ಖಾಸಗಿ ಉದ್ದಿಮೆಗಳು ರಾಷ್ಟ್ರೀಕರಣಗೊಳ್ಳಲಿ: ಆಂಜನೇಯ

Update: 2016-07-26 18:30 GMT

ಬೆಂಗಳೂರು, ಜು.26: ಜಾತಿ ತಾರತಮ್ಯ ಹೆಚ್ಚಿರುವ ಖಾಸಗಿ ಉದ್ದಿಮೆಗಳನ್ನು ರಾಷ್ಟ್ರೀಕರಣ ಮಾಡುವ ಮೂಲಕ ರಾಜ್ಯದಲ್ಲಿರುವ ಎಲ್ಲ ಸಮುದಾಯಕ್ಕೂ ಸಮಾನ ಅವಕಾಶವನ್ನು ಮಾಡಿಕೊಡಲು ಸರಕಾರ ಚಿಂತಿಸುತ್ತಿದೆ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ತಿಳಿಸಿದ್ದಾರೆ.

ಮಂಗಳವಾರ ನಗರದ ಪುರಭವನದಲ್ಲಿ ಮೀಸಲಾತಿ ಜನಕ ಛತ್ರಪತಿ ಶಾಹುಮಹಾರಾಜ್ ಜಯಂತಿ ಪ್ರಯುಕ್ತ ಆಯೋಜಿಸಿದ್ದ ‘ಸಂವಿಧಾನದ ಆಶಯಗಳು ಮತ್ತು ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ಜಾರಿಗಾಗಿ ಒತ್ತಾಯಿಸಿ’ ರಾಜ್ಯ ಮಟ್ಟದ ಬೃಹತ್ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರೈತರು ನೂರಾರು ಎಕರೆ ಹಾಗೂ ಸರಕಾರದ ವಿದ್ಯುತ್, ನೀರು, ರಸ್ತೆ ಸೌಲಭ್ಯಗಳನ್ನು ರಿಯಾಯಿತಿ ದರದಲ್ಲಿ ಪಡೆಯುವ ಉದ್ದಿಮೆದಾರರು ಜಾತಿವಾದಿಗಳಾಗಿದ್ದಾರೆ. ಅಲ್ಲಿ ಪ್ರತಿಭಾವಂತ ದಲಿತ, ಹಿಂದುಳಿದ ಅಭ್ಯರ್ಥಿಗಳಿಗೆ ಅವಕಾಶವೆ ಇಲ್ಲಅಗಿದೆ. ಹೀಗಾಗಿ ಖಾಸಗಿ ಉದ್ದಿಮೆಗಳನ್ನು ರಾಷ್ಟ್ರೀಕರಣ ಮಾಡಿ ಜಾತಿ, ಲಿಂಗ, ಭಾಷೆ ಹಾಗೂ ಪ್ರಾದೇಶಿಕ ತಾರತಮ್ಯ ಇಲ್ಲದಂತೆ ಸಮಾನ ಅವಕಾಶವನ್ನು ಕಲ್ಪಿಸಲಾಗುವುದು ಎಂದು ಸಚಿವ ಆಂಜನೇಯ ತಿಳಿಸಿದರು.ಹಿಂದೆ ಬ್ಯಾಂಕ್‌ಗಳು ಹಾಗೂ ಸಾರಿಗೆ ಸಂಸ್ಥೆಗಳು ಖಾಸಗಿಯವರ ಹಿಡಿತದಲ್ಲಿತ್ತು. ಅದರಿಂದಾಗಿ ಕೆಲವೇ ಸಮುದಾಯಗಳು ಮಾತ್ರ ಬ್ಯಾಂಕ್ ಹಾಗೂ ಸಾರಿಗೆ ಸಂಸ್ಥೆಗಳ ಮಾಲಕರಾಗಿ ಸಂಪತ್ತನ್ನು ಬಾಚಿಕೊಳ್ಳುತ್ತಿದ್ದರು. ಹೀಗಾಗಿ ಸರಕಾರ ಬ್ಯಾಂಕ್ ಹಾಗೂ ಸಾರಿಗೆಯನ್ನು ರಾಷ್ಟ್ರೀಕರಣ ಮಾಡುವ ಮೂಲಕ ಎಲ್ಲ ಸಮುದಾಯಗಳು ಬ್ಯಾಂಕ್ ಕ್ಷೇತ್ರದಲ್ಲಿ ಉನ್ನತ ಹುದ್ದೆಗಳನ್ನು ಪಡೆಯಲು ಸಾಧ್ಯವಾಯಿತು ಎಂದು ಅವರು ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರ ದಲಿತ ಹಾಗೂ ಹಿಂದುಳಿದ ಸಮುದಾಯದ ಸರ್ವತೋಮುಖ ಅಭಿವೃದ್ಧಿಗೆ ಕಂಕಣಬದ್ಧವಾಗಿದೆ. ಕೇಂದ್ರ ಸರಕಾರ ಇಡೀ ದೇಶದ ದಲಿತ ಸಮುದಾಯಕ್ಕೆ ವಾರ್ಷಿಕವಾಗಿ ಕೇವಲ 35 ಸಾವಿರ ಕೋಟಿ ರೂ. ಅನುದಾನ ಬಿಡುಗಡೆ ಮಾಡಿದರೆ, ರಾಜ್ಯ ಸರಕಾರ ವಾರ್ಷಿಕವಾಗಿ 20 ಸಾವಿರ ಕೋಟಿ ರೂ.ಅನುದಾನ ಬಿಡುಗಡೆ ಮಾಡುತ್ತಿದೆ ಎಂದು ಅವರು ತಿಳಿಸಿದರು.

ಮುರುಘಾ ಮಠದ ಶಿವಮೂರ್ತಿ ಮುರಘ ರಾಜೇಂದ್ರ ಶರಣರು ಮಾತನಾಡಿ, ದೇಶದ ಪ್ರಗತಿ ಸಾಧ್ಯವಾಗುತ್ತಿರುವುದು ಸಂವಿಧಾನದಿಂದಲೇ ಹೊರತು ಧರ್ಮಗಳಿಂದಲ್ಲ. ಹೀಗಾಗಿ ದೇಶದ ಹಿತವನ್ನು ಬಯಸುವವರು ಧರ್ಮಕ್ಕಿಂತ ಸಂವಿಧಾನಕ್ಕೆ ಹೆಚ್ಚಿನ ಗೌರವ ಕೊಡುವುದರ ಮೂಲಕ ಅದರ ತತ್ವಗಳನ್ನು ಪರಿಪಾಲಿಸಬೇಕು ಎಂದು ಕಿವಿಮಾತು ಹೇಳಿದರು.
ಭಾರತದಲ್ಲಿ ಸೌಹಾರ್ದಯುತವಾದ ವಾತಾವರಣ ನಿರ್ಮಾಣವಾಗಬೇಕಾದರೆ, ಅದು ಬುದ್ಧ, ಬಸವ ಹಾಗೂ ಅಂಬೇಡ್ಕರ್ ಮಾರ್ಗದಿಂದ ಮಾತ್ರ ಸಾಧ್ಯ. ಹೀಗಾಗಿ ದೇಶದ ಪ್ರತಿಯೊಬ್ಬರು ಅಂಬೇಡ್ಕರ್ ಸಂವಿಧಾನವನ್ನು ಗಂಭೀರವಾಗಿ ಅಧ್ಯಯನ ಮಾಡುವುದರ ಮೂಲಕ ಪ್ರಬುದ್ಧ ಭಾರತವನ್ನು ಕಟ್ಟುವ ಕಡೆಗೆ ನಾವೆಲ್ಲರೂ ಸಾಗೋಣ ವೆಂದು ಅವರು ಹೇಳಿದರು.ಾರ್ಯಕ್ರಮದಲ್ಲಿ ನಳಂದ ವಿವಿಯ ಮುಖ್ಯಸ್ಥ ಬೋಧಿದತ್ತ ಬಂತೇಜಿ, ವಿಧಾನ ಪರಿಷತ್ ಸದಸ್ಯ ವಿವೇಕ್‌ರಾವ್ ವಸಂತರಾವ್ ಪಾಟೀಲ್, ದಸಂಸ ರಾಜ್ಯ ಸಂಚಾಲಕ ಪರಶುರಾಮ ನೀಲನಾಯಕ, ಆರ್.ಮೋಹನ್‌ರಾಜ್, ದಸಂಸ ರಾಜ್ಯ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಬಸವರಾಜ್ ಕೌತಾಳ್, ಪ್ರಾಧ್ಯಾಪಕಿ ಡಾ.ಕಾವಲಮ್ಮ, ತಿಪ್ಪಣ್ಣ ಆರತಿ ಮತ್ತಿತರರಿದ್ದರು.


ಅಂಬೇಡ್ಕರ್ ಕೊಟ್ಟ ಮೀಸಲಾತಿ ಹಾಗೂ ಸಂವಿಧಾನದಿಂದಾಗಿ ನಾನು ಇವತ್ತು ಸಮಾಜ ಕಲ್ಯಾಣ ಇಲಾಖೆಯ ಸಚಿವನಾಗಿದ್ದೇನೆ. ಹೀಗಾಗಿ ದಲಿತ ಸಮುದಾಯದ ಸರ್ವತೋಮುಖ ಅಭಿವೃದ್ಧಿ ಮಾಡುವ ಮೂಲಕ ಅಂಬೇಡ್ಕರ್ ಋಣವನ್ನು ತೀರಿಸುತ್ತೇನೆ.

-ಎಚ್.ಆಂಜನೇಯ ಸಚಿವ, ಸಮಾಜ ಕಲ್ಯಾಣ ಇಲಾಖೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News