ಅತ್ಯಾಚಾರ ಸಂತ್ರಸ್ತೆಯೊಂದಿಗೆ ಸೆಲ್ಫಿ ತೆಗೆದುಕೊಂಡ ಮಹಿಳಾ ಆಯೋಗದ ಸದಸ್ಯೆ

Update: 2016-06-30 06:05 GMT

 ಜೈಪುರ್, ಜೂ.30: ಅತ್ಯಾಚಾರ ಸಂತ್ರಸ್ತೆಯೊಂದಿಗೆ ಸೆಲ್ಫಿ ತೆಗೆದುಕೊಂಡ ರಾಜಸ್ಥಾನ ರಾಜ್ಯ ಮಹಿಳಾ ಆಯೋಗದ ಸದಸ್ಯೆಯೊಬ್ಬರು ವಿವಾದಕ್ಕೀಡಾಗಿದ್ದು ಅವರಿಂದ ಈ ಬಗ್ಗೆ ಆಯೋಗದ ಅಧ್ಯಕ್ಷೆ ವಿವರಣೆ ಕೇಳಿದ್ದಾರೆ. ಕುತೂಹಲದಾಯಕ ಸಂಗತಿಯೆಂದರೆ ಈ ಸೆಲ್ಫಿಯಲ್ಲಿ ಸದಸ್ಯೆ ಸೌಮ್ಯ ಗುರ್ಜರ್ ಜತೆ ಆಯೋಗದ ಅಧ್ಯಕ್ಷೆ ಸುಮನ್ ಶರ್ಮ ಕೂಡ ಕಾಣಿಸಿಕೊಂಡಿದ್ದಾರೆ.

 ತನ್ನ ಪತಿ ಹಾಗೂ ಆತನ ಇಬ್ಬರು ಸಹೋದರರಿಂದ ಅತ್ಯಾಚಾಕ್ಕೊಳಗಾಗಿದ್ದಾಳೆನ್ನಲಾದ ಆಲ್ವಾರ್ ಜಿಲ್ಲೆಯ 30 ವರ್ಷದ ಸಂತ್ರಸ್ತೆಯನ್ನು ಭೇಟಿಯಾಗಲು ಮಂಗಳವಾರ ಅವರಿಬ್ಬರು ಜೈಪುರ ಉತ್ತರ ಮಹಿಳಾ ಪೊಲೀಸ್ ಠಾಣೆಗೆ ಹೋದಾಗ ಈ ಸೆಲ್ಫಿ ಕ್ಲಿಕ್ಕಿಸಲಾಗಿತ್ತು.

‘‘ನಾನು ಸಂತ್ರಸ್ತೆಯೊಂದಿಗೆ ಮಾತನಾಡುತ್ತಿರುವಾಗ ಆಯೋಗದ ಸದಸ್ಯೆ ಈ ಸೆಲ್ಫಿಯನ್ನು ಕ್ಲಿಕ್ಕಿಸಿದ್ದಾರೆ. ಆಕೆ ಯಾವಾಗ ಸೆಲ್ಫಿ ತೆಗೆದಿದ್ದರೆಂದು ನನಗೆ ಗೊತ್ತಿಲ್ಲ. ನಾನು ಇಂತಹ ಕಾರ್ಯಗಳ ಪರ ವಹಿಸುವುದಿಲ್ಲ ಹಾಗೂ ಆಕೆಯಿಂದ ಲಿಖಿತ ವಿವರಣೆಯನ್ನು ಕೇಳಿದ್ದೇನೆ,’’ ಎಂದು ಶರ್ಮ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ.

 ಸೌಮ್ಯ ಗುರ್ಜರ್ ಸೆಲ್ಫಿ ಕ್ಲಿಕ್ಕಿಸುತ್ತಿರುವುದನ್ನು ತೋರಿಸುವ ಎರಡು ಫೊಟೋಗಳು ಬುಧವಾರ ವಾಟ್ಸಾಪ್‌ನಲ್ಲಿ ವೈರಲ್ ಆಗಿ ಬಿಟ್ಟಿದ್ದವು. ಈ ಫೊಟೋಗಳನ್ನು ಪೊಲೀಸ್ ಅಧಿಕಾರಿಯ ಕಚೇರಿಯಲ್ಲಿದ್ದ ಯಾರೋ ತೆಗೆದಿರಬೇಕೆಂದು ಊಹಿಸಲಾಗಿದೆ.

ಈಗಾಗಲೇ ವರದಿಯಾಗಿರುವಂತೆ ಆಲ್ವಾರ್ ಜಿಲ್ಲೆಯ 30 ವರ್ಷದ ಮಹಿಳೆಯಿಂದ 51,000 ರೂ. ವರದಕ್ಷಿಣೆಗೆ ಬೇಡಿಕೆಯಿರಿಸಿದ ಆಕೆಯ ಪತಿ ಹಾಗೂ ಸಹೋದರರಿಬ್ಬರು ಆಕೆಯ ಮೇಲೆ ಅತ್ಯಾಚಾರಗೈದಿದ್ದರಲ್ಲದೆ ಆಕೆಯ ಹಣೆ ಹಾಗೂ ಕೈಗಳ ಮೇಲೆ ನಿಂದನಾತ್ಮಕ ಹಚ್ಚೆ ಮೂಡಿಸಿದ್ದರು. ಆರೋಪಿಗಳ ವಿರುದ್ಧ ಸೆಕ್ಷನ್ 498-ಎ, 376 ಹಾಗೂ 406 ಅನ್ವಯ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News