ಋಗ್ವೇದ ಪ್ರವೇಶಿಕೆ-ಐತಿಹ್ಯ ಮತ್ತು ವಾಸ್ತವ

Update: 2016-06-22 19:00 GMT

ಬಿಜೆಪಿ ಅಕಾರಕ್ಕೆ ಬಂದ ದಿನಗಳಿಂದ ಸನಾತನ ಸಿದ್ಧಾಂತಗಳ ಮರು ಅನುಷ್ಠಾನ ಚರ್ಚೆಯಾಗುತ್ತಿದೆ. ವೇದಗಳಲ್ಲಿ ವಿಜ್ಞಾನವಿತ್ತು ಎಂದು ಪ್ರತಿಪಾದಿಸುತ್ತಾ, ಅದನ್ನು ಅತಿರೇಕಕ್ಕೆ ಒಯ್ಯುವ ಜನಸಂಖ್ಯೆ ಹೆಚ್ಚುತ್ತಿವೆ. ಇದೇ ಸಂದರ್ಭದಲ್ಲಿ ಭಾರತದ ಪುರಾತನ ವೇದ ಗ್ರಂಥಗಳ ವಾಸ್ತವವನ್ನು ತಿಳಿಸುವ ಅಧ್ಯಯನಾತ್ಮಕ ಕೃತಿಗಳ ಕೊರತೆ ಎದ್ದು ಕಾಣುತ್ತಿದೆ. ಹಿರಿಯ ವಿಚಾರವಾದಿ ಚಿಂತಕ, ಜಿ. ರಾಮಕೃಷ್ಣ ಅವರ ‘ಋಗ್ವೇದ ಪ್ರವೇಶಿಕೆ-ಐತಿಹ್ಯ ಮತ್ತು ವಾಸ್ತವ’ ಈ ನಿಟ್ಟಿನಲ್ಲಿ ಒಂದು ಮಹತ್ವದ ಕೃತಿಯಾಗಿದೆ. ವೇದಗಳನ್ನು ಮಾತ್ರವಲ್ಲ, ಹತ್ತು ಹಲವು ಭಾರತೀಯ ಪ್ರಾಚೀನ ಗ್ರಂಥಗಳನ್ನು ಅರ್ಥೈಸುವಾಗ, ವ್ಯಾಖ್ಯಾನಿಸುವಾಗ ಸಲ್ಲದ ಭಾವುಕತೆಯನ್ನು ಪ್ರದರ್ಶಿಸಲಾಗುತ್ತಿದೆ. ಇಂದಿನ ಹಿಂದುತ್ವವಾದವಂತೂ ವೇದ ಮತ್ತು ಇತರ ಪ್ರಾಚೀನ ಗ್ರಂಥಗಳನ್ನು ಅನಗತ್ಯ ವೈಭವೀಕರಿಸುತ್ತಾ, ತಿರುಚುತ್ತಾ ತನ್ನ ಅಜೆಂಡಾಗಳನ್ನು ಜಾರಿಗೊಳಿಸಲು ಯತ್ನಿಸುತ್ತಿವೆ. ಇವರಲ್ಲಿ ಬಹುತೇಕ ಮಂದಿಗೆ ಋಗ್ವೇದದ ಕುರಿತಂತೆ ಪ್ರಾಥಮಿಕ ಜ್ಞಾನವೂ ಇಲ್ಲ. ಇದ್ದರೂ ಆ ಸತ್ಯವನ್ನು ಅವರು ಮುಟ್ಟಲೂ ಹೋಗುತ್ತಿಲ್ಲ. ಜಿ. ರಾಮಕೃಷ್ಣ ಅವರು ತಮ್ಮ ಕೃತಿಯಲ್ಲಿ ಋಗ್ವೇದದಲ್ಲಿರುವುದೇನು ಎನ್ನುವುದನ್ನು ವಿಶ್ಲೇಶಿಸುತ್ತಾ, ಆ ಕಾಲ ಘಟ್ಟದ ಸಾಮಾಜಿಕ ಸಂಘರ್ಷಗಳನ್ನು ಮುಟ್ಟಲು ಪ್ರಯತ್ನಿಸುತ್ತಾರೆ. ಒಂದು ರೀತಿಯಲ್ಲಿ ಚಾರಿತ್ರಿಕ ಮತ್ತು ಸಾಮಾಜಿಕ ನೆಲೆಯಲ್ಲಿ ಋಗ್ವೇದವನ್ನು ರಾಮಕೃಷ್ಣ ಅವರು ಅಧ್ಯಯನ ಮಾಡಿ, ವಿವರಿಸಿದ್ದಾರೆ. ದಸ್ಯುಗಳ ಅವಹೇಳನ, ಇಂದ್ರನ ಪ್ರತಾಪ, ವರಿಣನ ನೈತಿಕ ಸಂಹಿತೆ, ಪಣಿಗಳ ಸಂಪತ್ತಿನ ಲೂಟಿ, ಸೂರ್ಯಾಳ ಮದುವೆಯ ರಮ್ಯತೆ, ಜಗತ್ತಿನ ವಿಸ್ಮಯಗಳನ್ನು ಕಂಡಾಗಿನ ಬೆರಗು, ಹೀಗೆ ಅಂದಿನ ಸಮಾಜದ ಅಂತಸ್ಸಂಬಂಧ ಮತ್ತು ಘರ್ಷಣೆಗಳನ್ನು ರಾಮಕೃಷ್ಣ ಅವರು ವಿಶ್ಲೇಷಿಸುತ್ತಾರೆ. ಈ ಗ್ರಂಥಕ್ಕೆ ಆಧುನಿಕ ರಾಜಕೀಯದ ಜೊತೆಗೆ ಆಯಾಮವೊಂದಿದೆ. ಸದ್ಯದ ಹಿಂದುತ್ವ ರಾಜಕಾರಣಕ್ಕೆ ಋಗ್ವೇದದ ಅಂತಃಸ್ಸತ್ವಗಳು ಬೇರೆ ಬೇರೆ ರೀತಿಯಲ್ಲಿ ಪ್ರತಿಕ್ರಿಯಿಸುತ್ತದೆ.

23 ಅಧ್ಯಾಯಗಳನ್ನೊಳಗೊಂಡ ಈ ಕೃತಿಯಲ್ಲಿ, ಋಗ್ವೇದದ ಕಾಲನಿರ್ಣಯ, ಋಗ್ವೇದ ಕಾಲದ ಕವಯಿತ್ರಿಯರು, ಮಾಂಸಾಹಾರದ ಬಗೆಗಿನ ಋಗ್ವೇದದ ನಿಲುವು ಇವೆಲ್ಲವುಗಳ ಜೊತೆಗೆ ಅಥರ್ವ ವೇದದ ಕುರಿತಂತೆಯೂ ಒಂದು ಕಿರುನೋಟವಿದೆ. ನವಕರ್ನಾಟಕ ಪ್ರಕಾಶನ ಹೊರತಂದಿರುವ ಈ ಕೃತಿಯ ಮುಖಬೆಲೆ 200 ರೂ. ಆಸಕ್ತರು 080- 30578020 ದೂರವಾಣಿಯನ್ನು ಸಂಪರ್ಕಿಸಬಹುದು.

Writer - ಕಾರುಣ್ಯಾ

contributor

Editor - ಕಾರುಣ್ಯಾ

contributor

Similar News