ಸರಕಾರಿ ಶಾಲೆಗಳನ್ನು ಮುಚ್ಚುವುದಿಲ್ಲ: ಶಿಕ್ಷಣ ಸಚಿವ ತನ್ವೀರ್ ಸೇಠ್

Update: 2016-07-21 16:34 GMT

ಬೆಂಗಳೂರು, ಜು. 21: ಮಕ್ಕಳ ಕೊರತೆ ನೆಪದಲ್ಲಿ ರಾಜ್ಯದಲ್ಲಿನ ಯಾವುದೇ ಸರಕಾರಿ ಶಾಲೆಗಳನ್ನು ಮುಚ್ಚುವುದಿಲ್ಲ. ಒಬ್ಬ ಅಥವಾ ಇಬ್ಬರು ವಿದ್ಯಾರ್ಥಿಗಳಿದ್ದರೂ, ಅಂತಹ ಎಲ್ಲ ಶಾಲೆಗಳನ್ನು ಮುಂದುವರಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಸ್ಪಷ್ಟಪಡಿಸಿದ್ದಾರೆ.
ಗುರುವಾರ ವಿಧಾನಸೌಧದಲ್ಲಿನ ತನ್ನ ಕೊಠಡಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿನ 4164 ಶಾಲೆಗಳಲ್ಲಿ 10ಕ್ಕಿಂತಲೂ ಕಡಿಮೆ ವಿದ್ಯಾರ್ಥಿಗಳಿದ್ದಾರೆ. ಕೆಲ ಪ್ರದೇಶಗಳಲ್ಲಿ ಒಂದು, ಎರಡು, ಮೂರು ಮಕ್ಕಳಿರುವ ಶಾಲೆಗಳು ಇವೆ ಎಂದು ಮಾಹಿತಿ ನೀಡಿದರು.

 ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ(ಆರ್‌ಟಿಇ)ಯಡಿ ಪ್ರಸಕ್ತ ಸಾಲಿನಲ್ಲಿ 1.07ಲಕ್ಷ ಮಂದಿ ಮಕ್ಕಳಿಗೆ ಖಾಸಗಿ ಶಾಲೆಗಳಲ್ಲಿ ಪ್ರವೇಶ ಕಲ್ಪಿಸಲಾಗಿದೆ. ಕಾಯ್ದೆಯನ್ವಯ 1.15 ಲಕ್ಷ ಮಕ್ಕಳಿಗೆ ಪ್ರವೇಶ ಕಲ್ಪಿಸಲು ಅವಕಾಶವಿತ್ತು. ಆದರೆ, ಕೆಲವೆಡೆ ಅರ್ಜಿ ಸಲ್ಲಿಸದ ಹಿನ್ನೆಲೆಯಲ್ಲಿ ಆ ಸೀಟುಗಳು ಉಳಿದಿವೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು. ಆರ್‌ಟಿಇ ಸೀಟುಗಳಿಗೆ ಸರಕಾರದಿಂದ 230 ಕೋಟಿ ರೂ.ಶುಲ್ಕ ಪಾವತಿಸಿದ್ದು, ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಉನ್ನತಿಗಾಗಿ ವೆಚ್ಚ ಮಾಡಲಾಗಿದೆ ಎಂದ ತನ್ವೀರ್ ಸೇಠ್, ಆರ್‌ಟಿಇ ಎಲ್ಲ ಸೀಟುಗಳು ಬಡ ವಿದ್ಯಾರ್ಥಿಗಳಿಗೆ ದೊರಕಿವೆ ಎಂದು ಹೇಳುವುದು ಕಷ್ಟ. ಈ ಸಂಬಂಧ ಇಲಾಖೆ ಮಟ್ಟದಲ್ಲಿ ಪರಿಶೀಲಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.
ಮುಖ್ಯ ಶಿಕ್ಷಕ, ಬಿಇಓ ಅಮಾನತ್ತು: ಚಿಕ್ಕೋಡಿ ತಾಲೂಕಿನ ಶಾಲೆಯೊಂದರ ಕಟ್ಟಡದ ಗೋಡೆ ಕುಸಿದು ಇಬ್ಬರು ಸಾವನ್ನಪ್ಪಿದ ಪ್ರಕರಣ ಸಂಬಂಧ ಈಗಾಗಲೇ ಮುಖ್ಯ ಶಿಕ್ಷಕ, ಬಿಇಓ ಸೇರಿದಂತೆ ಮೂರು ಮಂದಿಯನ್ನು ಅಮಾನತ್ತು ಮಾಡಲಾಗಿದೆ ಎಂದ ಅವರು ಹೇಳಿದರು.
ಸ್ಥಳೀಯ ಮುಖಂಡ ಮುಖ್ಯ ಶಿಕ್ಷಕರ ಮೇಲೆ ಒತ್ತಡ ಹೇರಿ ಹಳೆಯ ಕಟ್ಟಡದಲ್ಲಿ ಶಾಲೆ ನಡೆಸಲಾಗುತ್ತಿತ್ತು ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಈ ಸಂಬಂಧ ಸಮಗ್ರ ತನಿಖಾ ವರದಿಗೆ ಸೂಚಿಸಿದ್ದು, ವರದಿ ಬಂದ ಕೂಡಲೇ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು ಎಂದರು.
ಗೃಹ ಸಚಿವರ ಮನವಿಗೆ ಸ್ಪಂದನೆ: ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನ ಹಾರಾಡಿ ಸರಕಾರಿ ಶಾಲೆ ವಿದ್ಯಾರ್ಥಿ, ಶಿಕ್ಷಕರ ವರ್ಗಾಯಿಸದಂತೆ ಗೃಹ ಸಚಿವ ಪರಮೇಶ್ವರ್‌ಗೆ ಎಸ್‌ಎಂಎಸ್ ಸಂದೇಶ ರವಾನಿಸಿದ್ದ. ಆ ಹಿನ್ನೆಲೆಯಲ್ಲ್ಲಿ ಅವರ ಸೂಚನೆಯಂತೆ ಆ ಶಿಕ್ಷಕರನ್ನು ಅದೇ ಶಾಲೆಗೆ ನಿಯೋಜನೆ ಮಾಡಲಾಗಿದೆ ಎಂದರು.
ಶಾಲಾ ವಿದ್ಯಾರ್ಥಿಯ ಧೈರ್ಯ, ನೈಪುಣ್ಯತೆ ಅಭಿನಂದನೀಯ. ಅಲ್ಲದೆ, ವಿದ್ಯಾರ್ಥಿಯ ಎಸ್‌ಎಂಎಸ್ ಸಂದೇಶಕ್ಕೆ ಸ್ಪಂದಿಸಿದ ಗೃಹ ಸಚಿವ ಪರಮೇಶ್ವರ್ ಅವರನ್ನು ತಾನು ಅಭಿನಂದಿಸುತ್ತೇನೆ. ಯಾವುದೇ ಶಾಸಕರು ಅಥವಾ ಸಚಿವರು ಶೈಕ್ಷಣಿಕ ಸಮಸ್ಯೆಗಳ ಬಗ್ಗೆ ತನ್ನ ಗಮನಕ್ಕೆ ತಂದರೆ ಕೂಡಲೇ ಅವುಗಳಿಗೆ ಸ್ಪಂದಿಸಲಾಗುವುದು ಎಂದು ಭರವಸೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News