ಕಾದಂಬರಿ

Update: 2016-08-20 17:16 GMT

--ದೊಡ್ಡಮ್ಮನ ವೈಭವದ ಮದುವೆ--
‘‘ಎಲ್ಲ ಗಂಡಸರು ಹಾಗಿರ್ತಾರಾ? ಐದು ಬೆರಳು ಒಂದೇ ತರ ಇದೆಯಾ... ಕೆಲವರು ಇರ್ತಾರೆ... ಸಹಿಸಬೇಕು... ಬೇರೆ ದಾರಿ ಇಲ್ಲ...’’
‘‘ನನ್ನ ಗಂಡ ನೋಡು... ಒಂದು ದಿನ ನನ್ನ ನೋಯಿಸಿದವರಲ್ಲ... ನನ್ನ ಕಣ್ಣಿಂದ ಒಂದು ತೊಟ್ಟು ಕಣ್ಣೀರು ಬೀಳಿಸಿದವರಲ್ಲ... ಎಲ್ಲ ಅವರವರು ಪಡೆದುಕೊಂಡು ಬಂದದ್ದು...’’
ಐಸು ಊಟ ತಂದವಳು ಕಲಸಿ ಬಾಯಿಗೆ ತುತ್ತು ಇಡಲು ಹೋದಳು.
‘‘ಅವಳು ಹೋದಳಾ?’’
‘‘ಅವರು ಆಗಲೇ ಹೋಗಿದ್ದಾರೆ’’
‘‘ಏನು ಹೇಳಿದಳು?’’
‘‘ಏನೂ ಹೇಳಿಲ್ಲ, ನೀವು ಊಟ ಮಾಡಿ’’
‘‘ಅವಳು ಅಲ್ಲಿಗೆ ಹೋಗುವುದಿಲ್ಲವಂತಾ?’’
ಐಸು ಮಾತನಾಡಲಿಲ್ಲ, ತುತ್ತು ಬಾಯಿಗಿಟ್ಟಳು.
‘‘ಹೆಣ್ಣಿನ ಮನಸು ಗಂಡಸರಿಗೆ ಅರ್ಥ ಆಗುವು ದಿಲ್ಲ... ಅದು ಗಾಜಿನಂತೆ... ಒಡೆದರೆ ಹೋಯಿತು...ಮತ್ತೆಂದೂ ಜೋಡಿಸಲಿಕ್ಕೆ ಆಗುವುದಿಲ್ಲ...’’ ಅಜ್ಜಿ ಅನ್ನ ನುಂಗುತ್ತಲೇ ತನ್ನಷ್ಟಕ್ಕೆ ತೊದಲುತ್ತಿದ್ದರು.
ಊಟ ಮುಗಿಸಿ, ಬಾಯಿ ತೊಳೆದು ಮತ್ತೆ ಅಜ್ಜಿಯನ್ನು ಮಲಗಿಸಿದ ಐಸು, ತಾಹಿರಾಳನ್ನು ಕರೆದುಕೊಂಡು, ದೀಪ ಆರಿಸಿ ಕೋಣೆಯ ಹೊರಗೆ ಬಂದಳು. ಅಜ್ಜಿ ತೊದಲುತ್ತಲೇ ಇದ್ದರು.

ರಾತ್ರಿ ತನ್ನ ಕೋಣೆಯಲ್ಲಿ ಮಲಗಿದ್ದ ತಾಹಿರಾಳಿಗೆ ನಿದ್ದೆ ಬರಲಿಲ್ಲ. ಅವಳು ಎದ್ದು ಬಂದು ಐಸುಳನ್ನು ಹುಡುಕಿದಳು. ಐಸು ಅಜ್ಜಿಯ ಕೋಣೆಯ ಬಾಗಿಲಲ್ಲಿ ಚಾಪೆ ಹಾಸಿ ಮುದುಡಿ ಮಲಗಿದ್ದಳು. ತಾಹಿರಾಳೂ ಅವಳ ಪಕ್ಕ ಹೋಗಿ ಮಲಗಿದಳು. ಐಸು ಎಚ್ಚರವಿದ್ದರೂ ಒಂದು ಮಾತೂ ಆಡಲಿಲ್ಲ. ರಾತ್ರಿಯಿಡೀ ಅಜ್ಜಿಯ ಕೋಣೆಯಲ್ಲಿ ಮಾತು- ಅಳು-ನರಳಾಟ-ಗದ್ದಲ ಜೋರಾಗಿ ಕೇಳುತ್ತಿತ್ತು. ಅಜ್ಜಿಯ ಮಾತುಗಳನ್ನು ಅರ್ಥ ಮಾಡಿಕೊಳ್ಳಲು ಹೆಣಗಾಡುತ್ತಾ ಐಸುಳನ್ನು ಅಪ್ಪಿ ಹಿಡಿದು ಮಲಗಿದ್ದ ತಾಹಿರಾಳಿಗೆ ಅದ್ಯಾವಾಗ ನಿದ್ದೆ ಹತ್ತಿತೊ ಗೊತ್ತಿಲ್ಲ.
ಅಜ್ಜಿ ಮರುದಿನವೂ ಸರಿಯಾಗಲಿಲ್ಲ. ಏನಾದರೂ ಬಾಯಿಗೆ ಕೊಟ್ಟರೆ ತಿನ್ನುತ್ತಿದ್ದರು. ಏನೇನೋ ಮಾತನಾಡುತ್ತಿದ್ದರು. ಐಸು ಕೂಡಾ ಸರಿಯಾಗಿ ಮಾತನಾಡುತ್ತಿರಲಿಲ್ಲ. ಎಷ್ಟು ಬೇಕೋ ಅಷ್ಟೇ. ಹೀಗೆ 2-3 ದಿನ ಕಳೆಯಿತು. ತಾಹಿರಾಳಿಗೆ ಆ ಮನೆ ಬೋರು ಹೊಡೆಯತೊಡಗಿತು.
ಅಂದು ರಾತ್ರಿ ಊಟ ಮಾಡಿ ಮಲಗಿದ್ದ ತಾಹಿರಾ ‘‘ಮಾಮೀ...’’ ಎಂದು ಕರೆದಳು.
ಎಚ್ಚರವಾಗಿದ್ದರೂ ಐಸು ಓಗೊಡಲಿಲ್ಲ.
‘‘ಮಾಮಿ, ನಾನು ನಾಳೆ ಊರಿಗೆ ಹೋಗುತ್ತೇನೆ’’
ಬೆಂಕಿ ತುಳಿದವಳಂತೆ ದಡಕ್ಕನೆ ಎದ್ದು ಕುಳಿತ ಐಸು, ತಾಹಿರಾಳ ಮುಖ ನೋಡಿದಳು.
‘‘ಯಾಕಮ್ಮಾ...’’
‘‘ನೀವೂ ನನ್ನಲ್ಲಿ ಸರಿಯಾಗಿ ಮಾತನಾಡೋಲ್ಲ, ಅಜ್ಜೀನೂ ಮಾತನಾಡೋಲ್ಲ, ನನಗೆ ಬೇಜಾರು ಹಿಡಿದು ಹೋಗಿದೆ’’
‘‘ಬಾಯಿ ತೆರೆದರೆ ಅಳು ಬರುತ್ತಮ್ಮಾ..., ಹೃದಯ ಒಡೆದು ಹೋಗುತ್ತೇ... ಅಜ್ಜನ ನೆನಪಾಗುತ್ತೆ... ಹೇಗೆ ಮಾತನಾಡಲಿ ಹೇಳು... ಅದಕ್ಕೆ ನಾನು ತುಟಿ ಬಿಚ್ಚುವುದಿಲ್ಲ’’
‘‘ಏನಾಯಿತು ಮಾಮಿ, ನೀವು ಅಜ್ಜಿ ಯಾಕೆ ಹೀಗಿದ್ದೀರಿ, ನನಗೆ ಹೇಳಬಾರದಾ?’’
‘‘ಮೊನ್ನೆ ನಿನ್ನ ದೊಡ್ಡಮ್ಮ ಬಂದಿದ್ದರಲ್ಲ, ಅವರನ್ನು ನೋಡಿದಿಯಲ್ಲ ನೀನು’’
ಸ್ವಲ್ಪ ಮೌನದ ನಂತರ ಐಸುಳ ಬಾಯಿಯಿಂದ ಮಾತು ಹೊರಬಿತ್ತು,
‘‘ಹೂಂ...’’
‘‘ಅಜ್ಜನ ದೊಡ್ಡ ಮಗಳು ಅವರು. ಅಜ್ಜನಿಗೆ ಅವರೆಂದರೆ ಪ್ರಾಣ. ಬಹಳ ಬುದ್ಧಿವಂತೆ. ಅವರ ಮಾತು, ಶಿಸ್ತು, ಗುಣ, ನಡತೆ, ರೂಪ ನೋಡಿ ಅದೆಷ್ಟೋ ದೊಡ್ಡ ಮನೆತನದವರು ಹೆಣ್ಣು ಕೇಳಲು ಬಂದಿದ್ದರಂತೆ...’’
ಐಸು ಮತ್ತೆ ಮೌನವಾಗಿ ಕಲ್ಲು ಬಂಡೆಯಂತೆ ಕುಳಿತುಬಿಟ್ಟಳು.
ತಾಹಿರಾ ಎದ್ದು ಐಸುಳ ಮಡಿಲಲ್ಲಿ ತಲೆ ಇಟ್ಟು ಅವಳ ಮುಖವನ್ನೇ ನೋಡುತ್ತಾ ಮಲಗಿದಳು.
‘‘ಮಾಮೀ...’’
ಐಸು ಮಾತನಾಡಲಿಲ್ಲ.
ತಾಹಿರಾ ಅವಳ ಕೈಯನ್ನು ತನ್ನ ಕೈಗೆ ತೆಗೆದುಕೊಂಡು, ‘‘ಮಾಮಿ ಯಾಕೆ ಮಾಮಿ ಮಾತನಾಡ್ತಾ ಇಲ್ಲ’’
‘‘................’’
‘‘ಬೇಜಾರಾಗುವುದಾದರೆ ಬೇಡ ಮಾಮಿ, ಮಲಗಿ’’
‘‘ಬೇಜಾರು, ಎಂಥ ಬೇಜಾರು... ಒಬ್ಬೊಬ್ಬರ ಬದುಕು ಒಂದೊಂದು ಕಾದಂಬರಿ. ದೇವರು ಬರೆದ ಮಹಾ ಕಾದಂಬರಿ. ನನ್ನ ಗಂಡ ಬದುಕಿದ್ದಾರಾ, ಇಲ್ಲವಾ ಒಂದೂ ಗೊತ್ತಿಲ್ಲ. ಆದರೆ ನಾನು ಪ್ರತಿದಿನವೂ ಪ್ರತಿ ಕ್ಷಣವೂ ಅವರಿಗಾಗಿ ಕಾಯುತ್ತಿದ್ದೇನೆ, ಹಂಬಲಿಸು ತ್ತಿದ್ದೇನೆ. ದೇವರೇ, ಒಮ್ಮೆ ತಂದು ಅವರನ್ನು ನನ್ನ ಮುಂದೆ ನಿಲ್ಲಿಸು ಎಂದು ಪ್ರಾರ್ಥಿಸುತ್ತಿದ್ದೇನೆ. ಒಮ್ಮೆ ಬಂದು ಅವರು ನನ್ನೆದುರು ನಿಂತಿದ್ದರೆ... ನನ್ನನ್ನು ಬಾಯಿ ತುಂಬಾ ಐಸು... ಎಂದು ಕರೆದಿದ್ದರೆ... ನಾನು ಕಾಯುತ್ತಿದ್ದೇನಮ್ಮಾ... ಆ ದಿನಕ್ಕಾಗಿ, ಆ ಕ್ಷಣಕ್ಕಾಗಿ ಕಾಯುತ್ತಿದ್ದೇನೆ. ನನಗೆ ಜೀವನದಲ್ಲಿ ಬೇರೇನೂ ಬೇಡ. ಅವರು ಬಂದೇ ಬರ್ತಾರೆ ಎನ್ನುವ ಭರವಸೆ ನನಗೆ ಇನ್ನೂ ಇದೆ. ಅದೇ ನಿರೀಕ್ಷೆಯಲ್ಲಿ, ಕನಸಿನಲ್ಲಿ ನಾನು ದಿನ ದೂಡುತ್ತಿದ್ದೇನೆ.’’
‘‘ಆದರೆ ನಿನ್ನ ದೊಡ್ಡಮ್ಮ, ಗಂಡ ಬದುಕಿದ್ದರೂ, ಅನಾರೋಗ್ಯಪೀಡಿತರಾಗಿ ದಿನ-ಕ್ಷಣ ಎಣಿಸುತ್ತಿದ್ದರೂ ಅವರಿಗೆ ಗಂಡ ಬೇಡ. ಗಂಡನ ಮುಖ ನೋಡುವುದೂ ಇವರಿಗೆ ಇಷ್ಟವಿಲ್ಲ. ಆ ಗಂಡ ಇವರಿಗಾಗಿ ಹಂಬಲಿ ಸುತ್ತಾ ಇವರ ಹೆಸರನ್ನು ಕೂಗಿ ಕೂಗಿ ಕನವರಿಸುತ್ತಿದ್ದರೂ ಇವರು ಹೋಗಿ ನೋಡುವುದಿಲ್ಲ- ಇವರ ಮನಸ್ಸು ಕರಗುವುದಿಲ್ಲ- ಎಂತಹ ವಿಪರ್ಯಾಸ ನೋಡು’’ ಐಸು ಮತ್ತೆ ಮೌನವಾದಳು.
‘‘ನನಗೊಂದೂ ಅರ್ಥವಾಗುತ್ತಿಲ್ಲ. ಸ್ವಲ್ಪ ಬಿಡಿಸಿ ಹೇಳಿ ಮಾಮಿ, ಯಾಕೆ ಅವರಿಗೆ ಗಂಡ ಬೇಡ?’’
ಹಸನ್ ಮೌಲವಿ- ಈ ಹಿಂದೆ ಇವರ ಬಗ್ಗೆ ನಾನೊಮ್ಮೆ ನಿನಗೆ ಹೇಳಿದ್ದೆ. ಬಹಳ ದೊಡ್ಡ ವಿದ್ವಾಂಸರು. ಬಹಳ ದೊಡ್ಡ ಪಂಡಿತರು. ಅವರಿಗೆ ತಿಳಿಯದ ಧರ್ಮ ಸೂಕ್ಷ್ಮಗಳಿಲ್ಲ. ಅವರಿಗೆ ಬಾರದ ಭಾಷೆಗಳಿಲ್ಲ. ಅವರು ಅಧ್ಯಯನ ಮಾಡದ ಧರ್ಮಗ್ರಂಥಗಳಿಲ್ಲ. ವರ್ಷದ 365 ದಿನವೂ ಧರ್ಮಕ್ಕಾಗಿ, ಧರ್ಮ ಪ್ರಚಾರಕ್ಕಾಗಿ, ಧರ್ಮ ಸಂಸ್ಥಾಪನೆಗಾಗಿ ಕಾಲಿಗೆ ಚಕ್ರ ಕಟ್ಟಿ ಓಡಾ ಡುತ್ತಿದ್ದವರು. ಇವರನ್ನು ಎಲ್ಲರೂ ಕರೆಯುವುದು ‘ಬೆಲಿಯೊ ಮೊಯ್ಲಿರ್’ ಎಂದರೆ ‘ದೊಡ್ಡ ಗುರುಗಳು’ ಎಂದು.
ಒಮ್ಮೆ ಅಜ್ಜ ಪಕ್ಕದ ಊರಿಗೆ ಇವರ ಮತಪ್ರಸಂಗ ಕೇಳಲು ಹೋಗಿದ್ದರಂತೆ. ಸುಮಾರು 24-25ರ ಚಿಕ್ಕ ಪ್ರಾಯ. ಅಬ್ಬಾ... ಇಷ್ಟೊಂದು ಚಿಕ್ಕ ಪ್ರಾಯದಲ್ಲಿ ಎಷ್ಟೊಂದು ಪಾಂಡಿತ್ಯ. ವೀಣೆ ನುಡಿಸಿದಂತೆ ಅವರು ಕಂಚಿನ ಕಂಠದಿಂದ ಹೊರಹೊಮ್ಮುವ ನಿರರ್ಗಳ ಮಾತುಗಳು ಕೇಳುಗರ ಕಿವಿಗಳಿಗಲ್ಲ ನೇರವಾಗಿ ಬಾಣದಂತೆ ಹೃದಯಕ್ಕೇ ಅಪ್ಪಳಿಸುತ್ತಿತ್ತು. ಅಜ್ಜ ಅವರ ಪಾಂಡಿತ್ಯಕ್ಕೆ, ವ್ಯಕ್ತಿತ್ವಕ್ಕೆ ಸಂಪೂರ್ಣ ಸೋತು ಶರಣಾಗಿ ಬಿಟ್ಟಿದ್ದರಂತೆ. ಆಮೇಲೆ ಅವರನ್ನು ನಮ್ಮ ಊರಿನ ಈ ಮಸೀದಿಗೆ ಅಜ್ಜನೇ ಮೂರು ದಿನಗಳ ಮತಪ್ರಸಂಗಕ್ಕೆ ಕರೆಸಿದ್ದರಂತೆ. ಆ ಮೂರು ದಿನವೂ ಅವರಿಗೆ ಈ ಮನೆಯಲ್ಲಿಯೇ ಊಟ-ತಿಂಡಿ ವ್ಯವಸ್ಥೆಯನ್ನು ಅಜ್ಜ ಮಾಡಿದ್ದರಂತೆ.
ಅಜ್ಜಿ ಯಾವಾಗಲೂ ನೆನಪಿಸುತ್ತಾ ಇರುತ್ತಾರೆ. ಪ್ರಥಮ ಬಾರಿಗೆ ಈ ಮನೆಗೆ ಊಟಕ್ಕೆ ಬಂದಾಗ ಅಜ್ಜಿ ಅವರನ್ನು ನೋಡಿ ದ್ದಂತೆ. ದಪ್ಪವೂ ಅಲ್ಲ, ತೆಳುವೂ ಅಲ್ಲ, ಎತ್ತರದ ದೇಹ. ತುಂಬು ತೋಳಿನ ಬಿಳಿ ಅಂಗಿ, ಬಿಳಿ ವೇಸ್ಟಿ ಲುಂಗಿ. ತಲೆಗೆ ಬಿಳಿ ಮುಂಡಾಸು. ಭುಜದ ಮೇಲೆ ಬಿಡಿಸಿ ಹರಡಿದ ಬಿಳಿ ಶಾಲು. ಮುಖ ತುಂಬಾ ಒಪ್ಪ ಓರಣವಾಗಿ ಕತ್ತರಿಸಿದ ತೆಳುಗಡ್ಡ. ಸುರ್ಮ ಹಚ್ಚಿದ ಬೊಗಸೆ ಕಣ್ಣುಗಳು. ಮುಖದ ತುಂಬಾ ಮಂದಹಾಸ. ಒಂದೊಂದು ಮಾತು ತುಟಿಯಿಂದ ಹೊರಬರುವಾಗಲೂ ಮುತ್ತು ಉದುರಿದಂತೆ. ನೋಡಿದರೆ ಮತ್ತೊಮ್ಮೆ ನೋಡಬೇಕು ಎನ್ನುವ ಆಕರ್ಷಣೆ.

ಆ ಮೂರು ದಿನವೂ ಅಜ್ಜಿ ಯಾವುದೇ ಲೋಪವಾಗದಂತೆ, ಅವರಿಗೆ ತೃಪ್ತಿಯಾಗುವಂತಹ ಅಡುಗೆ ಮಾಡಿ ಬಡಿಸಿದ್ದರಂತೆ. ಪ್ರತಿ ಹೊತ್ತು ಅವರು ಊಟ ಮಾಡುವಾಗ ನಿನ್ನಜ್ಜ ಅವರ ಎದುರು ಕುಳಿತು ಅವರ ಮುಖವನ್ನೇ ನೋಡುತ್ತಿದ್ದರಂತೆ. ‘‘ಇಂತಹ ಊಟ ನನ್ನ ಜನ್ಮದಲ್ಲಿ ತಿಂದಿಲ್ಲ’’ ಎಂದು ಮೌಲವಿ ಪ್ರತಿ ಹೊತ್ತು ಊಟ ಮಾಡುವಾಗ, ತಿಂಡಿ ತಿನ್ನುವಾಗ ಅಜ್ಜಿಗೆ ಕೇಳುವಂತೆ ಹೊಗಳುತ್ತಿದ್ದರಂತೆ. ಪ್ರತಿ ರಾತ್ರಿಯೂ ಈ ಮನೆಯಲ್ಲಿ ಯಾಸೀನ್ ಓದಿ ದುಆ ಮಾಡುತ್ತಿದ್ದರಂತೆ. ಅಜ್ಜಿ ಈಗಲೂ ಹೇಳುತ್ತಾ ಇರುತ್ತಾರೆ ಈ ಮೂರು ದಿನಗಳು ನನ್ನ ಬದುಕಿನಲ್ಲಿ ಮರೆಯಲಾಗದ ದಿನಗಳು ಎಂದು.

ಹೀಗೆ ಮೂರು ದಿನಗಳಲ್ಲಿ ಅಜ್ಜ ಮತ್ತು ಮೌಲವಿ ಗೆಳೆಯರಾಗಿ ಬಿಟ್ಟಿದ್ದರಂತೆ. ಎಂತಹ ಗೆಳೆತನ ಎಂದರೆ ಒಬ್ಬರನ್ನೊಬ್ಬರು ಬಿಟ್ಟಿರಲಾಗದಂತಹ ಗೆಳೆತನ. ಅಜ್ಜ ಈ ಮೌಲವಿಯನ್ನು ಗುತ್ತಿನ ಮನೆಗೂ ಕರೆದುಕೊಂಡು ಹೋಗಿ ತ್ಯಾಂಪಣ್ಣ ಶೆಟ್ಟಿಯನ್ನೂ ಪರಿಚಯ ಮಾಡಿಸಿದ್ದರಂತೆ. ಹೀಗೆ ಸುಮಾರು ಆರು ತಿಂಗಳು ಕಳೆದಿತ್ತು. ಆನಂತರ ಮೌಲವಿ ಪಕ್ಕದೂರಿಗೆ ಮತಪ್ರಸಂಗಕ್ಕೆ, ಬೇರೇನಾದರೂ ಕೆಲಸದ ಮೇಲೆ ಬಂದರೆ ಉಳಿದು ಕೊಳ್ಳಲು ಈ ಮನೆಗೆ ಬರುತ್ತಿದ್ದರಂತೆ. ಹೀಗೆ ಬಂದಾಗ ರಾತ್ರಿ ಬೆಳಗಾಗುವ ತನಕವೂ ಇಬ್ಬರೂ ಮಾತನಾ ಡುತ್ತಿದ್ದುದನ್ನು, ಧರ್ಮದ ಬಗ್ಗೆ ಚರ್ಚಿಸು ತ್ತಿದ್ದುದನ್ನು ಅಜ್ಜಿ ಈಗಲೂ ನೆನಪಿಸಿಕೊಳ್ಳುತ್ತಾರೆ. ಹೀಗೆ ಒಂದು ದಿನ ಬಂದ ಮೌಲವಿಯಲ್ಲಿ ಅಜ್ಜ ಅವರ ಮನೆ, ಊರು, ತಂದೆ-ತಾಯಿ, ಸ್ಥಿತಿ-ಗತಿ ಎಲ್ಲ ವಿಚಾರಿಸಿದರಂತೆ. ವಿಚಾರಿಸಿದ್ದು ಹೀಗೇ ಮಾತಿಗಾಗಿಯಾದರೂ ಆ ರಾತ್ರಿ ಅವರಿಗೆ ನಿದ್ದೆ ಬರಲಿಲ್ಲವಂತೆ. ಮೌಲವಿಯ ಪಾಂಡಿತ್ಯ, ಮಾತು, ಗುಣ, ನಡತೆ, ರೂಪ ಎಲ್ಲವೂ ಅಜ್ಜನ ಹೃದಯದಲ್ಲಿ ಅಚ್ಚೊತ್ತಿ ಬಿಟ್ಟಿತ್ತಂತೆ. ಒಂದು ದಿನ ರಾತ್ರಿ ಅಜ್ಜ ಅಜ್ಜಿಯೊಡನೆ ಕೇಳಿದರಂತೆ
‘‘‘ಫಾತಿಮಾ, ಈ ಮೌಲವಿಯನ್ನು ನಮ್ಮ ಮಗಳಿಗೆ ಮಾತನಾಡಿದರೆ ಹೇಗೆ? ನಿನಗೆ ಒಪ್ಪಿಗೆಯಾ?’’ ಎಂದು.
ಅಜ್ಜಿ ಹೇಳ್ತಾರೆ, ‘‘ನಿನ್ನಜ್ಜನ ಈ ಪ್ರಶ್ನೆ ಕೇಳಿ ನಾನೊಮ್ಮೆ ನಡುಗಿ ಹೋಗಿದ್ದೆ’’ ಎಂದು.
ಎಂತಹ ಪ್ರಶ್ನೆ. ಇದಕ್ಕೆ ಉತ್ತರಿಸುವುದು ಹೇಗೆ? ಅಜ್ಜಿ ಮೂಕಿಯಾಗಿ ಬಿಟ್ಟಿದ್ದರಂತೆ.
‘‘ಯಾಕೆ ಮಾತಾಡ್ತಾ ಇಲ್ಲ ಫಾತಿಮಾ... ನಿನಗೆ ಇಷ್ಟವಿಲ್ಲವಾ?’’ ಹೆಂಡತಿಯ ಮೌನ ಕಂಡು ಅಜ್ಜ ಕೇಳಿದರಂತೆ.

‘‘ಎಂತಹ ಮಾತು ಆಡ್ತಾ ಇದ್ದೀರಿ. ಅವರೆಲ್ಲಿ- ನಾವೆಲ್ಲಿ. ಅಷ್ಟು ದೊಡ್ಡ ಪಂಡಿತರು ನಮ್ಮ ಈ 30 ಜೂದು ಓದಿದ ಹುಡುಗಿಯನ್ನು ಮದುವೆಯಾಗಲಿಕ್ಕೆ ಒಪ್ಪುತ್ತಾರಾ? ಸುಮ್ಮನೆ ನೀವು ಇಂತಹ ಪ್ರಶ್ನೆಯನ್ನೆಲ್ಲ ಕೇಳಿ ನನ್ನಲ್ಲಿ ಭಯ ಹುಟ್ಟಿಸಬೇಡಿ’’ ಎಂದು ಅಜ್ಜಿ ಹೇಳಿದರಂತೆ.
‘‘ನಮ್ಮ ಮಗಳು 30 ಜೂದು ಓದಿದರೇನಂತೆ ಅವಳು ಬುದ್ಧಿವಂತೆ, ಗುಣವಂತೆ, ರೂಪವಂತೆ. ಆ ಮೌಲವಿ ಇವಳಿಗೆ ಗಂಡನಾಗಿ ಬಂದರೆ ಇವಳು ಇನ್ನೂ ಕಲಿಯಬಹುದು.’’
ಅಜ್ಜಿ ಚಳಿಯಾದಂತಾಗಿ ಸೀರೆಯ ಸೆರಗನ್ನು ಮೈ ತುಂಬಾ ಹೊದ್ದುಕೊಂಡು ಮುದುಡಿ ಕುಳಿತಿದ್ದರಂತೆ.
‘‘ಏನು ನಿನಗೆ ಇಷ್ಟ ಇಲ್ಲವಾ?’’ ಅಜ್ಜಿಯ ಮೌನ ಕಂಡು ಅಜ್ಜ ಮತ್ತೆ ಕೇಳಿದ್ದರಂತೆ.
‘‘ಇಷ್ಟ, ಅವರು ಒಪ್ಪಿದರೆ ಇದಕ್ಕಿಂತ ದೊಡ್ಡ ಭಾಗ್ಯ ನಮಗೆ ಬೇರೇನಿದೆ ಹೇಳಿ’’ ಎಂದಿದ್ದರಂತೆ ಅಜ್ಜಿ.
ಇದಾಗಿ ಆರು ತಿಂಗಳಲ್ಲಿ ಮೌಲವಿಯ ಜೊತೆ ನಿನ್ನ ದೊಡ್ಡಮ್ಮನ ಮದುವೆ ಭರ್ಜರಿಯಾಗಿ ನಡೆದಿದ್ದಂತೆ. ಮದುವೆ ಎಂದರೆ ಎಂತದು- ಇಡೀ ಊರಿಗೆ ಊರೇ ಮದುವೆಗೆ ನೆರೆದಿತ್ತು. ಮನೆ ಸುತ್ತಲೂ ಚಪ್ಪರ ಹಾಕಿತ್ತಂತೆ. ಆಗ ಈಗಿನ ಹಾಗೆ ಹಾಲ್‌ನಲ್ಲಿ ನಡೆಯುವ ಮೂರು ಗಂಟೆಯ ಮದುವೆಯಲ್ಲ. 10-15 ದಿನಗಳೂ ಮದುವೆಯಂತೆ. ಮನೆ ತುಂಬಾ ನೆಂಟರು. ದಿನಕ್ಕೊಂದು ತರದ ಔತಣ. ಹಾಡು, ದಪ್ಪು, ತಾಲೀಮು, ಚೀನಿಕೋಲು, ಕೋಲಾಟ, ಸಿಡಿಮದ್ದು... ಹೀಗೆ ಇಡೀ ಊರಿಗೇ ಸಂಭ್ರಮ. ಅಂತಹ ಮದುವೆ, ಮೆಹಂದಿ ಕಾರ್ಯಕ್ರಮ ಆ ತನಕ ಈ ಊರಿನಲ್ಲಿ ನಡೆದಿಲ್ಲವಂತೆ. ಮದುವೆಯ ಆ 15 ದಿನವೂ ತ್ಯಾಂಪಣ್ಣ ಈ ಮನೆಯಲ್ಲಿಯೇ ಇದ್ದರಂತೆ. ಅವರ ಊಟ, ತಿಂಡಿ, ನಿದ್ದೆ ಎಲ್ಲ ಇಲ್ಲಿಯೇ ಅಂತೆ. ಇಡೀ ಮದುವೆಯ ಜವಾಬ್ದಾರಿ ಅವರದ್ದೇ ಅಂತೆ. ಅಜ್ಜಿ ಹೇಳ್ತಾರೆ- ಅವರಲ್ಲದಿದ್ದರೆ ಆ ಮದುವೆ ಅಷ್ಟೊಂದು ಗಡದ್ದಾಗಿ ನಡೆಯಲು ಸಾಧ್ಯವೇ ಇರಲಿಲ್ಲ ಎಂದು.
(ಗುರುವಾರದ ಸಂಚಿಕೆಗೆ)

Writer - ಮುಹಮ್ಮದ್ ಕುಳಾಯಿ

contributor

Editor - ಮುಹಮ್ಮದ್ ಕುಳಾಯಿ

contributor

Similar News

ನಾಸ್ತಿಕ ಮದ