ಸಚಿವ ಕೆ.ಜೆ.ಜಾರ್ಜ್ ರಾಜೀನಾಮೆ

Update: 2016-07-18 17:08 GMT

ಬೆಂಗಳೂರು, ಜು. 18: ಮಂಗಳೂರು ಡಿವೈಎಸ್ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣ ಸಂಬಂಧ ಸಚಿವ ಕೆ.ಜೆ.ಜಾರ್ಜ್ ಹಾಗೂ ಪೊಲೀಸ್ ಅಧಿಕಾರಿಗಳಾದ ಎ.ಎಂ. ಪ್ರಸಾದ್, ಪ್ರಣಬ್ ಮೋಹಂತಿ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಮಡಿಕೇರಿ ನ್ಯಾಯಾಲಯ ಆದೇಶಿಸಿದ ಹಿನ್ನೆಲೆಯಲ್ಲಿ ಸ್ವಪ್ರೇರಣೆಯಿಂದ ಸಚಿವ ಜಾರ್ಜ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಸೋಮವಾರ ಮಡಿಕೇರಿ ನ್ಯಾಯಾಲಯದಲ್ಲಿ ಎಫ್‌ಐಆರ್ ದಾಖಲಿಸುವಂತೆ ಆದೇಶ ಪ್ರಕಟಗೊಳ್ಳುತ್ತಿದ್ದಂತೆ ತೀವ್ರ ಸಂಕಷ್ಟಕ್ಕೆ ಸಿಲುಕಿದ ಸಿಎಂ ಸಿದ್ಧರಾಮಯ್ಯ, ತುರ್ತು ಸಚಿವ ಸಂಪುಟ ಸಭೆ ನಡೆಸಿ ಸಂಪುಟ ಸಹೋದ್ಯೋಗಿಗಳೊಂದಿಗೆ ಜಾರ್ಜ್ ರಾಜೀನಾಮೆ ಸಂಬಂಧ ಸುದೀರ್ಘ ಸಮಾಲೋಚನೆ ನಡೆಸಿದರು.
ಆ ಬಳಿಕ ವಿಧಾನಸೌಧದ ಮೂರನೆ ಮಹಡಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಖುದ್ದು ಭೇಟಿ ಮಾಡಿದ ಸಚಿವ ಕೆ.ಜೆ.ಜಾರ್ಜ್, ತಮ್ಮ ಹಸ್ತಾಕ್ಷರದ ರಾಜೀನಾಮೆ ಪತ್ರವನ್ನು ಸಲ್ಲಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಆ ಪತ್ರವನ್ನು ರಾಜಭವನಕ್ಕೆ ರವಾನಿಸಲಿದ್ದು, ರಾಜ್ಯಪಾಲರು ಜಾರ್ಜ್ ಅವರ ರಾಜೀನಾಮೆ ಅಂಗೀಕರಿಸಬೇಕಾಗುತ್ತದೆ.
ಮಡಿಕೇರಿ ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಅಡ್ಡಕತ್ತರಿಯಲ್ಲಿ ಸಿಲುಕಿದ ರಾಜ್ಯ ಸರಕಾರ, ತರಾತುರಿಯಲ್ಲಿ ವಿಪಕ್ಷಗಳ ಗದ್ದಲ-ಕೋಲಾಹಲದ ನಡುವೆಯೇ ಬಜೆಟ್‌ಗೆ ಅನುಮೋದನೆ ಪಡೆದುಕೊಂಡಿತ್ತು. ಅಲ್ಲದೆ, ಸದನದ ಕಲಾಪವನ್ನು ಅನಿದಿರ್ಷ್ಟಾವಧಿಗೆ ಮುಂದೂಡಲಾಯಿತು. ಹೀಗಾಗಿ ಜು. 30ರ ವರೆಗೆ ನಿಗದಿಪಡಿಸಿದ ಕಲಾಪ ಅರ್ಧಕ್ಕೆ ಮೊಟಕುಗೊಂಡಂತಾಗಿದೆ.
ಮಂಗಳೂರು ಡಿವೈಎಸ್ಪಿ ಎಂ.ಕೆ.ಗಣಪತಿ ಜು.7ರಂದು ಮಡಿಕೇರಿಯ ಖಾಸಗಿ ಸುದ್ದಿವಾಹಿನಿಗೆ ಸಂದರ್ಶನ ನೀಡಿದ ಬಳಿಕ ಲಾಡ್ಜ್‌ನಲ್ಲಿ ನಿಗೂಢ ರೀತಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು. ಆತ್ಮಹತ್ಯೆಗೆ ಮೊದಲು ಗಣಪತಿ ತಮ್ಮ ಸಂದರ್ಶನದಲ್ಲಿ ತನ್ನ ಸಾವಿಗೆ ಸಚಿವ ಜಾರ್ಜ್, ಹಿರಿಯ ಪೊಲೀಸ್ ಅಧಿಕಾರಿಗಳಾದ ಎ.ಎಂ.ಪ್ರಸಾದ್ ಮತ್ತು ಪ್ರಣಬ್ ಮೊಹಂತಿಯವರೇ ಕಾರಣ ಎಂದು ದೂರಿದರು.
ಆ ಹಿನ್ನೆಲೆಯಲ್ಲಿ ಬಿಜೆಪಿ-ಜೆಡಿಎಸ್ ಜು.11ರಿಂದ ವಿಧಾನ ಮಂಡಲ ಉಭಯ ಸದನಗಳಲ್ಲಿ ಸಚಿವ ಜಾರ್ಜ್ ರಾಜೀನಾಮೆ ನೀಡಬೇಕು. ಗಣಪತಿ ಹೇಳಿಕೆಯನ್ನು ಆಧರಿಸಿ ತಪ್ಪಿತಸ್ಥರ ವಿರುದ್ಧ ಎಫ್‌ಐಆರ್ ದಾಖಲಿಸಬೇಕು. ಅಲ್ಲದೆ, ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ಆಗ್ರಹಿಸಿ ಅಹೋರಾತ್ರಿ ಧರಣಿ ನಡೆಸಿದ್ದರು.
ಈ ಮಧ್ಯೆಯೇ ರಾಜ್ಯ ಸರಕಾರ ಪರವಾಗಿ ವಿಧಾನಸಭೆಯಲ್ಲಿ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಸ್ವಯಂಪ್ರೇರಿತರಾಗಿ ಗಣಪತಿ ಆತ್ಮಹತ್ಯೆ ‘ಅಸ್ವಾಭಾವಿಕ ಸಾವು’, ಕೌಟುಂಬಿಕ ಸಮಸ್ಯೆಗಳ ಹಿನ್ನೆಲೆಯಲ್ಲಿ ಒತ್ತಡಕ್ಕೆ ಸಿಲುಕಿ ಮಾನಸಿಕ ಅಸ್ವಸ್ಥತೆಯಿಂದ ಸಾವಿಗೆ ಶರಣಾಗಿದ್ದಾರೆಂದು ಹೇಳಿಕೆ ನೀಡಿದ್ದರು.
ಸರಕಾರದ ಮೇಲ್ಕಂಡ ಹೇಳಿಕೆಗೆ ವಿಪಕ್ಷಗಳು ಹಾಗೂ ಡಿವೈಎಸ್ಪಿ ಗಣಪತಿಯವರ ಪತ್ನಿ ಪಾವನಾ ಸೇರಿದಂತೆ ಸಾರ್ವಜನಿಕರಿಂದ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಸಚಿವ ಜಾರ್ಜ್ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ರಾಜ್ಯಾದ್ಯಂತ ಹೋರಾಟವನ್ನು ನಡೆಸಿತ್ತು.
ಈ ಬೆಳವಣಿಗೆಗಳ ನಡುವೆಯೇ ಮೃತ ಗಣಪತಿಯವರ ಪುತ್ರ ನೇಹಲ್ ಮಡಿಕೇರಿ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿ ಎಫ್‌ಐಆರ್ ದಾಖಲಿಸುವಂತೆ ಕೋರಿದ್ದರು. ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಾಲಯ ಎಫ್‌ಐಆರ್ ದಾಖಲಿಸುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ತೀವ್ರ ಮುಜುಗರಕ್ಕೆ ಒಳಗಾಗಿದೆ.
ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಜುಗರದಿಂದ ತಪ್ಪಿಸಿಕೊಳ್ಳಲು ಅಂತಿಮವಾಗಿ ಸಚಿವ ಜಾರ್ಜ್ ಅವರ ರಾಜೀನಾಮೆ ಪಡೆದುಕೊಂಡಿದ್ದಾರೆ. ಅಲ್ಲದೆ, ಅದನ್ನು ರಾಜ್ಯಪಾಲರ ಅಂಗೀಕಾರಕ್ಕೆ ಸೋಮವಾರ ರಾತ್ರಿಯೇ ಸಲ್ಲಿಸಿದ್ದಾರೆಂದು ಗೊತ್ತಾಗಿದೆ.
 

ಹೆಚ್ಚಿದ ಒತ್ತಡ: ಕೋರ್ಟ್ ಆದೇಶದ ಪ್ರಕಟಗೊಳ್ಳುತ್ತಿದ್ದಂತೆ ಸಂಪುಟ ಸಹೋದ್ಯೋಗಿಗಳು ಹಾಗೂ ಕಾಂಗ್ರೆಸ್‌ನ ಬಹುತೇಕ ಶಾಸಕರು ಸಚಿವ ಜಾರ್ಜ್ ರಾಜೀನಾಮೆ ಸೂಕ್ತ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆ ಹಿನ್ನೆಲೆಯಲ್ಲಿ ಜಾರ್ಜ್ ಸ್ವಯಂ ಪ್ರೇರಣೆಯಿಂದ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News