ಕೆಪಿಎಸ್ಸಿ ಆಯ್ಕೆ ಪ್ರಕ್ರಿಯೆ ಸ್ಥಗಿತಕ್ಕೆ ಆಗ್ರಹ

Update: 2016-05-16 18:39 GMT

ಬೆಂಗಳೂರು, ಮೇ 16: ಕರ್ನಾಟಕ ಲೋಕಸೇವಾ ಆಯೋಗ 2015ರ ಅ.4ರಂದು ರಾಜ್ಯಾದ್ಯಂತ ನಡೆಸಿದ್ದ ಸಹಾಯಕರು/ಪ್ರಥಮ ದರ್ಜೆ ಸಹಾಯಕರ ಹುದ್ದೆಗಳಿಗೆ ನಡೆಸಿದ ಪರೀಕ್ಷೆಯಲ್ಲಿ ಅಕ್ರಮ ನಡೆದಿದ್ದು, ಆಯ್ಕೆ ಪ್ರಕ್ರಿಯೆಯನ್ನು ಕೂಡಲೇ ರದ್ದುಗೊಳಿಸಬೇಕು ಎಂದು ಆಗ್ರಹಿಸಲಾಗಿದೆ.

ಸೋಮವಾರ ಕೆಪಿಎಸ್ಸಿ ಕಚೇರಿ ಮುಂಭಾಗದಲ್ಲಿ ಸೇರಿದ ಪರೀಕ್ಷಾರ್ಥಿಗಳು ಕೆಪಿಎಸ್ಸಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ, ಕೆಪಿಎಸ್ಸಿ ಕಾರ್ಯದರ್ಶಿ ಭರತ್‌ಲಾಲ್ ಮೀನಾ ಅವರಿಗೆ ಮೇ 17ರಂದು ಮನವಿ ಪತ್ರವೊಂದನ್ನು ಸಲ್ಲಿಸಲಿದ್ದಾರೆ ಎಂದು ಗೊತ್ತಾಗಿದೆ.

ಪ್ರಥಮ ದರ್ಜೆ ಸಹಾಯಕರ ಪರೀಕ್ಷೆ ಹಿಂದಿನ ದಿನವೇ ಪ್ರಶ್ನೆ ಪತ್ರಿಕೆ ಸಾಮಾಜಿಕ ಜಾಲತಾಣಗಳಲ್ಲಿ ಸೋರಿಕೆಯಾಗಿದೆ. ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದ ಆರೋಪಿಗಳೇ ಕೆಪಿಎಸ್ಸಿ ಸಿಬ್ಬಂದಿಯೊಂದಿಗೆ ಶಾಮೀಲಾಗಿ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಲಾಗಿದೆ. ಆದುದರಿಂದ ಅರ್ಹ ಅಭ್ಯರ್ಥಿಗಳ ದಾಖಲೆ ಪರಿಶೀಲನೆ ಪ್ರಕ್ರಿಯೆಯನ್ನು ಕೂಡಲೇ ಸ್ಥಗಿತಗೊಳಿಸಬೇಕು ಎಂದು ಒತ್ತಾಯಿಸಲಾಗಿದೆ.

ಪ್ರಸ್ತುತ ಕೆಪಿಎಸ್ಸಿ ಬಿಡುಗಡೆ ಮಾಡಿರುವ ಅರ್ಹರ ಪಟ್ಟಿಯನ್ನು ಗಮನಿಸಿದರೆ ಪರೀಕ್ಷೆಯಲ್ಲಿ ಸಾಮೂಹಿಕ ನಕಲು ನಡೆದಿರುವ ಸಾಧ್ಯತೆಗಳಿವೆ ಎಂದು ಪರೀಕ್ಷಾರ್ಥಿಗಳು ಆರೋಪಿಸಿದ್ದು, ಈ ಸಂಬಂಧ ಕೂಲಂಕಷ ತನಿಖೆ ನಡೆಸಬೇಕೆಂಬ ಆಗ್ರಹವೂ ಕೇಳಿಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News