ಅಮ್ನೆಸ್ಟಿ ಕಚೇರಿ ಮುಂದೆ ಎಬಿವಿಪಿ ದಾಂಧಲೆ : ಪೊಲೀಸರಿಂದ ಲಾಠಿಚಾರ್ಜ್

Update: 2016-08-19 13:56 GMT

ಬೆಂಗಳೂರು, ಆ.19: ಇಲ್ಲಿನ ಇಂದಿರಾ ನಗರದಲ್ಲಿರುವ ಅಮ್ನೆಸ್ಟಿ ಸಂಸ್ಥೆಯ ಕಚೇರಿಗೆ ನುಗ್ಗಿ ದಾಂಧಲೆ ಎಸಗಲು ಹವಣಿಸಿದ ಎಬಿವಿಪಿ ಕಾರ್ಯಕರ್ತರ ಮೇಲೆ ಪೊಲೀಸರು ಲಾಠಿ ಪ್ರಹಾರ ಮಾಡಿದ್ದು, ಹಲವು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.

ಶುಕ್ರವಾರ ಬೆಳಗ್ಗೆ ಎಬಿವಿಪಿಯ ನೂರಾರು ಕಾರ್ಯಕರ್ತರು ಏಕಾಏಕಿ ಇಂದಿರಾನಗರದಲ್ಲಿರುವ ಅಮ್ನೆಸ್ಟಿ ಸಂಸ್ಥೆಗೆ ನುಗ್ಗಲು ಪ್ರಯತ್ನಿಸಿದರು. ಈ ವೇಳೆ ಪೊಲೀಸರು ಪ್ರತಿಭಟನಾಕಾರರನ್ನು ಮನವೊಲಿಸಲು ಪ್ರಯತ್ನಿಸಿದರು. ಆದರೂ ಎಬಿವಿಪಿ ಕಾರ್ಯಕರ್ತರು ಪೊಲೀಸರ ತಡೆಗೋಡೆಗಳನ್ನು ನೂಕಿ ದಾಂಧಲೆಯೆಸಗಿದಾಗಪೊಲೀಸರು ಲಾಠಿ ಪ್ರಹಾರ ಮಾಡಿ ಪ್ರತಿಭಟನಾಕಾರರನ್ನು ಚದುರಿಸಿದರು.

ಪೊಲೀಸರ ಲಾಠಿಚಾರ್ಜ್ ವೇಳೆ ಕೆಲವು ಕಾರ್ಯಕರ್ತರು ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಪ್ರತಿಭಟನೆಯಲ್ಲಿ ಮಹಿಳಾ ಕಾರ್ಯಕರ್ತೆಯರೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರಿಂದ ಪೊಲೀಸರು ಕಾರ್ಯಕರ್ತರನ್ನು ನಿಭಾಯಿಸಲು ಹರಸಾಹಸ ಪಡಬೇಕಾಯಿತು.

ಕಾರ್ಯಕರ್ತರ ಬಂಧನ: ಮುಂಜಾಗ್ರತ ಕ್ರಮವಾಗಿ ಅಮ್ನೆಸ್ಟಿ ಸಂಸ್ಥೆಗೆ ಪೊಲೀಸ್ ಬಿಗಿ ಬಂದೂಬಸ್ತ್ ಒದಗಿಸಲಾಗಿತ್ತು. ಇದನ್ನು ಲೆಕ್ಕಿಸದೆ ಎಬಿವಿಪಿ ಕಾರ್ಯಕರ್ತರು ಕಚೇರಿಗೆ ನುಗ್ಗಲು ಪ್ರಯತ್ನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರತಿಭಟನೆಯಲ್ಲಿ ತೊಡಗಿದ್ದ 50 ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು.

ಪೊಲೀಸರು ಹಾಗೂ ಎಬಿವಿಪಿ ಕಾರ್ಯಕರ್ತರ ನಡುವೆ ನಡೆದ ಮಾತಿನ ಚಕಮಕಿ ಹಾಗೂ ತಳ್ಳಾಟದಲ್ಲಿ ಸುಮಾರು 20ಮಂದಿ ಕಾರ್ಯಕರ್ತರು ಗಾಯಗೊಂಡಿದ್ದಾರೆ. ಈ ವೇಳೆ ವಿದ್ಯಾರ್ಥಿನಿ ವೀಣಾ ಕೆಳಗೆಬಿದ್ದು ತಲೆಗೆ ಬ್ಯಾರಿಕೇಡ್ ಕಂಬಿ ತಗುಲಿದ್ದರಿಂದ ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಎಬಿವಿಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನಯ್ ಬಿದರೆ ಮಾತನಾಡಿ, ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದರೂ ಪೊಲೀಸರು ಮತ್ತೆ ವಿದ್ಯಾರ್ಥಿಗಳು ಕಾರ್ಯಕರ್ತರ ಮೇಲೆ ಲಾಠಿ ಪ್ರಹಾರ ನಡೆಸಿ ಪ್ರತಿಭಟನೆ ಹತ್ತಿಕ್ಕುವ ಪ್ರಯತ್ನ ನಡೆಸಿದ್ದಾರೆ. ಈ ವೇಳೆ ಹಲವು ವಿದ್ಯಾರ್ಥಿಗಳು ಗಾಯಗೊಂಡಿದ್ದು, ಇದಕ್ಕೆ ಪೊಲೀಸರೆ ನೇರ ಹೊಣೆ ಎಂದು ಆರೋಪಿಸಿದರು.

ರಾಜ್ಯ ಸರಕಾರ ಪೊಲೀಸ್ ಬಲವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ. ರಾಷ್ಟ್ರದ್ರೋಹಿಗಳನ್ನು ಶಿಕ್ಷಿಸಬೇಕಾದ ಸರಕಾರ ಶಾಂತಿಯುತ ಪ್ರತಿಭಟನೆಯಲ್ಲಿ ನಿರತರಾಗಿರುವ ಎಬಿವಿಪಿ ಕಾರ್ಯಕರ್ತರ ಮೇಲೆ ಪೌರುಷ ತೋರಿಸಿರುವುದು ಖಂಡನೀಯ. ತಕ್ಷಣವೇ ಬಂಧನಕ್ಕೆ ಒಳಗಾಗಿರುವ ಎಬಿವಿಪಿ ಕಾರ್ಯಕರ್ತರನ್ನು ಬಿಡುಗಡೆಗೊಳಿಸಬೇಕು.

-ಬಿ.ಎಸ್.ಯಡಿಯೂರಪ್ಪ ರಾಜ್ಯಾಧ್ಯಕ್ಷ ಬಿಜೆಪಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News