


ವಿದ್ಯಾರ್ಥಿಗಳಿಗೆ ಧ್ಯೇರ್ಯ ತುಂಬಿದರು?
‘ನೀವು ಪಿಯು ಮುಖ್ಯ ಪರೀಕ್ಷೆ ಬಗ್ಗೆ ಚಿಂತೆ ಮಾಡಬೇಡಿ, ಅದನ್ನು ನಾವು ನೋಡಿಕೊಳ್ಳುತ್ತೇವೆ. ನೀವು ಸಿಐಟಿ ಕಡೆ ಗಮನ ಕೊಡಿ ಸಾಕು..’ ಎಂದು ಟ್ಯುಟೋರಿಯಲ್ ನಡೆಸುತ್ತಿದ್ದ ಪಿಎಚ್.ಡಿ. ವಿದ್ಯಾರ್ಥಿ ಕೆ.ನಾಗೇಂದ್ರ ವಿದ್ಯಾರ್ಥಿಗಳಿಗೆ ಹೇಳಿ ಧೈರ್ಯ ತುಂಬುತ್ತಿದ್ದ ಎಂದು ತಿಳಿದುಬಂದಿದೆ.


ನಾಳೆ ಕಿಂಗ್‌ಪಿನ್‌ನ ಅರ್ಜಿ ವಿಚಾರಣೆ
ರಸಾಯನಶಾಸ್ತ್ರ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಕಿಂಗ್‌ಪಿನ್ ಶಿವಕುಮಾರ ಅವರ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆಯು ನಾಳೆ(ಎ.20) ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News