ಬುದ್ಧನ ಬೋಧನೆಯ ಮಧ್ಯಮ ಮಾರ್ಗ
ಭಗವಾನ್ ಬುದ್ಧನ ಬೋಧನೆಯ ಪ್ರಮುಖ ಅಂಶವೇನು? ಹೀಗೊಂದು ಪ್ರಶ್ನೆ ಇಟ್ಟರೆ ಎಲ್ಲರೂ ಕಣ್ಣುಮುಚ್ಚಿಕೊಂಡು ಹೇಳುವ ಉತ್ತರ ‘ಆಸೆಯೇ ದುಃಖಕ್ಕೆ ಮೂಲ’ ಎಂದು. ಇದು ಎಷ್ಟು ಸರಿ? ಬುದ್ಧನ ಬೋಧನೆ ಇಷ್ಟೊಂದು ಸರಳವೇ ಅಥವಾ ಆಸೆಯೇ ಬೇಡವೆನ್ನುವಷ್ಟು ಅತಿಯದ್ದೆ? ಖಂಡಿತ, ಇದೊಂದು ಬುದ್ಧನ ಬೋಧನೆಗೆ ಎಸಗುತ್ತಿರುವ ಅಪಪ್ರಚಾರ. ಹಾಗಿದ್ದರೆ ವಾಸ್ತವ? ಬುದ್ಧ ಹೇಳಿದ್ದು ಆಸೆಯೇ ಬೇಡ ಎನ್ನುವ ಅತಿಯೂ ಅಲ್ಲದ, ಆಸೆಯೇ ತುಂಬಿರಬೇಕು ಎಂಬ ಆ ಅತಿಯೂ ಅಲ್ಲದ ಎರಡರ ನಡುವಿನ ಮಧ್ಯಮ ರೀತಿಯದ್ದು. ಅದೇ ಮಧ್ಯಮ ಮಾರ್ಗ. ಪಾಳಿ ಭಾಷೆಯಲ್ಲಿ ಹೇಳುವುದಾದರೆ ‘ಮಜ್ಜಿಮ ಪತಿಪಾದ’.
ಮಧ್ಯಮ ಮಾರ್ಗ, ಹಾಗಿದ್ದರೆ ಇದು ಏನು? ಇದಕ್ಕೆ ಬುದ್ಧ ಕೊಡುವ ಉದಾಹರಣೆ ‘‘ಕೆಲವರು ಹೇಳುತ್ತಾರೆ ನಾಳೆಯೇ ನಾವು ಸಾಯುವುದರಿಂದ ಇಂದೇ ಕುಡಿದು ತಿಂದು ಮಜಾಮಾಡಿಬಿಡೋಣ. ಮತ್ತೂ ಕೆಲವರು ಹೇಳುತ್ತಾರೆ ಎಲ್ಲ ಆಸೆಗಳನ್ನು ಬಲಿಕೊಡೋಣ. ಯಾಕೆಂದರೆ ಅವು ಮರುಜನ್ಮ ತರುತ್ತವೆ.’’ ಬುದ್ಧ ಇವೆರಡನ್ನು ತಿರಸ್ಕರಿಸಿದ. ಇದಕ್ಕೆ ಆತ ನೀಡಿದ ಕಾರಣ ಇವೆರಡೂ ಮಾನವ ಪರಿಪೂರ್ಣತೆ ಪಡೆಯುವುದಕ್ಕೆ ತೊಡಕಾಗುತ್ತವೆ ಎಂದು. ಅಂದರೆ ಕುಡಿದು ತಿಂದು ಸಾಯುವ ಅತಿಯೂ ತಪ್ಪು, ಹಾಗೆಯೇ ಎಲ್ಲವನ್ನು ತ್ಯಜಿಸುವ ಆ ಅತಿಯೂ ತಪ್ಪು. ಹಾಗಿದ್ದರೆ ಇವೆರಡರ ನಡುವಿನ ಮಧ್ಯಮದ್ದು ಎಂದರೆ? ಬುದ್ಧ ಹೇಳಿದ್ದು ‘‘ನಿನ್ನ ದೇಹದ ಅಗತ್ಯಕ್ಕೆ ತಕ್ಕಂತೆ ಕುಡಿ, ತಿನ್ನು. ಹಾಗೆಯೇ ಆಸೆಯನ್ನು ತ್ಯಜಿಸಬೇಡ. ಬದಲಿಗೆ ನಿನ್ನನ್ನು ನೀನು ನಿಯಂತ್ರಣದಲ್ಲಿಟ್ಟುಕೋ.’’ ಅಂದಹಾಗೆ ಬುದ್ಧನ ಈ ಮಧ್ಯಮ ಮಾರ್ಗ ಇಷ್ಟೊಂದು ಸರಳವೇ? ಅಥವಾ ಅದರಲ್ಲಿ ಬೇರೇನು ಇಲ್ಲವೇ? ನಿಜ ಹೇಳಬೇಕೆಂದರೆ ಮಧ್ಯಮ ಮಾರ್ಗ ಎನ್ನುತ್ತಲೇ ಬುದ್ಧ ಮಾನವ ಪರಿಪೂರ್ಣತೆಯ ಮಾರ್ಗವನ್ನು ಪರಿಚಯಿಸುತ್ತಾ ಹೋಗುತ್ತಾನೆ. ಈ ಹಿನ್ನೆಲೆಯಲ್ಲಿ ಆತ ‘‘ತನ್ನ ಧರ್ಮದ ಕೇಂದ್ರ ಬಿಂದು ಮನುಷ್ಯ ಮತ್ತು ಪ್ರಾಪಂಚಿಕ ಜೀವನದಲ್ಲಿ ಮನುಷ್ಯ-ಮನುಷ್ಯರ ನಡುವಿನ ಸಂಬಂಧ’’ ಎಂದು ಸ್ಪಷ್ಟಪಡಿಸುತ್ತಾನೆ. ಹಾಗೆ ಹೇಳುವಾಗ ಬುದ್ಧ ಇದರ ನಡುವೆ ದೇವರುದಿಂಡಿರನ್ನು ತರುವುದಿಲ್ಲ ಎಂಬುದಿಲ್ಲಿ ಗಮನಾರ್ಹ. ದಮ್ಮದ ಕೇಂದ್ರ ಮನುಷ್ಯ ಯಾಕೆ? ಬುದ್ಧ ಹೇಳುವುದು ‘‘ಮನುಷ್ಯರು ದುಃಖ, ನೋವು ಮತ್ತು ಬಡತನದಲ್ಲಿ ಬದುಕುತ್ತಿದ್ದಾರೆ. ಈ ಪ್ರಪಂಚವು ನೋವಿನ ಸಾಗರದಲ್ಲಿ ಮುಳುಗಿದೆ ಮತ್ತು ಇಂತಹ ನೋವಿನಿಂದ ಪ್ರಪಂಚವನ್ನು ಹೇಗೆ ಮುಕ್ತಗೊಳಿಸಬೇಕು ಎಂಬುದೇ ನನ್ನ ದಮ್ಮದ ಉದ್ದೇಶ. ಇದನ್ನು ಬಿಟ್ಟು ಬೇರೆ ಏನೂ ಇಲ್ಲ.’’ ದುಃಖ, ನೋವು, ಬಡತನದಿಂದ ಮನುಷ್ಯ ಮುಕ್ತಿ ಹೊಂದಿದಾಗ ಅಲ್ಲಿ ನೆಲೆಗೊಳ್ಳುವುದು ಸಂತಸ, ಸಂಭ್ರಮ, ಶ್ರೀಮಂತಿಕೆ ಎಂಬುದು ಕೂಡ ಇಲ್ಲಿ ಗಮನಿಸಬೇಕಾದ ಅಂಶ. ಅಂದರೆ ಮಾನವನ ನೆಮ್ಮದಿಯೇ ಬುದ್ಧನ ಧ್ಯೇಯ ಎಂಬುದು ಸ್ಪಷ್ಟ. ಹಾಗಿದ್ದರೆ ಆ ನೆಮ್ಮದಿಯನ್ನು ಪಡೆಯಲು ಕೆಲವನ್ನಾದರೂ ತತ್ವಗಳನ್ನು ಮನುಷ್ಯರು ಆಚರಿಸಲೇಬೇಕಾಗುತ್ತದಲ್ಲವೇ? ಬುದ್ಧ ಹೇಳಿದ್ದು ಅದನ್ನೆ. ‘ಪಂಚಶೀಲ’ ಎಂಬ ಆ ತತ್ವವನ್ನು. ಅದರಲ್ಲಿ ಮೊದಲನೆ ತತ್ವ ಹೇಳುವುದು ‘‘ಕೊಲೆ ಮಾಡಬೇಡ, ಯಾರನ್ನೂ ಗಾಯಗೊಳಿಸಬೇಡ’’, ಎರಡನೆಯದು ‘‘ಬೇರೆಯವರಿಗೆ ಸೇರಿದ್ದನ್ನು ವಶಪಡಿಸಿಕೊಳ್ಳಬೇಡ ಅಥವಾ ಕಳ್ಳತನ ಮಾಡಬೇಡ’’, ಮೂರನೆಯದು ‘‘ಅಸತ್ಯವನ್ನು ನುಡಿಯಬೇಡ’’, ನಾಲ್ಕನೆಯದು ‘‘ಅತಿಯಾಸೆ ಅಥವಾ ಕಾಮಾತುರತೆಗೆ ಒಳಗಾಗಬೇಡ’’ ಮತ್ತು ಐದನೆಯದು ‘‘ಮದ್ಯಪಾನಕ್ಕೆ ದಾಸನಾಗಬೇಡ.’’ ಬುದ್ಧರೂ ಈ ಐದು ತತ್ವಗಳನ್ನು ಮನುಷ್ಯನೊಬ್ಬ ತಾನು ಏನು ಮಾಡುತ್ತಿರುವೆನು ಎಂಬುದನ್ನು ನಿರ್ಧರಿಸಿಕೊಳ್ಳಲು ನಿರ್ದಿಷ್ಟ ಮಾದರಿಯಾಗಿ ಬಳಸಬೇಕು ಎಂದು ಸಲಹೆ ನೀಡುತ್ತಾನೆ. ಈ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ಎಲ್ಲವನ್ನು ಕಳೆದುಕೊಂಡಿದ್ದರೆ ಆಗ ಆತ ಮೇಲಿನ ಐದು ಶೀಲಗಳನ್ನು ಮಾದರಿಯಾಗಿಟ್ಟುಕೊಂಡು ತನ್ನನ್ನು ತಾನು ಗಮನಿಸಿ ಕೊಳ್ಳಬೇಕಾಗುತ್ತದೆ. ಈ ಐದು ಶೀಲಗಳನ್ನು ಅಥವಾ ತತ್ವಗಳನ್ನು ಆತ ಪಾಲಿಸುತ್ತಿಲ್ಲವೆಂದರೆ ಆಗ ಆತ ತನ್ನನ್ನು ತಾನು ಕಳೆದುಕೊಳ್ಳುತ್ತಿದ್ದಾನೆ ಎಂದೂ... ಇದನ್ನು ಗಮನಿಸಿ ಆತ ಪಾಲಿಸಲು ಪ್ರಾರಂಭಿಸಿದರೆ ಆಗ ಆತ ತನ್ನನ್ನು ತಾನು ನಿಯಂತ್ರಣದಲ್ಲಿಟ್ಟುಕೊಳ್ಳುತ್ತಿದ್ದಾನೆ ಎಂದರ್ಥ. ಅಂದಹಾಗೆ ಆತ ಹೀಗೆ ತನ್ನನ್ನು ತಾನು ನಿಯಂತ್ರಣದಲ್ಲಿಟ್ಟುಕೊಂಡರೆ ಆಗ ಆತ ಬುದ್ಧನ ಮಧ್ಯಮಾರ್ಗದಲ್ಲಿದ್ದಾನೆ ಅಥವಾ ಬುದ್ಧನನ್ನು ಅನುಸರಿಸುತ್ತಿದ್ದಾನೆ ಎಂದೇ ಅರ್ಥ. ಮುಂದುವರಿದು ತನ್ನ ಈ ಮಧ್ಯಮಮಾರ್ಗಕ್ಕೆ ಪೂರಕವಾಗಿ ಬುದ್ಧ ಮತ್ತೊಂದು ಮಾರ್ಗವನ್ನು ಬೋಧಿಸುತ್ತಾನೆ. ಅದೇ ಅಷ್ಟಾಂಗ ಮಾರ್ಗ ಅಥವಾ ಎಂಟು ಶ್ರೇಷ್ಠ ಗುಣಗಳ ಮಾರ್ಗ. ಅವುಗಳೆಂದರೆ,
1. ಸರಿಯಾದ ದೃಷ್ಟಿ: ಅಂದರೆ ಅಜ್ಞಾನದ ನಾಶವೇ ಸರಿಯಾದ ದೃಷ್ಟಿ. ಇದಕ್ಕೆ ವಿರುದ್ಧವಾದದ್ದು ಮಿಥ್ಯಾ ದೃಷ್ಟಿ.
2.ಸರಿಯಾದ ಸಂಕಲ್ಪ: ಅಂದರೆ ಆಸೆ ಆಕಾಂಕ್ಷೆಗಳು ಶ್ರೇಷ್ಠ ಮಟ್ಟದ್ದಾಗಿರಬೇಕು, ಕೀಳು ದರ್ಜೆಯದ್ದಾಗಿರಬಾರದು.
3.ಸರಿಯಾದ ಮಾತು: ಅಂದರೆ ನಾವಾಡುವ ಮಾತು ಬೇರೆಯವರ ಮನಸ್ಸನ್ನು ನೋಯಿಸಬಾರದು.
4. ಸರಿಯಾದ ವರ್ತನೆ: ನಮ್ಮ ವರ್ತನೆ ಬೇರೆಯವರ ಭಾವನೆಗಳನ್ನು ಗೌರವಿಸುವಂತಿರಬೇಕು
5. ಸರಿಯಾದ ಸಂಪಾದನೆಯ ಮಾರ್ಗ: ವ್ಯಕ್ತಿಯೊಬ್ಬ ಅನ್ಯಾಯದ, ಬೇರೆಯವರಿಗೆ ನೋವು ತರುವ ಸಂಪಾದನೆಯ ಮಾರ್ಗವನ್ನು ಅನುಸರಿಸಬಾರದು.
6. ಸರಿಯಾದ ಪ್ರಯತ್ನ: ಮನಸ್ಸಿನ ಅಜ್ಞಾನವನ್ನು ನಿರ್ಮೂಲನೆಗೊಳಿಸಿಕೊಳ್ಳುವ ಪ್ರಯತ್ನ.
7. ಸರಿಯಾದ ಜಾಗ್ರತೆ: ಕೆಡುಕಿನ ವಿರುದ್ಧ ಮನಸ್ಸು ಸದಾ ಎಚ್ಚರದಿಂದಿರುವುದು.
8. ಸರಿಯಾದ ಏಕಾಗ್ರತೆ: ಧನಾತ್ಮಕ ಧ್ಯಾನಸ್ಥ ಮನಸ್ಥಿತಿ
ಈ ಹಿನ್ನೆಲೆಯಲ್ಲಿ ಮನುಷ್ಯನ ಶ್ರೇಯಸ್ಸೇ, ಆತ ಉತ್ತಮ ಬದುಕನ್ನು ಹೊಂದುವಂತಾಗುವುದೇ ಬುದ್ಧನ ಬೋಧನೆಯ ಈ ಅಷ್ಟಾಂಗ ಮಾರ್ಗಗಳ, ಪಂಚಶೀಲಗಳ, ಒಟ್ಟಾರೆ ಮಧ್ಯಮ ಮಾರ್ಗದ ತಿರುಳು. ಈ ತಿರುಳನ್ನು ಅರ್ಥಮಾಡಿಕೊಂಡರೆ ಬುದ್ಧ ಅರ್ಥವಾಗುತ್ತಾನೆ. ಹಾಗೆಯೇ ಜಗತ್ತು ಕೂಡ ಅರ್ಥವಾಗುತ್ತದೆ.