ಜನವರಿ ಅಂತ್ಯಕ್ಕೆ 2.54ಲಕ್ಷ ಎಕರೆ ಅತಿಕ್ರಮಿತ ಜಮೀನು ತೆರವು

Update: 2016-04-18 18:19 GMT

ಬೆಂಗಳೂರು, ಎ.18: ರಾಜ್ಯದ ವಿವಿಧೆಡೆ ಕಬಳಿಕೆಯಾಗಿರುವ ಜಮೀನಿನಲ್ಲಿ ಪ್ರಸಕ್ತ ಸಾಲಿನ ಜನವರಿ ಅಂತ್ಯಕ್ಕೆ 2,54,248 ಎಕರೆಯಷ್ಟು ತೆರವುಗೊಳಿಸಲಾಗಿದೆ ಎಂದು ರಾಜ್ಯ ಸರಕಾರ ಹೈಕೋರ್ಟ್‌ಗೆ ತಿಳಿಸಿದೆ.

ಒತ್ತುವರಿ ಜಮೀನು ತೆರವುಗೊಳಿಸುವ ಸಂಬಂಧ ನಮ್ಮ ಬೆಂಗಳೂರು ಪ್ರತಿಷ್ಠಾನ ಹಾಗೂ ಸಮಾಜ ಪರಿವರ್ತನಾ ಸಮುದಾಯ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಎಸ್.ಕೆ.ಮುಖರ್ಜಿ ಹಾಗೂ ನ್ಯಾಯಮೂರ್ತಿ ರವಿಮಳಿಮಠ ಅವರಿದ್ದ ವಿಭಾಗೀಯ ಪೀಠವು ಸೋಮವಾರ ವಿಚಾರಣೆ ನಡೆಸಿತು.

ಈ ವೇಳೆ ಪ್ರಧಾನ ಸರಕಾರಿ ವಕೀಲ ಆರ್.ದೇವದಾಸ್ ಅವರು, ಈ ಕುರಿತಂತೆ ಸರಕಾರ ಕೈಗೊಂಡಿರುವ ಕ್ರಮಗಳ ಪ್ರಮಾಣ ಪತ್ರ ಸಲ್ಲಿಸಿದರು. ಒತ್ತುವರಿ ಜಮೀನು ತೆರವುಗೊಳಿಸುವ ಸಂಬಂಧ ಕರ್ನಾಟಕ ಭೂ ಒತ್ತುವರಿ ನಿಷೇಧ ಕಾಯ್ದೆ 2011ರ ಅನುಸಾರ ಬೆಂಗಳೂರಿನಲ್ಲಿ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾರಾಯಣ ಅವರ ಅಧ್ಯಕ್ಷತೆಯಲ್ಲಿ ವಿಶೇಷ ನ್ಯಾಯಾಲಯ ಸ್ಥಾಪನೆ ಮಾಡಲಾಗಿದೆ ಎಂದು ದೇವದಾಸ್ ವಿವರಿಸಿದರು.

ರಾಜ್ಯದಾದ್ಯಂತ ಒಟ್ಟು 13,05,878 ಎಕರೆ ಜಮೀನು ಒತ್ತುವರಿಯಾಗಿದೆ. ಇದರಲ್ಲಿ ಬಗರ್ ಹುಕುಂ ಸಾಗುವಳಿ ಅನುಸಾರ ಫಾರಂ ಸಂಖ್ಯೆ 50 ಹಾಗೂ 53ರ ಅಡಿಯಲ್ಲಿ ಸರಕಾರಕ್ಕೆ ಅರ್ಜಿ ಸಲ್ಲಿಸಿರುವ ಹಾಗೂ ವ್ಯಾಜ್ಯ ಹೊಂದಿದ ಪ್ರಕರಣಗಳು 8,36.219ರಷ್ಟು ಇವೆ ಎಂದು ಅವರು ತಿಳಿಸಿದರು.

ರಾಜ್ಯದ ವಿವಿಧೆಡೆ ಒಟ್ಟು 11 ಲಕ್ಷ ಎಕರೆಗೂ ಹೆಚ್ಚು ಪ್ರಮಾಣದ ಸರಕಾರಿ ಜಮೀನು ಒತ್ತುವರಿಯಾಗಿದೆ. ಇದರಿಂದಾಗಿ ರಾಜ್ಯದ ಬೊಕ್ಕಸಕ್ಕೆ ಸುಮಾರು 16 ಲಕ್ಷ ಕೋಟಿ ರೂ.ಗೂ ಮಿಕ್ಕಿ ನಷ್ಟವುಂಟಾಗಿದೆ ಎಂದು ವಿ.ಬಾಲಸುಬ್ರಮಣಿಯನ್ ಹಾಗೂ ಎ.ಟಿ.ರಾಮಸ್ವಾಮಿ ವರದಿಗಳು ತಿಳಿಸಿದ್ದವು. ಈ ವರದಿಯನ್ನು ಜಾರಿಗೆ ತರುವ ಮೂಲಕ ಸರಕಾರ ಒತ್ತುವರಿ ಭೂಮಿ ತೆರವುಗೊಳಿಸಲು ಮುಂದಾಗುವಂತೆ ನಿರ್ದೇಶನ ನೀಡಬೇಕು ಎಂದು ಕೋರಿ ಈ ಪಿಐಎಲ್ ಸಲ್ಲಿಸಲಾಗಿತ್ತು. ಈ ಅರ್ಜಿಯನ್ನು ವಿಲೇವಾರಿ ಮಾಡಿ ಮಧ್ಯಂತರ ಆದೇಶ ನೀಡಿದ್ದ ವಿಭಾಗೀಯ ಪೀಠವು, 3 ಎಕರೆಗೂ ಹೆಚ್ಚಿನ ಅರಣ್ಯ ಭೂಮಿ ಹಾಗೂ 5 ಎಕರೆಗೂ ಹೆಚ್ಚಿನ ಕಂದಾಯ ಭೂಮಿ ತೆರವು ಮಾಡಬಾರದು ಎಂದು ಸೂಚಿಸಿತ್ತು.

ಮೊದಲಿಗೆ 10 ಎಕರೆ ಮೇಲಿನವರನ್ನು ನಂತರ 5ರಿಂದ 10 ಎಕರೆಯ ಒತ್ತುವರಿ ಮಾಡಿದವರನ್ನು, ತದನಂತರ 3ರಿಂದ 5 ಎಕರೆ ಒತ್ತುವರಿ ಹಾಗೂ ಕೊನೆಯದಾಗಿ 3 ಎಕರೆ ಒತ್ತುವರಿ ಮಾಡಿದವರನ್ನು ಹಂತಹಂತವಾಗಿ ತೆರವುಗೊಳಿಸಿ ಎಂದು ನ್ಯಾಯಾಲಯ ತಿಳಿಸಿತ್ತು.

ಇದರ ಅನುಸಾರ ಒತ್ತುವರಿ ತೆರವಿನ ಕುರಿತಂತೆ ಈತನಕ ಕ್ರಿಯಾಯೋಜನೆ ಅನುಸಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಈ ಪ್ರಮಾಣ ಪತ್ರದಲ್ಲಿ ವಿವರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News