1.5 ಲಕ್ಷ ರೂಪಾಯಿಗೆ ಯುವತಿ ಮಾರಾಟ: ಇಬ್ಬರ ಬಂಧನ

Update: 2016-05-31 18:08 GMT

ಬುಂಡಿ (ರಾಜಸ್ಥಾನ), ಮೇ 31: ರಾಜಸ್ಥಾನದ ಬರನ್ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬರಿಗೆ 1.5 ಲಕ್ಷ ರೂಪಾಯಿಗೆ ಮಾರಾಟವಾಗಿದ್ದ 19 ವರ್ಷದ ಬುಡಕಟ್ಟು ಜನಾಂಗದ ಯುವತಿಯನ್ನು ರಕ್ಷಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಮಾನವ ಕಳ್ಳಸಾಗಾಣೆ ತಡೆ ಘಟಕ ಈ ಸಂಬಂಧ ಇಬ್ಬರನ್ನು ಬಂಧಿಸಿದೆ. ಸಹೇರಿಯಾ ಎಂಬ ಬುಡಕಟ್ಟು ಜನಾಂಗಕ್ಕೆ ಸೇರಿದ ಈ ಯುವತಿಯನ್ನು ಆಕೆಯ ಸೋದರ ಸಂಬಂಧಿ ಧರ್ಮಾವತಿಭಾಯಿ ಎಂಬಾಕೆ 37 ವರ್ಷದ ಶಂಕರ್‌ಲಾಲ್ ಮೀನಾ ಎಂಬಾತನಿಗೆ ಕಳೆದ ವಾರ 1.5 ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದಳು. ಆಕೆಯನ್ನು ಮೀನಾ ಮನೆಯಿಂದ ರಕ್ಷಿಸಲಾಗಿದೆ ಎಂದು ಮಾನವ ಕಳ್ಳಸಾಗಾಣೆ ತಡೆ ಘಟಕದ ವೃತ್ತ ನಿರೀಕ್ಷಣಾಧಿಕಾರಿ ಕನಿಝ್ ಫಾತಿಮಾ ಹೇಳಿದ್ದಾರೆ.

ಸಂತ್ರಸ್ತೆಯನ್ನು ಬಂಧನದಲ್ಲಿಡಲಾಗಿತ್ತು. ಆಕೆ ತಪ್ಪಿಸಿಕೊಳ್ಳಲು ನಡೆಸಿದ ಯತ್ನ ವಿಫಲವಾಗಿತ್ತು. ಆ ಬಳಿಕ ಯುವತಿ ಸ್ಥಳೀಯ ವ್ಯಕ್ತಿಯ ಬಳಿ ತನ್ನ ಕಥೆ ಹೇಳಿಕೊಂಡಿದ್ದು, ಆತ ಪೊಲೀಸರಿಗೆ ಮಾಹಿತಿ ನೀಡಿದ ಎಂದು ಫಾತಿಮಾ ವಿವರಿಸಿದ್ದಾರೆ.

ಶಂಕರ್‌ಲಾಲ್ ಮೀನಾ ಹಾಗೂ ಧನರಾಜ್ ಮೀನಾ ಅವರನ್ನು ಬಂಧಿಸಲಾಗಿದೆ. ಧರ್ಮಾವತಿಬಾಯಿ ಹಾಗೂ ಇತರರ ವಿರುದ್ಧ ವಿಚಾರಣೆ ನಡೆಯುತ್ತಿದೆ ಎಂದು ಹೇಳಿದ್ದಾರೆ. ವೈದ್ಯಕೀಯ ಪರೀಕ್ಷೆ ಬಳಿಕ ಸಂತ್ರಸ್ತೆಯ ಹೇಳಿಕೆಯನ್ನು ಮ್ಯಾಜಿಸ್ಟ್ರೇಟರ ಮುಂದೆ ಪಡೆಯಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News