ಕೆ.ಬಿ.ಕೋಳಿವಾಡ ನೂತನ ಸ್ಪೀಕರ್

Update: 2016-07-05 15:23 GMT

ಬೆಂಗಳೂರು, ಜು. 5: ನಿರೀಕ್ಷೆಯಂತೆ ವಿಧಾನಸಭೆಯ ನೂತನ ಸ್ಪೀಕರ್ ಆಗಿ ಹಾವೇರಿ ಜಿಲ್ಲೆ ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರದ ಹಿರಿಯ ಶಾಸಕ ಕೆ.ಬಿ. ಕೋಳಿವಾಡ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಂಪುಟ ಪುನಾಚರನೆ ಹಿನ್ನೆಲೆಯಲ್ಲಿ ಕಾಗೋಡು ತಿಮ್ಮಪ್ಪ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಕೆ.ಬಿ.ಕೋಳಿವಾಡ ಅವರು ಒಬ್ಬರೆ ನಾಮಪತ್ರ ಸಲ್ಲಿಸಿದ್ದರಿಂದ ಅವರನ್ನೇ ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಮಂಗಳವಾರ ಬೆಳಗ್ಗೆ ಸದನ ಸಮಾವೇಶಗೊಳ್ಳುತ್ತಿದ್ದಂತೆ ಹಂಗಾಮಿ ಸ್ಪೀಕರ್ ಎನ್.ಎಚ್.ಶಿವಶಂಕರ ರೆಡ್ಡಿ ಸ್ಪೀಕರ್ ಚುನಾವಣೆ ಪ್ರಕ್ರಿಯೆ ಆರಂಭಿಸಿದರು. ಸ್ಪೀಕರ್ ಸ್ಥಾನಕ್ಕೆ ಏಕೈಕ ಅಭ್ಯರ್ಥಿಯಾಗಿ ಕೋಳಿವಾಡ ಅವರು ಕಣದಲ್ಲಿದ್ದು ಅವರ ಆಯ್ಕೆಯನ್ನು ಪ್ರಕಟಿಸಿದರು.
ಆ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪೀಕರ್ ಸ್ಥಾನಕ್ಕೆ ಕೋಳಿವಾಡ ಅವರ ಹೆಸರನ್ನು ಸೂಚಿಸಿದರು. ಕಾನೂನು ಸಚಿವ ಜಯಚಂದ್ರ ಕೋಳಿವಾಡ ಅವರ ಹೆಸರನ್ನು ಅನುಮೋದಿಸಿದರು. ನಂತರ ಆ ಪ್ರಸ್ತಾವನೆಯನ್ನು ಸ್ಪೀಕರ್ ಪೀಠದಲ್ಲಿದ್ದ ಶಿವಶಂಕರ ರೆಡ್ಡಿ ಧ್ವನಿಮತದ ಮೂಲಕ ಅಂಗೀಕರಿಸಿ, ಕೋಳಿವಾಡ ನೂತನ ಸ್ಪೀಕರ್ ಎಂದು ಪ್ರಕಟಿಸಿದರು.
ಸಭಾ ನಾಯಕರೂ ಆಗಿರುವ ಸಿಎಂ ಸಿದ್ದರಾಮಯ್ಯ, ವಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಜೆಡಿಎಸ್ ಉಪ ನಾಯಕ ವೈಎಸ್‌ವಿ ದತ್ತ, ಕಾನೂನು ಸಚಿವ ಜಯಚಂದ್ರ, ನೂತನ ಸ್ಪೀಕರ್ ಕೋಳಿವಾಡ ಅವರನ್ನು ಅಭಿನಂದಿಸಿ, ಸ್ಪೀಕರ್ ಪೀಠಕ್ಕೆ ಕರೆತಂದು ಕೂರಿಸಿದರು.
ಗೌರವ ತರುವ ವಿಶ್ವಾಸ: ನೂತನ ಸ್ಪೀಕರ್ ಕೆ.ಬಿ.ಕೋಳಿವಾಡ ಅವರನ್ನು ಅಭಿನಂದಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಈ ಮನೆಯ ಅತ್ಯಂತ ಹಿರಿಯ ಸದಸ್ಯರು ಕಾಗೋಡು ತಿಮ್ಮಪ್ಪ ಹಾಗೂ ಕೋಳಿವಾಡ ಅವರು, ಸ್ಪೀಕರ್ ಸ್ಥಾನಕ್ಕೆ ಸೂಕ್ತ ವ್ಯಕ್ತಿ ಮಾತ್ರವಲ್ಲ, ಆ ಎಲ್ಲ ಅರ್ಹತೆಗಳನ್ನು ಹೊಂದಿದ್ದಾರೆ. ಆ ಸ್ಥಾನದ ಘನತೆ, ಗೌರವವನ್ನು ಎತ್ತಿ ಹಿಡಿಯುತ್ತಾರೆಂಬ ವಿಶ್ವಾಸ ನನ್ನದು ಎಂದು ನುಡಿದರು.
ಅಗತ್ಯ ಸಹಕಾರ: ಇದಕ್ಕೆ ಧ್ವನಿಗೂಡಿಸಿ ಮಾತನಾಡಿದ ಜಗದೀಶ್ ಶೆಟ್ಟರ್, ಪ್ರಸಕ್ತ ವಿಧಾನಸಭೆಯಲ್ಲಿ ತಾನು, ರಮೇಶ್ ಕುಮಾರ್, ಕಾಗೋಡು ತಿಮ್ಮಪ್ಪ, ಕೆ.ಜಿ. ಬೋಪಯ್ಯ ಸೇರಿ ನಾಲ್ಕು ಮಂದಿ ಮಾಜಿ ಸ್ಪೀಕರ್‌ಗಳಿದ್ದೇವೆ. ಹೀಗಾಗಿ ಕೋಳಿವಾಡ ಎಲ್ಲಗಿಂತಲೂ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಲು ಸಹಕಾರ ನೀಡುತ್ತೇವೆ ಎಂದು ಭರವಸೆ ವ್ಯಕ್ತಪಡಿಸಿದರು.
ತಪ್ಪು ಸಲ್ಲ: ವೈಎಸ್‌ವಿ ದತ್ತ ಮಾತನಾಡಿ, ಸ್ಪೀಕರ್ ಸ್ಥಾನಕ್ಕೆ ಕಾಗೋಡು ತಿಮ್ಮಪ್ಪ ನಿಜಕ್ಕೂ ಮಾದರಿ. ಆದರೆ, ಇತ್ತೀಚೆಗೆ ಸ್ವೀಕರ್ ಸ್ಥಾನಕ್ಕಿಂತ ಸಚಿವ ಸ್ಥಾನ ದೊಡ್ಡದು ಎಂಬ ಮನೋಭಾವನೆ ಸಲ್ಲ. ಆ ಮನೋಭಾವ ಹೋಗಲಾಡಿಸುವ ರೀತಿಯಲ್ಲಿ ಕಾರ್ಯ ನಿರ್ವಹಿಸಿ ಎಂದು ಅಭಿನಂದಿಸಿದರು.
ಎತ್ತರದ ವ್ಯಕ್ತಿ: ಮುಖ್ಯ ನ್ಯಾಯಮೂರ್ತಿಯಾಗುವ ಎಲ್ಲ ಅರ್ಹತೆಗಳನ್ನು ಹೊಂದಿರುವ ಕೆ.ಬಿ.ಕೋಳಿವಾಡ ಅವರು, ಅತ್ಯಂತ ಎತ್ತರದ ವ್ಯಕ್ತಿತ್ವದವರು. ನೂತನ ಸದಸ್ಯರಿಗೆ ಉತ್ತಮ ರೀತಿಯಲ್ಲಿ ಮಾರ್ಗದರ್ಶನ ಮಾಡಬೇಕು ಎಂದು ಕರ್ನಾಟಕ ಮಕ್ಕಳ ಪಕ್ಷದ ಸದಸ್ಯ ಅಶೋಕ್ ಖೇಣಿ ಕೋರಿದರು.
ಸಿಂಹಸ್ವಪ್ನ: ಕೆರೆ ಒತ್ತುವರಿ ತೆರವು ಸಮಿತಿಗೆ ಅಧ್ಯಕ್ಷರಾಗುವ ಮೂಲಕ ಭೂಗಳ್ಳರಿಗೆ ಸಿಂಹ ಸ್ವಪ್ನವೇ ಆಗಿದ್ದ ಕೋಳಿವಾಡ ಸ್ಪೀಕರ್ ಆಗಿರುವುದು ಒಳ್ಳೆಯ ಮತ್ತು ಸೂಕ್ತ ತೀರ್ಮಾನ. ರಾಜ್ಯದ ಜನತೆ ಹಿತದೃಷ್ಟಿಯಿಂದ ಅಭಿವೃದ್ಧಿಯ ದೃಷ್ಟಿಯಲ್ಲಿ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಿ ಎಂದು ಹೇಳಿದರು.


‘ಸ್ಪೀಕರ್ ಸ್ಥಾನಕ್ಕೇರುವ ವ್ಯಕ್ತಿ ಈ ಸದನದ ಸೇವಕನೇ ಹೊರತು ಮಾಲಕನಲ್ಲ. ನಮ್ಮ ಮಾಲಕರು ರಾಜ್ಯದ ಜನತೆ. ಅವರ ಹಿತರಕ್ಷಣೆಗಾಗಿ ನಾವೆಲ್ಲರೂ ಕೆಲಸ ಮಾಡಬೇಕು. ತಾನು ಕಾಗೋಡು ತಿಮ್ಮಪ್ಪ ಅವರಷ್ಟು ಹಿರಿಯನಲ್ಲ, ಆದರೂ ಪ್ರಾಮಾಣಿಕವಾಗಿ ನನ್ನ ಸೇವೆ ಸಲ್ಲಿಸುತ್ತೇನೆ. ನನ್ನ ಅವಿರೋಧ ಆಯ್ಕೆಗೆ ಕಾರಣರಾದ ಸಿಎಂ, ವಿಪಕ್ಷ ನಾಯಕರು ಹಾಗೂ ಎಲ್ಲ ಸದಸ್ಯರಿಗೂ ಧನ್ಯವಾದಗಳು. ನಿಮ್ಮ ನಂಬಿಕೆಗೆ ಧಕ್ಕೆಯಾಗದಂತೆ ಕೆಲಸ ನಿರ್ವಹಿಸುವೆ’
-ಕೆ.ಬಿ.ಕೋಳಿವಾಡ ನೂತನ ಸ್ಪೀಕರ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News