ಅರ್ಜಿ ಆಹ್ವಾನ

Update: 2016-05-05 18:25 GMT

‘ರಾಜೀವ್‌ಗಾಂಧಿ ಮಾನವ ಸೇವಾ’ ಪ್ರಶಸ್ತಿ

ಬೆಂಗಳೂರು, ಮೇ 5: ಮಕ್ಕಳ ಅಭಿವೃದ್ಧಿ, ರಕ್ಷಣೆ ಹಾಗೂ ಕಲ್ಯಾಣ ಕ್ಷೇತ್ರದಲ್ಲಿ ಹತ್ತು ವರ್ಷಕ್ಕಿಂತ ಹೆಚ್ಚು ಸೇವೆ ಸಲ್ಲಿಸಿದ ವ್ಯಕ್ತಿಗಳನ್ನು ಗುರುತಿಸಿ ಕೇಂದ್ರ ಸರಕಾರದಿಂದ ನೀಡುವ ‘ರಾಜೀವ್‌ಗಾಂಧಿ ಮಾನವ ಸೇವಾ’ ರಾಷ್ಟ್ರ ಪ್ರಶಸ್ತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಕೆಲಸ ಮಾಡಿರುವ ವ್ಯಕ್ತಿಗಳಿಗೆ ಅವರ ಕೆಲಸದ ಗುಣಮಟ್ಟದ ಆಧಾರದ ಮೇಲೆ ಪ್ರಶಸ್ತಿಯನ್ನು ನೀಡಲಾಗುತ್ತದೆ. ಕ್ಷೇತ್ರದಲ್ಲಿ ಕನಿಷ್ಠ 10 ವರ್ಷಗಳಿಗಿಂತ ಹೆಚ್ಚು ಕಾಲ ಕೆಲಸ ಮಾಡಿರಬೇಕು. ಯಾವುದೇ ಸಂಘ-ಸಂಸ್ಥೆಗಳಲ್ಲಿ ವೇತನ ಪಡೆಯುವ ವ್ಯಕ್ತಿಗಳು ಈ ಪ್ರಶಸ್ತಿಗೆ ಅರ್ಹರಿರುವುದಿಲ್ಲ. ರಾಜ್ಯ ಸರಕಾರದಿಂದ ರಚನೆಯಾದ ಸಮಿತಿಯು ಪ್ರಶಸ್ತಿಗಳಿಗೆ ಬಂದ ಅರ್ಜಿಗಳನ್ನು ಸ್ವೀಕರಿಸಿಸಲಾಗುತ್ತದೆ. ನಂತರ ಅದನ್ನು ಪರಿಶೀಲನೆ ಮಾಡಿ ಕೇಂದ್ರಕ್ಕೆ ಶಿಫಾರಸು ಮಾಡಲಾಗುತ್ತದೆ. ಪ್ರಸಕ್ತ ಸಾಲಿನಲ್ಲಿ ರಾಜೀವ್‌ಗಾಂಧಿ ಮಾನವ ಸೇವಾ ರಾಷ್ಟ್ರ ಪ್ರಶಸ್ತಿಗಾಗಿ ಮತ್ತು ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ವ್ಯಕ್ತಿ ಮತ್ತು ಸಂಸ್ಥೆಗಳಿಗೆ ನೀಡುವ ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸುವ ಆಸಕ್ತರು ನಿಗದಿಪಡಿಸಿದ ಅರ್ಜಿ ನಮೂನೆಗಳಲ್ಲಿ ಜಿಲ್ಲಾ ಉಪ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಚೇರಿಯಿಂದ ಅರ್ಜಿ ಪಡೆದು, ಭರ್ತಿ ಮಾಡಿ ಸಂಬಂಧಪಟ್ಟ ಜಿಲ್ಲಾ ಉಪ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇಲ್ಲಿಗೆ ಸಲ್ಲಿಸಬೇಕು ಎಂದು ತಿಳಿಸಿದ್ದಾರೆ. ಅರ್ಜಿಗಳನ್ನು ಮೇ 25 ರೊಳಗೆ ಸಂಬಂಧಪಟ್ಟ ಉಪ ನಿರ್ದೇಶಕರಿಗೆ ಸಲ್ಲಿಸಬೇಕಿದೆ. ನಿಗದಿತ ದಿನಾಂಕದ ನಂತರ ಸಲ್ಲಿಸಿದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಬಿವಿಎ ಪದವಿ

ಬೆಂಗಳೂರು, ಮೇ 5: ಶಿಲ್ಪ ಗುರು ಕುಲಗಳ ಕೇಂದ್ರವು ಪ್ರಸಕ್ತ ಸಾಲಿನ ಬಿವಿಎ ಪದವಿಗಳ ಪ್ರವೇಶಾತಿಗಾಗಿ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಪದವಿ ಕೋರ್ಸ್‌ನಲ್ಲಿ 2 ವರ್ಷಗಳ ಫೌಂಡೇಶನ್, 3 ವರ್ಷಗಳ ಅವಧಿಯ ಸಾಂಪ್ರದಾಯಿಕ ಪ್ರತಿಮಾಶಿಲ್ಪ ಅಥವಾ ದೇವಾಲಯ ನಿರ್ಮಾಣ ಕೋರ್ಸ್‌ಗಳಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಕೋರ್ಸ್ ಸೇರಲು ಬಯಸುವ ಅಭ್ಯರ್ಥಿಗಳು ಕನಿಷ್ಟ ಎಸೆಸೆಲ್ಸಿ ಅಥವಾ ಪಿಯುಸಿ ಪರೀಕ್ಷೆಯಲ್ಲಿ ಪಾಸಾಗಿರಬೇಕು. ಫೌಂಡೇಷನ್ ಕೋರ್ಸ್ ಪಾಸಾದವರು ಸಾಂಪ್ರದಾಯಿಕ ಶಿಲ್ಪದಲ್ಲಿ ಮೂರು ವರ್ಷಗಳ ಪದವಿ ಕೋರ್ಸ್‌ಗೆ ಸೇರಲು ಅರ್ಹರಾಗಿರುತ್ತಾರೆ.

  ಸಾಂಪ್ರದಾಯಿಕ ಪ್ರತಿಮಾ ಶಿಲ್ಪದ ಅಧ್ಯಯನದ ವಿದ್ಯಾರ್ಥಿಗೆ 16 ವರ್ಷ ವಯಸ್ಸಾಗಿರಬೇಕು. ಸಾಂಪ್ರದಾಯಿಕ ಶಿಲ್ಪಿಗಳಲ್ಲಿ ಅಥವಾ ಸಾಂಪ್ರದಾಯಿಕ ಶಿಲ್ಪ ತರಬೇತಿ ನೀಡುವ ಸಂಸ್ಥೆಗಳಲ್ಲಿ ಶಿಲ್ಪಾಭ್ಯಾಸ ಮಾಡಿರುವವರಿಗೆ ಆದ್ಯತೆ. ಕನ್ನಡ ಓದಲು ಮತ್ತು ಬರೆಯಲು ಬರಬೇಕು.

ಆಸಕ್ತ ವಿದ್ಯಾರ್ಥಿಗಳು 15*25 ಸೆಂ.ಮೀ. ಪೋಸ್ಟ್ ಕವರ್ ಮೂಲಕ ಪೂರ್ತಿ ವಿಳಾಸ ಕಳುಹಿಸಿ ನಿಗದಿತ ಅರ್ಜಿಯನ್ನು ಅಂಚೆ ಮೂಲಕ ಪಡೆದುಕೊಳ್ಳಬಹುದು. ಅಥವಾ ಸಾಂಪ್ರದಾಯಿಕ ಶಿಲ್ಪ ಗುರುಕುಲಗಳ ಕೇಂದ್ರ, ಕಾಜಾಣ, ಕಲಾಗ್ರಾಮ, ಮಲ್ಲತ್ತಹಳ್ಳಿ, ಜ್ಞಾನಭಾರತಿ ಅಂಚೆ, ಬೆಂಗಳೂರು- 560 056 ಇಲ್ಲಿ ಸಂಪರ್ಕಿಸಿ ನೇರವಾಗಿ ಅರ್ಜಿಯನ್ನು ಪಡೆಯಬಹುದಾಗಿದೆ. ಭರ್ತಿ ಮಾಡಿದ ಅರ್ಜಿಗಳನ್ನು ದಾಖಲೆಗಳ ಸಮೇತ, ಪ್ರವೇಶ ಶುಲ್ಕದ ಡಿಡಿಯನ್ನು ಜೂ.25ರೊಳಗೆ ಸಲ್ಲಿಸಬೇಕಿದೆ. ನಂತರ ಆವಶ್ಯಕವೆನಿಸಿದರೆ ವಿದ್ಯಾರ್ಥಿಗಳು ತಮ್ಮ ಸ್ವಂತ ಖರ್ಚಿನಲ್ಲಿ ಮೌಖಿಕ ಸಂದರ್ಶನಕ್ಕೆ ಹಾಜರಾಗಬೇಕಾಗಿರುತ್ತದೆ ಎಂದು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News