ಸಾಗರದಲ್ಲಿ ಶೌರ್ಯ ಮೆರೆದ ಅನನ್ಯ ಸಾಧನೆಗೆ ಅಂತಾರಾಷ್ಟ್ರೀಯ ಪ್ರಶಸ್ತಿ
ಹೊಸದಿಲ್ಲಿ, ಜು.9: ಐದು ವರ್ಷಗಳ ಹಿಂದೆ ರಾಧಿಕಾ ಮೆನನ್, ಭಾರತದ ಮರ್ಚೆಂಟ್ ನೇವಿಯ ಮೊಟ್ಟಮೊದಲ ಮಹಿಳಾ ಕ್ಯಾಪ್ಟನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಇದೀಗ ಅವರು ಸಾಗರದಲ್ಲಿ ಶೌರ್ಯ ಮೆರೆದ ಅನನ್ಯ ಸಾಧನೆಗೆ ಅಂತಾರಾಷ್ಟ್ರೀಯ ಪ್ರಶಸ್ತಿ ಪಡೆದ ವಿಶ್ವದ ಮೊಟ್ಟಮೊದಲ ಮಹಿಳೆ ಎನಿಸಿಕೊಂಡಿದ್ದಾರೆ. ಅಂತಾರಾಷ್ಟ್ರೀಯ ಸಾಗರಯಾನ ಸಂಸ್ಥೆ ಈ ಪ್ರಶಸ್ತಿ ನೀಡಿದೆ. ಬದುಕಿ ಉಳಿಯುವ ಆಸೆಯನ್ನೇ ಬಿಟ್ಟಿದ್ದ ಏಳು ಮಂದಿ ಮೀನುಗಾರರನ್ನು ರಕ್ಷಿಸಿದ ಸಾಹಸಕ್ಕಾಗಿ ಈ ಪ್ರಶಸ್ತಿ ಒಲಿದಿದೆ.
ಕಳೆದ ವರ್ಷ ಆಂಧ್ರಪ್ರದೇಶದ ಕಾಕಿನಾಡದಿಂದ ಒಡಿಶಾದ ಗೋಪಾಲಪುರಕ್ಕೆ ಹೋಗುತ್ತಿದ್ದ ದುರ್ಗಮ್ಮ ಹೆಸರಿನ ಮೀನುಗಾರಿಕಾ ನೌಕೆ ಚಂಡಮಾರುತಕ್ಕೆ ಸಿಲುಕಿ ನೌಕೆಯ ಇಂಜಿನ್ ವಿಫಲವಾಗಿ ಸಿಕ್ಕಿಹಾಕಿಕೊಂಡಿದ್ದನ್ನು ಮೆನನ್ ತಂಡ ಪತ್ತೆ ಮಾಡಿತ್ತು. ದೋಣಿಯಲ್ಲಿದ್ದವರೆಲ್ಲ ಸಮುದ್ರದಲ್ಲಿ ಜೀವ ಕಳೆದುಕೊಂಡಿದ್ದಾರೆ ಅಂದುಕೊಂಡ ಕುಟುಂಬ ಸದಸ್ಯರು ಇವರ ಅಂತ್ಯಕ್ರಿಯೆಗೆ ಸಿದ್ಧತೆ ನಡೆಸಿದ್ದರು. ಆಗ ಪವಾಡ ಸದೃಶವಾಗಿ ತಾವು ಬದುಕಿ ಉಳಿದಿರುವ ಬಗ್ಗೆ ದೂರವಾಣಿ ಕರೆ ಮಾಡಿ ಮಾಹಿತಿ ನೀಡಿದ್ದರು.
ಮೆನನ್ ಕೇರಳದ ಕೊಡುಂಗಲ್ಲೂರು ಮೂಲದವರಾಗಿದ್ದು, ಶಿಪ್ಪಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾದ ಆಯಿಲ್ ಟ್ಯಾಂಕರ್ ಸಂಪೂರ್ಣ ಸ್ವರಾಜ್ಯ ಹಡಗಿನ ಉಸ್ತುವಾರಿ ಹೊಂದಿದ್ದಾರೆ. ಈ ಪ್ರಶಸ್ತಿ ಸಂದಿರುವುದು ನನಗೆ ಅಚ್ಚರಿಯಾಗಿದೆ. ನಾನು ಕೃತಜ್ಞಳು ಎಂದು ಮೆನನ್ ಪ್ರತಿಕ್ರಿಯಿಸಿದ್ದಾರೆ. ಸಾಗರದಲ್ಲಿ ಸಂಕಷ್ಟದಲ್ಲಿರುವವರ ರಕ್ಷಣೆ ನಮ್ಮ ಬದ್ಧತೆ. ನಾನು ನನ್ನ ಕರ್ತವ್ಯವನ್ನಷ್ಟೇ ನಿರ್ವಹಿಸಿದ್ದೇನೆ ಎಂದು ಹೇಳಿದ್ದಾರೆ.