ಕಾದಂಬರಿ
--ಗೆಳೆಯನ ಸಿಟ್ಟಿಗೆ ಮರುಗಿದ ಅಜ್ಜ--
‘‘ಅಜ್ಜೀ... ಆಯಾಸ ಆಗುತ್ತಾ?’’ ಕೇಳಿದಳು ತಾಹಿರಾ.
ಅಜ್ಜಿ ಮಾತನಾಡಲಿಲ್ಲ.
‘‘ನೀರು ಬೇಕಾ?’’
‘‘................’’ ಅಜ್ಜಿ ತಿರುಗಿ ಗೋಡೆಗೊರಗಿ ಕುಳಿತರು. ಮತ್ತೆ ಹೇಳಲು ಪ್ರಾರಂಭಿಸಿದರು.
ಆನಂತರ ಒಂದು ವಾರ ನಿನ್ನಜ್ಜ ಮನೆಯಿಂದ ಹೊರಗೆ ಕಾಲಿಡಲಿಲ್ಲ. ಅವರು ನನ್ನಲ್ಲಿ ಹೇಳುತ್ತಿದ್ದ ಮಾತು ಒಂದೇ.
‘‘ಫಾತಿಮಾ, ನಾನು ನ್ಯಾಯ ಪಾಲಿಸಿದ್ದೇನೆ. ನಾನು ತಪ್ಪುಮಾಡಿಲ್ಲ ಫಾತಿಮಾ. ನನ್ನ ಜಾತಿಯವರ ಪರವಾಗಿ ನಾನು ತೀರ್ಪು ನೀಡಿಲ್ಲ’’
ಇದಲ್ಲದೆ ಒಂದು ಮಾತೂ ಅವರ ಬಾಯಿಯಿಂದ ಹೊರಬೀಳಲಿಲ್ಲ. ಊಟ, ನಿದ್ದೆ ಯಾವುದೂ ಇಲ್ಲದೆ ನರಳುತ್ತಿರುವ ಅವರನ್ನು ಕಂಡು ನನಗೆ ಭಯವಾಗಿತ್ತು.
ಇದಾದ ನಂತರ ಮನೆಗೆ ಬಂದು ಹೋಗುವವರ ಸಂಖ್ಯೆಯೂ ಕಡಿಮೆಯಾಗತೊಡಗಿತ್ತು.
ಒಂದೆರಡು ಸಲ 4-5 ಜನರ ಗುಂಪು ಬಂದು ಹೋಗಿತ್ತು. ಯಾರಿಗೂ ಅಜ್ಜನಿಗೆ ಸಾಂತ್ವನ ಹೇಳುವ ಧೈರ್ಯವಿರಲಿಲ್ಲ. ಹಿಂದೂಗಳಲ್ಲಿ ಬಂದವರೆಂದರೆ ಬಂಡಸಾಲೆಯ ಕಿಣಿಯವರು ಮಾತ್ರ. ಅವರು ಊರಿನ ದೇವಸ್ಥಾನದ ಮುಕ್ತೇಸರರು. ನಮ್ಮ ತೋಟದ ಅಡಿಕೆ, ತೆಂಗಿನಕಾಯಿ ಎಲ್ಲವೂ ಹೋಗುವುದು ಕಿಣಿಯವರ ಬಂಡಸಾಲೆಗೆ. ಮನೆಗೆ ಬರಬೇಕಾದ ಸಾಮಾನಿನ ಪಟ್ಟಿ ಕೊಟ್ಟರೆ ಅವರೇ ಆಳುಗಳ ಮೂಲಕ ಮನೆಗೆ ಕಳುಹಿಸುತ್ತಿದ್ದರು. ವರ್ಷಕ್ಕೊಮ್ಮೆ ದೀಪಾವಳಿ, ಅಂಗಡಿಪೂಜೆಯಂದು ಲೆಕ್ಕ ಚುಕ್ತವಾಗುತ್ತಿತ್ತು. ಅಂಗಡಿ ಪೂಜೆಯ ಬೂಂದಿ ಲಾಡು ಮನೆಗೆ ತಲುಪುತ್ತಿತ್ತು.
ಕಿಣಿಯವರದ್ದು ಎಲುಬಿಗೆ ಚರ್ಮ ಹೊದಿಸಿದಂತಹ ಸಪೂರ ದೇಹ. ಅವರು ಯಾವತ್ತೂ ಅಂಗಿ ಧರಿಸಿದ ವರಲ್ಲ. ಬರೀ ಮೈಯಲ್ಲಿ ಬಂಡಸಾಲೆಯ ಮಂಡದಲ್ಲಿ ಕುಳಿತುಕೊಂಡರೆ ಕಾರುಬಾರೆಲ್ಲ ಇಬ್ಬರು ಮಕ್ಕಳದ್ದು.
ಮನೆಯೊಳಗೆ ಬಂದವರೇ ಕಿಣಿಯವರು ಅಜ್ಜನ ಹತ್ತಿರ ಕುರ್ಚಿ ಎಳೆದು ಕುಳಿತುಕೊಂಡರು.
‘‘ನೀನು ಎಂತ ಅಬ್ಬು, ಅವ ಆ ತ್ಯಾಂಪಣ್ಣನಿಗೆ ಮಂಡೆ ಸಮ ಇಲ್ಲಾಂತ ನೀನು ಜನರಿಗೆ ಮುಖ ತಪ್ಪಿಸಿ ನಡೆಯುವುದಾ? ಮೊನ್ನೆ ಅವನು ಸಿಕ್ಕಿದ್ದ ಅವನಿಗೆ ಸರೀ ಬುದ್ಧಿ ಹೇಳಿದ್ದೇನೆ. ನಿನ್ನನ್ನು ನಾನು ಇವತ್ತು ನೋಡುವುದಾ...? ನೀನು ಇಷ್ಟು ಚಿಕ್ಕ ಬಿಟ್ಟೆ ಇರುವಾಗ, ಚಡ್ಡಿ ಹಾಕಿ ತಿರುಗುತ್ತಿರುವಾಗಲೇ ನಿನ್ನನ್ನು ನೋಡಿದ್ದೇನೆ. ನೀನು ಯಾವತ್ತೂ ಧರ್ಮ ತಪ್ಪಿ ನಡೆದವನಲ್ಲ. ಯಾರಿಗೂ ಅನ್ಯಾಯ ಮಾಡಿದವನಲ್ಲ. ನೀನು ಮೊನ್ನೆ ನೀಡಿದ ತೀರ್ಪು ಉಂಟಲ್ಲಾ, ಅದು ನ್ಯಾಯವಾಗಿಯೇ ಇದೆ. ಅದು ಇಡೀ ಊರಿಗೆ ಗೊತ್ತುಂಟು. ಹೀಗಿರುವಾಗ ನೀನು... ಹ್ಹೆ... ಇದೆಂತದು...?’’ ಅಜ್ಜ ಮಾತನಾಡಲಿಲ್ಲ.
‘‘ನೀನು ಆ ಜಾತಿ-ಈ ಜಾತಿ, ಆ ಧರ್ಮ- ಈ ಧರ್ಮ ಎಂದು ಯಾವತ್ತೂ ಭೇದ ಮಾಡಿದವನಲ್ಲ. ಎರಡು ಎಣಿಸಿದವನಲ್ಲ. ನೀನು ನಮ್ಮ ದೇವಸ್ಥಾನಕ್ಕೆ ಕಾಣಿಕೆ ಕೊಡುವುದಿಲ್ಲವಾ? ಬಬ್ಬರ್ಯನ ಸ್ಥಾನಕ್ಕೆ ಎಣ್ಣೆ ಕೊಡುವುದಿಲ್ಲವಾ? ನೀನು ಕೊಟ್ಟ ಎಣ್ಣೆಯಿಂದಲ್ಲವಾ ಅಲ್ಲಿ ದೀಪ ಉರಿಯುವುದು. ಯಾವ ಮಗ ಕೊಡ್ತಾನೆ ನಿನ್ನ ಹಾಗೆ... ನನಗೆ ಗೊತ್ತಿಲ್ಲವಾ... ಇಡೀ ಊರಿಗೆ ಗೊತ್ತಿಲ್ಲವಾ...? ಕಿಣಿಗಳು ಅಜ್ಜನಿಗೆ ಸಾಂತ್ವನ ಹೇಳಿದರು.’’
ಹೌದು ನಿನ್ನ ಅಜ್ಜ ಪ್ರತಿ ವರ್ಷ ಊರಿನ ಜಾತ್ರೆಯ ಸಮಯದಲ್ಲಿ ದೇವಸ್ಥಾನಕ್ಕೆ ಎರಡು ಡಬ್ಬಿ ದೀಪದೆಣ್ಣೆ, ಗಟ್ಟದಿಂದ ತರಿಸಿದ ಒಂದು ಕೊರಡು ಶ್ರೀಗಂಧ, ಒಂದು ಗೋಣಿ ಗೆಂದಾಳಿ ಎಳನೀರು, ಒಂದು ಗೊನೆ ಬಾಳೆಹಣ್ಣು, ಜೊತೆಗೆ ಒಂದು ದೊಡ್ಡ ಮೊತ್ತದ ದೇಣಿಗೆ ದೇವಸ್ಥಾನಕ್ಕೆ ತಾನೇ ಕೆಲಸದವರ ಕೈಯಲ್ಲಿ ಹೊರಿಸಿಕೊಂಡು ಹೋಗಿ ಕೊಡುತ್ತಿದ್ದರು.
ಅದೇ ರೀತಿ ಊರಿನ ಬಬ್ಬರ್ಯ ದೈವಸ್ಥಾನಕ್ಕೆ ವಾರ್ಷಿಕ ನೇಮದ ಸಂದರ್ಭದಲ್ಲಿ, ಬಯಲುಗದ್ದೆಯಲ್ಲಿರುವ ವಲಿಯುಲ್ಲಾ ದರ್ಗಾಕ್ಕೆ ವಾರ್ಷಿಕ ಉರೂಸಿನ ಸಂದರ್ಭದಲ್ಲಿ, ಮಸೀದಿಗೆ ಪ್ರತಿ ವರ್ಷ ಮೌಲೂದ್‌ನ ಸಂದರ್ಭದಲ್ಲಿ ಎಣ್ಣೆ, ಅಕ್ಕಿ, ಕಾಯಿ, ಎಳನೀರು, ದೇಣಿಗೆ ಕೊಡುತ್ತಿದ್ದರು. ಅದು ಇವರಾರೂ ಕೇಳಿ ಕೊಡುವುದಲ್ಲ. ನಿನ್ನ ಅಜ್ಜ ಅವರಾಗಿಯೇ ಕೆಲಸದವರ ಕೈಯಲ್ಲಿ ಹೊರಿಸಿ ಕೊಂಡು ಹೋಗಿ ಅಲ್ಲಿಗೆ ಮುಟ್ಟಿಸುತ್ತಿದ್ದರು. ಅಷ್ಟು ಮಾತ್ರ ಅಲ್ಲ, ಮಸೀದಿಯದ್ದು, ದೇವಸ್ಥಾನದ್ದು, ದರ್ಗಾದ್ದು, ದೈವಸ್ಥಾನದ ಕಾಣಿಕೆ ಡಬ್ಬಗಳು ಈ ಮನೆಯಲ್ಲಿರು ತ್ತಿದ್ದವು. ನಿನ್ನಜ್ಜ ಎಲ್ಲ ಡಬ್ಬಗಳಿಗೂ ಪ್ರತಿ ಗುರುವಾರ ರಾತ್ರಿ ದುಡ್ಡು ಹಾಕುತ್ತಿದ್ದರು.
ಅವರು ಊರಿನಲ್ಲಿಲ್ಲದ ಗುರುವಾರ ನೆನಪಿನಲ್ಲಿ ದುಡ್ಡು ಹಾಕುವಂತೆ ನನ್ನಲ್ಲಿ ಹೇಳಿ ಹೋಗುತ್ತಿದ್ದರು. ಹಣ ತುಂಬಿದ ಈ ಕಾಣಿಕೆ ಡಬ್ಬವನ್ನು ದೇವಸ್ಥಾನಕ್ಕೆ ಜಾತ್ರೆ ಸಂದರ್ಭದಲ್ಲಿ, ದರ್ಗಾಕ್ಕೆ ಉರೂಸ್ ಸಂದರ್ಭದಲ್ಲಿ, ದೈವಸ್ಥಾನಕ್ಕೆ ನೇಮದ ಸಂದರ್ಭದಲ್ಲಿ, ಮಸೀದಿಗೆ ಮೌಲೂದ್‌ನ ಸಂದರ್ಭದಲ್ಲಿ ಒಪ್ಪಿಸಿ, ರಶೀದಿ ಮಾಡಿಸಿ, ಬೇರೆ ಹೊಸ ಡಬ್ಬಗಳನ್ನು ತಂದು ಮನೆಯಲ್ಲಿರಿಸುತ್ತಿದ್ದರು.
ನಾನು ಒಂದು ತಟ್ಟೆಯಲ್ಲಿ ನಾಲ್ಕು ಬಾಳೆಹಣ್ಣು ತಂದು ತಂತ್ರಿಗಳ ಮುಂದಿಟ್ಟೆ. ಅವರು ಬಾಳೆಹಣ್ಣಲ್ಲದೆ ಬೇರೇನೂ ತಿನ್ನುವುದಿಲ್ಲ. ಎಳನೀರೂ ಕುಡಿಯುವುದಿಲ್ಲ.
‘‘ಬ್ಯಾರ್ದಿ, ನೀವುಂಟಲ್ಲಾ ನಿಮ್ಮ ಈ ಗಂಡನನ್ನು ಹೀಗೆ ಮನೆಯೊಳಗೇ ಕುಳಿತುಕೊಳ್ಳಲು ಬಿಡಬಾರದು. ಅಬ್ಬು ನೀನುಂಟಲ್ಲಾ ಯಾವತ್ತೂ ಊರಿನಲ್ಲಿ ತಲೆತಗ್ಗಿಸಿ ನಡೆಯಬಾರದು. ಹೀಗೇ ಮನೆಯೊಳಗೆ ಅವಿತಂತೆ ಕುಳಿತುಕೊಳ್ಳಬಾರದು. ತಲೆ ಎತ್ತಿ ನಡೆಯಬೇಕು. ಆ ತ್ಯಾಂಪಣ್ಣ ಏನು ಮಾಡ್ತಾನೆ ನಾನೂ ನೋಡ್ತೇನೆ... ನನಗೂ ಗೊತ್ತುಂಟು...’’ ಎಂದವರೇ ಎದ್ದು ನಿಂತರು. ಅಜ್ಜ ಅವರನ್ನು ರಸ್ತೆ ತನಕ ಬಿಟ್ಟು ಬಂದರು.
ದಿನ ಕಳೆದಂತೆ ಅಜ್ಜ ಆಗಾಗ ಹೊರಗೆ ಹೋಗ ತೊಡಗಿದರು. ಆದರೆ ಮೊದಲಿನ ಉತ್ಸಾಹವಿಲ್ಲ. ತ್ಯಾಂಪಣ್ಣನಂತಹ ಗೆಳೆಯನ ಅಗಲುವಿಕೆ ಅವರನ್ನು ಬಹಳಷ್ಟು ಕಾಡತೊಡಗಿತ್ತು. ಯಾವತ್ತೂ ತ್ಯಾಂಪಣ್ಣನ ಬಗ್ಗೆಯೇ ಮಾತನಾಡುತ್ತಿದ್ದರು. ಒಂದೆರಡು ಸಲ ರಸ್ತೆಯಲ್ಲಿ ಹೋಗಬೇಕಾದರೆ ತ್ಯಾಂಪಣ್ಣ ಎದುರಾಗಿದ್ದರಂತೆ. ಆತ ಮಾತನಾಡಬಹುದು ಎಂದು ಅಜ್ಜ ಅವರೆದುರು ನಿಂತರೆ ಆತ ಕಣ್ಣು ಕೆಕ್ಕರಿಸಿ, ಕ್ಯಾಕರಿಸಿ ಉಗಿದು ಹೋಗಿದ್ದರಂತೆ. ಇದನ್ನೆಲ್ಲ ನಿನ್ನಜ್ಜ ನನ್ನಲ್ಲಿ ಹೇಳಿ ಮರುಗುತ್ತಿದ್ದರು. ತ್ಯಾಂಪಣ್ಣನ ಅಗಲಿಕೆ ಅವರ ಮನಸಿನಲ್ಲಿ ವಾಸಿ ಮಾಡಲಾಗದ ಗಾಯವನ್ನುಂಟು ಮಾಡಿತ್ತು. ಒಂದು ದಿನ ನಾನು ಜಗಲಿಯಲ್ಲಿ ಕುಳಿತಿರಬೇಕಾದರೆ ದೂರದಲ್ಲಿ ಗದ್ದೆಯ ಪುಣಿಯಲ್ಲಿ ತ್ಯಾಂಪಣ್ಣ ನಡೆದುಕೊಂಡು ಬರುವುದು ಕಾಣಿಸಿತು. ನಗುನಗುತ್ತಾ ಸಂತೋಷದಿಂದಿದ್ದ ನಿನ್ನಜ್ಜನನ್ನು ಈ ಸ್ಥಿತಿಗೆ ತಂದ ಅವರನ್ನು ಕಂಡೊಡನೆ ನನಗೆ ಪಿತ್ತ ನೆತ್ತಿಗೇರಿತ್ತು.
ಮನೆಯಲ್ಲಿ ನಿನ್ನಜ್ಜನೂ ಇರಲಿಲ್ಲ. ನಾನು ರುಮಾಲನ್ನು ತಲೆಗೆ ಗಟ್ಟಿಯಾಗಿ ಕಟ್ಟಿದವಳೇ ಜಗಲಿ ಇಳಿದು ಸೀದಾ ಹೋಗಿ ಕಟ್ಟಪುಣಿಯಲ್ಲಿ ಅವರಿಗಡ್ಡವಾಗಿ ನಿಂತುಬಿಟ್ಟೆ. ನನ್ನನ್ನು ನೋಡಿದ ಆತ ಒಂದು ಕ್ಷಣ ತಬ್ಬಿಬ್ಬಾಗಿದ್ದರು. ‘‘ನಾನು ನಿಮ್ಮನ್ನು ಅಣ್ಣಾಂತ ಕರೆಯುತ್ತಿದ್ದೆ. ಈಗಲೂ ಅಣ್ಣಾಂತಲೇ ಕರೆಯುವುದು. ಯಾಕೆಂದರೆ ನೀವು ನನ್ನ ಅಣ್ಣ’’
ತ್ಯಾಂಪಣ್ಣ ನನ್ನ ಮುಖ ನೋಡಲಾಗದೆ ತಿರುಗಿ ನಿಂತರು, ಮಾತನಾಡಲಿಲ್ಲ.
‘‘ನನ್ನ ಗಂಡ ಸರಿಯಾಗಿ ಹೊಟ್ಟೆಗೂ ತಿನ್ನದೆ, ನಿದ್ದೆಯೂ ಮಾಡದೆ ಎಷ್ಟು ದಿನ ಆಯಿತು ಗೊತ್ತುಂಟಾ ನಿಮಗೆ. ದಿನಾ ನಿಮ್ಮ ಹೆಸರು ಜಪಿಸುತ್ತಾ ಕಣ್ಣೀರು ಹಾಕುತ್ತಿದ್ದಾರೆ. ನಿಮಗೆ ಸ್ವಲ್ಪವೂ ಕರುಣೆ ಇಲ್ಲವಾ...’’
‘‘ಬ್ಯಾರ್ದಿ, ನೀವು ಆವತ್ತೂ ನನ್ನ ತಂಗಿ, ಈಗಲೂ ನನ್ನ ತಂಗಿ. ಆದರೆ ನಿಮ್ಮ ಗಂಡ, ಅವರನ್ನು ನಾನು ನನ್ನ ಪ್ರಾಣ ಸ್ನೇಹಿತಾಂತ ನಂಬಿದ್ದರೆ ಅವರು ಇಡೀ ಊರಿನವರ ಮುಂದೆ ನನ್ನ ಮಾನ ಕಳೆದರು. ಅಂದು ಅಲ್ಲಿ ಪಂಚಾಯಿತಿಯಲ್ಲಿ ನಿಮ್ಮ ಬ್ಯಾರಿಗಳು ಇದ್ದದ್ದು ಬರೇ 50 ಜನ. ನಮ್ಮ 150ಕ್ಕಿಂತಲೂ ಹೆಚ್ಚು ಜನರಿದ್ದರು. ನನಗೆ ಅವರನ್ನು ಏನೂ ಮಾಡಬಹುದಿತ್ತು. ನೀವು ನನ್ನ ತಂಗಿ. ನನ್ನ ತಂಗಿ ವಿಧವೆಯಾಗಬಾರದು ಎಂಬ ಒಂದೇ ಒಂದು ಕಾರಣಕ್ಕೆ ನಾನು ಅವರನ್ನು ಬಿಟ್ಟಿದ್ದು.’’ ಅವರು ತಿರುಗಿ ನಿಂತೇ ಹೇಳುತ್ತಿದ್ದರು. ಅವರ ಮಾತುಗಳು ಬೆಂಕಿ ಉಗುಳುತ್ತಿತ್ತು.
‘‘ಅವರನ್ನು ಕಂಡರೆ ನೀವು ಕ್ಯಾಕರಿಸಿ ಉಗುಳುತ್ತೀರಂತೆ’’
‘‘ಹೌದು, ಈಗ ಅದು ಮಾತ್ರ ನನ್ನಿಂದ ಸಾಧ್ಯವಾಗು ವುದು. ನೀವು ನನ್ನ ಕೈಗಳನ್ನು ಕಟ್ಟಿ ಹಾಕಿದ್ದೀರಿ... ಇಲ್ಲದಿದ್ದರೆ... ದಾರಿಬಿಡಿ... ನನಗೆ ಹೋಗಬೇಕು...’’ ಅಂತ ಹಲ್ಲು ಕಡಿಯುತ್ತಿದ್ದ.
‘‘ಹಾಗಾದರೆ ಇದೇ ನಿಮ್ಮ ತೀರ್ಮಾನವಾ?’’
‘‘ಹೌದು. ಇನ್ನು ಈ ಜನ್ಮದಲ್ಲಿ ಆ ಬ್ಯಾರಿಯೊಂದಿಗೆ ಮಾತಿಲ್ಲ, ಗೆಳೆತನವಿಲ್ಲ, ರಾಜಿಯಿಲ್ಲ. ಅಂತಹ ಒಬ್ಬ ಗೆಳೆಯ ನನಗೆ ಇಲ್ಲ. ಆತ ಆವತ್ತೇ ನನ್ನ ಪಾಲಿಗೆ ಸತ್ತು ಹೋದ’’ ತ್ಯಾಂಪಣ್ಣ ಕೋಪದಿಂದ ನಡುಗುತ್ತಿದ್ದರು.
ಇನ್ನು ಮಾತನಾಡಿ ಪ್ರಯೋಜನವಿಲ್ಲ ಎಂದರಿತ ನಾನು ಗದ್ದೆಗಿಳಿದು ಅವರಿಗೆ ದಾರಿ ಬಿಟ್ಟು ಕೊಟ್ಟಿದ್ದೆ. ಅವರು ಹಾವಿನಂತೆ ಬುಸುಗುಟ್ಟುತ್ತಾ ದಾಪುಗಾಲು ಹಾಕಿದ್ದರು. ಪಂಚಾಯಿತಿಯ ದಿನ ನಿನ್ನಜ್ಜನಿಗೂ ತ್ಯಾಂಪಣ್ಣನಿಗೂ ಗಲಾಟೆಯಾಯಿತು ಎಂದು ತಿಳಿದ ಕೂಡಲೇ ಊರಿನ ಕೆಲವು ಬ್ಯಾರಿಗಳು ಸಂತೋಷದಿಂದ ಕುಣಿದು ಕುಪ್ಪಳಿಸಿದ್ದರಂತೆ. ಅವರಿಗೆ ಈ ಹಿಂದೆ ಅಜ್ಜ ಅವರ ಪಂಚಾಯಿತಿಯಲ್ಲಿ ಅವರಿಗೆ ವಿರುದ್ಧ ನೀಡಿದ ತೀರ್ಪಿನ ದ್ವೇಷವಿತ್ತು. ತ್ಯಾಂಪಣ್ಣ ಅಜ್ಜನ ಜೊತೆಗಿದ್ದಾರೆ ಎಂಬ ಒಂದೇ ಕಾರಣದಿಂದ, ಭಯದಿಂದ ಅವರು ಅಜ್ಜನನ್ನು ಎದುರು ಹಾಕಿಕೊಂಡಿರಲಿಲ್ಲ. ಈಗ ಅಂತಹವರೆಲ್ಲ ಒಂದಾಗಿದ್ದರು. ಅವಕಾಶಕ್ಕಾಗಿ ಕಾಯತೊಡಗಿದರು.
‘ಪುದ್ದರ್’ ಹಬ್ಬಕ್ಕೆ ಇನ್ನೇನು ತಿಂಗಳಿದೆ ಎನ್ನುವಾಗ ನನಗೆ ಯಾಕೋ ಮನಸ್ಸೆಲ್ಲಾ ಖಾಲಿ ಖಾಲಿಯಾದಂತೆ ಅನಿಸತೊಡಗಿತ್ತು. ಪ್ರತಿ ವರ್ಷ ಪುದ್ದರ್ ಹಬ್ಬದ ದಿನ ನಾವೆಲ್ಲ ಊಟಕ್ಕೆ ಗುತ್ತಿನ ಮನೆಗೆ ಹೋಗುತ್ತಿದ್ದೆವು. ಅಂದು ಬೆಳಗ್ಗೆ ಸ್ನಾನ ಮಾಡಿ ಒಳ್ಳೆಯ ಬಟ್ಟೆ ಧರಿಸಿ ಕೊಂಡು ಹೋದರೆ ಮತ್ತೆ ಮರಳುವುದು ಸೂರ್ಯ ಮುಳುಗಿದ ಮೇಲೆಯೇ. ತ್ಯಾಂಪಣ್ಣನ ಬಂಧು, ಬಳಗ, ಕುಟುಂಬದವರೆಲ್ಲರೂ ಅಂದು ಮನೆಯಲ್ಲಿ ಸೇರುತ್ತಿದ್ದರು. ವರ್ಷದಲ್ಲಿ ಒಮ್ಮೆ ಬರುವ ಆ ದಿನ, ಆ ಊಟ, ಆ ಸಂಭ್ರಮ ಯಾವತ್ತೂ ಮರೆಯಲಾಗದ್ದು.
‘‘ ‘ಪುದ್ದರ್’ ಹಬ್ಬ ಎಂದರೆ ಏನಜ್ಜಿ?’’ ತಾಹಿರಾ ಕೇಳಿದಳು
ಪುದ್ದರ್ ಎಂದರೆ ವರ್ಷದ ಹೊಸ ಬೆಳೆಯ ಹೊಸ ಅಕ್ಕಿಯ ಅನ್ನ ಊಟ ಮಾಡುವುದು. ಹಲವಾರು ಬಗೆಯ ತರಕಾರಿ ಪಲ್ಯಗಳು, ಸಾಂಬಾರು, ಪಾಯಸ, ಹೋಳಿಗೆ ಎಲ್ಲಾ ಮಾಡಿ ಒಟ್ಟಿಗೆ ಕುಳಿತು ಉಣ್ಣುವುದು.
ಇದನ್ನು ನಾವು ಈ ಮನೆಯಲ್ಲೂ ಮಾಡುತ್ತಿದ್ದೆವು. ಸಾಧಾರಣವಾಗಿ ಜಾತಿ, ಭೇದವಿಲ್ಲದೆ ಎಲ್ಲ ಮನೆ ಯವರೂ ಮಾಡುತ್ತಿದ್ದರು. ಈ ಮನೆಯಲ್ಲಿ ನಾವು ಮಾಡುವಾಗ ಗುತ್ತಿನ ಮನೆಯವರನ್ನೆಲ್ಲ ಕರೆಯುತ್ತಿದ್ದೆವು. ಆದರೆ ಈ ಮನೆಯಲ್ಲಿ ಒಂದು ಸಣ್ಣ ವ್ಯತ್ಯಾಸವಿತ್ತು. ನಿನ್ನಜ್ಜ ಊರಿನ ಬಡವರ ಮಕ್ಕಳನ್ನೆಲ್ಲ ಕರೆದು ಆ ದಿನ ‘ಮಕ್ಕಳ ಗಂಜಿ’ ಕೊಡುತ್ತಿದ್ದರು.
‘‘ಮಕ್ಕಳ ಗಂಜಿ’’ ಎಂದರೆ? ಅಜ್ಜಿ ಹೇಳುವ ಒಂದೊಂದು ವಿಷಯವೂ ತಾಹಿರಾಳಿಗೆ ಕುತೂಹಲ ಮೂಡಿಸುತ್ತಿತ್ತು. ತಾನು ಕಂಡು ಕೇಳರಿಯದ ಹಬ್ಬ, ತಿಂಡಿ, ರೀತಿ, ರಿವಾಜು, ಸಂಪ್ರದಾಯಗಳು ಅವಳನ್ನು ಬೆರಗುಗೊಳಿಸಿತ್ತು.
ಮಕ್ಕಳ ಗಂಜಿ ಎಂದರೆ ಆ ವರ್ಷದ ಹೊಸ ಬೆಳೆಯ ಗಂಧಸಾಲೆ ಬೆಳ್ತಿಗೆಯ ಗಂಜಿಗೆ ದ್ರಾಕ್ಷಿ, ಗೋಡಂಬಿ, ಬೆಲ್ಲ, ತುಪ್ಪ, ತೆಂಗಿನಕಾಯಿ, ಹಾಲು ಎಲ್ಲ ಹಾಕಿ ಮಾಡುವುದು. ಅದು ಒಂಥರ ಪಾಯಿಸದಂತೆಯೇ - ಬಹಳ ರುಚಿ. ಸಾಧಾರಣವಾಗಿ ಇದನ್ನು ಮಕ್ಕಳಿಲ್ಲದವರು- ಮಕ್ಕಳಾಗಲೆಂದೋ, ಮಕ್ಕಳಿಗೆ ರೋಗರುಜಿನಗಳು ಬಂದರೆ ಗುಣವಾಗಲೆಂದೋ- ನಾನು ಇಂತಿಷ್ಟು ಮಕ್ಕಳಿಗೆ ‘‘ಮಕ್ಕಳ ಗಂಜಿ’’ ಕೊಡುತ್ತೇನೆ ಎಂದು ಹರಕೆ ಹೇಳಿಕೊಳ್ಳುತ್ತಿದ್ದುದುಂಟು. ಆದರೆ ನಿನ್ನಜ್ಜ ಹರಕೆಗಾಗಿ ಅಲ್ಲ. ಪ್ರತಿ ವರ್ಷ ಪುದ್ದರ್ ಹಬ್ಬದಂದು ಊರಿನ ಸಣ್ಣಪುಟ್ಟ ಅಂದರೆ ಹನ್ನೆರಡು ವರ್ಷದ ಕೆಳಗಿನ ಮಕ್ಕಳಿಗೆ ಈ ಗಂಜಿ ಕೊಡುತ್ತಿದ್ದರು. ಕಡಿಮೆಯಂದರೂ 200-250 ಮಕ್ಕಳು ಈ ಗಂಜಿ ಉಣ್ಣಲು ಬರುತ್ತಿದ್ದರು. ಎಲ್ಲ ಬಡವರ ಮನೆಯ ಮಕ್ಕಳೇ. ಆ ದಿನ ಬೆಳಗ್ಗೆ ಎಲ್ಲ ಬಡವರ ಮನೆಗೆ ಹೋಗಿ ನಿನ್ನಜ್ಜನೇ ಮಕ್ಕಳನ್ನು ಕಳುಹಿಸುವಂತೆ ಹೇಳಿಬರುತ್ತಿದ್ದರು. ಯಾವುದಾದರೂ ಮನೆಯ ಮಕ್ಕಳು ಬಾರದಿದ್ದರೆ ಅಜ್ಜನೇ ಹೋಗಿ ಕರೆದುಕೊಂಡು ಬರುತ್ತಿದ್ದರು. ಇಲ್ಲಿ ಆ ಜಾತಿ-ಈ ಜಾತಿ ಎಂಬುದಿಲ್ಲ.
(ರವಿವಾರದ ಸಂಚಿಕೆಗೆ)