ಗೋರಕ್ಷಣೆ ನೆಪದಲ್ಲಿ ದೌರ್ಜನ್ಯ

Update: 2016-08-14 13:36 GMT
ಸಾಂದರ್ಭಿಕ ಚಿತ್ರ

ಬೆಂಗಳೂರು,ಆ.14: ಗೋ ರಕ್ಷಣೆ ನೆಪದಲ್ಲಿ ಸಂಘ ಪರಿವಾರದ ಗೂಂಡಾಗಳು ದಲಿತರ ಮೇಲೆ ನಡೆಸುತ್ತಿರುವ ದೌರ್ಜನ್ಯವನ್ನು ಖಂಡಿಸಿ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ಕಾರ್ಯಕರ್ತರು ನಗರದ ಪುರಭವನದ ಮುಂಭಾಗ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಗೋಮಾತೆ ಹೆಸರಿನಲ್ಲಿ ಗೋರಕ್ಷಕರು ದಲಿತರ ಮೇಲೆ ಅಮಾನುಷವಾಗಿ ಹಲ್ಲೆ ಮಾಡುತ್ತಿದ್ದಾರೆ. ಆದರೆ ಕೇಂದ್ರ ಸರಕಾರ ಈ ಸಂಘಟನೆಗಳ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಇದರಿಂದ ದೇಶದಲ್ಲಿ ದಲಿತರಿಗೆ ರಕ್ಷಣೆ ಇಲ್ಲದಂತಾಗಿದೆ. ಹೀಗಾಗಿ ದಲಿತರ ಸ್ವಯಂ ರಕ್ಷಣೆಗೆ ಸರಕಾರವೇ ಬಂದೂಕು ನೀಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಗೋರಕ್ಷಣೆ, ದೇಶ ರಕ್ಷಣೆ, ರಾಷ್ಟ್ರಪ್ರೇಮ, ಸಂಸ್ಕೃತಿ ಹೆಸರಿನಲ್ಲಿ ಅನೈತಿಕ ಪೊಲೀಸ್‌ಗಿರಿ ನಡೆಯುತ್ತಿರುವ ಆರೆಸೆಸ್ಸ್ ಮತ್ತು ಗೋ ರಕ್ಷಕ ಸಮಿತಿಗಳನ್ನು ನಿಷೇಧಿಸಿಬೇಕು. ಚಿಕ್ಕಮಗಳೂರು ಜಿಲ್ಲೆ ಕುಂದೂರಿನ ದಲಿತರ ಮೇಲೆ ಗೋಮಾಂಸ ಸೇವನೆಯ ಹೆಸರಿನಲ್ಲಿ ಮಾರಣಾಂತಿಕ ಹಲ್ಲೆ ಮಾಡಿರುವ ಸಂಘ ಪರಿವಾರದ ಮುಖಂಡರನ್ನು ಕೂಡಲೆ ಬಂಧಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಚಿಂತಕಿ ಇಂದಿರಾ ಕೃಷ್ಣಪ್ಪ, ಗೋರಕ್ಷಣೆಯ ವಿಚಾರದಲ್ಲಿ ದಲಿತ ಹಾಗೂ ಅಲ್ಪಸಂಖ್ಯಾತರ ಮೇಲೆ ನಕಲಿ ಗೋರಕ್ಷಕರು ನಿರಂತರವಾಗಿ ಹಲ್ಲೆ, ದೌರ್ಜನ್ಯಗಳನ್ನು ನಡೆಸುತ್ತಿದ್ದಾರೆ. ಈ ಸಂಘಟನೆಗಳಿಗೆ ಬಿಜೆಪಿ ಸರಕಾರ ನೇರವಾಗಿ ಕುಮ್ಮಕ್ಕು ನೀಡುತ್ತಿದೆ. ಸಂಘ ಪರಿವಾರ ಹಾಗೂ ಬಿಜೆಪಿ ಸರಕಾರ ಒಳ ಸಂಚನ್ನು ಬಯಲು ಮಾಡಬೇಕಿದೆ ಎಂದರು.

ಗೋರಕ್ಷಕ ಏಜೆಂಟ್‌ರು ಸರಕಾರದಿಂದ ಸೌಲಭ್ಯಗಳನ್ನು ಪಡೆಯಲು ಗೋ ಹೆಸರಿನಲ್ಲಿ ಸಂಘಟನೆಗಳನ್ನು ಕಟ್ಟಿಕೊಳ್ಳುತ್ತಿದ್ದಾರೆ. ಈ ಸಂಘಟನೆಗಳು ಮುಂದೆ ಒಂದು ದಿನ ಗೋಮಾಳ ಭೂಮಿಯನ್ನು ವಶಪಡಿಸಿಕೊಳ್ಳುವ ಒಳ ರಾಜಕೀಯ ಹುನ್ನಾರವಿದೆ ಎಂದು ಆರೋಪಿಸಿದ ಅವರು, ಈ ಜನ ವಿರೋಧಿ ಸಂಘಟನೆಗಳನ್ನು ಧಮನಕ್ಕೆ ದೇಶದ್ಯಾಂತ ಆಂದೋಲನ ಹಮ್ಮಿಕೊಳ್ಳಬೇಕು ಎಂದು ಕರೆಕೊಟ್ಟರು.

 ದಲಿತ ಸಂಘರ್ಷ ಸಮಿತಿಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಮಾತನಾಡಿ, ಬಿಜೆಪಿ ಪಕ್ಷ ಸಂಘಟನೆಗೊಂಡ ನಂತರ ದೇಶದಲ್ಲಿ ದಲಿತರ ಹಕ್ಕುಗಳಿಗೆ ಚ್ಯುತಿ ಬಂದಿದೆ. ಬ್ರಾಹ್ಮಣರ ಸಿದ್ಧಾಂತಗಳನ್ನು ದಲಿತರ ಮೇಲೆ ಹೇರಲು ಸಂಚು ರೂಪಿಸಿದೆ.ಇದರ ಪರಿಣಾಮ ದೇಶದಲ್ಲಿ ದಲಿತರು, ಅಲ್ಪಸಂಖ್ಯಾತರಿಗೆ ರಕ್ಷಣೆಯೆ ಇಲ್ಲದಂತ್ತಾಗಿದೆ.ದನದ ಮಾಂಸದ ವಿಚಾರದಲ್ಲಿ ದಲಿತರನ್ನು ಅಮಾನುಷವಾಗಿ ಕೊಲೆ ಮಾಡುತ್ತಿರುವ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿವೆ ಎಂದು ಅಸಹಾಯಕತೆ ತೋಡಿಕೊಂಡರು.

ನರೇಂದ್ರ ಮೋದಿ ಸರಕಾರ ಅಧಿಕಾರವಹಿಸಿಕೊಂಡ ನಂತರ ದೇಶದಲ್ಲಿ ಪ್ರತಿ 16 ನಿಮಿಷಕ್ಕೆ ಒಬ್ಬ ದಲಿತನ ಮೇಲೆ ಹಲ್ಲೆ ನಡೆಯುತ್ತಿದೆ.ಪ್ರತಿ ದಿನ ನಾಲ್ವರ ದಲಿತ ಮಹಿಳೆಯರ ಮೇಲೆ ಅತ್ಯಾಚಾರ, ಪ್ರತಿ ವಾರ 16 ದಲಿತರು ಕೊಲೆಯಾಗುತ್ತಿದ್ದಾರೆ ಎಂಬ ವರದಿಯನ್ನು ನ್ಯಾಷನಲ್ ಕ್ರೈಂ ರೆಕಾರ್ಡ್ ಬ್ಯುರೋ ಬಹಿರಂಗಪಡಿಸಿದೆ. ಇದು ಕೇಂದ್ರ ಸರಕಾರದ ಕೊಡುಗೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದೇಶದಲ್ಲಿ ಗೋ ರಕ್ಷಣೆಯೆಂದು ಹೇಳುಕೊಳ್ಳುವವರು ಯಾರು ಗೋವುಗಳನ್ನು ಸಾಕುವುದಿಲ್ಲ.ಗೋ ಸಾಕಾಣಿಕೆಯಲ್ಲಿ ದಲಿತರೇ ಮುಂದು ಎಂದು ಪ್ರತಿಪಾದಿಸಿದ ಅವರು, ಕೇಂದ್ರ ಸರಕಾರ ಗೋರಕ್ಷಕರಿಗೆ ರಕ್ಷಣೆ ನೀಡುವ ಬದಲು ದಲಿತರ ರಕ್ಷಣೆಗೆ ಮುಂದಾಗಬೇಕು. ದಲಿತರ ಮೇಲೆ ಹಲ್ಲೆ ಮಾಡುವ ನಕಲಿ ಗೋರಕ್ಷಕರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯ ನಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.ಪ್ರತಿಭಟನೆಯಲ್ಲಿ ಪ್ರೊ.ಕೃಷ್ಣಪ್ಪ,ಜಿಲ್ಲಾ ಪ್ರಧಾನ ಸಂಚಾಲಕರಾದ ಮಣಿಪಾಲ್ ರಾಜಪ್ಪ, ರಾಜ್ಯ ಸಮಿತಿಯ ಸದಸ್ಯರಾದ ಜೋತಪ್ಪ ಹೊಸಳ್ಳಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News