49.39ಲಕ್ಷಹೆಕ್ಟೇರ್ ನಲ್ಲಿ ಬಿತ್ತನೆ: ಕೃಷಿ ಸಚಿವ ಕೃಷ್ಣ ಬೈರೇಗೌಡ
ಬೆಂಗಳೂರು, ಜು.26: ರಾಜ್ಯದ ಬಹುತೇಕ ಭಾಗಗಳಲ್ಲಿ ಈವರೆಗೆ ವಾಡಿಕೆಗಿಂತ ಉತ್ತಮ ಮಳೆಯಾಗಿದ್ದು ಪ್ರಸಕ್ತ ಸಾಲಿನಲ್ಲಿ 49.39ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕಾರ್ಯ ನಡೆದಿದ್ದು, ಐದು ವರ್ಷಗಳಿಗೆ ಹೋಲಿಸಿದರೆ ಪ್ರಸಕ್ತ ಸಾಲಿನಲ್ಲಿ ಬಿತ್ತನೆ ಪ್ರಮಾಣದಲ್ಲಿ ಗಣನೀಯ ಹೆಚ್ಚಳವಾಗಿದೆ ಎಂದು ಕೃಷಿ ಸಚಿವ ಕೃಷ್ಣಭೈರೇಗೌಡ ತಿಳಿಸಿದ್ದಾರೆ.
ಮಂಗಳವಾರ ವಿಕಾಸಸೌಧದಲ್ಲಿ ಪತ್ರಿಕಾಗೋಷ್ಠಿ ಯನ್ನುದ್ದೇಶಿಸಿ ಮಾತನಾಡಿದ ಅವರು, ಮುಂಗಾರು ಹಂಗಾಮಿನಲ್ಲಿ 3ಲಕ್ಷ ಟನ್ ಗುರಿ ಹೊಂದಲಾಗಿದೆ. ಇದೇ ರೀತಿ ಉತ್ತಮ ಮಳೆಯಾದರೆ ನಿರ್ದಿಷ್ಟ ಗುರಿಗಿಂತ ಹೆಚ್ಚು ಇಳುವರಿ ಬರುವ ನಿರೀಕ್ಷೆಯಿದೆ ಎಂದು ಹೇಳಿದರು. ಬಾರಿ ಸುಮಾರು 37.40ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕಾರ್ಯ ನಡೆಯಬೇಕಿದೆ. ಆದರೆ, ವಾಡಿಕೆಗಿಂತ ಶೇ.50ರಷ್ಟು ಹೆಚ್ಚು ಬಿತ್ತನೆ ಕಾರ್ಯ ನಡೆದಿದೆ. ರಾಜ್ಯದಲ್ಲಿ ರಸಗೊಬ್ಬರ ಹಾಗೂ ಬಿತ್ತನೆಬೀಜಗಳನ್ನು ಸಕಾಲದಲ್ಲಿ ಒದಗಿಸಲಾಗುತ್ತಿದೆ. ಈವರೆಗೆ ರಾಜ್ಯದಲ್ಲಿ 12.95ಲಕ್ಷ ಟನ್ ರಸಗೊಬ್ಬರವನ್ನು ರೈತರಿಗೆ ಒದಗಿಸಲಾಗಿದೆ. ಜು.25ರ ವರೆಗೆ 3.46ಲಕ್ಷ ಕ್ವಿಂಟಾಲ್ ಬಿತ್ತನೆ ಬೀಜ ಸರಬರಾಜು ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು. ಯಂತ್ರೋಪಕರಣ ಕೇಂದ್ರಗಳ ಹೆಚ್ಚಳ: 175 ಕೃಷಿ ಯಂತ್ರೋಪಕರಣ ಕೇಂದ್ರಗಳನ್ನು ತೆರೆಯುವ ಮೂಲಕ ಕಡಿಮೆ ದರದಲ್ಲಿ ರೈತರಿಗೆ ಕೃಷಿಯಂತ್ರೋಪಕರಣ ಒದಗಿಸಲಾಗಿತ್ತು. ಈ ಬಾರಿ 325 ಕೇಂದ್ರಗಳನ್ನು ಪ್ರಾರಂಭಿಸುವ ಮೂಲಕ ರೈತರಿಗೆ ಕೃಷಿಯಂತ್ರೋಪಕರಣಗಳನ್ನು ಸರಬರಾಜಿಗೆ ಕ್ರಮ ಕೈಗೊಳ್ಳಲಾಗಿದೆ. ಪ್ರತೀ ಕೇಂದ್ರದಲ್ಲಿ 75ಲಕ್ಷ ರೂ.ಮೌಲ್ಯದ ಯಂತ್ರೋಪಕರಣಗಳನ್ನು ಇರಿಸಲಾಗುವುದು ಎಂದರು.
ಬೆಳೆ ವಿಮೆ ಹಣ ಪಡೆಯಲು ಹೆಸರು ನೋಂದಾಯಿಸಿಕೊಳ್ಳುವ ಅವಧಿಯನ್ನು ವಿಸ್ತರಣೆ ಮಾಡದಂತೆ ಕೇಂದ್ರ ಸರಕಾರ ಸ್ವಷ್ಟ ನಿರ್ದೇಶನ ನೀಡಿದ್ದು ಅರ್ಹ ರೈತರು ಜು.30ರೊಳಗೆ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಬೇಕು. ಈವರೆಗೆ 4.26 ಲಕ್ಷ ರೈತರು ತಮ್ಮ ಹೆಸರುಗಳನ್ನು ನೋಂದಾಯಿಸಿಕೊಂಡಿದ್ದಾರೆ.ಳೆದ ವರ್ಷ 693ಕೋಟಿ ರೂ.ಮುಂಗಾರು ಬೆಳೆ ಪರಿಹಾರ ಬಂದಿದ್ದು, ಹಿಂಗಾರಿನ 200ಕೋಟಿ ರೂ. ಕೇಂದ್ರ ಸರಕಾರದಿಂದ ಬರಬೇಕಿದೆ. ರಾಜ್ಯ ಸರಕಾರ 2,150ಕೋಟಿ ರೂ.ಗಳನ್ನು ಪರಿಹಾರ ರೂಪದಲ್ಲಿ ನೀಡಿದೆ. ಕಳೆದ ಸಾಲಿನಲ್ಲಿ ಸುಮಾರು 300ಕೋಟಿ ಹೆಚ್ಚು ಹಣವನ್ನು ರೈತರಿಗೆ ಬೆಳೆ ವಿಮೆ ರೂಪದಲ್ಲಿ ನೀಡಲಾಗಿದೆ ಎಂದು ಅವರು ಹೇಳಿದರು.
ಕಬ್ಬುಕಟಾವು ಯಂತ್ರವೂ ಬಾಡಿಗೆಗೆ: ಕಬ್ಬು ಬೆಳೆಗಾರರನ್ನು ಕೂಲಿ ಕಾರ್ಮಿಕರ ಸಮಸ್ಯೆ ಹಾಗೂ ಶೋಷಣೆಯಿಂದ ತಪ್ಪಿಸುವ ದೃಷ್ಟಿಯಿಂದ ಕಬ್ಬು ಕಟಾವು ಯಂತ್ರಗಳನ್ನು ಮುಂಬರುವ ದಿನಗಳಲ್ಲಿ ಕೃಷಿ ಯಂತ್ರೋಪಕರಣಗಳ ಕೇಂದ್ರಗಳಿಂದ ಬಾಡಿಗೆ ಆಧಾರದ ಮೇಲೆ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದರು.
‘ರೈತರನ್ನು ಆತ್ಮಹತ್ಯೆಯಿಂದ ತಪ್ಪಿಸುವ ನಿಟ್ಟಿನಲ್ಲಿ ಖಾಸಗಿ ಲೇವಾದೇವಿಗಾರರಿಂದ ಎಷ್ಟು ಮೊತ್ತದ ಸಾಲ ಪಡೆಯಲಾಗಿದೆ ಎಂಬ ಬಗ್ಗೆ ‘ಸರ್ವೆ’ ಮಾಡಿಸಲಾಗುವುದು. ಅಲ್ಲದೆ, ಕೃಷಿ ಯಂತ್ರೋಪಕರಣಗಳನ್ನು ರೈತರು ಕಾಯ್ದಿರಿಸುವ ಸಂಬಂಧ ಮೊಬೈಲ್ ಆ್ಯಪ್‌ವೊಂದನ್ನು ಶೀಘ್ರದಲ್ಲೆ ಅಭಿವೃದ್ಧಿಪಡಿಸಲಾಗುವುದು’
-ಕೃಷ್ಣಬೈರೇಗೌಡ, ಕೃಷಿ ಸಚಿವ