*ಜೆಡಿಎಸ್ ತಾನೇ ನಾಶವಾಗುತ್ತದೆ.

Update: 2016-06-12 17:37 GMT

 *ಜೆಡಿಎಸ್ ತಾನೇ ನಾಶವಾಗುತ್ತದೆ.
-ಸಿದ್ದರಾಮಯ್ಯ, ಮುಖ್ಯಮಂತ್ರಿ

  ಕಾಂಗ್ರೆಸ್‌ನ ನಾಶದ ಹೊಣೆ ಯಾರಿಗೆ ಕೊಟ್ಟಿದ್ದೀರಿ?

---------------------

  ರಾಜ್ಯಸಭಾ ಚುನಾವಣೆಗೆ ಶಾಸಕರು ಹಣ ಪಡೆದಿದ್ದಾರೆ ಎನ್ನಲು ಯಾವ ಆಧಾರಗಳೂ ಇಲ್ಲ.

-ಡಿ.ವಿ. ಸದಾನಂದ ಗೌಡ, ಕೇಂದ್ರ ಸಚಿವ

 ಆಧಾರಗಳಿಲ್ಲದ ಹಾಗೆ ಹಣ ವಿನಿಮಯವಾಗಿದೆಯೆಂದಾಯಿತು.

---------------------

  ರಾಜ್ಯಸಭಾ ಸಂಸದ ಸುಬ್ರಮಣಿಯನ್ ಸ್ವಾಮಿ ನನ್ನ ಹೀರೋ.

-ಉಮಾಭಾರತಿ, ಕೇಂದ್ರ ಸಚಿವೆ

  ನೀವು ಹೀರೋಯಿನ್ ಆದರೆ, ಸೆನ್ಸಾರ್‌ಗೆ ಕತ್ತರಿಯ ಆವಶ್ಯಕತೆಯೇ ಇಲ್ಲ ಬಿಡಿ.

 ---------------------

  ಸುಸ್ತಿದಾರರನ್ನು ಸುಖವಾಗಿ ನಿದ್ದೆಮಾಡಲು ಬಿಡುವುದಿಲ್ಲ.

-ಅರುಣ್‌ಜೇಟ್ಲಿ, ಕೇಂದ್ರ ಸಚಿವ

  ಅದಕ್ಕೆ ಮೊದಲು ತಾವು ನಿದ್ದೆಯಿಂದ ಎಚ್ಚೆತ್ತುಕೊಳ್ಳಿ.

---------------------

  ಕಾಂಗ್ರೆಸ್ ಪಕ್ಷಕ್ಕೆ ತಾಜಾ ಐಡಿಯಾಗಳು ಬೇಕು

-ದಿಗ್ವಿಜಯ್‌ಸಿಂಗ್, ಕಾಂಗ್ರೆಸ್ ನಾಯಕ

  ರಾಹುಲ್ ಗಾಂಧಿಯ ಐಡಿಯಾಗಳು ಕೊಳೆತಿವೆ ಎಂದು ಅರ್ಥವೇ?

---------------------

  ದಿನದ 18-20 ಗಂಟೆಗಳ ಕಾಲ ಮೋದಿ ಕೆಲಸ ಮಾಡುತ್ತಿದ್ದಾರೆ.

-ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ

  ದೇಶವನ್ನು ಸರ್ವನಾಶ ಮಾಡುವ ಹಟದಲ್ಲಿ ಮಾಡುತ್ತಿರುವ ಕೆಲಸ.

---------------------

  ಪರಿಸರವನ್ನು ತಾಯಿಯಂತೆ ಕಾಣಬೇಕು.

-ವಜೂಭಾಯಿ ವಾಲಾ, ರಾಜ್ಯಪಾಲ
  
ತಾಯಂದಿರೆಲ್ಲ ಈಗ ವೃದ್ಧಾಶ್ರಮ ಸೇರುತ್ತಿರುವುದು ಅಧಿಕವಾಗುತ್ತಿದೆ. 

---------------------

  ರಾಹುಲ್‌ಗಾಂಧಿ ಕಾನೂನುಬದ್ಧವಾಗಿ ಕಾಂಗ್ರೆಸ್ ಅಧ್ಯಕ್ಷರಾಗಲಿ.

-ಜೈರಾಮ್ ರಮೇಶ್, ಕಾಂಗ್ರೆಸ್ ಮುಖಂಡ

  ಕಾನೂನು ಬದ್ಧವಾಗಿ ಕಾಂಗ್ರೆಸ್‌ನ್ನು ಮುಗಿಸುವ ಯೋಜನೆಯೇ?

---------------------

  ರಾಜ್ಯಸಭೆ ಚುನಾವಣೆಯಲ್ಲಿ ಸೋತರೆ ಜೆಡಿಎಸ್ ಮುಳುಗುವುದಿಲ್ಲ.

-ಎಚ್.ಡಿ. ಕುಮಾರಸ್ವಾಮಿ, ಜೆಡಿಎಸ್ ಅಧ್ಯಕ್ಷ

  ಬಹುಶಃ ಹೆಣದಂತೆ ತೇಲುತ್ತದೆ ಎಂದು ಹೇಳುತ್ತಿದ್ದಾರೆ.

---------------------

  ಹಿಂದೂಗಳಿಗೆ ಅನ್ಯಾಯವಾದರೆ ಸಹಿಸಲಾರೆವು.

-ವಿಶ್ವೇಶ ತೀರ್ಥ ಸ್ವಾಮೀಜಿ, ಪೇಜಾವರ ಮಠ

  ದಲಿತರಿಗೆ ದೇವಸ್ಥಾನದಲ್ಲಿ ಪ್ರವೇಶ ನಿರಾಕರಣೆ ಹಿಂದೂಗಳಿಗಾದ ಅನ್ಯಾಯವಲ್ಲವೇ?

---------------------

  ನನ್ನ ರಕ್ತದ ಕಣದಲ್ಲೂ ಕಾಂಗ್ರೆಸ್ ಇದೆ.

-ಸತ್ಯ ವ್ರತ ಚತುರ್ವೇದಿ, ಕಾಂಗ್ರೆಸ್ ಸಂಸದ
  
ಬಹುಶಃ ನಿಮ್ಮ ರಕ್ತದ ಗುಂಪು ಕಾಂಗ್ರೆಸ್ ಬಿ ನೆಗೆಟಿವ್ ಇರಬೇಕು. 

---------------------

  ಖರ್ಗೆ ಹಾಗೂ ಸಿದ್ದರಾಮಯ್ಯ ನನಗೆ ಎರಡು ಕಣ್ಣುಗಳಿದ್ದಂತೆ. ಯಾವ ಕಣ್ಣಿಗೆ ತಿವಿದರೂ ನೋವಾಗುತ್ತದೆ.

-ಶಿವರಾಜ ತಂಗಡಗಿ, ಸಚಿವ

  ನಿಮ್ಮ ಮೆದುಳು ಎಂದು ಯಾರನ್ನು ಕರೆಯಬೇಕು?

---------------------

  ಶಾಸಕರನ್ನು ಹೈಜಾಕ್ ಮಾಡಿಕೊಂಡು ಹೋಗಲು ಅವರೇನು ಚಿಕ್ಕಮಕ್ಕಳಲ್ಲ.

-ಮಂಜು, ಸಚಿವ
  
ಚಿಕ್ಕಮಕ್ಕಳ ಪಾವಿತ್ರತೆಗೆ ಕಳಂಕ ತರಬೇಡಿ. 

---------------------

  2018ಕ್ಕೆ ಯಡಿಯೂರಪ್ಪರನ್ನು ಮುಖ್ಯಮಂತ್ರಿ ಮಾಡುವುದೇ ನಮ್ಮೆಲ್ಲರ ಗುರಿ.

-ವಿ. ಸೋಮಣ್ಣ, ಮಾಜಿ ಸಚಿವ

  ಪ್ರತೀ ಬಾರಿ ಬಲಿಕೊಡಲು ನಿಮಗೆ ಯಡಿಯೂರಪ್ಪರೇ ಯಾಕೆ ಬೇಕು?

---------------------
                                           
ಬ್ರಿಟಿಷ್ ಆಡಳಿತದಿಂದಾಗಿ ದೇಶದಲ್ಲಿ ಒಗ್ಗಟ್ಟು ಬೆಳೆಯಿತು ಎಂಬುದರಲ್ಲಿ ಅರ್ಥವಿಲ್ಲ.

 -ಎಸ್.ಎಲ್. ಭೈರಪ್ಪ, ಸಾಹಿತಿ

  ಬ್ರಾಹ್ಮಣರ ಜಾತೀಯತೆಯಿಂದ ಒಗ್ಗಟ್ಟು ಬೆಳೆಯಿತು ಎನ್ನುವುದು ನಿಮಗೆ ಅರ್ಥಗರ್ಭಿತವಿರಬೇಕು. 

---------------------

  ವನ್ಯಜೀವಿ ಸಂರಕ್ಷಣೆ ನಮ್ಮ ಮುಖ್ಯ ಗುರಿ.

-ಪ್ರಕಾಶ್ ಜಾವಡೇಕರ್, ಕೇಂದ್ರ ಸಚಿವ
 
ಮನುಷ್ಯಜೀವಿಗಳ ಸಂಭಕ್ಷಣೆಯೂ ಕೂಡ.

 ---------------------

  ನಾವು ಆರ್ಥಿಕವಾಗಿ ಸಬಲರಿದ್ದೇವೆ ಎಂದು ಭರವಸೆ ನೀಡುವ ಸಲುವಾಗಿಯೇ ಹಸಿರು ನ್ಯಾಯಾಧಿಕರಣಕ್ಕೆ ಪೂರ್ಣ ದಂಡ ಪಾವತಿಸಿದ್ದೇವೆ.

-ಜೈದೀಪ್‌ನಾಥ್, ಆರ್ಟ್ ಆಫ್ ಲಿವಿಂಗ್

ಜನರ ದುಡ್ಡು, ಎಲ್ಲಮ್ಮನ ಜಾತ್ರೆ. 

---------------------

  ಜಗತ್ತಿನಲ್ಲಿ ಎಲ್ಲಿಯವರೆಗೆ ಜನರ ರಕ್ತ ಕೆಂಪಾಗಿರುತ್ತದೋ ಅಲ್ಲಿಯವರೆಗೆ ಕಮ್ಯುನಿಸ್ಟ್ ಪಕ್ಷ ಇರುತ್ತದೆ.

-ಸೀತಾರಾಂ ಯಚೂರಿ, ಕಮ್ಯುನಿಸ್ಟ್ ಪಕ್ಷದ ಪ್ರ. ಕಾರ್ಯದರ್ಶಿ
  
ಇತ್ತೀಚೆಗೆ ಕಮ್ಯುನಿಸ್ಟ್ಟ್ ರಕ್ತದಲ್ಲಿ ಬಿಳಿ ರಕ್ತಕಣಗಳು ಜಾಸ್ತಿಯಾಗಿದೆಯಂತೆ.

 ---------------------

  ನಾವು ಮಾತನಾಡುವ ಪ್ರಧಾನಿಯನ್ನು ದೇಶಕ್ಕೆ ಕೊಟ್ಟಿದ್ದೇವೆ.

-ಅಮಿತ್ ಶಾ, ಬಿಜೆಪಿ ಅಧ್ಯಕ್ಷ
  
ಅವರ ಭಾಷಣವನ್ನೇ ಜನರು ಬೇಯಿಸಿ ಅನ್ನ ಮಾಡಿಕೊಳ್ಳಬೇಕಾಗಿದೆ. 

---------------------

  ರಾಜ್ಯಸಭೆ ಹಾಗೂ ವಿಧಾನಪರಿಷತ್‌ಗೆ ನಡೆಯುತ್ತಿರುವುದು ಕುದುರೆ ವ್ಯಾಪಾರವಲ್ಲ. ಕತ್ತೆ ವ್ಯಾಪಾರ.

-ದೇವೇಗೌಡ, ಮಾಜಿ ಪ್ರಧಾನಿ

  ಹೌದು. ಕತ್ತೆಗಳನ್ನೇ ನೀವು ಕುದುರೆಯೆಂದು ಮಾರಲು ಹೊರಟರೆ ಇನ್ನೇನಾಗುತ್ತದೆ?

---------------------

  ವಿಶ್ವ ಯೋಗ ದಿನದಂದು ಸೂರ್ಯ ನಮಸ್ಕಾರ ಇಲ್ಲ.

-ಶೀಪಾದ್ ನಾಯ್ಕ, ಕೇಂದ್ರ ಸಚಿವ

  ವಿಶ್ವ ಯೋಗದ ಹೆಸರಲ್ಲಿ ತೆರಿಗೆ ಹಾಕುವ ಹುನ್ನಾರವೇನಾದರೂ ಇದೆಯೇ?

---------------------
  
ರಾಹುಲ್ ಗಾಂಧಿ ಬಳಿ ಅನುಭವದ ನಿಧಿಯಿದೆ. 

-ವೀರಪ್ಪ ಮೊಯ್ಲಿ, ಕಾಂಗ್ರೆಸ್ ನಾಯಕ

  ಅದು ನಿಧಿಯಲ್ಲ, ಕಾಂಗ್ರೆಸ್‌ನ ದುರ್ವಿಧಿ.

---------------------

  ಅಶಿಕ್ಷಿತರಿಗಿಂತಲೂ ಶಿಕ್ಷಿತರಿಂದಲೇ ಸಮಾಜ ಹಾಳಾಗುತ್ತಿದೆ.

-ಕಿಮ್ಮನೆ ರತ್ನಾಕರ, ಶಿಕ್ಷಣ ಸಚಿವ

 ಅದಕ್ಕಾಗಿಯೇ ಬಡವರಿಗೆ ಶಿಕ್ಷಣ ಕೈಗೆಡುಕದಂತೆ ಮಾಡುವ ಪ್ರಯತ್ನ ನಡೆಯುತ್ತಿದೆಯೇ?

---------------------

   ಮುಖ್ಯಮಂತ್ರಿ ಸ್ಥಾನಕ್ಕೆ ಉತ್ತರಪ್ರದೇಶದಲ್ಲಿ ನಾಯಕರ ಕೊರತೆ ಇಲ್ಲ.

-ರಾಜನಾಥ ಸಿಂಗ್, ಕೇಂದ್ರ ಸಚಿವ

  ಮತದಾರರ ಕೊರತೆಯ ಬಗ್ಗೆ ಮೊದಲು ಯೋಚಿಸಿ.

---------------------

    ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ನೀಡುವ ಸಾಲವನ್ನು ಶೂಲ ಎಂದು ಭಾವಿಸಬೇಡಿ.

-ಡಾ. ಡಿ. ವೀರೇಂದ್ರ ಹೆಗ್ಗಡೆ, ಧರ್ಮಾಧಿಕಾರಿ, ಧರ್ಮಸ್ಥಳ

  ಸಾಲಕ್ಕೆ ವಿಧಿಸುವ ಅಕ್ರಮ ಬಡ್ಡಿಯನ್ನು ಇನ್ನೇನೆಂದು ಕರೆಯಬಹುದು?

---------------------

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!