23ರಿಂದ ಶಾಲೆ ಕಡೆ-ನನ್ನ ನಡೆ ಆಂದೋಲನ: ಎಂ. ರಮೇಶ್

Update: 2016-04-20 18:09 GMT

ಬೆಂಗಳೂರು,ಎ.20: ಶಾಲೆಯಿಂದ ಹೊರಗುಳಿದಿರುವ ಪ್ರತಿಯೊಂದು ಮಗುವನ್ನು ತಪ್ಪದೆ ಪುನಃ ಶಾಲೆಗೆ ಸೇರ್ಪಡೆ ಮಾಡುವ ನಿಟ್ಟಿನಲ್ಲಿ ಎ.23 ರಿಂದ ‘ಶಾಲೆ ಕಡೆ -ನನ್ನ ನಡೆ’ ‘ಶಿಕ್ಷಣ ನನ್ನ ಮೂಲಭೂತ ಹಕ್ಕು’ ಬೃಹತ್ ಜಾಗೃತಿ ಆಂದೋಲನ ಹಮ್ಮಿಕೊಳ್ಳಲಾಗುತ್ತದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ಹಾಗೂ ಜಿಲ್ಲಾ ಸತ್ರ ನ್ಯಾಯಾಧೀಶರಾದ ಎಂ.ರಮೇಶ್ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಾಗೃತಿ ಆಂದೋಲನದ ರೂಪ ರೇಷೆಗಳ ಕುರಿತು ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಚರ್ಚಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಆಂದೋಲನವನ್ನು ಯಶಸ್ವಿಗೊಳಿಸಲು ಗ್ರಾಮ ಮಟ್ಟದಲ್ಲಿ ಜಾಥಾ, ಬೀದಿನಾಟಕ, ಗುಂಪುಚರ್ಚೆ ಇನ್ನಿತರೆ ಕಾರ್ಯಕ್ರಮಗಳನ್ನು ಆಯೋಜಿಸಿ, ಜನರಲ್ಲಿ ಜಾಗೃತಿ ಮೂಡಿಸಬೇಕೆಂದು ತಿಳಿಸಿದರು. ಅಲ್ಲದೆ, ಶಾಲೆಯಿಂದ ಹೊರಗುಳಿದಿರುವ ಹಾಗೂ ಶಾಲೆ ಬಿಟ್ಟ ಮಕ್ಕಳನ್ನು ಗುರುತಿಸಲು ಗ್ರಾಮ ಮಟ್ಟದಿಂದಲೇ ಸರ್ವೇ ಕೆಲಸವನ್ನು ಆರಂಭಿಸಬೇಕು. ಇದಕ್ಕೆ ಆವಶ್ಯಕ ಇದ್ದರೆ ಸ್ಥಳೀಯ ಜನ ಪ್ರತಿನಿಧಿಗಳು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರ ನೆರವನ್ನು ಪಡೆಯಬೇಕೆಂದು ತಿಳಿಸಿದರು.

ಈ ಆಂದೋಲನವನ್ನು ವ್ಯಾಪಕವಾಗಿ ಹಮ್ಮಿಕೊಳ್ಳುವ ದೃಷ್ಟಿಯಿಂದ ಗ್ರಾಮ ಪಂಚಾಯಯತ್, ಹೋಬಳಿ, ತಾಲೂಕು ಹಾಗೂ ಜಿಲ್ಲಾ ಹೀಗೆ ಎಲ್ಲಾ ಹಂತದಲ್ಲಿ ಬೃಹತ್ ಪ್ರಮಾಣದಲ್ಲಿ ಜಾಗೃತಿಯನ್ನು ಆರಂಭಿಸಿ ಜನರಲ್ಲಿ ಅರಿವು ಮೂಡಿಸುವುದರ ಜೊತೆಗೆ ಶಾಲೆ ಬಿಟ್ಟಿರುವ ಪ್ರತಿಯೊಂದು ಮಗುವನ್ನು ಶಾಲೆಗೆ ಸೇರಿಸಬೇಕೆಂದು ಸಭೆಯಲ್ಲಿ ಭಾಗವಹಿಸಿದ್ದ ಅಧಿಕಾರಿಗಳಿಗೆ ಸೂಚಿಸಿದರು.

ಆಂದೋಲನದ ಉದ್ದೇಶ ಸಫಲವಾಗಲು ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆರೋಗ್ಯ ಇಲಾಖೆ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಇಲಾಖೆ, ತಾಲೂಕು ಹಾಗೂ ಗ್ರಾಮ ಪಂಚಾಯತ್‌ಗಳು ಕೈಜೋಡಿಸಬೇಕು. ಶಾಲೆ ಬಿಟ್ಟಿರುವ ಮಕ್ಕಳನ್ನು ಗುರುತಿಸುವ ಕಾರ್ಯವನ್ನು ಪರಿಣಾಮಕಾರಿಯಾಗಿ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಸ್.ಪಾಲಯ್ಯ ಹೇಳಿದರು.

ಸಭೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಪುಷ್ಪ ಜಿ.ಅಯ್ಯರ್ ಮಕ್ಕಳ ರಕ್ಷಣಾ ಆಯೋಗದ ಸದಸ್ಯ ವೈ.ಮರಿಸ್ವಾಮಿ, ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News