ಬಿ.ಎ.ಮೊಯ್ದಿನ್ ಸಲಹೆ ಮೇರೆಗೆ ಫಾರೂಖ್ ಕಣಕ್ಕೆ: ಎಚ್.ಡಿ.ಕೆ.
ಬೆಂಗಳೂರು, ಮೇ 30: ಮಾಜಿ ಸಚಿವ ಬಿ.ಎ.ಮೊಯ್ದಿನ್ ಅವರ ಸಲಹೆ ಮೇರೆಗೆ ಬಿ.ಎಂ.ಫಾರೂಖ್ ಅವರನ್ನು ರಾಜ್ಯಸಭಾ ಚುನಾವಣೆಗೆ ನಮ್ಮ ಪಕ್ಷದ ಅಭ್ಯರ್ಥಿ ಯನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.
ಸೋಮವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಫಾರೂಖ್ ಕಳೆದ 7-8 ವರ್ಷಗಳಿಂದ ನನ್ನ ಸ್ನೇಹಿತರು. ಜೆ.ಎಚ್.ಪಟೇಲ್ ಮುಖ್ಯಮಂತ್ರಿಯಾಗಿದ್ದಾಗ ಸಚಿವರಾಗಿದ್ದ ಬಿ.ಎ.ಮೊಯ್ದಿನ್ ನಮ್ಮ ಪಕ್ಷದ ಒಳಿತನ್ನು ಬಯಸಿ ಫಾರೂಖ್ ಹೆಸರನ್ನು ಶಿಫಾರಸ್ಸು ಮಾಡಿದ್ದರು. ಅವರ ಸಲಹೆಯಂತೆ ಫಾರೂಖ್‌ರನ್ನು ರಾಜ್ಯಸಭಾ ಚುನಾವಣಾ ಕಣಕ್ಕಿಳಿಸುತ್ತಿದ್ದೇವೆ ಎಂದರು.
ಕಾಂಗ್ರೆಸ್ ಪಕ್ಷದಲ್ಲಿ ಇರುವ ಕೆಲವು ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ. ಚುನಾವಣೆಯಲ್ಲಿ ಏನು ಆಗುತ್ತೊ ಗೊತ್ತಿಲ್ಲ. ಶಾಸಕ ಝಮೀರ್‌ಅಹ್ಮದ್‌ಖಾನ್ ಪದೇ ಪದೇ ಗೊಂದಲ ಸೃಷ್ಟಿಸುವ ಬಗ್ಗೆ ಯಾವ ರೀತಿಯ ಕ್ರಮ ಕೈಗೊಳ್ಳಬೇಕು ಎಂಬುದು ವರಿಷ್ಠರಿಗೆ ಬಿಟ್ಟದ್ದು, ಪಕ್ಷಕ್ಕಿಂತ ವ್ಯಕ್ತಿ ದೊಡ್ಡವರಲ್ಲ. ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳುವ ಕಾಲ ಸನ್ನಿಹಿತವಾಗಿದೆ ಎಂದು ಕುಮಾರಸ್ವಾಮಿ ಹೇಳಿದರು.