ಡಾ.ಅಂಬೇಡ್ಕರ್ ದಲಿತರಿಗೆ ಮಾತ್ರ ಸೀಮಿತವೇ?

Update: 2016-05-05 17:19 GMT

ಅವರಿಗೆ ಇಬ್ಬರು ಮಕ್ಕಳು, ಚಿಕ್ಕ ಸೂರು, ಸೂರಿನ ಕೆಳಗೆ ಇವರ ಪುಟ್ಟ ಬದುಕು. ಬಡತನ ತಾಂಡವವಾಡುತ್ತಿದೆ. ಮನೆಯ ಹಿರಿಯ ಮಗನ ವಯಸ್ಸು ಏಳು ವರ್ಷ. ಅಂದರೆ ಎರಡನೆಯ ತರಗತಿಯಲ್ಲಿ ಓದುತ್ತಿದ್ದಾನೆ. ಇನ್ನುಳಿದ ಒಂದು ಮಗು ಒಂದೆರಡು ವರ್ಷದ್ದು. ಅಣ್ಣನ ಜೊತೆಯಲ್ಲಿಯೆ ಅವನಿಗೆ ಸ್ವರ್ಗ ನರಕವೆಲ್ಲ. ಈ ಮನೆಯ ಹಿರಿಯ ಮಗನ ಕಾಯಕ ದಿನಾಲು ಬೆಳಗ್ಗೆ ಮತ್ತು ಸಂಜೆ ಭಿಕ್ಷೆ ಬೇಡುವುದು. ಉಳಿದ ಸಮಯದಲ್ಲಿ ಶಾಲೆಗೆ ಹೋಗುವುದು. ಈ ಮನೆಯ ಯಜಮಾನರು ತಂದೆ ಹಾಗೂ ತಾಯಿ ಆರಾಮವಾಗಿ ಮಗನ ದುಡಿಮೆಯಲ್ಲಿ ದಿನಾಲು ಸಾರಾಯಿ ಕುಡಿದು ಸೂರಿನ ಕೆಳಗೆ ನಮಗೆ ಬಡತನವಿದೆಯೆಂದು ಮಲಗುತ್ತಾರೆ. ಮಾಡಲು ಕೆಲಸವಿಲ್ಲವೆಂದು ಗೋಳಿಡುತ್ತಾರೆ. ಮನೆಯ ಹಿರಿ ಮಗ ಬೆಳಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ಭಿಕ್ಷೆ ಬೇಡಿ ಅಪ್ಪಅಮ್ಮನಿಗೆ ಸಾರಾಯಿ ತಂದುಕೊಟ್ಟ ನಂತರವೇ ಅವನ ದಿನ ಪ್ರಾರಂಭವಾಗುತ್ತದೆ ಅದೆ ರೀತಿಯಲ್ಲಿ ದಿನದ ಸೂರ್ಯ ಕೊನೆಯುಸಿರೆಳೆಯುತ್ತಾನೆ. ಇಂತಹ ಪರಿಸ್ಥಿತಿಯಲ್ಲಿರುವ ಈ ಮಗುವಿಗೆ ಯಾರ ಪಾಪಕ್ಕಾಗಿ ಈ ಕಷ್ಟ?.

ಬಡವರ ಪರವೆಂದು ಬಡವರ ಬಾಳು ಹಸನಾಗಲೆಂದು ದುಡಿದ ಅಂಬೇಡ್ಕರ್ ಈ ದೃಶ್ಯ ನೋಡಿದರೆ ಎಷ್ಟು ನೊಂದುಕೊಳ್ಳುತ್ತಿದ್ದರು. ಇಲ್ಲಿ ಅವರ ಕುಲ ಮುಖ್ಯವಲ್ಲ, ಅವರ ಮನಸ್ಸು, ಧೈರ್ಯ ಮನಸಾಕ್ಷಿ ಮುಖ್ಯವಾಗುತ್ತದೆ. ಇಂದು ನಾವೆಲ್ಲ ಡಾ.ಅಂಬೇಡ್ಕರ್‌ರನ್ನು ದಲಿತರಿಗೆ ಮಾತ್ರ ಸೀಮಿತ ಮಾಡಿ ಅವರಿಗೆ ಅಪಮಾನ ಮಾಡುತ್ತಿದ್ದೇವೆ. ಅವರು ಇಡೀ ಮನುಕುಲಕ್ಕೆ ಸೇರಿದ ನಾಯಕರಾಗಿದ್ದಾರೆ.

ಈಗ ನಾವೆಲ್ಲ ಡಾ.ಅಂಬೇಡ್ಕರ್ ಅವರ 125ನೆ ಜನ್ಮದಿನಾಚರಣೆಯನ್ನು ಆಚರಿಸುತ್ತಿದ್ದೇವೆ. ಈ ಆಚರಣೆಗಳಲ್ಲಿ ದಲಿತರಿಗಿಂತ ದಲಿತೇತರರ ರಾಜಕೀಯ ಪುಢಾರಿಗಳೆ ಹೆಚ್ಚು ದಲಿತ ಮತ್ತು ಅಂಬೇಡ್ಕರ್‌ರ ಬಗ್ಗೆ ಮಾತನಾಡಿದ್ದು ಗಮನಿಸಬೇಕಾದ ವಿಷಯವಾಗಿದೆ. ಈ ಎಲ್ಲಾ ಆಚರಣೆಗಳಲ್ಲಿ ‘‘ಬಾಬಾಸಾಹೇಬ್ ಅಂಬೇಡ್ಕರ್‌ರನ್ನು ದಲಿತರ ಪ್ರತಿನಿಧಿ, ಆಶಾಕಿರಣ, ದಲಿತರಿಗೆ ಮಾತ್ರ ಅವಕಾಶಗಳನ್ನು ಕೊಟ್ಟರು, ಸಂವಿಧಾನದಿಂದ ದಲಿತರ ಏಳಿಗೆಯಾಗಿದೆ’’ ಎಂಬ ಕೂಗು ಕೇಳಿಬಂತು. ಈ ವಿಷಯದ ಜಾಡು ಹಿಡಿದು ಹೊರಟರೆ ನಮಗೆ ಅಂಬೇಡ್ಕರ್ ದಲಿತ ಕುಲದ ಪರವಾಗಿ ಮಾತ್ರ ಇದ್ದರೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. ದೇಶದಲ್ಲಿ ರಾಜಪ್ರಭುತ್ವ ಪ್ರಮುಖವಾಗಿತ್ತು. ಅಪ್ಪರಾಜ ಸತ್ತರೆ ತನ್ನ ಮಗನೆ ಮುಂದಿನ ರಾಜನೆಂದು ನಿರ್ಧರಿತವಾಗಿತ್ತು. ಆಳುವವನು ಆಡಳಿತ ಮಾಡುತ್ತಿದ್ದನು. ಅರಸನಾಗಿ ಮೆರೆಯುತ್ತಿದ್ದನು. ಆಳಾಗಿ ದುಡಿಯುವವನ ಮಗ ಮುಂದೆ ಆಳಾಗಿಯೆ ಮುಂದುವರಿಯಬೇಕಿತ್ತು. ರಾಜನ ನಿರ್ಧಾರವೆ ಅಂತಿಮವಾಗಿತ್ತು. ಬಡವರು ಚಿಕ್ಕ ತಪ್ಪುಮಾಡಿದರೆ ದೊಡ್ಡ ಶಿಕ್ಷೆಯಿತ್ತು, ಶ್ರೀಮಂತರು ಎಂತಹ ದೊಡ್ಡ ತಪ್ಪುಮಾಡಿದರೂ ಶಿಕ್ಷೆ ಮಾಫಿ ಮಾಡಲಾಗುತಿತ್ತು. ಇಂತಹ ವಾತಾವರಣವನ್ನು ಕುಲಂಕಶವಾಗಿ ಗಮನಿಸಿದ ಡಾ. ಅಂಬೇಡ್ಕರ್ ಪ್ರಜಾಪ್ರಭುತ್ವ ಈ ದೇಶದಲ್ಲಿ ನೆಲಸಲು ಕಾರಣರಾದರು. ಈ ಪ್ರಜಾಪ್ರಭುತ್ವದ ಲಾಭ ಕೇವಲ ದಲಿತರಿಗೆ ಮೀಸಲಾಗಿಲ್ಲ. ಭಾರತದಲ್ಲಿ ಹುಟ್ಟಿದ ಪ್ರತಿಯೊಬ್ಬರಿಗೆ ಪ್ರಜಾಪ್ರಭುತ್ವವಿದೆ. ತನ್ನದೇ ಆದ ಹಕ್ಕು ಕರ್ತವ್ಯಗಳಿವೆ. ಹೀಗಿರುವಾಗ ಅಂಬೇಡ್ಕರ್‌ರನ್ನು ದಲಿತರಿಗೆ ಮಾತ್ರ ಹೇಗೆ ಸೀಮಿತ ಮಾಡುತ್ತೀರಿ.? ಭಾರತದಲ್ಲಿ ಸಂವಿಧಾನಕ್ಕಿಂತ ಮುಂಚೆ ಓಟು ಹಾಕುವ ಪದ್ಧತಿಯಲ್ಲಿ ಭಾರೀ ಅನ್ಯಾಯವಿತ್ತು. ಭೂಮಿವುಳ್ಳವರು, ಸಮಾಜದ ಮೇಲ್ವರ್ಗದವರು, ಮೇಲುಜಾತಿಯವರು ಮತ್ತು ಪುರುಷರು ಮಾತ್ರ ಮತ ಹಾಕುವ ಪದ್ಧತಿಯಿತ್ತು. ಈ ಪದ್ಧತಿಯ ವಿರುದ್ಧ ಧ್ವನಿಯೆತ್ತುವುದರ ಜೊತೆಗೆ ಈ ಧ್ವನಿಗೆ ಪ್ರೇರಕ ಶಕ್ತಿಯಾಗಿ ಬೆಳೆದರು ಅಂಬೇಡ್ಕರ್. ಪಾರ್ಲಿಮೆಂಟಿನಲ್ಲಿ ಮೊದಲಬಾರಿಗೆ ಸಮಾನತೆಯ ಬಗ್ಗೆ ಮಾತನಾಡಿದ್ದು ಬರೀ ಒಂದು ಕುಲಕ್ಕೆ ಮಾತ್ರವಲ್ಲ, ಇಡೀ ಸಮುದಾಯದ ಅಭಿವೃದ್ಧಿಗಾಗಿ. ಅದರ ಫಲವಾಗಿಯೆ ಈ ದೇಶದಲ್ಲಿ ಇವತ್ತು ಮತ ಹಾಕುವ ವಿಧಾನ ಜಾರಿಯಾಯಿತು. ಇಡೀ ದೇಶದಲ್ಲಿರುವ ಯಾವುದೇ ವ್ಯಕ್ತಿಯ ಮತಕ್ಕೆ ಒಂದೇ ಬೆಲೆಯಿದೆ. ಇವತ್ತು ಮೋದಿಯ ಓಟಿಗೂ ಒಂದೇ ಬೆಲೆ. ನಮ್ಮ ಓಣಿಯ ಕಲ್ಲಪ್ಪಮಲ್ಲಪ್ಪನ ಓಟಿಗೂ ಅದೇ ಬೆಲೆಯಿದೆ. ಮುಖ್ಯವಾಗಿ ಮಹಿಳೆಯರು ಕೂಡ ಪ್ರಜಾಪ್ರಭುತ್ವದ ಹಕ್ಕು ಪಡೆದಿದ್ದು ಈ ಸಂದರ್ಭದಲ್ಲಿಯೆ ಎಂಬುವುದು ಅನೇಕರಿಗೆ ಅರಿವಿಲ್ಲ. ಇವತ್ತು ಭಾರತದಲ್ಲಿ ಹುಟ್ಟಿದ ಪ್ರತಿಯೊಬ್ಬ ಪ್ರಜೆ 18 ವರ್ಷ ವಯಸ್ಸಿನ ಎಲ್ಲರೂ ಮತ ಹಾಕುವ ಮೂಲಕ ತಮ್ಮ ಹಕ್ಕನ್ನು ಚಲಾಯಿಸಿ ತಮಗೆ ಬೇಕಾದ ನಾಯಕನನ್ನು ಆರಿಸುತ್ತಾರೆ ಹೀಗಿರುವಾಗ ಅದು ಹೇಗೆ ಅಂಬೇಡ್ಕರ್ ದಲಿತರಿಗೆ ಮಾತ್ರ ಸೀಮಿತ ಮಾಡುತ್ತೀರಿ.? ಡಾ. ಅಂಬೇಡ್ಕರ್ ಮೊಟ್ಟ ಮೊದಲಬಾರಿಗೆ ಮಹಿಳೆಗೆ ಆಸ್ತಿಯಲ್ಲಿ ಪಾಲು ಕೊಡಬೇಕು ಎಂಬ ವಾದ ಮಂಡನೆ ಮಾಡಿದವರು. ಹಿಂದು ಕೋಡ್ ಬಿಲ್ ಸರಕಾರ ಒಪ್ಪದಿದ್ದಾಗ ತಮ್ಮ ಅಧಿಕಾರವನ್ನೆ ತ್ಯಾಗ ಮಾಡಿದವರು. ಇಂದು ಮಹಿಳೆಯರು ಮುಖ್ಯವಾಹಿನಿಗೆ ಬರಲು ಮೂಲಕಾರಣ ಡಾ.ಅಂಬೇಡ್ಕರ್. ಹೀಗಿರುವಾಗ ಅವರು ದಲಿತರಿಗೆ ಮಾತ್ರ ಹೇಗೆ ಸೀಮಿತ? ಈ ದೇಶದ ನ್ಯಾಯ ಎಲ್ಲರಿಗೂ ಒಂದೇ ತರ ಮಾಡಿದವರು. ಅನ್ಯಾಯ ವೆಸಗಿದ ಮೇಲ್ಜಾತಿ ಅಥವಾ ಕೀಳುಜಾತಿ ಯಾರೇ ಇರಲಿ ನ್ಯಾಯ ಮಾತ್ರ ಎಲ್ಲರಿಗೂ ಒಂದೆ ಎಂಬ ಮಾತು ಹೇಳಿದವರು ಕೃತಿಯಲ್ಲಿ ಜಾರಿಗೆ ತಂದವರು. ಅನ್ಯಾಯ ಅಕ್ರಮಗಳನ್ನು ತಡೆಯುವಲ್ಲಿ ಕಠಿಣ ಕಾನೂನುಗಳನ್ನು ರೂಪಿಸಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ. ಆದರೆ ನಾವು ಮಾತ್ರ ಅವರನ್ನು ದಲಿತರ ಪರವೆಂದು ನಂಬಿದ್ದೇವೆ. ಬಸವಣ್ಣನನ್ನು ಲಿಂಗಾಯತರ ಓಣಿಯಿಂದ, ಅಂಬೇಡ್ಕರ್‌ರನ್ನು ದಲಿತರ ಓಣಿಯಿಂದ ಹೀಗೆ ಎಲ್ಲಾ ನಾಯಕರನ್ನು ಸೀಮಿತಗೊಳಿಸುವ ಪರದಿಯಿಂದ ಮುಕ್ತಗೊಳಿಸಬೇಕಿದೆ. ಅವರೆಲ್ಲ ಇಡೀ ಮನುಕುಲಕ್ಕೆ ಒಳಿತನ್ನು ಮಾಡಿದ್ದಾರೆಂಬ ಸತ್ಯ ಭಾರತೀಯರೆಲ್ಲ ಅರಿಯಬೇಕಿದೆ. ಅವರ ಆದರ್ಶಗಳನ್ನು ಅನುಪಾಲನೆ ಮಾಡಬೇಕಿದೆ.

Writer - ಕೆ.ಎಂ.ವಿಶ್ವನಾಥ ಮರತೂರ

contributor

Editor - ಕೆ.ಎಂ.ವಿಶ್ವನಾಥ ಮರತೂರ

contributor

Similar News