ಶಾಲೆಗಳಲ್ಲಿ ಯೋಗ ಕಡ್ಡಾಯ: ಸರಕಾರದ ಚಿಂತನೆ

Update: 2016-06-19 12:46 GMT

ಬೆಂಗಳೂರು, ಜೂ. 18: ಯೋಗ ಶಿಕ್ಷಣವನ್ನು ಪಠ್ಯದಲ್ಲಿ ಅಳವಡಿಸಲು ಸರಕಾರ ಕ್ರಮ ಕೈಗೊಂಡಿದ್ದು, ಈಗಾಗಲೇ ಶಿಕ್ಷಕರಿಗೆ ತರಬೇತಿ ನೀಡಲಾಗುತ್ತಿದೆ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.
ರವಿವಾರ ನಗರದ ಕಬ್ಬನ್ ಉದ್ಯಾನದಲ್ಲಿ ಆಯುಷ್ ಇಲಾಖೆ ಸಹಯೋಗದಲ್ಲಿ ಇಶಾ ಫೌಂಡೇಶನ್ ಆಯೋಜಿಸಿದ್ದ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಯೋಗ ಶಿಕ್ಷಣವನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದಲ್ಲಿ ಪಠ್ಯವಾಗಿ ಸೇರ್ಪಡೆಗೊಳಿಸಲು ಈಗಾಗಲೇ ಕ್ರಮಕೈಗೊಳ್ಳಲಾಗಿದೆ. ದೈಹಿಕ ಶಿಕ್ಷಕರಿಗೆ ಯೋಗ ಶಿಕ್ಷಣದ ಕುರಿತು ಒಂದು ವಾರಗಳ ತರಬೇತಿಯನ್ನು ನೀಡಲಾಗಿದೆ. ಅಲ್ಲದೆ ಯೋಗವನ್ನು ಶಾಲೆಗಳಲ್ಲಿ ಕಡ್ಡಾಯಗೊಳಿಸುವ ಕುರಿತು ಚಿಂತನೆ ನಡೆದಿದೆ ಎಂದರು.
 ಯೋಗದಿಂದ ಸದೃಢ ಸಮಾಜವನ್ನು ನಿರ್ಮಾಣ ಮಾಡಬಹುದು. ಯೋಗದಿಂದ ಮಾನಸಿಕ ಮತ್ತು ದೈಹಿಕ ರೋಗಗಳಿಗೆ ಯೋಗ ಪರಿಣಾಮಕಾರಿಯಾಗಿ ಪ್ರಭಾವ ಬೀರುತ್ತದೆ. ಪಾಶ್ಚಿಮಾತ್ಯ ಜೀವನ ಶೈಲಿ ಮತ್ತು ಆಹಾರ ಪದ್ದತಿಯನ್ನು ತೊರೆದು ಯೋಗದತ್ತ ಯುವಕರು ಮುಖ ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ಆಯುಕ್ತೆ ಶಾಲಿನಿ ರಜನೀಶ್, ಇಶಾ ಫೌಂಡೇಷನ್‌ನ ಅಧ್ಯಕ್ಷ ಲೋಕ ಮಿತ್ರ, ಯೋಗ ಗುರು ವಚನಾನಂದ ಸ್ವಾಮೀಜಿ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News