ಉದ್ಯಮ ಒಕ್ಕೂಟಗಳಿಗೆ ಲೋಕಪಾಲ ಕಾಯ್ದೆಯ ಬಿಸಿ?

Update: 2016-07-22 18:43 GMT

ಹೊಸದಿಲ್ಲಿ,ಜು.22: ಭಾರತೀಯ ಕೈಗಾರಿಕಾ ಒಕ್ಕೂಟ(ಸಿಐಐ)ದಂತಹ ಸಂಸ್ಥೆಗಳು ಮತ್ತು ವ್ಯಾಪಾರ ಒಕ್ಕೂಟಗಳ ಆಡಳಿತ ಮಂಡಳಿಗಳಲ್ಲಿ ಸೇವೆ ಸಲ್ಲಿಸುವ ಪ್ರಮುಖ ಕೈಗಾರಿಕೋದ್ಯಮಿಗಳು ಲೋಕಪಾಲ ಕಾಯ್ದೆಯಡಿ ತಮ್ಮ ಆಸ್ತಿ ವಿವರಗಳನ್ನು ಬಹಿರಂಗಗೊಳಿಸಬೇಕಾಗಬಹುದು.

ಕಳೆದ ತಿಂಗಳು 10 ಲ.ರೂ.ವಿದೇಶಿ ದೇಣಿಗೆಗಳನ್ನು ಸ್ವೀಕರಿಸುವ ಅಥವಾ ವಾರ್ಷಿಕ ಒಂದು ಕೋ.ರೂ.ಆದಾಯವಿರುವ(ಆದಾಯದ ಒಂದು ಭಾಗ ಸಾರ್ವಜನಿಕರಿಂದ ಬಂದಿದ್ದರೆ) ಎನ್‌ಜಿಒಗಳ ಹಿರಿಯ ಪದಾಧಿಕಾರಿಗಳನ್ನು ಲೋಕಪಾಲ ಕಾಯ್ದೆಯಡಿ ಸರಕಾರಿ ನೌಕರರಿಗೆ ಸಮಾನರೆಂದು ಪರಿಗಣಿಸಲಾಗಿತ್ತು. ಇದರಿಂದಾಗಿ ಈ ಪದಾಧಿಕಾರಿಗಳು ಜು.31ರೊಳಗೆ ತಮ್ಮ ಆಸ್ತಿ ವಿವರಗಳನ್ನು ಸರಕಾರಕ್ಕೆ ಸಲ್ಲಿಸುವುದು ಅಗತ್ಯವಾಗಿದೆ. ಈ ವಿವರಗಳನ್ನು ಬಹಿರಂಗಗೊಳಿಸಲು ಸರಕಾರಕ್ಕೆ ಒಂದು ತಿಂಗಳ ಕಾಲಾವಕಾಶವಿರುತ್ತದೆ.

ಇದೀಗ ಲೋಕಪಾಲ ಕಾಯ್ದೆಯ ಕಾವು ಕೈಗಾರಿಕೋದ್ಯಮಿಗಳು ಮತ್ತು ವ್ಯಾಪಾರ ಒಕ್ಕೂಟಗಳಿಗೂ ತಗಲಲಿದೆ. ಕೈಗಾರಿಕಾ ರಂಗದಲ್ಲಿ ಸ್ಪರ್ಧಾತ್ಮಕತೆಗಾಗಿ ಸೇವೆ ಸಲ್ಲಿಸುತ್ತಿರುವ ವ್ಯಾಪಾರ ಮತ್ತು ಕೈಗಾರಿಕಾ ಒಕ್ಕೂಟಗಳನ್ನೂ ಕಾಯ್ದೆಯ ವ್ಯಾಪ್ತಿಗೆ ತರಲಾಗಿದ್ದು, ಕಾಯ್ದೆಯನ್ನು ಮರುಪರೀಶಿಲಿಸುವಂತೆ ಸಿಐಐ ಸರಕಾರವನ್ನು ಕೇಳಿಕೊಂಡಿದೆ.

ಸಿಐಐನ್ನೂ ಕಾಯ್ದೆಯ ವ್ಯಾಪ್ತಿಗೆ ಒಳಪಡಿಸಲಾಗಿದೆಯೇ ಎಂಬ ಬಗ್ಗೆ ಅಸ್ಪಷ್ಟತೆಯಿದೆ. ಒಳಪಟ್ಟಿದ್ದರೆ ಇದೊಂದು ಗಂಭೀರ ವಿಷಯವಾಗುತ್ತದೆ ಎಂದು ಸಿಐಐ ಅಧ್ಯಕ್ಷ ನೌಷಾದ್ ಫೋರ್ಬ್ಸ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News