‘ಗೋತ್ರ’ ಕೇಳಿದಾಗ ತಲೆನೋವು ಬಂದಿತ್ತು: ಕವಿ ಡಾ.ಸಿದ್ದಲಿಂಗಯ್ಯ
ಬೆಂಗಳೂರು, ಜು.17: ತಾನು ಯಾವುದಾದರೂ ದೇವಸ್ಥಾನಕ್ಕೆ ಹೋದಾಗ ಅಲ್ಲಿನ ಅರ್ಚಕರು ‘ನಿಮ್ಮದು ಯಾವ ಗೋತ್ರ, ನಕ್ಷತ್ರ’ ಎಂದು ಪ್ರಶ್ನೆ ಮಾಡಿದಾಗ ನನಗೆ ತಲೆನೋವು ಬರುತಿತ್ತು ಎಂದು ಹಿರಿಯ ಸಾಹಿತಿ ಡಾ.ಸಿದ್ದಲಿಂಗಯ್ಯ ಇಂದಿಲ್ಲಿ ತಮ್ಮ ಅಂತರಾಳದ ನೋವನ್ನು ಬಿಚ್ಚಿಟ್ಟಿದ್ದಾರೆ.
ರವಿವಾರ ನಗರದ ಭಾರತೀಯ ವಿದ್ಯಾಭವನ ಸಭಾಂಗಣದಲ್ಲಿ ಡಾ.ಸಿ. ಸೋಮಶೇಖರ-ಎನ್.ಸರ್ವಮಂಗಳಾ ಸಾಹಿತ್ಯ ಸೇವಾ ಪ್ರತಿಷ್ಠಾನ ಏರ್ಪಡಿಸಿದ್ದ, ಜೀವಮಾನ ಸಾಧನೆಗಾಗಿ ನಾಡಿನ ಹಿರಿಯ ಸಾಧಕರಿಗೆ ‘ಸಂಸ್ಕೃತಿ ಸಂಗಮ’ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಯಾವುದಾದರೂ ದೇವಸ್ಥಾನಕ್ಕೆ ಹೋದಾಗ ನಿಮ್ಮದು ಯಾವ ಗೋತ್ರ ಎಂದು ಪ್ರಶ್ನೆ ಮಾಡಿದಾಗ ನನಗೆ ಬಹಳ ತಲೆನೋವು ಬರುತಿತ್ತು. ಆಗ ಯಾವುದು ಒಂದು ಒಳ್ಳೆಯ ಗೋತ್ರ, ಶಿವನ ಗೋತ್ರ, ಇಲ್ಲ ನನಗೆ ತಿಳಿದಿಲ್ಲ ಎನ್ನುತ್ತಿದ್ದೇ. ಆದರೆ, ಒಮ್ಮೆ ಸ್ವಾಮಿಯೊಬ್ಬರು ಗೋತ್ರ ಕೇಳಿದರೆ ಕೆಳ ವರ್ಗದವರು ಯಾಕೆ ತಲೆಬಗ್ಗಿಸಬೇಕು. ಇನ್ನೂ ಮುಂದೆ ಯಾರಾದರೂ ಗೋತ್ರ ಕೇಳಿದರೆ ಮಾದರ ಚೆನ್ನಯ್ಯ, ಬಸವಣ್ಣನ ಗೋತ್ರ ಎಂದು ಹೇಳುವಂತೆ ಮಾರ್ಗದರ್ಶನ ಮಾಡಿದ್ದರು. ಅಂದಿನಿಂದ ದೇವಸ್ಥಾನಕ್ಕೆ ಹೋದರೆ ಮಾದರ ಚೆನ್ನಯ್ಯನ ಗೋತ್ರ ಎನ್ನುತ್ತೇನೆ. ಇದನ್ನು ಕೇಳಿದವರು ಯಾವುದೋ ಹೊಸ ಗೋತ್ರವಿರಬಹುದು ಎಂದು ಸುಮ್ಮನಾಗುತ್ತಿದ್ದರು ಎಂದು ಸಿದ್ದಲಿಂಗಯ್ಯ ನುಡಿದರು.
ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಮಾತನಾಡಿ, ಯಾವ ಅಧಿಕಾರಿ ಹೇಗೆ ಕೆಲಸ ಮಾಡಬೇಕೆಂದು ಕಾನೂನಿ ನಲ್ಲಿ ಹೇಳಲಾಗಿದೆ. ಆದರೆ, ವ್ಯವಸ್ಥೆಯೊಳಗೆ ಸಾಮಾಜಿಕ ವಿಚಾರ ಬಂದಾಗ ಸೇವೆಗೆ ಮುಂದಾಗಬೇಕು. ಅಲ್ಲದೆ, ನಾವು ಎಲ್ಲರಿಗಿಂತ ಮೇಲೆ ಎನ್ನುವ ಮನೋಭಾವವನ್ನು ದೂರಗೊಳಿಸಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ತರಳಬಾಳು ಮಠದ ಡಾ.ಶಿವ ಮೂರ್ತಿ ಶಿವಾಚಾರ್ಯ, ಕೇಂದ್ರದ ಮಾಜಿ ಸಚಿವ ಎಂ.ವಿ. ರಾಜಶೇಖರನ್ ಪ್ರತಿಷ್ಠಾನದ ಅಧ್ಯಕ್ಷ ಡಾ.ಸಿ. ಸೋಮಶೇಖರ ಸೇರಿ ಪ್ರಮುಖರು ಹಾಜರಿದ್ದರು.