ತೀರ್ಪು ಪ್ರಶ್ನಿಸಿ ಹೈಕೋರ್ಟ್‌ಗೆ ಮೇಲ್ಮನವಿ
ಬೆಂಗಳೂರು, ಎ.19: ಹೊಸನಗರ ಶ್ರೀರಾಮ ಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ ಅವರನ್ನು ಅತ್ಯಾಚಾರ ಆರೋಪದಿಂದ ಮುಕ್ತಗೊಳಿಸಿ ನಗರದ 54ನೆ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ನೀಡಿದ್ದ ತೀರ್ಪು ಪ್ರಶ್ನಿಸಿ ರಾಜ್ಯ ಸರಕಾರ ಹೈಕೋರ್ಟ್‌ಗೆ ಕ್ರಿಮಿನಲ್ ಮೇಲ್ಮನವಿ ಸಲ್ಲಿಸಿದೆ.
ರಾಮಕಥಾ ಗಾಯಕಿ ಪ್ರೇಮಲತಾ ದಿವಾಕರ್‌ದಾಖಲಿಸಿದ್ದ ಅತ್ಯಾಚಾರ ದೂರು ಕುರಿತಂತೆ ವಿಚಾರಣೆ ಪೂರ್ಣಗೊಳಿಸಿದ್ದ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಜಿ.ಬಿ.ಮುದಿಗೌಡರ್ ಅವರು ಮಾರ್ಚ್ 31ರಂದು ಸ್ವಾಮೀಜಿಯವರನ್ನು ಅತ್ಯಾಚಾರ ಆರೋಪದಿಂದ ಮುಕ್ತಗೊಳಿಸಿ ತೀರ್ಪು ಪ್ರಕಟಿಸಿದ್ದರು. ಈ ತೀರ್ಪು ರದ್ದು ಗೊಳಿಸುವಂತೆ ಕೋರಿ ರಾಜ್ಯ ಸರಕಾರ ಹೈಕೋರ್ಟ್ ಗೆ ಕ್ರಿಮಿನಲ್ ಮೇಲ್ಮನವಿ ಸಲ್ಲಿಸಿದೆ. ಸ್ವಾಮೀಜಿ ವಿರುದ್ಧದ ಆರೋಪ ಸಾಬೀತುಪಡಿಸಲು ಯಾವುದೇ ಸೂಕ್ತ ಸಾಕ್ಷಾಧಾರಗಳಿಲ್ಲ ಮತ್ತು ಈ ಕುರಿತಂತೆ ತನಿಖೆ ನಡೆಸಿ ಸಿಐಡಿ ಪೊಲೀಸರು ಸಲ್ಲಿಸಿರುವ ಆರೋಪ ಪಟ್ಟಿಯಲ್ಲೂ ಆರೋಪ ಸಾಬೀತುಪಡಿಸುವಂತಹ ಯಾವುದೇ ಸಾಕ್ಷ ಗಳಿಲ್ಲವೆಂದು ನ್ಯಾಯಾ ಧೀಶರು ತಮ್ಮ ತೀರ್ಪಿನಲ್ಲಿ ತಿಳಿಸಿದ್ದರು. ಆದರೆ, ಸಿಐಡಿ ತನಿಖಾ ವರದಿಯಲ್ಲಿ ಸ್ವಾಮೀಜಿ ಅವರು ಅತ್ಯಾಚಾರ ನಡೆಸಿದ ಬಗ್ಗೆ ಎಲ್ಲ ಸಾಕ್ಷಾಧಾರಗಳು ಇವೆ. ಈ ಸಾಕ್ಷಾಧಾರಗಳನ್ನು ಸೆಷನ್ಸ್ ನ್ಯಾಯಾಧೀಶರು ಮಾನ್ಯ ಮಾಡಿಲ್ಲ. ಹೀಗಾಗಿ ಸೆಷನ್ಸ್ ನ್ಯಾಯಾಧೀಶರ ತೀರ್ಪು ರದ್ದುಪಡಿಸಿ, ಸ್ವಾಮೀಜಿಯನ್ನು ದೋಷಿ ಎಂದು ಪರಿಗಣಿಸಿ ಕಾನೂನು ಪ್ರಕಾರ ಸೂಕ್ತ ಶಿಕ್ಷೆ ವಿಧಿಸುವಂತೆ ಕ್ರಿಮಿನಲ್ ಮೇಲ್ಮನವಿಯಲ್ಲಿ ಸರಕಾರ ಮನವಿ ಮಾಡಿದೆ.