ಪರಿಶಿಷ್ಟ ಜಾತಿ ಮೊದಲು 2ನೆ ಸ್ಥಾನದಲ್ಲಿ ಮುಸ್ಲಿಮರು
ಬೆಂಗಳೂರು, ಆ. 23: ರಾಜ್ಯದ ಒಟ್ಟು 5.98 ಕೋಟಿ ಜನಸಂಖ್ಯೆಯ ಪೈಕಿ ಪರಿಶಿಷ್ಟ ಜಾತಿಯ (ಎಸ್ಸಿ) ಸಂಖ್ಯೆ 1.06 ಕೋಟಿಯಾಗಿದ್ದು, ರಾಜ್ಯ ದಲ್ಲೆ ಮೊದಲ ಸ್ಥಾನದಲ್ಲಿದೆ ಎಂಬ ಖಚಿತ ಅಂಶ ರಾಜ್ಯ ಸರಕಾರದ ‘ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ’ಯಿಂದ ಬಹಿರಂಗಗೊಂಡಿದೆ.
ರಾಜ್ಯದಲ್ಲಿ ಮುಸ್ಲಿಮರು 70ಲಕ್ಷ ಜನಸಂಖ್ಯೆ ಯೊಂದಿಗೆ ಎರಡನೆ ಸ್ಥಾನದಲ್ಲಿದ್ದಾರೆ. ಮೂರನೆ ಸ್ಥಾನದಲ್ಲಿ ವೀರಶೈವ-60ಲಕ್ಷ , ನಾಲ್ಕನೆ ಸ್ಥಾನದಲ್ಲಿ ಒಕ್ಕಲಿಗ-50ಲಕ್ಷ, ಐದನೆ ಸ್ಥಾನದಲ್ಲಿ ಕುರುಬ-40 ಲಕ್ಷ ಮತ್ತು ಪರಿಶಿಷ್ಟ ಪಂಗಡ(ಎಸ್ಟಿ)-40ಲಕ್ಷ ಜನಸಂಖ್ಯೆ ಇದೆ. ಬ್ರಾಹ್ಮಣ-17 ಲಕ್ಷ, ಕ್ರೈಸ್ತ-10 ಲಕ್ಷ ಜನಸಂಖ್ಯೆ ಇರುವುದು ಬೆಳಕಿಗೆ ಬಂದಿದೆ.
ಸಮೀಕ್ಷೆಯನ್ವಯ ಪರಿಶಿಷ್ಟ ಜಾತಿ-ಶೇ.17.72 ರಷ್ಟಿದ್ದು, ಮುಸ್ಲಿಮ್-ಶೇ.13.37, ವೀರಶೈವ- ಶೇ.10.03, ಒಕ್ಕಲಿಗ-ಶೇ.8.36, ಪರಿಶಿಷ್ಟ ಪಂಗಡ-ಶೇ.6.69 ಹಾಗೂ ಬ್ರಾಹ್ಮಣ-ಶೇ.2.84 ರಷ್ಟಿದೆ. ಒಟ್ಟಾರೆ ಜನಸಂಖ್ಯೆ ಪೈಕಿ ಶೇ.50ರಷ್ಟು ಅಲ್ಪಸಂಖ್ಯಾತ, ಹಿಂದುಳಿದ ಹಾಗೂ ದಲಿತ (ಅಹಿಂದ) ವರ್ಗದ ಪ್ರಾಬಲ್ಯವಿದೆ ಎಂಬ ಅಂಶ ಬಯಲಿಗೆ ಬಂದಿದೆ.
ವೀರಶೈವ, ಒಕ್ಕಲಿಗ, ಬ್ರಾಹ್ಮಣ ಸೇರಿದಂತೆ ಪ್ರಬಲಜಾತಿಗಳು ರಾಜ್ಯದಲ್ಲಿ ಶೇ.30.26ರಷ್ಟಿವೆ. ಹಿಂದುಳಿದ ವರ್ಗಗಳ ಒಟ್ಟು ಸಂಖ್ಯೆ 1.10 ಕೋಟಿ ಯಾಗಿದ್ದು, ಶೇ.10.03ರಷ್ಟಿದೆ. ರಾಜ್ಯ ಸರಕಾರ 2015ರ ಎಪ್ರಿಲ್ 11ರಿಂದ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆ ಕೈಗೊಂಡಿತ್ತು.
ರಾಜ್ಯ ಸರಕಾರ ಕೈಗೊಂಡಿದ್ದ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆ ವರದಿ ಸರಕಾರ ದಿಂದ ಇನ್ನೂ ಅಧಿಕೃತವಾಗಿ ಬಿಡುಗಡೆಯಾಗಿಲ್ಲ. ಆದರೆ, ಕೆಲ ಸುದ್ದಿ ವಾಹಿನಿಗಳಿಂದ ಸಮೀಕ್ಷೆ ವರದಿ ಯಲ್ಲಿ ಕೆಲ ಅಂಶಗಳು ಬಯಲಿಗೆ ಬಂದಿರುವುದು ಗೊತ್ತಾಗಿದೆ.