ಕಾದಂಬರಿ

Update: 2016-08-13 18:25 GMT

--ಆಪತ್ತಿನಿಂದ ರಕ್ಷಿಸಿದ ಗೆಳೆಯ--

ಎಲ್ಲ ಜಾತಿಯ ಮಕ್ಕಳನ್ನು ಒಟ್ಟಿಗೆ ಸಾಲಾಗಿ ಕೂರಿಸಿ ಹೊಟ್ಟೆ ತುಂಬಾ ನಾನು- ಅಜ್ಜ ಬಡಿಸುತ್ತಿದ್ದೆವು. ಊಟ ಆದ ಮೇಲೆ ಗಂಧವನ್ನು ತೇದಿ ಎಲ್ಲ ಮಕ್ಕಳ ಗಲ್ಲದ ಕೆಳಭಾಗಕ್ಕೆ ಬೆರಳಲ್ಲಿ ನಾಮದಂತೆ ಹಚ್ಚುತ್ತಿದ್ದೆವು. ಆನಂತರ ಎಲ್ಲ ಮಕ್ಕಳಿಗೆ ಒಂದೊಂದು ನಾಣ್ಯವನ್ನು ದಾನ ಮಾಡುತ್ತಿದ್ದೆವು. ಮಕ್ಕಳಿಗೆ ಗಂಜಿ ಕೊಡುವುದೆಂದರೆ ನನಗೂ ಬಹಳ ಇಷ್ಟ. ಮಕ್ಕಳು ಉಣ್ಣುವುದನ್ನು ನೋಡುವುದೇ ಒಂದು ಸಂಭ್ರಮ.

ಪುದ್ದರ್ ಹಬ್ಬದ ಸಮಯದಲ್ಲಾದರೂ ತ್ಯಾಂಪಣ್ಣನ ಕೋಪ ಕಡಿಮೆಯಾಗಬಹುದು ಎಂದು ನಾನೆಣಿಸಿದ್ದೆ. ಅಂತಹ ದಿನಕ್ಕಾಗಿ ಕಾತರದಿಂದ ಕಾಯುತ್ತಿದ್ದೆ. ಆದರೆ ತ್ಯಾಂಪಣ್ಣನನ್ನು ಕಟ್ಟಪುಣಿಯಲ್ಲಿ ಕಂಡ ಮೇಲೆ ಅಂತಹ ಯಾವ ನಂಬಿಕೆಯೂ ನನ್ನಲ್ಲಿ ಉಳಿದಿರಲಿಲ್ಲ. ಒಂದು ದಿನ ಏನಾಯಿತು ಗೊತ್ತಾ? ಇದೆಲ್ಲ ದೇವರ ಆಟಾಂತ ಹೇಳಬೇಕು. ಮನುಷ್ಯ ಎಷ್ಟು ಕೆಟ್ಟವನಾದರೂ ಅವನ ಒಳಗೊಬ್ಬ ದೇವರಿರುತ್ತಾನೆ ಅಂತ ಹೇಳ್ತಾರಲ್ಲ ಅದು ಇದಕ್ಕೇ ಇರಬೇಕು.
ಅಂದು ಏನಾಯ್ತು ಗೊತ್ತಾ?
ಅಂದು ಬೆಳಗ್ಗೆ ಒಂದಿಬ್ಬರು ಬ್ಯಾರಿಗಳು ಈ ಮನೆಗೆ ಬಂದರು. ಆಗ ಅಜ್ಜ ಮನೆಯಲ್ಲಿಯೇ ಇದ್ದರು. ಬಂದವರಲ್ಲಿ ಒಬ್ಬರು ಮಂಜಿ ಇದಿನಬ್ಯಾರಿ ಅಂತ. ಬಹಳ ದೊಡ್ಡ ಶ್ರೀಮಂತರು. ಆಗಿನ ಕಾಲಕ್ಕೆ ಹಜ್‌ಗೆ ಎಲ್ಲ ಹೋಗಿ ಬಂದವರು. ಅವರಿಗೆ ಮೂರು ಮಂಜಿ ಇತ್ತು. ಮೀನಿನ ವ್ಯಾಪಾರವೂ ಇತ್ತು. ಗಟ್ಟಕ್ಕೆಲ್ಲ ಲಾರಿ ತುಂಬಾ ಒಣಮೀನು ಕಳುಹಿಸುತ್ತಿದ್ದರಂತೆ. ಅವರ ಜೊತೆ ಬಂದಿದ್ದ ಇನ್ನೊಬ್ಬರದ್ದು ನನಗೆ ಪರಿಚಯವಿರಲಿಲ್ಲ. ಇದಿನಬ್ಬ ಹಿಂದೊಮ್ಮೆ ಈ ಮನೆಗೆ ಬಂದಿದ್ದರು. ದಕ್ಕೆಯಲ್ಲಿ ಮೀನು ಮಾರುವವರ ಎರಡು ಗುಂಪುಗಳ ನಡುವೆ ಗಲಾಟೆ- ಪೆಟ್ಟು ಆಗಿ ನಿನ್ನ ಅಜ್ಜನನ್ನು ಪಂಚಾಯಿತಿ ಮಾಡಲು ಕರೆಯಲು ಬಂದಿದ್ದರು. ಅಜ್ಜ ಪಂಚಾಯಿತಿಗೆ ಹೋಗಿದ್ದರು. ಆದರೆ ಈ ಇದಿನಬ್ಯಾರಿಯ ವಿರುದ್ಧವೇ ನಿನ್ನಜ್ಜ ತೀರ್ಪು ನೀಡಿದ್ದರಂತೆ. ಇದರಿಂದ ಕೋಪಗೊಂಡ ಆತ ಅಂದಿನಿಂದ ನಿನ್ನ ಅಜ್ಜನ ಜೊತೆ ಅಷ್ಟೊಂದು ಮಾತನಾಡುತ್ತಿರಲಿಲ್ಲವಂತೆ. ಎಲ್ಲಾದರೂ ಸಿಕ್ಕಿದರೆ ನಿನ್ನಜ್ಜನೇ ಸಲಾಂ ಹೇಳುತ್ತಿದ್ದರಂತೆ.
ಅಂತಹ ಇದಿನಬ್ಯಾರಿಯವರು ಅಂದು ಏನೂ ಆಗದವರಂತೆ ಬಂದು ಈ ಮನೆಯ ಚಾವಡಿಯಲ್ಲಿ ಅಜ್ಜನೆದುರು ನಗುನಗುತ್ತಾ ಕುಳಿತಿದ್ದರು. ಸುಖ-ಕಷ್ಟ, ಅದು-ಇದೂ ಮಾತನಾಡುತ್ತಾ ಇದಿನಬ್ಯಾರಿ ತ್ಯಾಂಪಣ್ಣನ ವಿಷಯಕ್ಕೆ ಬಂದರು.

‘‘ಆ ತ್ಯಾಂಪಣ್ಣ ಇದ್ದಾನಲ್ಲಾ, ಅವನು ಜನ ಅಷ್ಟೊಂದು ಸರಿಯಿಲ್ಲ ಅಬ್ಬುಕಾಕ. ಅಹಂಕಾರಿ ಅವನು. ನಿಮಗೂ ಅವನಿಗೂ ಜಗಳ ಆಗಿದ್ದು ಒಳ್ಳೆಯದೇ ಆಯಿತು. ಹೀಗಾದರೂ ನೀವು ಅವನಿಂದ ದೂರವಾದಿರಲ್ಲ, ಅದು ನನಗೆ ಮಾತ್ರವಲ್ಲ, ಈ ಊರಿನ ಎಲ್ಲ ಬ್ಯಾರಿಗಳಿಗೂ ಖುಷಿಯಾಗಿದೆ. ಅವನ ದೋಸ್ತಿ ಬಿಟ್ಟ ಮೇಲೆ ನೀವು ಅವರ ಆಟ, ಕೋಲ, ಜಾತ್ರೆ ಇದಕ್ಕೆಲ್ಲ ಹೋಗುವುದನ್ನು ನಿಲ್ಲಿಸಿ ಬಿಟ್ಟಿದ್ದೀರಿ. ಇದು ದೊಡ್ಡ ಬರ್ಕತ್‌ನ ವಿಷಯ. ಸಂಘದೋಷ ಎಂಥವರನ್ನೂ ಹಾಳು ಮಾಡುತ್ತೆ ಅಬ್ಬು ಕಾಕಾ. ಆ ಹರಾಂನಿಂದೆಲ್ಲ ದೇವರು ನಿಮ್ಮನ್ನು ಕಾಪಾಡಿದ’’
ಅಜ್ಜ ಮಾತನಾಡಲಿಲ್ಲ. ಗಂಭೀರವಾಗಿ ಕುಳಿತಿದ್ದರು.
‘‘ಆ ತ್ಯಾಂಪಣ್ಣ ಇದ್ದಾನಲ್ಲ, ಅವನ ನಡತೆಯೂ ಸರಿಯಿಲ್ಲವಂತೆ...’’
‘‘ನೋಡಿ, ತ್ಯಾಂಪಣ್ಣನ ಬಗ್ಗೆ ಇನ್ನು ಒಂದು ಶಬ್ದ ಇಲ್ಲಿ ಮಾತನಾಡಬಾರದು. ತ್ಯಾಂಪಣ್ಣನ ವಿಷಯ ಹೇಳಲಿಕ್ಕೆ ಬಂದಿದ್ದರೆ ನೀವಿನ್ನು ಹೋಗಬಹುದು. ಅಥವಾ ಬೇರೇನಾದರೂ ವಿಷಯಕ್ಕೆ ಬಂದಿದ್ದರೆ ಹೇಳಬಹುದು’’ ನಾನು ಕಿಟಕಿಯ ಬಳಿ ನಿಂತು ನೋಡುತ್ತಿದ್ದೆ. ಅಜ್ಜನ ಧ್ವನಿ ಗಡುಸಾಗಿತ್ತು. ಮುಖ ಕೆಂಪಾಗಿತ್ತು. ಮನೆಗೆ ಬಂದವರ ಜೊತೆ ಅಜ್ಜ ಯಾವತ್ತೂ ಅಷ್ಟೊಂದು ಖಡಕ್ಕಾಗಿ ಮಾತನಾಡಿದವರಲ್ಲ.

‘‘ಹಾಗಲ್ಲ ಅಬ್ಬುಕಾಕಾ, ನೀವು ಬೇಜಾರು ಮಾಡಿಕೊಳ್ಳಬೇಡಿ. ನಾನು ಹೀಗೆ ಮಾತಿಗೆ ಹೇಳಿದ್ದು’’ ಇದಿನಬ್ಯಾರಿ ಭುಜ ಕುಲುಕುತ್ತಾ ಹೇಳಿದರು. ನನಗೀಗ ಇವರು ಮತ್ತೆ ನಿನ್ನಜ್ಜನನ್ನು ಬೇರೇನಾದರೂ ಪಂಚಾಯಿತಿಗೆ ಕರೆದುಕೊಂಡು ಹೋಗಲು ಬಂದಿರಬಹುದೇ ಎಂದು ಭಯವಾಯಿತು.

‘‘ಬೇಜಾರು ಏನೂ ಇಲ್ಲ. ನೀವು ಬಂದ ವಿಷಯ ಏನು ಹೇಳಿ’’ ಅಜ್ಜನ ಮಾತು ಈಗಲೂ ಸ್ವಲ್ಪ ಒರಟಾಗಿಯೇ ಇತ್ತು.
‘‘ನಾನು ಬಂದದ್ದು ಅಬ್ಬು ಕಾಕಾ, ಬೇರೇನೂ ಇಲ್ಲ. ನಾಳೆ ಬೆಳಗ್ಗೆ ನನ್ನ ಒಂದು ಹೊಸ ಮಂಜಿಯನ್ನು ನೀರಿಗಿ ಳಿಸುತ್ತಿದ್ದೇನೆ. ಆ ಬಗ್ಗೆ ಇಂದು ರಾತ್ರಿ ನನ್ನ ಮನೆಯಲ್ಲಿ ಒಂದು ಔತಣಕೂಟ ಇಟ್ಟಿದ್ದೇನೆ. ಹೆಚ್ಚು ಜನ ಇಲ್ಲ. ನಾವೇ ಒಂದು 20-25 ಜನ. ನೀವೂ ಬರಬೇಕು. ಅದಕ್ಕೆ ಕರೆಯಬೇಕೂಂತಲೇ ನಾವು ಬಂದದ್ದು’’
‘‘ಈಗ ನಾನು ರಾತ್ರಿ ಹೊತ್ತು ಎಲ್ಲಿಗೂ ಹೋಗುವುದಿಲ್ಲ ಕಾಕಾ’’ ಅಜ್ಜ ಸ್ವಲ್ಪಮೆದುವಾಗಿದ್ದರು.
‘‘ಹಾಗೆಲ್ಲ ಹೇಳಬಾರದು, ನಾನು ಪ್ರೀತಿ, ವಿಶ್ವಾಸದಿಂದ ಕರೆಯಲಿಕ್ಕೆ ಬಂದದ್ದು. ನೀವು ಬರಲೇಬೇಕು. ಬರದಿದ್ದರೆ ನಮಗೆ ಬೇಸರವಾಗುತ್ತದೆ’’ ಅವರು ಒತ್ತಾಯಿಸತೊಡಗಿದರು.
‘‘ರಾತ್ರಿ ಎಷ್ಟು ಗಂಟೆಗೆ’’ ಅಜ್ಜ ಸೋತು ಬಿಟ್ಟಿದ್ದರು.
‘‘ನೀವು 8:30 ಗಂಟೆಗೆ ಬನ್ನಿ. ಒಂದು ಮಂಕೂಸ್ ಮೌಲೂದ್ ಓದುವುದು. ಆಮೇಲೆ ಎಲ್ಲ ಒಟ್ಟು ಕುಳಿತು ಒಂದೇ ಮಜ್ಲಿಸ್‌ನಲ್ಲಿ ಒಂದು ಊಟ ಮಾಡುವುದು ಅಷ್ಟೇ, ಆಮೇಲೆ ನೀವು ಹೋಗಿ’’
ಅಜ್ಜ ಒಪ್ಪಿಗೆ ಕೊಟ್ಟುಬಿಟ್ಟಿದ್ದರು.

ಇದಿನಬ್ಯಾರಿ ಮನೆಗೆ 3/4 ಗಂಟೆಯ ದಾರಿ. ಅಂದು ರಾತ್ರಿ ನಮಾಝ್ ಮಾಡಿದವರೇ ನಿನ್ನಜ್ಜ ಐದು ಸೆಲ್‌ನ ಟಾರ್ಚ್ ಹಿಡಿದುಕೊಂಡು ಹೊರಟರು. ಆವತ್ತು ಆ ಇದಿನಬ್ಯಾರಿ ಮನೆಯಲ್ಲಿ ನಡೆದ ಘಟನೆ ಅಬ್ಬಾ... ನೆನೆಯುವಾಗ ನನಗೀಗಲೂ ಮೈ ಜುಂ ಅನ್ನುತ್ತೆ.
ನಿನ್ನ ಅಜ್ಜ ಆ ಮನೆಗೆ ಹೋದರಂತೆ. ಅಲ್ಲಿ ಒಂದು 25-30 ಜನ ಇದ್ದರಂತೆ. ಎಲ್ಲ ಊರಿನ ಗಣ್ಯರು. ಎಲ್ಲರೂ ನಿನ್ನಜ್ಜನ ಜೊತೆ ಬಹಳ ಗೌರವದಿಂದ ಮಾತನಾಡಿಸಿದರಂತೆ. ಇದಿನಬ್ಯಾರಿಯೂ ನಿನ್ನಜ್ಜ ಹೋಗಿದ್ದಕ್ಕೆ ಬಹಳ ಸಂತೋಷ ವ್ಯಕ್ತಪಡಿಸಿದರಂತೆ. ಬಹಳ ಆತ್ಮೀಯವಾಗಿ ಮಾತನಾಡಿದರಂತೆ. ಅವರೇ ಶರ್ಬತ್ ತಂದು ಕೊಟ್ಟರಂತೆ. ‘‘ನಿಮ್ಮನ್ನೇ ಕಾಯುತ್ತಿರುವುದು, ನೀವು ಬರದಿದ್ದರೆ ನಿಮ್ಮನ್ನು ಕರೆತರಲು ನಾನೇ ನಿಮ್ಮ ಮನೆಗೆ ಬರುತ್ತಿದ್ದೆ’’ ಎಂದರಂತೆ. ಮೌಲವಿ ಬಂದವರು ಮೌಲೂದು ಓದಿದರಂತೆ. ಭರ್ಜರಿ ಔತಣ ತಯಾರಾಗಿತ್ತಂತೆ. ಆಮೇಲೆ ಎಲ್ಲರೂ ಕೂಡಿ ಊಟಕ್ಕೆ ಕುಳಿತರಂತೆ. ನಿನ್ನಜ್ಜ ಊಟದ ತುತ್ತು ತೆಗೆದು ಬಾಯಿಗಿಡಬೇಕು ಎನ್ನುವಷ್ಟ ರಲ್ಲಿ ಹೊರಗೆ, ‘‘ಅಬ್ಬುಬ್ಯಾರಿ... ಅಬ್ಬುಬ್ಯಾರಿ...’’ ಎಂದು ಜೋರಾಗಿ ಬೊಬ್ಬಿರಿದು ಕರೆಯುವುದು ಕೇಳಿಸಿತಂತೆ. ಊಟಕ್ಕೆ ಕುಳಿತವರೆಲ್ಲ ಮುಖಮುಖ ನೋಡಿಕೊಂಡರಂತೆ.
‘‘ಅಬ್ಬುಬ್ಯಾರಿ... ಅಬ್ಬುಬ್ಯಾರಿ... ಹೊರಗೆ ಬನ್ನಿ...’’ ಮತ್ತೆ ಹೊರಗೆ ಆರ್ಭಟ. ಜೊತೆಗೆ ಮಾತಿನ ಗದ್ದಲ ಕೇಳಿಸಿತಂತೆ. ನಿನ್ನಜ್ಜ ಗಾಬರಿಯಿಂದ ಕೈಯಲ್ಲಿದ್ದ ತುತ್ತನ್ನು ಬಟ್ಟಲಿಗೆ ಹಾಕಿ ಬಾಗಿಲ ಬಳಿ ಬಂದು ನೋಡಿದರೆ ತ್ಯಾಂಪಣ್ಣ! ತ್ಯಾಂಪಣ್ಣ ಉದ್ದಕ್ಕೆ ಅಂಗಳದಲ್ಲಿ ನಿಂತಿದ್ದರಂತೆ! ಆತನ ಜೊತೆಗೆ ಕೆಲವರು ಯುವಕರು.
‘‘ಅಬ್ಬುಬ್ಯಾರಿ... ಇವರು ನಿಮ್ಮನ್ನು ಊಟಕ್ಕೆ ಕರೆದಿದ್ದಲ್ಲ. ಇಲ್ಲಿ ಬನ್ನಿ. ಹೊರಗೆ ಬನ್ನಿ’’ ತ್ಯಾಂಪಣ್ಣ ಮತ್ತೆ ಕಿರುಚಿದರಂತೆ.
ನಿನ್ನಜ್ಜ ಇನ್ನೂ ಬಾಗಿಲಲ್ಲಿ ನಿಂತಿದ್ದರಂತೆ.
‘‘ಹೌದು ಅಬ್ಬು ಬ್ಯಾರಿ, ಈವತ್ತು ಇವರು ನಿಮ್ಮನ್ನು ಕರೆದದ್ದು ಊಟಕ್ಕಲ್ಲ. ನಿಮ್ಮನ್ನು ಕೊಲ್ಲಲಿಕ್ಕೆ. ನಿಮ್ಮ ಬೊಜ್ಜ ಮಾಡಲಿಕ್ಕೆ ಕರೆದದ್ದು’’
ನಿನ್ನಜ್ಜ ಮಾತನಾಡಲಿಲ್ಲವಂತೆ. ಅವರಿಗೆ ತ್ಯಾಂಪಣ್ಣ ಏನು ಹೇಳುತ್ತಿದ್ದಾನೆಂದೇ ಅರ್ಥವಾಗ ಲಿಲ್ಲವಂತೆ. ಅಷ್ಟರಲ್ಲಿ ಜಗಲಿ ಏರಿ ಬಂದ ತ್ಯಾಂಪಣ್ಣ ಕಂಬದಂತೆ ನಿಂತಿದ್ದ ನಿನ್ನ ಅಜ್ಜನ ರಟ್ಟೆ ಹಿಡಿದು ದರದರನೆ ಎಳೆದುಕೊಂಡು ಅಂಗಳಕ್ಕೆ ಬಂದರಂತೆ.
 ‘‘ಅಬ್ಬುಬ್ಯಾರಿ, ಈ ಹರಾಮಿ ಇದಿನಬ್ಬ ನಿಮ್ಮನ್ನು ಪ್ರೀತಿಯಿಂದ ಊಟಕ್ಕೆ ಕರೆದದ್ದಲ್ಲ. ಅವನು ನಿಮ್ಮನ್ನು ಕೊಲ್ಲಲು ಕರೆಸಿದ್ದು, ನೀವು ಹೋಗುವ ದಾರಿಯಲ್ಲಿ ಆ ದೊಡ್ಡ ಮಾವಿನಮರದ ಬದಿಯಲ್ಲಿ ಬಲ್ಲೆ ಉಂಟಲ್ಲಾ, ಆ ಬಲ್ಲೆಯೊಳಗೆ ಇಬ್ಬರು ಅವಿತು ಕುಳಿತಿದ್ದಾರೆ ಎಂದು ತುಕ್ರ ಬಂದು ಹೇಳಿದ. ನಾನು ಆಳುಗಳೊಡನೆ ಬಂದು ಆ ಬಲ್ಲೆಯೊಳಗೆ ಅವಿತಿದ್ದ ಇಬ್ಬರನ್ನೂ ಹಿಡಿದು ಮರಕ್ಕೆ ಕಟ್ಟಿಹಾಕಿ ಸರೀ ಬಾರಿಸಿದೆ. ಮೊದಲಿಗೆ ಅವರು ಬಾಯಿ ಬಿಡಲಿಲ್ಲ. ಮತ್ತೆ ಪೆಟ್ಟು ತಡೆಯಲಾರದೆ ಹೇಳಿದರು: ನೀವು ಇಲ್ಲಿಂದ ಹಿಂದಿರುಗುವಾಗ ನಿಮ್ಮನ್ನು ಕೊಲ್ಲಲು ಕಾದು ಕುಳಿತದ್ದೂಂತ. ಆ ಇಬ್ಬರೂ ಈ ಊರಿನವರಲ್ಲ. ಗಟ್ಟದ ಮೇಲಿನವರಂತೆ. ಈ ರಕ್ಕಸ ಇದಿನಬ್ಬ ಇದ್ದಾನಲ್ಲ ಇವನು ಅವರನ್ನು ದುಡ್ಡು ಕೊಟ್ಟು ಕರೆಸಿದ್ದಂತೆ...’’ ಅಷ್ಟು ಹೇಳಿದವರೇ ತ್ಯಾಂಪಣ್ಣ ಎಲ್ಲರೂ ನೋಡುತ್ತಿದ್ದಂತೆಯೇ ಮನೆಯೊಳಗೆ ನುಗ್ಗಿ ಇದಿನಬ್ಯಾರಿಯ ಕತ್ತು ಹಿಡಿದು ದೂಡಿಕೊಂಡು ಹೊರಗೆ ಬಂದರಂತೆ. ನಿನ್ನಜ್ಜ ಇದನ್ನೆಲ್ಲ ನೋಡುತ್ತಾ ಗರಬಡಿದವರಂತೆ ನಿಂತು ಬಿಟ್ಟಿದ್ದರಂತೆ. ಅವರಿಗೆ ಆಗಲೂ ತ್ಯಾಂಪಣ್ಣ ಏನು ಹೇಳುತ್ತಿದ್ದಾನೆ, ಅಲ್ಲಿ ಏನು ನಡೆಯುತ್ತಿದೆ ಎಂಬುದೇ ಅರ್ಥವಾಗಲಿಲ್ಲವಂತೆ. ಅದಾಗಲೇ ಅಲ್ಲಿ ತುಂಬಾ ಜನ ಸೇರತೊಡಗಿದ್ದರಂತೆ. ಎಲ್ಲರ ಎದುರೇ ತ್ಯಾಂಪಣ್ಣ ಇದಿನಬ್ಯಾರಿಗೆ ಸರೀ ಹೊಡೆದರಂತೆ. ಆಗ ಅಲ್ಲಿ ಸೇರಿದ್ದ ಎಲ್ಲರೂ ಸುಮ್ಮನೆ ನಿಂತು ನೋಡುತ್ತಿದ್ದರೇ ಹೊರತು ಯಾರೂ ತ್ಯಾಂಪಣ್ಣನನ್ನು ತಡೆಯುವ ಧೈರ್ಯ ತೋರಲಿಲ್ಲವಂತೆ.
ಆನಂತರ ತ್ಯಾಂಪಣ್ಣ ನಿನ್ನಜ್ಜನ ಹೆಗಲಿಗೆ ಕೈ ಹಾಕಿ, ‘‘ಈ ಅಬ್ಬುಬ್ಯಾರಿ ನನ್ನ ಗೆಳೆಯ. ನನ್ನ ಜೀವದ ಗೆಳೆಯ. ನಾವಿಬ್ಬರೂ ಅಣ್ಣ-ತಮ್ಮಂದಿರು. ಇವರ ಒಂದು ಕೂದಲು ಕೊಂಕುವುದನ್ನೂ ನಾನು ಸಹಿಸಲಾರೆ. ಯಾರಾದರೂ ಅಂತಹ ಕೆಲಸ ಮಾಡಿದರೆ ಅಂತಹವರನ್ನು ಕೊಂದು ಬಿಡುತ್ತೇನೆ... ಅದಕ್ಕಾಗಿ ನಾನು ಜೈಲಿಗೆ ಹೋದರೂ ಸರಿಯೇ...’’ ಎಂದು ಎಲ್ಲರನ್ನೂ ಎಚ್ಚರಿಸಿ, ನಿನ್ನಜ್ಜನ ಕೈ ಹಿಡಿದುಕೊಂಡೇ ಮನೆಗೆ ಕರೆತಂದು ನನ್ನೆದುರು ನಿಲ್ಲಿಸಿದ್ದರು
‘‘ಬ್ಯಾರ್ದಿ.. ಕೊಂದು ಬಿಡುತ್ತಿದ್ದರಲ್ಲ ಇಂದು ನನ್ನ ಗೆಳಯನನ್ನು... ಒಂದು ಸ್ವಲ್ಪ ಹೆಚ್ಚುಕಮ್ಮಿಯಾಗಿದ್ದರೂ ಕೊಂದುಬಿಡುತ್ತಿದ್ದರು ಬ್ಯಾರ್ದಿ’’ ಎನ್ನುತ್ತಿದ್ದಾಗ ತ್ಯಾಂಪಣ್ಣನ ಧ್ವನಿ ಕಂಪಿಸುತ್ತಿತ್ತು. ಅಷ್ಟು ಹೇಳಿದವರೇ ಅವರು ನಿನ್ನಜ್ಜನನ್ನು ತಬ್ಬಿ ಹಿಡಿದು ಅತ್ತೇ ಬಿಟ್ಟಿದ್ದರು. ಒಂದು ಕಡೆ ನಿನ್ನಜ್ಜನನ್ನು ಆ ಬ್ಯಾರಿ ಕೊಲ್ಲುತ್ತಿದ್ದನಲ್ಲಾ ಎಂಬ ದುಃಖ, ಮತ್ತೊಂದು ಕಡೆ ಇಬ್ಬರೂ ಒಂದಾದ ಆನಂದದಿಂದ ನಾನು ನಲುಗಿ ಹೋಗಿದ್ದೆ.
ಆನಂತರ ಕೊಲ್ಲಲು ಹೊಂಚು ಹಾಕಿ ಕುಳಿತಿದ್ದ ಆ ಇಬ್ಬರನ್ನೂ ಇದಿನಬ್ಯಾರಿಯನ್ನೂ ಅವರ ಆಳುಗಳ ಕೈಯಲ್ಲಿ ಗುತ್ತಿನ ಮನೆಗೆ ಎಳೆದುಕೊಂಡು ಹೋಗಿ ತೆಂಗಿನಮರಕ್ಕೆ ಕಟ್ಟಿ ಹಾಕಿ, ಮರುದಿನ ಬೆಳಗ್ಗೆ ಪೊಲೀಸರಿಗೆ ಒಪ್ಪಿಸಿದರಂತೆ.

                                                            ***

                                                              ಭಾಗ- 2
ಅಜ್ಜಿಯ ಮನೆಗೆ ಸೇರಿದ ಮೇಲೆ ಬಗೆಬಗೆಯ ತಿಂಡಿ, ಊಟ, ಹೊಸಜನ, ಹೊಸ ವಾತಾವರಣ, ಹೊಸ ಪರಿಸರ, ಅಜ್ಜಿ- ಐಸು ಹೇಳುವ ಬದುಕಿನ ಕಥೆಗಳು, ಆ ಮನೆಯ ಇತಿಹಾಸ-ಇವುಗಳನ್ನೆಲ್ಲ ಕೇಳುತ್ತಿದ್ದಂತೆ ತಾಹಿರಾಳ ಮುಂದೆ ಹೊಸ ಲೋಕವೇ ತೆರೆದುಕೊಂಡಿತ್ತು.
ಬೆಳಗ್ಗೆ ಹತ್ತು ಗಂಟೆಗೆ ಏಳುವುದು, ತಿಂಡಿ ತಿನ್ನು ವುದು, ಅಜ್ಜಿಯದ್ದೊ ಐಸುಳದ್ದೊ ಮುಂದೆ ಕುಳಿತು ಕಥೆ ಕೇಳುವುದು ಮತ್ತೆ ಮಧ್ಯಾಹ್ನ ಊಟ ಮಾಡುವುದು, ಮಲಗುವುದು, ಸಂಜೆ ಏಳುವುದು, ಐಸುಳ ಜೊತೆ ಅಡುಗೆ ಕಲಿಯುವುದು... ಹೀಗೆ ಅವಳಿಗೆ ದಿನ ಕಳೆಯುತ್ತಿದ್ದುದೇ ತಿಳಿಯುತ್ತಿರಲಿಲ್ಲ. ಅದಾಗಲೇ ಅವಳು ಬಂದು 15 ದಿನಗಳಾಗುತ್ತಾ ಬಂದಿತ್ತು. ಅಜ್ಜಿ-ಮಾಮಿಯ ಪ್ರೀತಿ, ಆರೈಕೆಯಲ್ಲಿ ಅವಳು ಮೂಕಿಯಾಗಿ ಬಿಟ್ಟಿದ್ದಳು.
ಬೆಂಗಳೂರಿನ ತನ್ನ ಮನೆಯಲ್ಲಿ ಎಲ್ಲಾ ಸೌಕರ್ಯ ಗಳಿದ್ದರೂ ಅವಳಿಗೆ ಒಂದು ಗಂಟೆ ಕಳೆಯುವುದು ಕಷ್ಟವಾಗುತ್ತಿತ್ತು. ಅವಳು ಗೆಳತಿಯರು, ಸಿನೆಮಾ, ಮಾಲ್ ಎಂದು ತಿರುಗಾಡಿ ರಾತ್ರಿಯಾಗುತ್ತಲೇ ಬಂದು ಮನೆ ಸೇರುತ್ತಿದ್ದಳು. ಮನೆ ಸೇರಿದ ಮೇಲೆ ಅವಳಿಗೆ ಅನಾಥಳಾದಂತೆ, ಒಂಟಿಯಾದಂತಾಗಿ ಮನಸ್ಸು ಭಾರವಾಗುತ್ತಿತ್ತು. ನಿದ್ದೆ ದೂರವಾಗುತ್ತಿತ್ತು. ಅಜ್ಜಿ ಮನೆಗೆ ಬಂದ ಮೇಲಂತೂ ಅವಳು ಸೆರೆಮನೆಯಿಂದ ಬಿಡುಗಡೆಯಾಗಿ ಬಂದ ಕೈದಿಯಂತಾಗಿದ್ದಳು. ಸುಖ ಎಂದರೇನು, ಪ್ರೀತಿ ಎಂದರೇನು, ನೆಮ್ಮದಿ ಎಂದರೇನು, ಸಂಬಂಧ ಎಂದರೇನು, ಬದುಕು ಎಂದರೇನು ಎಂಬುದನ್ನು ಅನುಭವಿಸತೊಡಗಿದ್ದಳು. ಮೈಕೈ ತುಂಬಿಕೊಂಡು ಮೊದಲಿಗಿಂತ ಸುಂದರಿಯಾಗಿ ಕಾಣಿಸುತ್ತಿದ್ದಳು.

(ಗುರುವಾರದ ಸಂಚಿಕೆಗೆ)

Writer - ಮುಹಮ್ಮದ್ ಕುಳಾಯಿ

contributor

Editor - ಮುಹಮ್ಮದ್ ಕುಳಾಯಿ

contributor

Similar News