ಸ್ಪಿನ್ ಮಾಂತ್ರಿಕ ಕನ್ನಡಿಗ ಅನಿಲ್ ಕುಂಬ್ಳೆ ಟೀಮ್ ಇಂಡಿಯಾದ ಮುಖ್ಯ ಕೋಚ್

Update: 2016-06-23 15:49 GMT

ಧರ್ಮಶಾಲಾ, ಜೂ.23: ಭಾರತ ಕ್ರಿಕೆಟ್ ತಂಡದ ನೂತನ ಮುಖ್ಯ ಕೋಚ್ ಆಗಿ ಸ್ಪಿನ್ ಮಾಂತ್ರಿಕ ಕನ್ನಡಿಗ ಅನಿಲ್ ಕುಂಬ್ಳೆ ಇಂದು ನೇಮಕಗೊಂಡಿದ್ದಾರೆ.
  ಕೋಚ್ ಹುದ್ದೆಯ ಮೇಲೆ ಕಣ್ಣಿಟ್ಟಿದ್ದ ಮಾಜಿ ನಾಯಕ ರವಿಶಾಸ್ತ್ರಿ ಅವರನ್ನು ಹಿಂದಿಕ್ಕಿ ಕುಂಬ್ಳೆ ಪ್ರತಿಷ್ಠಿತ ಹುದ್ದೆಯನ್ನು ಗಿಟ್ಟಿಸಿಕೊಂಡಿದ್ದಾರೆ. ಇದರೊಂದಿಗೆ ವಿದೇಶಿ ಕೋಚ್ ಗಳ ನೇಮಕ ದೂರವಾಗಿದೆ.
ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ ಇಂದು ಅನಿಲ್ ಕುಂಬ್ಳೆ ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿ ಆಯ್ಕೆಯಾಗಿರುವುದನ್ನು ಧರ್ಮಶಾಲಾದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು.
ಭಾರತ ಕ್ರಿಕೆಟ್ ತಂಡದ ಕೋಚ್ ಹುದ್ದೆಗೆ ಒಟ್ಟು 57 ಅರ್ಜಿಗಳು ಬಂದಿತ್ತು. ಬಿಸಿಸಿಐ ಸಲಹಾ ಸಮಿತಿಯು ಸಂದರ್ಶನ ನಡೆಸಿ ಅನಿಲ್ ಕುಂಬ್ಳೆ ಅವರನ್ನು ಮುಖ್ಯ ಕೋಚ್ ಆಗಿ ಆಯ್ಕೆ ಮಾಡಿದೆ.
ಮಾಜಿ ನಾಯಕರುಗಳಾದ ಸೌರವ್ ಗಂಗುಲಿ, ಸಚಿನ್ ತೆಂಡುಲ್ಕರ್ , ಮಾಜಿ ಕಲಾತ್ಮಕ ಬ್ಯಾಟ್ಸ್‌ಮನ್ ವಿವಿಎಸ್ ಲಕ್ಷ್ಮಣ್ ಮತ್ತು ಬಿಸಿಸಿಐ ಕಾರ್ಯದರ್ಶಿ ಸಂಜಯ್ ಜಗದಾಳೆ ಅವರನ್ನೊಳಗೊಂಡ ಬಿಸಿಸಿಐನ ಸಲಹಾ ಸಮಿತಿಯು 45ರ ಹರೆಯದ ಕುಂಬ್ಳೆಗೆ ಕೋಚ್ ಆಗಿ ಸೇವೆ ಸಲ್ಲಿಸುವ ಅವಕಾಶ ನೀಡಿದೆ.
 ಮಾಜಿ ಕೋಚ್ ಝಿಂಬಾಬ್ವೆಯ ಡಂಕನ್ ಫ್ಲೆಚೆರ್ ಅವರ ಒಪ್ಪಂದದ ಅವಧಿ 2015ರ ವಿಶ್ವಕಪ್ ಮುಗಿದ ಬೆನ್ನಲ್ಲೆ ಮುಕ್ತಾಯಗೊಂಡಿತ್ತು. ಬಳಿಕ ತಂಡದ ನಿರ್ದೇಶಕರಾದ ಮಾಜಿ ನಾಯಕ ರವಿಶಾಸ್ತ್ರಿ ಅವರು ಕೋಚ್ ಹುದ್ದೆಯ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದರು. ರವಿಶಾಸ್ತ್ರಿ 2014ರ ಆಗಸ್ಟ್‌ನಲ್ಲಿ ಇಂಗ್ಲೆಂಡ್‌ನಲ್ಲಿ ಟೀಮ್ ಇಂಡಿಯಾದ ಏಕದಿನ ಸರಣಿಗೆ ತಂಡದ ನಿರ್ದೇಶಕರಾಗಿ ನೇಮಕಗೊಂಡಿದ್ದರು. ಅವರ ಅಧಿಕಾರದ ಅವಧಿ ಕಳೆದ ಟ್ವೆಂಟಿ-20 ವಿಶ್ವಕಪ್ ಮುಗಿದ ಬೆನ್ನೆಲ್ಲೆ ಕೊನೆಗೊಂಡಿತ್ತು. ಭಾರತ ಸೆಮಿಫೈನಲ್‌ನಲ್ಲಿ ಸೋತು ಅಭಿಯಾನ ಕೊನೆಗೊಳಿಸಿದ ಬೆನ್ನೆಲ್ಲೆ ರವಿಶಾಸ್ತ್ರಿ ನಿರ್ದೇಶಕ ಹುದ್ದೆಯಿಂದ ಕೆಳಗಿಳಿದಿದ್ದರು.
ಹಲವು ಸಮಯಗಳಿಂದ ಖಾಲಿ ಇರುವ ಕೋಚ್ ಹುದ್ದೆಗೆ ಸೂಕ್ತ ಅಭ್ಯರ್ಥಿಯ ಆಯ್ಕೆಗೆ ಬಿಸಿಸಿಐ ಅರ್ಜಿ ಆಹ್ವಾನಿಸಿದಾಗ ಪ್ರತಿಷ್ಠಿತ ಈ ಹುದ್ದೆಯನ್ನು ಗಿಟ್ಟಿಸಿಕೊಳ್ಳಲು ಶಾಸ್ತ್ರಿ, ಕುಂಬ್ಳೆ, ಪ್ರವೀಣ್ ಅಮ್ರೆ, ಲಾಲ್ ಚಂದ್ ರಜಪೂತ್, ಆಸ್ತ್ರೇಲಿಯದ ಟಾಮ್ ಮೂಡಿ ಮತ್ತು ಸ್ಟುವರ್ಟ್ ಲಾ, ಇಂಗ್ಲೆಂಡ್‌ನ ಆಂಡಿ ಮೊಲ್ಸ್ ಸೇರಿದಂತೆ 57 ಮಂದಿ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು.
ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷ ಸಂದೀಪ್ ಪಟೀಲ್ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದರೂ, ಅವರು ಸಂದರ್ಶನಕ್ಕೆ ಹಾಜರಾಗಿರಲಿಲ್ಲ.
 ನೂತನ ಕೋಚ್ ಆಗಿ ಆಯ್ಕೆಯಾಗಿರುವ ಭಾರತ ಕ್ರಿಕೆಟ್ ತಂಡ ಮಾಜಿ ನಾಯಕ ಅನಿಲ್ ಕುಂಬ್ಳೆ ಅವರು 132 ಟೆಸ್ಟ್‌ಗಳನ್ನು ಆಡಿದ್ದಾರೆ. ಒಂದು ಶತಕ ಮತ್ತು 5 ಅರ್ಧಶತಕ ಇರುವ 2,506 ರನ್ ದಾಖಲಿಸಿದ್ದಾರೆ. 619 ವಿಕೆಟ್ ಸಂಪಾದಿಸಿದ್ದಾರೆ. ಇನಿಂಗ್ಸ್‌ವೊಂದರಲ್ಲಿ ಅತ್ಯುತ್ತಮ ಪ್ರದರ್ಶನ 74ಕ್ಕೆ 10 ವಿಕೆಟ್.
 ಏಕದಿನ ಕ್ರಿಕೆಟ್‌ನಲ್ಲಿ 271 ಪಂದ್ಯಗಳನ್ನು ಆಡಿದ್ದಾರೆ. 938 ರನ್, 337 ವಿಕೆಟ್ ಪಡೆದಿದ್ದಾರೆ. 54 ಟ್ವೆಂಟಿ-20 ಪಂದ್ಯಗಳನ್ನು ಆಡಿರುವ ಅನುಭವವನ್ನು ಕುಂಬ್ಳೆ ಹೊಂದ್ದಿದ್ದಾರೆ.
1999ರ ಫೆಬ್ರವರಿಯಲ್ಲಿ ಫಿರೋಝ್ ಷಾ ಕೋಟ್ಲಾ ಕ್ರೀಡಾಂಗಣದಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಅನಿಲ್ ಕುಂಬ್ಳೆ 10ವಿಕೆಟ್ ಉಡಾಯಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದರು.
 ಅನಿಲ್ ಕುಂಬ್ಳೆ ಟೆಸ್ಟ್‌ನಲ್ಲಿ 4 ಬಾರಿ ಸರಣಿಶ್ರೇಷ್ಠ ಮತ್ತು 1ಬಾರಿ ಏಕದಿನ ಸರಣಿಯಲ್ಲಿ ಸರಣಿಶಶ್ರೇಷ್ಠ ಪ್ರಶಸ್ತಿ ಪಡೆದಿದ್ದರೆ.
  ಟೆಸ್ಟ್‌ನಲ್ಲಿ 10 ಬಾರಿ ಪಂದ್ಯಶ್ರೇಷ್ಠ ಮತ್ತು 6 ಬಾರಿ ಏಕದಿನ ಕ್ರಿಕೆಟ್‌ನಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಜಯಿಸಿದ್ದಾರೆ.
 ಒಟ್ಟು 14 ಟೆಸ್ಟ್‌ಗಳಲ್ಲಿ ಟೀಮ್ ಇಂಡಿಯಾವನ್ನು ನಾಯಕರಾಗಿ ಮುನ್ನಡೆಸಿದ್ದಾರೆ. ಈ ಪೈಕಿ ಭಾರತ 3ರಲ್ಲಿ ಜಯ , 5 ಸೋಲು ಮತ್ತು 6 ಪಂದ್ಯಗಳಲ್ಲಿ ಡ್ರಾ ಸಾಧಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News