ಎಬಿವಿಪಿಯಿಂದ ಸುಳ್ಳು ಆರೋಪ: ಅಮ್ನೆಸ್ಟಿ ಸ್ಪಷ್ಟಣೆ

Update: 2016-08-16 14:17 GMT

ಬೆಂಗಳೂರು, ಆ. 16: ‘ಆಜಾದಿ’ ಘೋಷಣೆ ಕೂಗಲಾಗಿದೆ ಎಂದು ಆರೋಪಿಸಿ ‘ಅಮ್ನೆಸ್ಟಿ ಇಂಟರ್ ನ್ಯಾಷನಲ್’ ವಿರುದ್ಧ ಎಬಿವಿಪಿ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಅಮ್ನೆಸ್ಟಿ ಇಂಟರ್ ನ್ಯಾಷನ್ ಸ್ಪಷ್ಟಪಡಿಸಿದೆ.

ಆ.13ರಂದು ಇಲ್ಲಿನ ಮಿಲ್ಲರ್ಸ್‌ ರಸ್ತೆಯಲ್ಲಿನ ಥಿಯೋಲಾಜಿಕಲ್ ಕಾಲೇಜಿನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಯಾವುದೇ ದೇಶ ವಿರೋಧಿ ಘೋಷಣೆ ಕೂಗಿಲ್ಲ. ಅಮ್ನೆಸ್ಟಿ ಅಂತಾರಾಷ್ಟ್ರೀಯ ಮಾನವ ಹಕ್ಕುಗಳು ಹಾಗೂ ಸಂವಿಧಾನದ ಅನ್ವಯ ಕಾರ್ಯನಿರ್ವಹಿಸುತ್ತಿದ್ದು, ಯಾವುದೆ ರಾಜಕಿಯ, ಆರ್ಥಿಕ ಅಥವಾ ಸೈದ್ಧಾಂತಿಕ ಆಸಕ್ತಿಗಳಿಂದ ಮುಕ್ತವಾಗಿದ್ದೇವೆ ಎಂದು ಹೇಳಿದೆ.

ಜಮ್ಮು-ಕಾಶ್ಮೀರದಲ್ಲಿನ ಭಾರತ ಸೇವಾ ಸಿಬ್ಬಂದಿಯಿಂದ ಆಗಿರುವ ಮಾನವ ಹಕ್ಕುಗಳ ಉಲ್ಲಂಘನೆ ಬಗ್ಗೆ ಸಂವಾದ ಏರ್ಪಡಿಸಲಾಗಿತ್ತು. ಕಾಶ್ಮೀರದ 3 ಮಂದಿಯನ್ನು ಆಹ್ವಾನಿಸಲಾಗಿತ್ತು. ಆದರೆ, ಅಮ್ನೆಸ್ಟಿ ಸದಸ್ಯೆ ಉಪನ್ಯಾಸಕಿ ಸಿಂಧುಜಾ ಅಯ್ಯಂಗಾರ್, ಸಿಮಾ ಮುಸ್ತಫಾ, ರೋಶನ್ ಇಲಾಹಿ ರಾಷ್ಟ್ರ ವಿರೋಧಿ ಹಾಡು ಹಾಡಿದರು ಮತ್ತು ರಾಷ್ಟ್ರ ವಿರೊಧಿ ಘೋಷಣೆ ಕೂಗಿದರು ಎಂಬುದು ಸತ್ಯಕ್ಕೆ ದೂರ ಎಂದು ಸ್ಪಷ್ಟಪಡಿಸಿದೆ.

ಸಿಂಧುಜಾ ಅಯ್ಯಂಗಾರ್ ವೇದಿಕೆ ಮೇಲೆಯೆ ಇರಲಿಲ್ಲ. ಹಿರಿಯ ಪತ್ರಕರ್ತ ಸಿಮಾ ಮುಸ್ತಫಾ ಸಂವಾದ ನಡೆಸಿಕೊಟ್ಟರು. ಆ ಇಬ್ಬರೂ ಯಾವುದೆ ಹಾಡುಗಳನ್ನು ಹಾಡಲಿಲ್ಲ ಅಥವಾ ಯಾವುದೆ ಘೋಷಣೆಗಳನ್ನು ಕೂಗಲಿಲ್ಲ. ರೋಶನ್ ಕೊನೆಯಲ್ಲಿ ಕಾಶ್ಮೀರ ಹಿಂಸೆಯ ಮಧ್ಯೆ ಬೆಳೆಯುತ್ತಿದೆ ಎಂಬ ಹಾಡು ಹಾಡಿದರು. ಕಾರ್ಯಕ್ರಮದಲ್ಲಿ ಎಬಿವಿಪಿ ಕಾರ್ಯಕರ್ತರು ದಾಳಿ ನಡೆಸಿದ್ದು, ಇದಕ್ಕೆ ಆಕ್ಷೇಪಿಸಿದ ಹಿನ್ನೆಲೆಯಲ್ಲಿ ಕೆಲ ಕಾಲ ಗೊಂದಲ ಸೃಷ್ಟಿಯಾಯಿತು. ಈ ಮಧ್ಯೆ ಕೆಲವರು ಆಜಾದಿ (ಸ್ವಾತಂತ್ರ) ಘೋಷಣೆ ಕೂಗಿದರು. ಆದರೆ, ಅಮ್ನೆಸ್ಟಿ ಇಂಟರ್ ನ್ಯಾಷನಲ್ ಯಾರ ಪರ ಹಾಗೂ ವಿರುದ್ಧವಿಲ್ಲ. ಸಂವಿಧಾನ ನೀಡಿರುವ ಅಭಿವ್ಯಕ್ತಿ ಸ್ವಾತಂತ್ರವನ್ನು ಎಲ್ಲರೂ ಗೌರವಿಸಬೇಕೆಂದು ಅಮ್ನೆಸ್ಟಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News