ಬಿಟ್ಟಿರಲಾಗದ ಬೆಸುಗೆ-ಧಾರಾವಾಹಿ-4
‘‘ಹೌದು ಮಾಮಿ, ನನಗೆ ಈ ಲೋಕದಲ್ಲಿ ಬಂಧು ಗಳೂಂತ ಯಾರೂ ಇಲ್ಲ. ತಂದೆಯ ಕಡೆಯಿಂದಲೂ ಇಲ್ಲ, ತಾಯಿಯ ಕಡೆಯಿಂದಲೂ ಇಲ್ಲ. ನನಗೆ ಬುದ್ಧಿ ಬಂದ ಮೇಲೆ ಒಬ್ಬನೇ ಒಬ್ಬ ಬಂಧು ನಮ್ಮ ಮನೆಗೆ ಬಂದಿದ್ದು ನಾನು ನೋಡಿಲ್ಲ. ನಾನೂ ಇದುವರೆಗೆ ಯಾವುದೇ ಬಂಧುಗಳ ಮನೆಗೆ ಹೋಗಿಲ್ಲ. ಎಲ್ಲರೂ ಇದ್ದೂ ಅನಾಥಳಂತೆ ನನ್ನ ಬದುಕು. ಕಾಲೇಜಿನ ಕೆಲವು ಗೆಳತಿಯರು ಬಿಟ್ಟರೆ ನನ್ನವರೂಂತ ನನಗೆ ಯಾರೂ ಇಲ್ಲ. ನಿಮ್ಮ ಜೊತೆ ಮಾತನಾಡುವಾಗ, ನಿಮ್ಮ ಪ್ರೀತಿ, ಆರೈಕೆ ನೋಡುವಾಗ, ನಿಮ್ಮ ಮಡಿಲಲ್ಲಿ ತಲೆಯಿಟ್ಟು ಜೋರಾಗಿ ಅತ್ತು ಬಿಡಬೇಕೂಂತ ಅನಿಸುತ್ತೆ... ಮಾಮಿ’’
ತಾಹಿರಾಳ ಕಣ್ಣು ತುಂಬಿದ್ದು ಕಂಡು ಪುಟ್ಟ ಮಗುವಿನಂತೆ ಅವಳನ್ನು ತಬ್ಬಿಕೊಂಡಳು ಐಸು. ಅವಳ ಸಾಂತ್ವನ, ಧೈರ್ಯ ತುಂಬುವ ಆ ಅಪ್ಪುಗೆ, ಪ್ರೀತಿಯಿಂದ ತಲೆ, ಬೆನ್ನು ಸವರುತ್ತಿರುವ ಆ ಕೈಗಳು, ಜೀವಮಾನದಲ್ಲೆಂದೂ ಸಿಗದ ಸುಖವನ್ನು ಅನುಭವಿಸುತ್ತಾ ಐಸುಳನ್ನು ಬಾಚಿ ಅಪ್ಪಿಕೊಂಡಳು ತಾಹಿರಾ.
‘‘ಯಾಕಮ್ಮಾ ನಿನ್ನ ತಂದೆ-ತಾಯಿ ನಿನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಾ ಇಲ್ಲವಾ?’’
‘‘ಅವರಿಗೆಲ್ಲಿ ಸಮಯವಿದೆ ಮಾಮಿ, ಬೆಳಿಗ್ಗೆದ್ದು ಇಬ್ಬರೂ ಹೋಗ್ತಾರೆ. ಕತ್ತಲಾದ ಮೇಲೆ ಮನೆಗೆ ಬರ್ತಾರೆ’’
‘‘ಎಲ್ಲಿಗೆ ಹೋಗುವುದು...!’’
‘‘ಕೆಲಸಕ್ಕೆ’’
‘‘ತಾಯಿ ಕೆಲಸಕ್ಕೆ ಹೋಗ್ತಾಳಾ...?’’
‘‘ಹೌದು ಮಾಮಿ. ಇಬ್ಬರಿಗೂ ಬ್ಯಾಂಕ್‌ನಲ್ಲಿ ಕೆಲಸ. ಒಂದಿನಾನೂ ಮನೆಯಲ್ಲಿರೋಲ್ಲ. ಮನೆಯಲ್ಲಿ ಒಬ್ಬಳೇ ಇದ್ದರೆ ನನಗೆ ಹುಚ್ಚು ಹಿಡಿಯುತ್ತೆ. ಮೂರು ವರ್ಷ ಹಾಸ್ಟೆಲ್‌ನಲ್ಲಿದ್ದು ಓದಿದೆ. ದುಡ್ಡು ಎಷ್ಟು ಕೇಳಿದರೂ ಕೊಡ್ತಾರೆ. ಎಲ್ಲಿಗೆ ಹೋಗ್ತೇನೆ ಎಂದರೂ ಬೇಡ ಎನ್ನುವುದಿಲ್ಲ. ಆದರೆ ಒಂದು ದಿನ ನನ್ನ ಜೊತೆ ಕಳೆಯು ವುದಕ್ಕೆ ಅವರಿಬ್ಬರಿಗೂ ಸಮಯವಿಲ್ಲ. ನನಗೆ ಜೀವನವೇ ಬೇಸರವಾಗಿಬಿಟ್ಟಿದೆ. ಒಂಟಿತನ ಸಾಕಾಗಿ ಹೋಗಿದೆ. ಒಮ್ಮಿಮ್ಮೆ ನನಗೆ ಒಡಹುಟ್ಟಿದ ಒಬ್ಬರಾದರೂ ಇದ್ದಿದ್ದರೆ ಎಂದು ಮನಸು ಚಡಪಡಿಸುತ್ತದೆ. ನನ್ನ ನೋವು, ಕಷ್ಟ, ದುಃಖಗಳನ್ನು ಹೇಳಿಕೊಳ್ಳುವುದಕ್ಕೆ ನನಗೆ ಯಾರೂ ಇಲ್ಲ ಮಾಮಿ. ಬೇಜಾರಾದಾಗ ಹೀಗೆ ಎಲ್ಲಿಗಾದರೂ ಹೊರಟು ಬಿಡುತ್ತೇನೆ. ಒಂದು-ಎರಡು ವಾರ ಯಾವು ದಾದರೂ ಗೆಳತಿಯರ ಮನೆಯಲ್ಲಿ ಇದ್ದು ಬರ್ತೇನೆ. ಎಲ್ಲಿ ಹೋದೆ, ಯಾಕೆ ಹೋದೆ ಎಂದು ಯಾರೂ ಕೇಳುವುದಿಲ್ಲ’’ ತಾಹಿರಾಳ ಕಣ್ಣುಗಳು ತೇವಗೊಂಡವು.
‘‘ಯಾಕಮ್ಮಾ ಬೇಜಾರು ಮಾಡಿಕೊಳ್ಳುತ್ತೀಯಾ? ನೋಡಮ್ಮಾ ಇಂದೇ ಕೊನೆ, ಇನ್ನು ಮುಂದೆ ನೀನು ಹೀಗೆ ದುಃಖಿಸಬಾರದು. ನಾವೆಲ್ಲಾ ಇಲ್ಲವಾ ನಿನಗೆ. ಇನ್ನು ಮೇಲೆ ಬೇಕಾದರೆ ನೀನು ಇಲ್ಲಿಯೇ ಬಂದು ಇದ್ದು ಬಿಡು. ಆಯಿತಲ್ಲಾ...’’ ಎಂದು ಸಮಾಧಾನ ಪಡಿಸಿದ ಐಸು ಮನಸ್ಸೂ ನೊಂದಿತ್ತು.
ತಾಹಿರಾ ತನ್ನೆರಡು ಅಂಗೈಯಿಂದ ಕಣ್ಣೊರೆಸಿ ಕೊಂಡಳು. ಅವಳ ಮುಖದ ತುಂಬಾ ಕುತೂಹಲವಿತ್ತು.
‘‘ನಿಜ ಹೇಳ್ತಿದ್ದೀರಾ ಮಾಮಿ, ನನ್ನನ್ನು ಇಲ್ಲಿಯೇ ಬಂದು ಇರ್ಲಿಕ್ಕೆ ಅಜ್ಜಿ ಬಿಡ್ತಾರಾ?’’
‘‘ಅಜ್ಜಿ ತುಂಬಾ ಒಳ್ಳೆಯವರಮ್ಮಾ... ಅವರ ಮನಸ್ಸು ನಿನಗೆ ಗೊತ್ತಿಲ್ಲ. ನಾನು ಚಿಕ್ಕಂದಿನಿಂದಲೂ ಅವರನ್ನು ನೋಡ್ತಾ ಇದ್ದೇನೆ. ನೀನಿಲ್ಲಿ ಇರ್ತೇನೆ ಎಂದರೆ ಅವರು ಎಷ್ಟು ಖುಷಿ ಪಡ್ತಾರೆ ಗೊತ್ತಾ? ಅವರಿಗೆ ಒಂದು ಒಳ್ಳೆಯ ಜೊತೆಯೂ ಆಗುತ್ತೆ’’
‘‘ಮತ್ತೇಕೆ ಬೆಳಗ್ಗೆಯಿಂದ ಇಷ್ಟೊಂದು ಕೋಪಿಸಿ ಕೊಂಡು ಕುಳಿತಿದ್ದಾರೆ’’
‘‘ಅಜ್ಜ ತೀರಿಕೊಂಡ ಮೇಲೆ ಅವರು ಹೀಗೆಯೇ ಅಮ್ಮಾ.. ಹಳೆಯದೆಲ್ಲ ನೆನಪಾದಾಗ ಮಂಕಾಗಿ ಬಿಡ್ತಾರೆ, ಯಾರೊಂದಿಗೂ ಮಾತಾಡೋದಿಲ್ಲ.’’
ಪುಟ್ಟ ಮಗುವಿನಂತಹ ಅವಳ ಪ್ರಶ್ನೆಗಳು, ಕುತೂ ಹಲ ಐಸುಗೆ ಇಷ್ಟವಾಯಿತು. ಇಷ್ಟೊಂದು ಓದಿದರೂ ಅವಳಲ್ಲಿರುವ ಮುಗ್ಧತೆ, ಭಯ, ಪ್ರೀತಿ, ಆತ್ಮೀಯತೆ ಅವಳಿಗೆ ಮೆಚ್ಚುಗೆಯಾಯಿತು. ಅಷ್ಟರಲ್ಲಿ ಹೊರಗೆ ಮೀನು ಮಾರುವವನ ಸೈಕಲ್ ಹಾರ್ನ್ ಕೇಳಿಸಿತು.
‘‘ಬಾ, ಮೀನಿನವ ಬಂದ. ಒಳ್ಳೆಯ ಮೀನಿದ್ದರೆ ತೆಗೆದುಕೊಳ್ಳೋಣ. ರಾತ್ರಿ ನಿನಗೆ ಪತ್ತಿರ್(ಅಕ್ಕಿರೊಟ್ಟಿ) ಮಾಡಿ ಕೊಡುತ್ತೇನೆ’’
ಚಂಗನೆ ಎದ್ದು ನಿಂತ ತಾಹಿರಾ, ಪಾತ್ರೆ ಹಿಡಿದು ಹೊರಟ ಐಸುಳ ಹಿಂದೆಯೇ ನಡೆದಳು. ಸ್ವಲ್ಪ ಬೊಲೆಂಜಿರ್, ಸ್ವಲ್ಪ ಬಂಗುಡೆ ಹಾಕಿಸಿಕೊಳ್ಳುವಾಗಲೂ ತಾಹಿರಾ ಐಸುಳ ಬೆನ್ನಿಗೆ ಅಂಟಿಕೊಂಡು ಕುತೂಹಲ ದಿಂದ ಕಣ್ಣರಳಿಸಿ ನೋಡುತ್ತಿದ್ದಳು.
‘‘ನಿನಗೆ ಮೀನು ಇಷ್ಟವಾ...? ಒಳಗೆ ಬಂದ ಐಸು ಕೇಳಿದಳು.
‘‘ಹೂಂ, ತುಂಬಾ ಇಷ್ಟ’’
‘‘ಮನೆಯಲ್ಲಿ ನಿನ್ನ ತಾಯಿ ಮಾಡೋಲ್ವ’’
‘‘ಇಲ್ಲ’’
‘‘ಯಾಕೆ’’
‘‘ಅಮ್ಮನಿಗೆ ಸಮಯ ಬೇಕಲ್ಲ’’
‘‘ಮತ್ತೇನು ಸಾರು ಮಾಡ್ತೀರಿ?’’
‘‘ಬೆಳಗ್ಗೆ ಬ್ರೆಡ್‌ಗೆ ಬೆಣ್ಣೆ, ಜಾಮ್ ಹಾಕಿ ತಿನ್ನುತ್ತೇವೆ. ಮಧ್ಯಾಹ್ನಕ್ಕೆ ನಾನು ಮನೆಯಲ್ಲಿದ್ದರೆ ಅಮ್ಮ ಅನ್ನ ಬೇಯಿಸಿಟ್ಟು ಏನಾದರೂ ತರಕಾರಿ ಪಲ್ಯ ಮಾಡಿಟ್ಟು ಹೋಗ್ತಾರೆ. ರಾತ್ರಿನೂ ಅದೇ. ಮೀನು, ಮಾಂಸ ತಿನ್ನಬೇಕಾದರೆ ಹೊಟೇಲ್‌ಗೆ ಹೋಗಬೇಕು. ರಜೆಯಂದು ಒಮ್ಮಿಮ್ಮೆ ಅಪ್ಪಹೊಟೇಲ್‌ನಿಂದ ಪಾರ್ಸೆಲ್ ತರುತ್ತಾರೆ’’
‘‘ಸರಿ ಇವತ್ತು ನಿನಗೆ ಬೊಲೆಂಜಿರ್ ಸಾರು ಮಾಡಿ, ಬಂಗುಡೆ ಹುರಿದು ಪತ್ತಿರ್ ಮಾಡಿಕೊಡುತ್ತೇನೆ. ಹೊಟ್ಟೆ ತುಂಬಾ ತಿನ್ನುವಿಯಂತೆ. ಅಜ್ಜಿಗೂ ಬೊಲೆಂಜಿರ್ ಸಾರು ಎಂದರೆ ತುಂಬಾ ಇಷ್ಟ.’’
ಐಸು ಪತ್ತಿರ್‌ಗೆ ಅಕ್ಕಿ ನೆನೆ ಹಾಕಿ ಬಂದು ಮೀನು ಮಾಡಲು ಕುಳಿತಳು. ತಾಹಿರಾ ಅವಳು ಮೀನು ಮಾಡುವುದನ್ನೇ ಬೆರಗುಗಣ್ಣಿನಿಂದ ನೋಡುತ್ತಿದ್ದಳು. ‘‘ಯಾಕೆ ಹಾಗೆ ನೋಡ್ತಾ ಇದ್ದಿಯಾ, ಮೀನು ಮಾಡುವುದನ್ನು ನೀನು ನೋಡಿಯೇ ಇಲ್ಲವಾ?’’
‘‘ಇಲ್ಲ ಮಾಮಿ, ಇದೇ ಮೊದಲ ಸಲ ನೋಡು ತ್ತಿದ್ದೇನೆ. ನನಗೂ ಅಡುಗೆ ಮಾಡಲು ಹೇಳಿಕೊಡ್ತೀರಾ ಮಾಮಿ...’’ ತಾಹಿರಾಳ ಮುಖದ ತುಂಬಾ ಕುತೂಹಲವಿತ್ತು.
‘‘ಅದಕ್ಕೇನಂತೆ, ಒಂದೆರಡು ಸಲ ನೋಡು, ಮತ್ತೆ ನೀನೇ ಮಾಡುವಿಯಂತೆ’’
‘‘ಮಾಮಿ, ನಿಮಗೆ ಬಿರಿಯಾನಿ ಮಾಡ್ಲಿಕ್ಕೆ ಬರ್ತದಾ’’
‘‘ಹೂಂ...’’
‘‘ನನಗೆ ಕಲಿಯಬೇಕೂಂತ ಆಸೆ’’
‘‘ನೀನು ಒಂದು ತಿಂಗಳು ಬಂದು ಇಲ್ಲಿ ಇದ್ದುಬಿಡು. ನಿನಗೆ ಎಲ್ಲ ಕಲಿಸಿಕೊಡುತ್ತೇನೆ.’’ ಐಸು ಮೀನು ತೊಳೆದು ಮಸಾಲೆ ಕಡೆಯಲು ಹಾಕಿದಳು. ಎಲ್ಲವನ್ನೂ ಬಿಟ್ಟಗಣ್ಣಿನಿಂದ ನೋಡುತ್ತಿದ್ದಳು ತಾಹಿರಾ. ‘‘ಸ್ವಲ್ಪಚಾ ಮಾಡಿ ಕೊಡಲಾ, ಕುಡೀತಿಯಾ?’’
‘‘ಬೇಡ ಮಾಮಿ’’
‘‘ಹಾಲು ಕೊಡಲಾ?’’
‘‘ಏನೂ ಬೇಡ, ಬೇಗ ಪತ್ತಿರ್ ಮಾಡಿಕೊಡಿ’’
ಕೆಲವು ಗಂಟೆಗಳ ಪರಿಚಯವಾದರೂ ಅದೆಷ್ಟೊ ವರ್ಷಗಳಿಂದ ಒಟ್ಟಿಗೆ ಇದ್ದವರಂತೆ ಅವರು ಬೆರೆತುಬಿಟ್ಟಿದ್ದರು. ‘‘ಬಂದೆ, ಈಗ ಬಂದೆ. ಅಜ್ಜಿಯ ಕೋಣೆಯಲ್ಲಿ ಏನೂ ಶಬ್ದ ಕೇಳ್ತಾ ಇಲ್ಲ. ಏನ್ಮಾಡ್ತಿದ್ದಾರೇಂತ ನೋಡಿ ಕೊಂಡು ಬರ್ತೇನೆ’’ ಎಂದು ಹೊರಟು ನಿಂತಳು ಐಸು.
‘‘ನಾನೂ ಬರ್ತೇನೆ ಮಾಮಿ’’ ತಾಹಿರಾ ಬೆನ್ನು ಹಿಡಿದಳು.
‘‘ಬೇಡಮ್ಮಾ, ಅಜ್ಜಿಯ ಮನಸ್ಸು ಸರಿಯಿಲ್ಲ. ಒಂದೆರಡು ದಿನ ತಡೆದುಕೋ. ಈಗ ನೀನು ಬಂದರೆ ಅವರು ಮತ್ತೂ ನೊಂದು ಕೊಳ್ಳುತ್ತಾರೆ. ನಾನು ಹೋಗಿ ಬರುತ್ತೇನೆ’’ ಐಸು ಹೊರಟಿದ್ದು ನೋಡಿ ತಾಹಿರಾಳ ಮುಖ ಪೆಚ್ಚಾಯಿತು.
ಐಸು ಕೋಣೆಗೆ ಬಂದಾಗ ಅಜ್ಜಿ ಕಿಟಕಿಯ ಪಕ್ಕ ಕುಳಿತು ಬಿಟ್ಟಗಣ್ಣಿನಿಂದ ಹೊರಗೆ ನೋಡುತ್ತಿದ್ದರು. ಐಸು ಅಜ್ಜಿಯ ಹಿಂದೆ ನಿಂತು ಕಿಟಕಿಯಲ್ಲಿ ಇಣುಕಿದಳು. ಆಡೊಂದು ತನ್ನ ಮರಿಗೆ ಹಾಲುಣಿಸುತ್ತಿತ್ತು. ಆಡು ತನ್ನ ಮರಿಯನ್ನು ಮೂಸಿ ಮೂಸಿ ಪ್ರೀತಿಯಿಂದ ಹಾಲುಣಿಸುತ್ತಿದ್ದರೆ, ಮರಿ ತಾಯಿಯ ಮೊಲೆಗೆ ಮೂತಿಯಿಂದ ಗುದ್ದಿ ಗುದ್ದಿ ಬಾಲ ಆಡಿಸುತ್ತಾ ಹಾಲು ಹೀರುತ್ತಿತ್ತು. ಅದರ ಬಾಯಿಯಿಂದ ನೊರೆಗಳು ಉಕ್ಕುತ್ತಿದ್ದವು.
‘‘ಅಜ್ಜೀ...’’ ಐಸು ಕರೆದಳು.
ಶಿಲೆಯಂತೆ ಕುಳಿತುಬಿಟ್ಟಿದ್ದ ಅಜ್ಜಿ ಮಾತನಾಡಲಿಲ್ಲ.
‘‘ಅಜ್ಜೀ.....’’
‘‘................’’
ಇನ್ನು ಎಷ್ಟು ದಿನ ಬೇಕೋ ಇದು ಸರಿಯಾಗಲಿಕ್ಕೆ ಎಂದುಕೊಳ್ಳುತ್ತಾ ಹೊರಗಡಿ ಇಡುತ್ತಿದ್ದಂತೆಯೇ ಸೂರ್ಯಾಸ್ತದ ನಮಾಝ್‌ನ ಕರೆ ಕೇಳಿಸಿತು. ಮತ್ತೆ ತಿರುಗಿದವಳು ಅಜ್ಜಿಯ ಬಳಿ ಬಂದು, ‘‘ಅಜ್ಜಿ ಬಾಂಗ್ ಆಯಿತು. ಏಳಿ’’ ಎಂದಳು. ಅಜ್ಜಿ ಮಿಸುಕಾಡಲಿಲ್ಲ.
ಅಜ್ಜಿಯ ಭುಜ ಹಿಡಿದು ‘‘ಅಜ್ಜೀ... ಅಜ್ಜೀ...’’ ಎಂದು ಕುಲುಕಿದಳು. ಅಜ್ಜಿ ಈಗ ಮುಖ ತಿರುಗಿಸಿ ಅವಳನ್ನೇ ನೋಡಿದರು. ಕೆಂಪಾಗಿ ಕೆಂಡ ಉಗುಳುತ್ತಿದ್ದ ಅವರ ಕಣ್ಣುಗಳನ್ನು ನೋಡಿ ಅವಳಿಗೆ ಭಯವಾಯಿತು.
‘‘ಅಜ್ಜೀ... ಬಾಂಗ್ ಆಯಿತು. ನಮಾಝ್ ಮಾಡಿ’’ ಪುಟ್ಟ ಮಗುವನ್ನು ಸಂತೈಸುವಂತೆ ಅವಳು ಅಜ್ಜಿಯ ಭುಜ ಹಿಡಿದು ಹೇಳಿದಳು. ಅಜ್ಜಿ ಎದ್ದು ಬಚ್ಚಲಿನತ್ತ ನಡೆದರು.
ಅಜ್ಜಿಯ ಕೋಣೆಯಿಂದ ಬಂದ ಐಸು ಸಾಂಬ್ರಾಣಿಯ ಪಾತ್ರೆಗೆ ತೆಂಗಿನಚಿಪ್ಪು ಹಾಕಿ ಬೆಂಕಿ ಹೊತ್ತಿಸಿ ಕೆಂಡ ಮಾಡಿದಳು. ಆ ಕೆಂಡಕ್ಕೆ ಸಾಂಬ್ರಾಣಿ ಹಾಕುತ್ತಾ ಅದರ ಹೊಗೆಯನ್ನು ಎಲ್ಲ ಕೋಣೆಗಳಿಗೆ ತುಂಬಿಸಿ ಬಾಗಿಲು ಹಾಕಿದಳು. ಕೊನೆಗೆ ಅದನ್ನು ತಂದು ಅಜ್ಜಿಯ ಕೋಣೆಯಲ್ಲಿಟ್ಟಳು. ಇಡೀ ಮನೆ ಈಗ ಸಾಂಬ್ರಾಣಿಯ ಹೊಗೆಯ ಸುವಾಸನೆಯಿಂದ ಘಮಘಮಿಸತೊಡಗಿತು.
ಎಲ್ಲವನ್ನೂ ಬೆರಗುಗಣ್ಣಿನಿಂದ ನೋಡುತ್ತಿದ್ದ ತಾಹಿರಾ ಒಮ್ಮೆ ದೀರ್ಘವಾಗಿ ಉಸಿರೆಳೆದುಕೊಳ್ಳುತ್ತಾ ಆಶ್ಚರ್ಯದಿಂದ
‘‘ಏನೂ ಮಾಮಿ ಇದು. ಮನೆ ತುಂಬಾ ಹೊಗೆ ತುಂಬಿಸಿಬಿಟ್ಟಿದ್ದೀರಿ?’’ ಎಂದು ಕೇಳಿದಳು.
‘‘ಇದು ಲೋಬಾನದ ಹೊಗೆ. ಅಜ್ಜನ ಕಾಲ ದಿಂದಲೂ ನಡೆದುಕೊಂಡು ಬಂದ ಒಂದು ಸಂಪ್ರದಾಯ. ಒಂದು ದಿನ ಈ ಧೂಮ ಹಾಕದಿದ್ದರೆ ಅಜ್ಜಿ ನೊಂದುಕೊಳ್ಳುತ್ತಾರೆ. ಅಜ್ಜನ ಕಾಲದಲ್ಲಿ ಏನೆಲ್ಲ ನಡೆಯುತ್ತಿತ್ತೊ ಅದನ್ನೆಲ್ಲ ಚಾಚೂ ತಪ್ಪದೆ ಮಾಡಬೇಕು. ಆಗಲೇ ಅವರಿಗೆ ಸಮಾಧಾನ’’
‘‘ಅಜ್ಜಿ ಹೇಗಿದ್ದಾರೆ.?’’
‘‘ಹಾಗೆಯೇ ಇದ್ದಾರೆ. ಬೇಗ ಸರಿಯಾಗುವ ಲಕ್ಷಣ ಕಾಣಿಸುತ್ತಿಲ್ಲ’’
‘‘ನಾನು ಬರಬಾರದಿತ್ತು ಅಲ್ಲವಾ...?’’
‘‘ಒಂದೆರಡು ದಿನ ಹೋಗಲಿ. ಆಮೇಲೆ ನಿನಗೆ ಹಾಗೆ ಅನಿಸುವುದಿಲ್ಲ’’
‘‘ಅಜ್ಜಿ ಮನಸ್ಸಿಗೆ ಬೇಜಾರು ಮಾಡಿ ನಾನು ಯಾಕೆ ಇಲ್ಲಿ ಇರಬೇಕು ಮಾಮಿ. ನಾನು ನಾಳೆ ಹೊರಟು ಹೋಗುತ್ತೇನೆ.’’
‘‘ಇಲ್ಲಮ್ಮಾ, ಅವರಿಗೆ ನಿನ್ನ ಮೇಲೆ ಕೋಪ ಇಲ್ಲ. ಕಾಲ, ಸಂದರ್ಭ ಎಲ್ಲ ಹಾಗೆ ಮಾಡಿದೆ. ಎಲ್ಲ ಸರಿಯಾಗ್ತದೆ. ನೀನು ಬೇಸರ ಮಾಡಿಕೊಳ್ಳಬೇಡ. ನೀನು ನೊಂದುಕೊಂಡರೆ ನನಗೂ ನೋವಾಗುತ್ತದೆ. ಅಜ್ಜಿಗೆ ಯಾರ ಮೇಲೆ ಕೋಪವಿದೆಯೋ ಅವರ ಮೇಲೆ ನನಗೂ ಕೋಪವಿದೆ. ಅಜ್ಜಿ ಕ್ಷಮಿಸದವರನ್ನು ಯಾವತ್ತೂ ನಾನು ಕ್ಷಮಿಸೋಲ್ಲ. ಅವರು ನಿನಗೆ ಅಜ್ಜಿ. ಆದರೆ ನನಗೆ ಅಜ್ಜಿ ಮಾತ್ರ ಅಲ್ಲ, ನನ್ನ ತಾಯಿ, ಸರ್ವಸ್ವ. ಅವರು ಸುಖವಾಗಿರಬೇಕು. ಕೊನೆಯ ತನಕ ನಾನು ಅವರ ಸೇವೆ ಮಾಡಬೇಕು. ಅವರ ಮನಸ್ಸಿಗೆ ಒಂದು ಚಿಕ್ಕ ನೋವಾದರೂ ಅದನ್ನು ನಾನು ಸಹಿಸೋದಿಲ್ಲ. ನೀನಿಲ್ಲಿ ಇರುವುದರಿಂದ ಅವರಿಗೆ ಖಂಡಿತ ಕೋಪ ಇಲ್ಲ. ಖುಷಿಪಡ್ತಾರೆ. ನೀನಾಗಿ ಅವರನ್ನು ಹುಡುಕಿಕೊಂಡು ಬಂದಿದ್ದಿ ನೋಡು, ನಿನ್ನಂತಹ ಮೊಮ್ಮಗಳನ್ನು ಯಾರಮ್ಮಾ ದ್ವೇಷಿಸುತ್ತಾರೆ. ನೀನು ಹೋಗಬೇಡ. ಇಷ್ಟವಿದ್ದಷ್ಟು ದಿನ ಇಲ್ಲಿರು. ಅಜ್ಜಿ ಬಗ್ಗೆ ಯೋಚನೆ ಮಾಡಬೇಡ. ಅವರಿಗೆ ವಯಸ್ಸಾಯಿತು. ದಿನಕ್ಕೊಂಥರಾ ಇರ್ತಾರೆ. ಗಂಟೆಗೊಂಥರಾ ಮಾತಾಡ್ತಾರೆ. ಅವರ ಈ ಮುಪ್ಪಿನ ಕಾಲದಲ್ಲಿ ನೀನಾದರೂ ಹತ್ತಿರ ಬಂದಿಯಲ್ಲ, ಆ ಸಂತೋಷದಿಂದ ಅಜ್ಜಿ ಕುಗ್ಗಿ ಹೋಗಿದ್ದಾರೆ. ಸರಿಯಾಗ್ತಾರೆ. ಇಂದಲ್ಲದಿದ್ದರೆ ನಾಳೆ ಸರಿಯಾಗ್ತಾರೆ...’’ ಐಸು ನಿಟ್ಟುಸಿರು ಬಿಟ್ಟು ತಾಹಿರಾಳ ತಲೆ ಸವರಿದಳು.
(ರವಿವಾರದ ಸಂಚಿಕೆಗೆ)