ಮಾನಸಿಕ-ದೈಹಿಕ ಹಿಂಸೆಗಳಿಗೆ ಸಾಹಿತ್ಯವೇ ಔಷಧ: ಕಾಮರೂಪಿ
ಬೆಂಗಳೂರು, ಜು.16: ನಾನಿವತ್ತು ಬದುಕಿದ್ದೇನೆಂದರೆ ಸಾಹಿತ್ಯದಿಂದ ಮಾತ್ರ. ನನಗೆ ಆಗಾಗ ಎದುರಾಗುವ ಮಾನಸಿಕ ಹಾಗೂ ದೈಹಿಕ ಹಿಂಸೆಗಳಿಗೆ ಸಾಹಿತ್ಯವೆ ಔಷಧಿ ಎಂದು ಹಿರಿಯ ಪತ್ರಕರ್ತ ಹಾಗೂ ಸಾಹಿತಿ ಎಂ.ಎಸ್.ಪ್ರಭಾಕರ(ಕಾಮರೂಪಿ) ತಿಳಿಸಿದ್ದಾರೆ.
ಶನಿವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಗರದ ನಯನ ಸಭಾಂಗಣದಲ್ಲಿ ಆಯೋಜಿಸಿದ್ದ ಮನೆಯಂಗಳದಲ್ಲಿ ಮಾತುಕತೆ-178 ತಿಂಗಳ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ನಾನಿವತ್ತು ಬದುಕಿದ್ದೇನೆಂದರೆ ಸಾಹಿತ್ಯದಿಂದ ಮಾತ್ರ. ನನಗೆ ಆಗಾಗ ಎದುರಾಗುವ ಮಾನಸಿಕ ಹಾಗೂ ದೈಹಿಕ ಹಿಂಸೆಗಳಿಗೆ ಸಾಹಿತ್ಯವೆ ಔಷಧಿ. ಯಾವುದೋ ಸಮಸ್ಯೆಗೆ ಯಾರೋ ಬರೆದಿರುವ ಸಾಹಿತ್ಯದ ಸಾಲ ಪರಿಹಾರವನ್ನು ಒದಗಿಸುತ್ತದೆ. ಹೀಗಾಗಿ ನಾನು ಪ್ರತಿದಿನ ಓದದೆ ಮಲಗುವುದಿಲ್ಲ ಎಂದು ಅವರು ತಿಳಿಸಿದರು.ೋಲಾರದಲ್ಲಿ ಪ್ರಾಥಮಿಕ, ಪ್ರೌಢ ಶಿಕ್ಷಣ ಮುಗಿಸಿ ಸೆಂಟ್ರಲ್ ಕಾಲೇಜಿನಲ್ಲಿ ಇಂಗ್ಲಿಷ್ ಎಂಎ ಪದವಿ ಮುಗಿಸಿದೆ. ನಂತರ ಧಾರವಾಡದ ಕರ್ನಾಟಕ ವಿವಿಯಲ್ಲಿ ಉಪನ್ಯಾಸಕ ವೃತ್ತಿಯನ್ನು ಆರಂಭಿಸಿದೆ. ಅಲ್ಲಿಂದ ಸಾಹಿತ್ಯದ ಬಗೆಗಿನ ನನ್ನ ಆಸಕ್ತಿ ಮೊಳಕೆಯೊಡೆಯಿತು. ಧಾರವಾಡ ಇಂದಿಗೂ ನನಗೆ ಅತ್ಯಂತ ಪ್ರಿಯವಾದ ಜಿಲ್ಲೆಯಾಗಿದೆ ಎಂದು ಸ್ಮರಿಸಿದರು.ಶ್ಯಾನ್ಯ ರಾಜ್ಯವಾದ ಗುವಾಹತಿ ವಿಶ್ವ ವಿದ್ಯಾನಿಲಯದಲ್ಲಿ ರೀಡರ್ ಆಗಿ ಕೆಲಸ ಮಾಡುತ್ತಿದ್ದೆ. ಆ ಸಂದರ್ಭದಲ್ಲಿ ತುರ್ತು ಪರಿಸ್ಥಿತಿಯಿದ್ದ ಕಾರಣ ಅಲ್ಲಿನ ಸರಕಾರ ನನಗೆ ಕಿರುಕುಳ ಕೊಡಲು ಪ್ರಾರಂಭಿಸಿತು. ಆದ್ದರಿಂದ ಅಲ್ಲಿಂದ ನಾನು ಮುಂಬೈಗೆ ದಿ ಎಕನಾಮಿಕ್ ಆ್ಯಂಡ್ ಪೊಲಿಟಿಕಲ್ ವಾರ ಪತ್ರಿಕೆಯ ಸಂಪಾದಕೀಯ ವಿಭಾಗಕ್ಕೆ ಕಡಿಮೆ ಸಂಬಳಕ್ಕೆ ಸೇರಿದೆ ಎಂದು ತಿಳಿಸಿದರು.
ಮುಂಬೈಯ ಎಕನಾಮಿಕ್ಸ್ ವಾರಪತ್ರಿಕೆ ಯಿಂದ ಗುವಾಹತಿಗೆ ದಿ ಹಿಂದು ಪತ್ರಿಕೆಗೆ ಈಶಾನ್ಯ ಭಾರತದ ಪ್ರತಿನಿಧಿಯಾಗಿ ವೃತ್ತಿ ಆರಂಭಿಸಿದೆ. ಪತ್ರಿಕೆಯು ನನಗೆ ಸಂಪೂರ್ಣವಾದ ಸ್ವಾತಂತ್ರ ಕೊಟ್ಟಿತು. ಇದನ್ನು ಬಳಸಿಕೊಂಡು ಈಶಾನ್ಯ ಭಾಗದ ರಾಜ್ಯಗಳ ಕುರಿತು ವಿಶೇಷ ಲೇಖನಗಳನ್ನು ಬರೆದೆ ಎಂದು ತಮ್ಮ ಅನುಭವವನ್ನು ಹಂಚಿಕೊಂಡರು.ುವಾಹತಿಯಿಂದ ದಕ್ಷಿಣ ಆಫ್ರಿಕಾಕ್ಕೆ ವಿಶೇಷ ವರದಿಗಾರನಾಗಿ ಹೋದೆ. ಅಲ್ಲಿ ನೆಲ್ಸನ್ ಮಂಡೇಲಾ ರನ್ನು ಸಂದರ್ಶನ ಮಾಡಿದ ಅನುಭವವನ್ನು ಮರೆಯಲು ಸಾಧ್ಯವೆ ಇಲ್ಲ. ನೆಲ್ಸನ್ ಮಂಡೇಲಾ ಜೊತೆಗೆ ಅತ್ಯಂತ ಮಾನವೀಯತೆಯುಳ್ಳ ಅನೇಕ ನಾಯಕರನ್ನು ಭೇಟಿ ಮಾಡಿದೆ. ಅದು ಅತ್ಯಂತ ಅದ್ಭುತವಾದ ಅನುಭವವಾಗಿದೆ ಎಂದು ತಿಳಿಸಿದರು.
ಸಾಹಿತ್ಯ-ಸಾಹಿತ್ಯಕ್ಕಾಗಿಯಲ್ಲ: ಸಾಹಿತ್ಯ ರಚಿಸುವುದು ಸಾಹಿತ್ಯಕ್ಕಾಗಿ ಎಂಬ ಅಭಿಪ್ರಾಯವನ್ನು ನಾನು ಒಪ್ಪುವುದಿಲ್ಲ. ಸಾಹಿತ್ಯ ಎನ್ನುವುದು ಸೃಜನಾತ್ಮಕ ಕ್ರಿಯೆಯಾದರು, ಅದು ಒಂದು ವೃತ್ತಿಯೆಂದೆ ಭಾವಿಸುತ್ತೇನೆ. ಅದನ್ನು ವೈಭವೀಕರಿಸುವ ಅಗತ್ಯವಿಲ್ಲವೆಂದು ಹಿರಿಯ ಸಾಹಿತಿ ಕಾಮರೂಪಿ ತಿಳಿಸಿದರು.
ಇಂಗ್ಲಿಷ್ ಸಾಹಿತ್ಯ ನನ್ನನ್ನು ರೂಪಿಸಿದೆ. ಅದನ್ನು ಓದದೆ ಹೋಗಿದ್ದರೆ ನನ್ನ ಜೀವನ ಧ್ವಂಸವಾಗುತ್ತಿತ್ತು. ಶೇಕ್ಸ್‌ಪಿಯರ್‌ನ ನಾಟಕಗಳು ನನ್ನನ್ನು ಬಹುವಾಗಿ ಸೆಳೆದಿವೆ. ನನ್ನ ವ್ಯಕ್ತಿತ್ವ ರೂಪಿತಗೊಳ್ಳಲು ಇಂಗ್ಲಿಷ್ ಸಾಹಿತ್ಯದ ಓದು ಕಾರಣವಾಗಿದೆ ಎಂದು ತಮ್ಮ ಬದುಕಿನ ಪರಿಯನ್ನು ಬಿಚ್ಚಿಟ್ಟರು.
ನನ್ನ ನ್ಯೂನತೆಗಳು ಬದಲಾಗಿದ್ದೆ ಮುಂಬೈಯಲ್ಲಿ. ಎಂಟು ವರ್ಷಗಳ ಕಾಲ ದಿ ಎಕನಾಮಿಕ್ ಆ್ಯಂಡ್ ಪೊಲಿಟಿಕಲ್ ವಾರಪತ್ರಿಕೆಯಲ್ಲಿ ಪತ್ರಕರ್ತನಾಗಿದ್ದ ನಾನು ಬಿಡುವು ಸಿಕ್ಕಾಗಲೆಲ್ಲ ಸಿನೆಮಾಗಳಿಗೆ ಹೋಗುತ್ತಿದ್ದೆ. ರುಚಿಕಟ್ಟಾದ ಮಾಂಸದ ಪದಾರ್ಥಗಳನ್ನು ತಿನ್ನುತ್ತಿದ್ದೆ. ಕೋಲಾರದಲ್ಲಿದ್ದ ಮಧ್ಯಮ ವರ್ಗದ ಬ್ರಾಹ್ಮಣ ಜಾತಿಯ ಚಿಂತನೆಗಳಿಂದ ಸಂಪೂರ್ಣವಾಗಿ ಹೊರಬಂದೆ.
-ಎಂ.ಎಸ್.ಪ್ರಭಾಕರ್,
ಹಿರಿಯ ಪತ್ರಕರ್ತರು