ದೊಡ್ಡ ಮೊತ್ತದ ಆಸೆಗೆ, ಪತಿಗೆ ಹೇಳದೆ 11 ಲಕ್ಷ ಕಳಕೊಂಡ ಬೆಂಗಳೂರಿನ ಗೃಹಿಣಿ ಆತ್ಮಹತ್ಯೆ

Update: 2016-06-29 08:51 GMT

ಬೆಂಗಳೂರು, ಜೂ.29: ವಂಚಕನೊಬ್ಬನ ಮೋಸದ ಜಾಲಕ್ಕೆ ಬಲಿ ಬಿದ್ದು ದೊಡ್ಡ ಮೊತ್ತ ಪಡೆಯುವ ಆಸೆಯಿಂದ ತನ್ನಲ್ಲಿದ್ದ ರೂ 11 ಲಕ್ಷ ಕಳೆದುಕೊಂಡ ಗೃಹಿಣಿಯೊಬ್ಬಳು ಸ್ವಾಮಿ ವಿವೇಕಾನಂದ ರಸ್ತೆ ಪಕ್ಕದಲ್ಲಿರುವ ತನ್ನ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ವರದಿಯಾಗಿದೆ. ಮೃತ ಗೃಹಿಣಿ ಪಾಲಕ್ ವಿ (44) ಹಿರಿಯ ಸಾಫ್ಟ್ ವೇರ್ ಇಂಜಿನಿಯರ್ ಒಬ್ಬರ ಪತ್ನಿಯಾಗಿದ್ದಾರೆ.

ಕೆಲವು ಸಮಯದ ಹಿಂದೆ ಆಕೆಯ ಮೊಬೈಲ್ ಫೋನಿಗೆ  ಬಂದ ಸಂದೇಶವೊಂದು ಆಕೆಗೆ ರೂ 45 ಲಕ್ಷ ಬಹುಮಾನ ಬಂದಿದೆಯೆಂದು ತಿಳಿಸಿತ್ತು. ಆಕೆಯನ್ನು ಸಂಪರ್ಕಿಸಿದ್ದ ಆಂಡ್ರೂ ಎಂಬ ವ್ಯಕ್ತಿ ತಾನು ಕೆಲವು ಕಾನೂನು ತೊಡಕುಗಳನ್ನೆದುರಿಸುತ್ತಿದ್ದು ಇಡೀ ಬಹುಮಾನದ ಮೊತ್ತ ಸಿಗಬೇಕಿದ್ದಲ್ಲಿ ಕಸ್ಟಮ್ಸ್ ಕ್ಲಿಯರೆನ್ಸ್ ಗೆ   ಹಣ ಬೇಕೆಂದು ಹೇಳಿದ್ದನ್ನು ನಂಬಿ ಆತ ಹೇಳಿದಂತೆಯೇ ಆಕೆ ರಾಹುಲ್, ಹಸ್ ನಾಥ್, ಶಬ್ಬೀರ್ ಮತ್ತಿತರರ ಬ್ಯಾಂಕ್ ಖಾತೆಗಳಿಗೆ ಜೂನ್ 6 ರಿಂದ 13 ರ ತನಕ ಹಣ ವರ್ಗಾಯಿಸಿದ್ದಳು. ಹೀಗೆ ಒಟ್ಟು ರೂ 11 ಲಕ್ಷ ವರ್ಗಾಯಿಸಿದ  ಪಾಲಕ್ ಇತ್ತೀಚೆಗೆ ದೆಹಲಿಗೆ ತನ್ನ ಬಹುಮಾನ ಮೊತ್ತ ಪಡೆಯಲು ತೆರಳಿದ್ದಳು. ಅಲ್ಲಿ ಆ ವಂಚಕ ಆಕೆಗೆ ಕರೆ ಮಾಡಿ ಇನ್ನಷ್ಟು ಹಣ ನೀಡುವಂತೆ ಒತ್ತಾಯಿಸಿದಾಗ ಹಾಗೂ ಬಹುಮಾನ ಮೊತ್ತ ನೀಡಲು ನಿರಾಕರಿಸಿದಾಗ ಆಕೆ ಮತ್ತೆ ಬೆಂಗಳೂರಿಗೆ ವಾಪಸಾಗಿದ್ದಳು.

ಕಳೆದ ವಾರ ಆಕೆ ಆತ್ಮಹತ್ಯೆ ಮಾಡಿಕೊಂಡ ಮುನ್ನಾ ದಿನ ಕೀಟನಾಶಕ ಸೇವಿಸಲೆತ್ನಿಸಿದ್ದರೂ ಆಕೆಯ ಮಕ್ಕಳು ಆಕೆಯನ್ನು ತಡೆದಿದ್ದರು.  ಆಗ ತಾನು ಮೋಸ ಹೋದ ಬಗ್ಗೆ ಆಕೆ ತಿಳಿಸಿದ್ದು ಅವರೆಲ್ಲ ಪೊಲೀಸ್ ದೂರು ನೀಡಲು ಮರುದಿನ ತಯಾರಿ ನಡೆಸುತ್ತಿದ್ದಂತೆಯೇ ಆಕೆ ತನ್ನ ಕೋಣೆಗೆ ಹೋಗಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಳು.
ಪೊಲೀಸರು ತನಿಖೆ ಆರಂಭಿಸಿದ್ದಾರೆ ಹಾಗೂ ಆರೋಪಿಗಳ ಮೇಲೆ ಸೆಕ್ಷನ್ 306 ಹಾಗೂ ಸೆಕ್ಷನ್ 420 ಅನ್ವಯ ಪ್ರಕರಣ ದಾಖಲಿಸಿದ್ದಾರೆ. ಮೃತ ಮಹಿಳೆಯ ಪತಿ ಈ ವಂಚನೆಯ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದು ಪೊಲೀಸರಿಗೆ ಸಂಪೂರ್ಣ ಮಾಹಿತಿ ನೀಡಲಾಗಿದೆಯೆಂದು ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News