ಬಂಡವಾಳ ಆಕರ್ಷಿಸಲು 'ಇನ್ವೆಸ್ಟ್ ಕರ್ನಾಟಕ ಫೋರಂ': ದೇಶಪಾಂಡೆ
ಬೆಂಗಳೂರು, ಆ. 6: ಬಂಡವಾಳ ಹೂಡಿಕೆಯನ್ನು ಆಕರ್ಷಿಸುವ ದೃಷ್ಟಿಯಿಂದ ಕೈಗಾರಿಕೋದ್ಯಮಿಗಳನ್ನು ಒಳಗೊಂಡ 'ಇನ್ವೆಸ್ಟ್ ಕರ್ನಾಟಕ ಫೋರಂ' ಎಂಬ ನೋಂದಾಯಿತ ಕಂಪೆನಿಯನ್ನು ಸ್ಥಾಪಿಸಲಾಗುತ್ತಿದೆ ಎಂದು ಬೃಹತ್ ಕೈಗಾರಿಕಾ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ.
ಶನಿವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಆರು ಮಂದಿ ಕೈಗಾರಿಕೋದ್ಯಮಿಗಳು ಒಳಗೊಂಡಂತೆ 9 ಮಂದಿ ನಿರ್ದೇಶಕರು, ಕೈಗಾರಿಕಾ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಕಂಪೆನಿಯ ಕಾರ್ಯದರ್ಶಿಯಾಗಿದ್ದು, ಕೈಗಾರಿಕಾ ಸಚಿವರು ಅಧ್ಯಕ್ಷರಾಗಿರಲಿದ್ದಾರೆಂದು ಮಾಹಿತಿ ನೀಡಿದರು.
'ಇನ್ವೆಸ್ಟ್ ಕರ್ನಾಟಕ' ಸಮಾವೇಶದಲ್ಲಿ ರಾಜ್ಯದಲ್ಲಿ ಬಂಡವಾಳ ಹೂಡಲು ಒಡಂಬಡಿಕೆ ಮಾಡಿಕೊಂಡ ಕಂಪೆನಿಗಳು ಆಸಕ್ತಿ ವಹಿಸಿದರೆ ರಾಜ್ಯ ಸರಕಾರ ಎಲ್ಲ ಸಹಕಾರ ನೀಡಲಿದೆ. ಮುಂದೆ ಬರುವವರಿಗೆ ಸ್ವಾಗತ. ಇಲ್ಲವಾದರೆ ಒಪ್ಪಂದವೇ ರದ್ದಾಗಲಿದೆ ಎಂದು ದೇಶಪಾಂಡೆ ಸ್ಪಷ್ಟಣೆ ನೀಡಿದರು.
ಜನ ಸಾಮಾನ್ಯರಿಗೆ ಅನುಕೂಲ:ರಾಷ್ಟ್ರಾದ್ಯಂತ ಏಕರೂಪದ ತೆರಿಗೆ ವ್ಯವಸ್ಥೆ ಇರಬೇಕೆಂಬ ಸದುದ್ದೇಶ ಹೊಂದಿರುವ 'ಸರಕು ಮತ್ತು ಸೇವಾ ತೆರಿಗೆ' ವಿಧೇಯಕ ಜಾರಿಯಿಂದ ಕೈಗಾರಿಕೆಗಳಿಗೆ ಹಾಗೂ ಜನತೆ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ದೇಶಪಾಂಡೆ ವಿಶ್ವಾಸ ವ್ಯಕ್ತಪಡಿಸಿದರು.
ಯುಪಿಎ ಸರಕಾರದ ಅವಧಿಯಲ್ಲೆ ವಿಧೇಯಕ ಜಾರಿ ಆಗಬೇಕಿತ್ತು. ಆದರೆ, ಇದೀಗ ಎಲ್ಲ ರಾಜಕೀಯ ಪಕ್ಷಗಳು ಸೇರಿ ಒಮ್ಮತದಿಂದ ಕಾಯ್ದೆ ಜಾರಿಗೆ ತಂದಿರುವುದು ಒಳ್ಳೆಯ ಸುಧಾರಣಾ ಕ್ರಮ ಎಂದ ಅವರು, ದೇಶದ ಶೇ.50ರಷ್ಟು ರಾಜ್ಯಗಳು ಇದಕ್ಕೆ ವಿಧಾನ ಮಂಡಲದಲ್ಲಿ ಅಂಗೀಕಾರ ಮಾಡಿದರೆ ಜಾರಿಗೊಳ್ಳುತ್ತದೆ ಎಂದರು.
ತೆರಿಗೆ ಪ್ರಮಾಣ ಶೇ.18ರಷ್ಟು ಮೀರಬಾರದು ಎಂಬುದು ನಮ್ಮ ಧ್ಯೇಯ. ಈ ನಿಟ್ಟಿನಲ್ಲಿ ಜನಸಾಮಾನ್ಯರಿಗೆ ಹೊರೆಯಾಗದಂತೆ ಜಿಎಸ್‌ಟಿ ಜಾರಿಗೊಳಿಸಬೇಕಿದೆ. ಅಂತಾರಾಜ್ಯ ಹಾಗೂ ಅಂತಾರಾಷ್ಟ್ರ ಮಟ್ಟದಲ್ಲಿ ನಡೆಯುವ ವ್ಯವಹಾರಗಳಿಗೂ ತೆರಿಗೆ ಕಡಿಮೆಯಾಗುವುದರಿಂದ ಬೆಲೆ ಏರಿಕೆ ತಗ್ಗಲಿದೆ ಎಂದರು.
ಮೂರು ದಿನ ಪ್ರವಾಸಿ ದಿವಸ್: ನಗರದ ತುಮಕೂರು ರಸ್ತೆಯಲ್ಲಿರುವ ವಸ್ತು ಪ್ರದರ್ಶನ ಕೇಂದ್ರದಲ್ಲಿ ವಿದೇಶಾಂಗ ಇಲಾಖೆ ಹಾಗೂ ರಾಜ್ಯ ಸರಕಾರದ ಸಹಭಾಗಿತ್ವದಲ್ಲಿ 2017ರ ಜನವರಿ 7ರಿಂದ ಮೂರು ದಿನಗಳ ಕಾಲ 'ಭಾರತೀಯ ಪ್ರವಾಸಿ ದಿವಸ್' ಆಚರಿಸಲಾಗುವುದು ಎಂದು ದೇಶಪಾಂಡೆ ಮಾಹಿತಿ ನೀಡಿದರು.
ಹದಿನೈದನೇ ಪ್ರವಾಸಿ ದಿವಸ್ ಇದಾಗಿದ್ದು, ಬೆಂಗಳೂರಿನಲ್ಲಿ ಆಚರಿಸುತ್ತಿರುವುದು ಹೆಮ್ಮೆಯ ಸಂಗತಿ. ಜನವರಿ 7ರಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಸಿಎಂ ಸಿದ್ದರಾಮಯ್ಯ ಪಾಲ್ಗೊಳ್ಳಲಿದ್ದಾರೆ. ವಿದೇಶಗಳಲ್ಲಿ ಅಧ್ಯಯನ ನಡೆಸುತ್ತಿರುವ ಹಾಗೂ ಭಾರತದಲ್ಲಿನ ವಿದೇಶಿ ವಿದ್ಯಾರ್ಥಿಗಳ ಸಮಸ್ಯೆಗಳ ಬಗ್ಗೆ ಸಂವಾದ ನಡೆಸಲಾಗುವುದು ಎಂದರು.
ಜ.8ರಂದು ಪ್ರವಾಸಿ ಭಾರತೀಯ ಪ್ರತಿನಿಧಿಗಳ ಸಮಾವೇಶ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ, ಸಿಎಂ ಸಿದ್ದರಾಮಯ್ಯ, ಕೇಂದ್ರ ಸಚಿವರು ಹಾಗೂ ವಿವಿಧ ರಾಜ್ಯಗಳ ಸಚಿವರು ಪಾಲ್ಗೊಳ್ಳಲಿದ್ದಾರೆ. ಕೊನೆಯ ದಿನ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಭಾಗವಹಿಸಲಿದ್ದಾರೆ ಎಂದರು.
ರಾಜ್ಯದಲ್ಲಿನ ಕೈಗಾರಿಕೆಗಳ ಸಾಮಾರ್ಥ್ಯ, ಉತ್ಪಾದನಾ ವಲಯದ ಬೆಳವಣಿಗೆ, ಮಾಹಿತಿ ತಂತ್ರಜ್ಞಾನ, ಪ್ರವಾಸೋದ್ಯಮ ಕ್ಷೇತ್ರ ಸೇರಿದಂತೆ ಕರಕುಶಲ ವಸ್ತುಗಳು ಪ್ರದರ್ಶನವನ್ನು ಭಾರತೀಯ ಪ್ರವಾಸಿ ದಿವಸ್ ಅಂಗವಾಗಿ ಏರ್ಪಡಿಸಲಾಗುವುದು ಎಂದು ದೇಶಪಾಂಡೆ ವಿವರ ನೀಡಿದರು.