ನಾನು ಈ ಹಿಂದೆ ಮೋದಿಗೆ ಸಹಾಯ ಮಾಡಿದ್ದಕ್ಕೆ ಅಪರಾಧಿ ಭಾವನೆ ಕಾಡುತ್ತಿದೆ.
ನಾನು ಈ ಹಿಂದೆ ಮೋದಿಗೆ ಸಹಾಯ ಮಾಡಿದ್ದಕ್ಕೆ ಅಪರಾಧಿ ಭಾವನೆ ಕಾಡುತ್ತಿದೆ.
-ರಾಮ್ ಜೇಠ್ಮಲಾನಿ, ಸಂಸದ
ವಯಸ್ಸಾದ ಮೇಲೆ ಎಲ್ಲಾ ವೇಶ್ಯೆಯರೂ ಗರತಿಯರೇ ಆಗಿರುತ್ತಾರಂತೆ.
---------------------
ಮುಖ್ಯಮಂತ್ರಿ ಸಿದ್ದರಾಮಯ್ಯ ಬದಲಾಗದಿದ್ದರೆ ಜನರೇ ಬದಲಿಸ್ತಾರೆ.
- ಎಚ್.ವಿಶ್ವನಾಥ್, ಕಾಂಗ್ರೆಸ್ ಮುಖಂಡ
ಸದ್ಯಕ್ಕಂತೂ ನಿಮ್ಮ ಸ್ಥಿತಿ ಬದಲಾಗುವ ಲಕ್ಷಣಗಳಿಲ್ಲ.
---------------------
ಎಲ್ಲರೂ ಪಕ್ಷಕ್ಕೆ ಬಂದು ಅಧಿಕಾರ ಅನುಭವಿಸಿ ಹೋಗುವವರೇ ಆದರೆ ಪಕ್ಷ ಉಳಿಯುವುದಿಲ್ಲ.
- ಜಾಫರ್ ಶರೀಫ್, ಕಾಂಗ್ರೆಸ್ ಮುಖಂಡ
ಅಧಿಕಾರ ಅನುಭವಿಸಿ ಹೋದವರು, ಇದೀಗ ಪಕ್ಷದ ವಿರುದ್ಧ ಕೆಲಸ ಮಾಡಲು ನಿಂತರೆ ಇನ್ನೇನಾದೀತು?
---------------------
ಗೋಮಾತೆಗೆ ಮೀಸಲಿರುವ ಭೂಮಾತೆಯ ದುರುಪಯೋಗ ಸಲ್ಲದು.
- ವಿಶ್ವೇಶತೀರ್ಥ ಸ್ವಾಮೀಜಿ, ಪೇಜಾವರ ಮಠ
ಗೋಮಾತೆಗೆ ಮೀಸಲಿರುವ ಕಸಾಯಿ ಖಾನೆಗಳ ಸದ್ಬಳಕೆಯಾದರೆ, ದಫನ ಮಾಡಲು ಭೂಮಾತೆಯ ಅಗತ್ಯ ಬರುವುದಿಲ್ಲ.
---------------------
ನಮ್ಮ ಸರಕಾರ ಅತ್ಯಂತ ಪಾರದರ್ಶಕ.
- ಸಿದ್ದರಾಮಯ್ಯ, ಮುಖ್ಯಮಂತ್ರಿ
ಹೌದು. ಬಟ್ಟೆಯೇ ಇಲ್ಲ.
---------------------
ಯಡಿಯೂರಪ್ಪ ನಮ್ಮ ನಾಯಕ.
- ಈಶ್ವರಪ್ಪ, ವಿ.ಪ. ವಿಪಕ್ಷ ನಾಯಕ
ಆದರೆ ತಮ್ಮ ನಾಯಕರಾಗಲು ಯಡಿಯೂರಪ್ಪ ಒಪ್ಪಬೇಕಲ್ಲ?
---------------------
ನನಗೂ ಜನ, ಪಕ್ಷ, ಹೈಕಮಾಂಡ್ ಇದೆ.
- ಅಂಬರೀಷ್, ಮಾಜಿ ಸಚಿವ
ಮತ್ತೇಕೆ ತಡ, ಹೊಸ ಸಿನೆಮಾ ಶುರು ಮಾಡಿ.
---------------------
ರಾಜ್ಯದ ಜನತೆ ಕಾಂಗ್ರೆಸ್ ದುರಾಡಳಿತದಿಂದ ಕಂಗಾಲಾಗಿದ್ದಾರೆ.
- ಅನಂತ್ ಕುಮಾರ್, ಕೇಂದ್ರ ಸಚಿವ
ಬಿಜೆಪಿಯ ದುರಾಡಳಿತನವನ್ನು ನೆನೆದು ಒಂದಿಷ್ಟು ನೆಮ್ಮದಿಯಿಂದಿದ್ದಾರೆ.
---------------------
ಜನ ನನ್ನನ್ನು ಎರಡನೆ ಬಸವಲಿಂಗಪ್ಪ ಅಂತಾರೆ.
- ಎಚ್.ಆಂಜನೇಯ, ಸಚಿವ
ಬಸವಲಿಂಗಪ್ಪ ಅವರ ಬೂಸ ಹೇಳಿಕೆ ನೆನಪಾಗಿರಬೇಕು.
---------------------
ರಾಜಕಾರಣಿಗಳು ಜನಸೇವಕರು ಎಂಬ ಭಾವನೆ ಸಾರ್ವಜನಿಕರಲ್ಲಿ ಬೆಳೆಸುವಂತೆ ನಮ್ಮ ನಡೆ ಇರಬೇಕು.
- ಡಿ.ವಿ.ಸದಾನಂದ ಗೌಡ, ಕೇಂದ್ರ ಸಚಿವ
ವಿಮಾನದಲ್ಲೇ ಓಡಾಡುವ ನರೇಂದ್ರ ಮೋದಿಗೆ ನಡೆ-ದಾಡುವ ಅವಕಾಶವೇ ಇಲ್ಲವಲ್ಲ?
---------------------
ಭಾರತ ಹಾಗೂ ಅಮೆರಿಕ ನಡುವಿನ ಬಾಂಧವ್ಯದ ಬಗ್ಗೆ ಪಾಕಿಸ್ತಾನ ತಲೆಕೆಡಿಸಿಕೊಳ್ಳುವುದಿಲ್ಲ.
-ಸರ್ತಾಝ್ ಅಝೀಝ್, ಪಾಕ್ ಪ್ರಧಾನಿಯ ವಿದೇಶಾಂಗ ಸಲಹೆಗಾರ
ತಲೆಯಿದ್ದವರಿಗಷ್ಟೇ ಕೆಡಿಸಿಕೊಳ್ಳುವ ಸಮಸ್ಯೆ ಇರುವುದು.
---------------------
ರಾಜ್ಯದ ಹಿತಾಸಕ್ತಿ ಕಾಯಲು ಪ್ರಬಲ ಪ್ರಾದೇಶಿಕ ಪಕ್ಷವೊಂದರ ಅಗತ್ಯವಿದೆ.
-ದೇವೇಗೌಡ, ಮಾಜಿ ಪ್ರಧಾನಿ
ನಿಮ್ಮದು ಗ್ರಾಮಾಂತರ ಪಕ್ಷವಾಗಿರುವುದರಿಂದ ಆ ಹೊಣೆಗಾರಿಕೆಯ ಭಯ ಬೇಡ.
--------------------
ತೆರಿಗೆ ಸಂಗ್ರಹಿಸಲು ಜನರಿಗೆ ಕುಡಿಸಿದರೆ ಕರ್ನಾಟಕ ‘ಕುಡುಕರ ರಾಜ್ಯ’ವಾಗುತ್ತದೆ.
-ಯು.ಬಿ.ಬಣಕಾರ್, ಬಿಜೆಪಿ ಶಾಸಕ
ಹೊಸ ತೆರಿಗೆಯ ವಿಷಯ ಕುಡಿಸುವುದಕ್ಕಿಂತ ಮದ್ಯ ಕುಡಿಸುವುದು ವಾಸಿ ಎನ್ನುತ್ತಾರೆ ಸಿದ್ದರಾಮಯ್ಯ.
---------------------
ನಾನು ಹುಚ್ಚು ನಾಯಿಯಲ್ಲ. ಸರಕಾರದ ತಪ್ಪುಗಳನ್ನು ಕಂಡು ಹಿಡಿಯುವ ಕಾವಲು ನಾಯಿ.
- ಈಶ್ವರಪ್ಪ, ವಿ.ಪ. ವಿಪಕ್ಷ ನಾಯಕ
ಸರಕಾರಕ್ಕಿಂತ ಮನೆಯವರಿಗೆ ಕಚ್ಚಿದ್ದೇ ಹೆಚ್ಚು.
---------------------
ಖಾತೆ ಬದಲಾವಣೆ ಆಗಿರುವುದರಿಂದ ನನಗೆ ಪ್ರಮೋಷನ್ ಸಿಕ್ಕಂತಾಗಿದೆ.
- ಯು.ಟಿ.ಖಾದರ್, ಸಚಿವ
ಅಂತೂ ನಾಟಕ ರಂಗದಿಂದ ಸಿನೆಮಾರಂಗಕ್ಕೆ ಪ್ರಮೋಶನ್ ಸಿಕ್ಕಂತೆ.
---------------------
ಸಮಾಜ ಒಟ್ಟಾಗಿ ನಿಂತರೆ ಗೋವು ಮತ್ತು ಸಂತರಿಗೆ ಯಾವುದೇ ಭಯವಿಲ್ಲ.
- ರಾಘವೇಶ್ವರ ಸ್ವಾಮೀಜಿ, ರಾಮಚಂದ್ರಾಪುರ ಮಠ
ಭಯ ಏನಿದ್ದರೂ ಅಬಲೆ ಮಹಿಳೆಗೆ ಮಾತ್ರ.
--------------------
ಭಯೋತ್ಪಾದನೆಯೇ ಪ್ರಪಂಚಕ್ಕೆ ದೊಡ್ಡ ಬೆದರಿಕೆ.
- ನರೇಂದ್ರ ಮೋದಿ, ಪ್ರಧಾನಿ
ನೀವು ಪ್ರಪಂಚ ತಿರುಗಾಡುತ್ತಿರುವುದನ್ನು ನೋಡಿದರೆ ಅದು ನಿಜ ಅನ್ನಿಸುತ್ತದೆ.
---------------------
ವಿದ್ಯಾರ್ಥಿಗಳು ಸಿಡಿದೇಳಬೇಕು.
- ಪ್ರಕಾಶ್ ಜಾವ್ಡೇಕರ್, ಕೇಂದ್ರ ಸಚಿವ
ನಿಮ್ಮ ಕೂಗು ಕೇಳಿಯೇ ಕನ್ಹಯ್ಯ ಮತ್ತು ಅವರ ಗೆಳೆಯರು ಸಿಡಿದೆದ್ದದ್ದು.
---------------------
ಬಾಲಿವುಡ್ ಸಿನೆಮಾಗಳಲ್ಲಿ ಮಹಿಳೆ ಈಗ ಬರಿ ಕಣ್ತಂಪು ಮಾಡುವ ಪ್ರದರ್ಶನದ ಬೊಂಬೆಯಾಗಿ ಉಳಿದಿಲ್ಲ.
- ಮಾಧುರಿ ಧೀಕ್ಷಿತ್, ಬಾಲಿವುಡ್ ನಟಿ
ಪ್ರದರ್ಶನದ ಬೊಂಬೆಗೀಗ ವಯಸ್ಸಾಗಿದೆ.
---------------------
ರಾಜ್ಯ ಸರಕಾರವನ್ನು ಜನರೇ ನೇಣು ಹಾಕುವ ಕಾಲ ಬಂದಿದೆ.
- ಶೋಭಾ ಕರಂದ್ಲಾಜೆ, ಸಂಸದೆ
ಬಿಜೆಪಿಯ ಕೆಲ ನಾಯಕರು ನೇಣು ಹಗ್ಗದ ಜೊತೆಗೆ ಹೊಂಚು ಹಾಕುತ್ತಿರುವುದು ನೋಡಿದರೆ, ಬೇರೇನೋ ಸಂಭವಿಸಲಿದೆ.
---------------------
ನಾನು ಅಂಬೇಡ್ಕರ್ ಚಿಂತನೆಯ ಹಿನ್ನೆಲೆಯಿಂದ ಬಂದವನು.
- ರಾಮದಾಸ್ ಅಠವಳೆ, ಕೇಂದ್ರ ಸಚಿವ
ತಮ್ಮ ಹೆಸರಲ್ಲಿ ರಾಮನಿರುವುದನ್ನು ಕಂಡು ಬಿಜೆಪಿ ಮೋಸ ಹೋಗಿರಬೇಕು ಅಂತೀರಾ?
---------------------
ರಾಮ ಮಂದಿರ ನಿರ್ಮಾಣ ರಾಜಕೀಯ ವಿಷಯ ಅಲ್ಲ.
- ಸಾಧ್ವಿ ನಿರಂಜನ್, ಕೇಂದ್ರ ಸಚಿವೆ
ಅದು ಹೊಟ್ಟೆ ಪಾಡಿನ ವಿಷಯ ಅಂತೀರಾ?