ಕಾದಂಬರಿ

Update: 2016-08-27 18:06 GMT

--ದ್ರೋಹಕ್ಕೆ ಚೇತರಿಸದ ಮನೆ-ಮಗಳು --
ಅಜ್ಜಿ, ಆಕಾಶವೇ ಕಳಚಿ ತಲೆ ಮೇಲೆ ಬಿದ್ದವರಂತೆ ಕಂಗಾಲಾಗಿ ಬಿಟ್ಟಿದ್ದರಂತೆ.
‘‘ಜಮೀಲಾ ಹೇಳಿದ್ದು ನಿಜವಾ...?’’ ಅಳಿಯನ ಮುಂದೆ ಕುಳಿತು ಅಜ್ಜ ಶಾಂತವಾಗಿ ಕೇಳಿದರು.
ಮೌಲವಿ ಮಾತನಾಡಲಿಲ್ಲ. ಅವರ ಹಣೆ ಬೆವರತೊಡಗಿತ್ತು.
‘‘ನಾನು ಮಾತನಾಡುತ್ತಿರುವುದು ಕೇಳಿಸ್ತಾ ಇದೆಯಾ ನಿನಗೆ... ಜಮೀಲಾ ಹೇಳಿದ್ದು ನಿಜವಾ...’’ ಅಜ್ಜನ ಧ್ವನಿ ಈಗ ಏರತೊಡಗಿತ್ತು.
‘‘................’’
‘‘ನೀನು ಈಗ ಮಾತನಾಡಬೇಕು... ಹೌದೂಂತಾದ್ರೆ ಹೌದೂಂತ ಬೊಗಳು...’’
ಅಜ್ಜ ಕೋಪದಿಂದ ನಡುಗುತ್ತಿರುವುದನ್ನು ಕಂಡು ಅಜ್ಜಿ ಭಯದಿಂದ ಓಡಿ ಬಂದು ಅಜ್ಜನ ಕೈ ಹಿಡಿದುಕೊಂಡರು... ಅಜ್ಜ ಇಷ್ಟೊಂದು ಕೋಪ ಗೊಂಡಿರುವುದು ಅವರು ಎಂದೂ ಕಂಡಿರಲಿಲ್ಲವಂತೆ.
ಮೌಲವಿಗೆ ಈಗ ಮಾತನಾಡಲೇಬೇಕಾಗಿತ್ತು. ಮಾತನಾಡದಿದ್ದರೆ ಅಲ್ಲಿ ಏನೂ ಸಂಭವಿಸುವ ಸಾಧ್ಯತೆ ಇತ್ತು. ಅಜ್ಜನ ಆರ್ಭಟಕ್ಕೆ ನಡುಗಿದ ಮೌಲವಿಯ ಬಾಯಿಯಿಂದ ಆ ಶಬ್ದ ಹೊರಬಿತ್ತು.
‘‘ಹೌದು...’’
ಅಜ್ಜ-ಅಜ್ಜಿಗೆ ನಿಂತ ನೆಲವೇ ಕಂಪಿಸಿದಂತಾಯಿತಂತೆ.
ಅಷ್ಟರಲ್ಲಿ ಬಾಗಿಲ ಬಳಿ ಸದ್ದಾದಂತಾಗಿ ತಿರುಗಿ ನೋಡಿದರೆ ಅಲ್ಲಿ ದೊಡ್ಡಮ್ಮ ನಿಂತಿದ್ದರಂತೆ. ಈಗ ಅವರು ಅಳುತ್ತಿರಲಿಲ್ಲ. ಜೋರಾಗಿ ಮಳೆ, ಬಿರುಗಾಳಿ, ಸಿಡಿಲು ಬಂದು, ಮಳೆ ನಿಂತ ಮೇಲೆ ಇರುವಂತೆ ಅವರ ಮುಖ ಶಾಂತವಾಗಿತ್ತು. ಅಲ್ಲಿ ಯಾವ ಭಾವನೆಗಳೂ ಗೋಚರಿಸುತ್ತಿರಲಿಲ್ಲ.
ಅವರು ಅಜ್ಜನ ಬಳಿಗೆ ಬಂದವರೇ, ‘‘ಅಪ್ಪಾ... ಇಂದಿನಿಂದ, ಈ ಕ್ಷಣದಿಂದ ಇವರು ನನ್ನ ಗಂಡನೂ ಅಲ್ಲ- ನಾನೂ ಇವರ ಹೆಂಡತಿಯೂ ಅಲ್ಲ- ನನಗೂ ಇವರಿಗೂ ಇನ್ನು ಯಾವ ಸಂಬಂಧವೂ ಇಲ್ಲ- ನನಗೆ ಇವರ ಮುಖ ನೋಡಲೂ ಇಷ್ಟವಿಲ್ಲ- ಈಗಲೇ ಇವರನ್ನು ಕಳಿಸಿಬಿಡಿ...’’ ಎಂದರಂತೆ.
‘‘ಏನು ಹೇಳ್ತಿದ್ದಿಯಮ್ಮಾ ನೀನು, ಹಾಗೆಲ್ಲ ಮಾತನಾಡಬಾರದು’’
‘‘ಅಪ್ಪಾ, ನೀವು ಈ ಕ್ಷಣ ಇಲ್ಲಿಂದ ಇವರನ್ನು ಕಳುಹಿಸಬೇಕು. ಇಲ್ಲದಿದ್ದರೆ ನಾನೇ ಇಲ್ಲಿಂದ ಹೊರಟು ಹೋಗುತ್ತೇನೆ. ನಿಮಗೆ ನಾನು ಬೇಕಾ- ಇವರು ಬೇಕಾ ಈಗಲೇ ತೀರ್ಮಾನಿಸಬೇಕು’’ ಎಂದು ತೀರ್ಮಾನಕ್ಕೆ ಬಂದವರಂತೆ ಹೇಳಿದರಂತೆ ದೊಡ್ಡಮ್ಮ.
‘‘ಅವಸರ ಮಾಡಬೇಡಮ್ಮಾ, ಕೋಪದ ಬಾಯಿಗೆ ಬುದ್ಧಿ ಕೊಡಬೇಡ. ಮನಸ್ಸು ಸ್ವಲ್ಪಶಾಂತವಾಗಲಿ... ಈಗ ಏನೂ ಹೇಳಬೇಡ. ನಾಳೆ ಮಾತನಾಡುವ. ಸ್ವಲ್ಪ ಸಮಾಧಾನ ಮಾಡಿಕೋ...’’
‘‘ಯಾಕಪ್ಪಾ, ನಿಮಗೆ ಇನ್ನೂ ಈ ಮನುಷ್ಯನ ಮೇಲೆ ವಿಶ್ವಾಸನಾ. ಊರಿಗೆ ಬುದ್ಧಿ ಹೇಳುವ ಇವರ ಬಗ್ಗೆ ಗೌರವನಾ. ಏನು ಕಡಿಮೆ ಮಾಡಿದ್ದೆ ನಾನು ಇವರಿಗೆ ಹೇಳಿ. ನಾನೇನು ಬಂಜೆನಾ. ರೋಗಿಯಾ. ಇಲ್ಲ ವೇಶ್ಯೆಯಾ. ನನಗೆ ಈ ರೀತಿಯ ದ್ರೋಹ ಮಾಡಲು ಇದರಲ್ಲಿ ಯಾವುದಾದರೂ ಒಂದು ನಾನಾಗಿರಬೇಕಲ್ಲ. ನಾನು ಇವರಿಗೆ ಮೂರು ಮಕ್ಕಳನ್ನು ಹೆಡೆದು ಕೊಟ್ಟೆನಲ್ಲ, ಅದನ್ನಾದರೂ ಇವರು ನೆನಪಿಸಿದ್ದರೆ, ಬೇಡಪ್ಪಾ, ಬೇಡ. ಇನ್ನು ನನಗೆ ಈ ಜೀವನದಲ್ಲಿ ಯಾವುದೂ ಬೇಡ. ಇವರು ಮಾಡಿದ ಈ ಒಂದು ದ್ರೋಹ ಸಾಕು. ನನ್ನ ಹೊಟ್ಟೆ ತುಂಬಿ ಹೋಯಿತು. ಜೀವನ ಪೂರ್ತಿ ಇದನ್ನೇ ನೆನೆದುಕೊಳ್ಳುತ್ತಾ ಒಂಟಿಯಾಗಿ ಬದುಕಬಲ್ಲೆ. ನನ್ನ ಎಲ್ಲ ಕನಸುಗಳೂ ಇವತ್ತೂ ನುಚ್ಚುನೂರಾಗಿ ಹೋಯಿತು’’
ಅದೆಷ್ಟೋ ಪಂಚಾಯಿತಿ ಮಾಡಿದ್ದ ಅಜ್ಜನಿಗೆ ಮಗಳ ಮಾತಿಗೆ ಎದುರು ಹೇಳಲು, ಬುದ್ಧಿ ಹೇಳಲು ಶಬ್ದಗಳೇ ಹೊಳೆಯಲಿಲ್ಲವಂತೆ. ಒಂದು ತೊಟ್ಟು ಕಣ್ಣೀರು ಹಾಕದೆ ಸಮಾಧಾನದಿಂದ, ಶಾಂತವಾಗಿ, ದೃಢವಾಗಿ ಮಾತನಾಡುತ್ತಿರುವ ಮಗಳನ್ನು ಕಂಡು ಅಜ್ಜನಿಗೆ ಭಯವಾಯಿತಂತೆ.
‘‘ಅಪ್ಪಾ, ನೀವು ಹೇಳ್ತಿರಾ ಅವರನ್ನು ಹೋಗಲು, ಅಲ್ಲ ನಾನು ಹೇಳಬೇಕಾ?’’
‘‘ಹಾಗೆಲ್ಲ ಮಾತನಾಡಬಾರದಮ್ಮಾ’’ ಅಜ್ಜಿ ಮಗಳನ್ನು ಬಾಯಿ ಮುಚ್ಚಿಸಲು ಯತ್ನಿಸಿದರಂತೆ.
‘‘ನಾನು ಹೊರಡೀಂತ ಹೇಳುವುದಕ್ಕಿಂತ ಮುಂಚೆ ಅವರನ್ನು ಹೋಗಲು ಹೇಳಮ್ಮಾ. ಇನ್ನೂ ಯಾವತ್ತೂ ನನಗೆ ಮುಖ ತೋರಿಸಬಾರದೂಂತ ಹೇಳಿ’’

ಅಷ್ಟರತನಕ ತಲೆ ತಗ್ಗಿಸಿ ಮೌನವಾಗಿ ಕುಳಿತಿದ್ದ ಮೌಲವಿ ಒಮ್ಮೆಲೆ ಎದ್ದು ನಿಂತರು. ನಿಧಾನವಾಗಿ ಅಜ್ಜನ ಎದುರು ಬಂದು ಅವರ ಕೈಯನ್ನು ತನ್ನ ಕೈಗೆ ತೆಗೆದುಕೊಂಡವರು- ‘‘ಮಾವಾ, ನನ್ನನ್ನು ಕ್ಷಮಿಸಿ’’ ಎಂದವರೇ ಅಂಗಳ ಇಳಿದು ಹಿಂದೆ ತಿರುಗಿಯೂ ನೋಡದೆ ಹೊರಟೇ ಬಿಟ್ಟರಂತೆ. ಭಾರವಾದ ಹೆಜ್ಜೆಯನ್ನು ಎತ್ತಿ ಇಡುತ್ತಾ ನಡೆಯು ತ್ತಿರುವ ಅಳಿಯನನ್ನು ಕಂಡು ಅಜ್ಜಿಗೆ ಹೃದಯವೇ ಬಾಯಿಗೆ ಬಂದಂತಾಗಿತ್ತು. ಅವರು ಮಗಳನ್ನು ಅಪ್ಪಿ ಹಿಡಿದು ಅತ್ತೇ ಬಿಟ್ಟಿದ್ದರಂತೆ.

‘‘ಹೋಯಿತು... ಎಲ್ಲ ಮುಗಿದು ಹೋಯಿತು... ನನ್ನ ಬದುಕು ಈವತ್ತಿಗೆ ಮುಗಿದು ಹೋಯಿತು... ನಾನಿನ್ನು ಬದುಕಿದ್ದೂ ಸತ್ತಂತೆ... ಎಷ್ಟೊಂದು ಪ್ರೀತಿಸಿದ್ದೆ ನಾನು... ಈ ಮನುಷ್ಯನ ಬಗ್ಗೆ ಎಷ್ಟೊಂದು ಹೆಮ್ಮೆಪಟ್ಟುಕೊಂಡಿದ್ದೆ... ಗಂಡ... ಗಂಡ... ನನ್ನ ಈ ಜೀವನದಲ್ಲಿ ನನಗೆ ಗಂಡನೇ ಸರ್ವಸ್ವ ಎಂದು ಏನೆಲ್ಲ ಕನಸು ಕಟ್ಟಿಕೊಂಡಿದ್ದೆ... ಎಲ್ಲ ಗೋಪುರಗಳೂ ಕುಸಿದುಬಿದ್ದವು... ಎಲ್ಲ ಬಾಗಿಲುಗಳು ಮುಚ್ಚಿ ಹೋದವು... ಭ್ರಮೆ... ಎಲ್ಲ ಭ್ರಮೆ... ಪ್ರೀತಿಯ ಬೆಲೆ ಗೊತ್ತಿಲ್ಲದವರ ಜೊತೆ ಇಷ್ಟು ದಿನ ಸಂಸಾರ ಮಾಡಿದೆನಲ್ಲ... ಹುಚ್ಚು ನನಗೆ...’’ ದೊಡ್ಡಮ್ಮ ಅಜ್ಜಿಯ ತೋಳಿನಿಂದ ಬಿಡಿಸಿಕೊಂಡು ತನ್ನಷ್ಟಕ್ಕೆ ಹೇಳಿಕೊಳ್ಳುತ್ತಾ ಕೋಣೆ ಸೇರಿ ಬಾಗಿಲು ಮುಚ್ಚಿಕೊಂಡರಂತೆ.
ಅಂದಿನಿಂದ ನಿನ್ನ ದೊಡ್ಡಮ್ಮ ಮಾತನಾಡುವುದನ್ನು ಮರೆತು ಬಿಟ್ಟರಂತೆ. ಊಟ, ತಿಂಡಿ, ನಿದ್ದೆ, ಸ್ನಾನ ಯಾವುದರ ಪರಿವೆಯೂ ಇಲ್ಲದೆ ಕಲ್ಲಿನಂತೆ ಕುಳಿತು ಬಿಟ್ಟರಂತೆ. ಅಜ್ಜ-ಅಜ್ಜಿ ಎಷ್ಟು ಸಾಂತ್ವನ ಹೇಳಿದರೂ ದೊಡ್ಡಮ್ಮನ ಬಾಯಿಯಿಂದ ಒಂದು ಶಬ್ದವೂ ಹೊರಡಲಿಲ್ಲವಂತೆ. ಮಗಳು ಎಲ್ಲಿ ಆತ್ಮಹತ್ಯೆ ಮಾಡಿಕೊಂಡು ಬಿಡುತ್ತಾಳೋ, ಎಲ್ಲಿ ಅವಳಿಗೆ ಹುಚ್ಚು ಹಿಡಿದುಬಿಡುತ್ತದೋ ಎಂಬ ಭಯದಿಂದ ಅಜ್ಜಿ ಅವರ ಹತ್ತಿರ ಮಲಗಿಕೊಳ್ಳುತ್ತಿದ್ದರಂತೆ. ಊಟ, ತಿಂಡಿ, ಬಾಯಿಗೆ ಉಣಿಸುತ್ತಿದ್ದರಂತೆ.

ಹಸಿವು, ಬಾಯಾರಿಕೆ, ಬಟ್ಟೆ ಹೀಗೆ ಯಾವುದರ ಪರಿವೆಯೂ ಇಲ್ಲದೆ ದೊಡ್ಡಮ್ಮ ಬದುಕಿದ್ದೂ ಶವದಂತೆ ಜೀವಿಸತೊಡಗಿದರು. ಹೀಗೆ ತಿಂಗಳುಗಳು ಕಳೆಯಿತು. ಅವರು ಚೇತರಿಸಿಕೊಳ್ಳಲಿಲ್ಲ. ಸ್ವರ್ಗದಂತಿದ್ದ ಮನೆ ಮರಣದ ಮನೆಯಂತಾಗಿತ್ತು. ಅಳಿಯ ಮಾಡಿದ ದ್ರೋಹದಿಂದ ಅಜ್ಜ-ಅಜ್ಜಿಯ ಹೃದಯದ ಕವಾಟವೇ ಮುಚ್ಚಿ ಹೋಗಿತ್ತು. ಅವರಿಗೆ ಪರಸ್ಪರ ಮಾತನಾಡಲು, ದುಃಖ ಹಂಚಿಕೊಳ್ಳಲು ನಾಲಗೆಯೇ ಹೊರಳು ತ್ತಿರಲಿಲ್ಲವಂತೆ. ಮಾತನಾಡಬೇಕು, ಏನಾದರೂ ಹೇಳಬೇಕು ಎನ್ನುವಷ್ಟರಲ್ಲಿ ದುಃಖದ ಕಟ್ಟೆ ಒಡೆದು ಬಿಡುತ್ತಿತ್ತು. ಪರಸ್ಪರ ಮುಖ ನೋಡುತ್ತಾ, ಕಣ್ಣುಗಳಲ್ಲೇ ನೋವು ಹಂಚಿಕೊಳ್ಳುತ್ತಾ ಅಪ್ಪಿಹಿಡಿದು ಅತ್ತು ಬಿಡುತ್ತಿದ್ದರಂತೆ. ಅವರಿಗೆ ಅದಲ್ಲದೆ ಬೇರೇನೂ ತೋಚುತ್ತಿರಲಿಲ್ಲ.

ಎಷ್ಟೋ ಸಾರಿ ಅಜ್ಜಿ ಅಳಿಯನನ್ನು ಕರೆದುಕೊಂಡು ಬರುವ ಬಗ್ಗೆ ಅಜ್ಜನ ಜೊತೆ ಚರ್ಚಿಸಿದ್ದರು. ಮಗಳ ಸ್ವಭಾವ ತಿಳಿದಿದ್ದ ಅಜ್ಜ ಅದಕ್ಕೆ ಒಪ್ಪಲಿಲ್ಲವಂತೆ. ಇನ್ನೊಮ್ಮೆ ಈ ಮನೆ ರಣರಂಗವಾಗುವುದು ಅವರಿಗೆ ಇಷ್ಟವಿರಲಿಲ್ಲ. ಮತ್ತೆ ಕಣ್ಣೀರಿನಲ್ಲೇ ಅವರ ಚರ್ಚೆ, ಮಾತು ಕೊನೆಗೊಳ್ಳುತ್ತಿತ್ತಂತೆ.
ದೊಡ್ಡಮ್ಮನ ಮೂವರು ಹೆಣ್ಣು ಮಕ್ಕಳಿಗೂ ಅಜ್ಜನೇ ಮದುವೆ ಮಾಡಿದ್ದು. ಮಕ್ಕಳೆಲ್ಲ ಒಳ್ಳೆಯ ಸ್ಥಿತಿಯಲ್ಲಿದ್ದಾರೆ. ಈಗಲೂ ತಂದೆಯನ್ನು ನೋಡಲು ಆಗಾಗ ಹೋಗುತ್ತಿರುತ್ತಾರೆ. ಮೊದಲ ಮಗಳ ಮದುವೆಗೆ ಗಂಡು ಗೊತ್ತು ಮಾಡಿದ ಮೇಲೆ ಅಜ್ಜ ಮೌಲವಿಯ ಮನೆಗೆ ಹೋಗಿದ್ದರಂತೆ. ಅಲ್ಲಿ ಅವರು ಇರಲಿಲ್ಲವಂತೆ. ಅವರು ಹೊಸ ಹೆಂಡತಿಯ ಜೊತೆ ಬೇರೆ ಮನೆ ಮಾಡಿದ್ದಾರೆ ಎಂದು ತಿಳಿದು ಆ ಮನೆ ಹುಡುಕಿ ಹೋದರಂತೆ.
ಅಜ್ಜ ಆ ಮನೆಯ ಮುಂದೆ ನಿಂತು ಬಾಗಿಲು ತಟ್ಟಿದಾಗ ತೆರೆದುಕೊಂಡಿತು. ತಲೆ ತುಂಬಾ ಸೆರಗು ಹೊದ್ದುಕೊಂಡ ಹೆಣ್ಣೊಬ್ಬಳು ತನ್ನ ದೇಹವನ್ನು ಬಾಗಿಲೆಡೆಯಲ್ಲಿ ಅಡಗಿಸಿಕೊಳ್ಳುತ್ತಾ ‘‘ಯಾರು...?’’ ಕೇಳಿತು.
ಅಜ್ಜ ಆ ಹೆಣ್ಣನ್ನು ನೋಡಿದರು. ಇದು ಮೌಲವಿಯ ಹೊಸ ಹೆಂಡತಿ ಇರಬಹುದೇ... ಅವರು ಮಾತು ಬಾರದವರಂತೆ ಆ ಹೆಣ್ಣನ್ನು ನೋಡುತ್ತಾ ಹಾಗೆಯೇ ನಿಂತುಬಿಟ್ಟಿದ್ದರಂತೆ.
‘‘ಯಾರು ನೀವು...?’’ ಆ ಹೆಂಗಸು ಮತ್ತೆ ಕೇಳಿತು.

‘‘ಮೌಲವಿ ಇದ್ದಾರಾ...?’’ ಅಜ್ಜ ತೊದಲಿದರು. ಆ ಹೆಂಗಸು ಒಳಗೆ ಹೋಗಿ ಸ್ವಲ್ಪಹೊತ್ತಿನಲ್ಲಿಯೇ ಮೌಲವಿ ಕಾಣಿಸಿಕೊಂಡರು.
ಅರ್ಧ ತೋಳಿನ ಬಿಳಿ ಅಂಗಿ, ಬಿಳಿ ಚೌಕಳಿ ಲುಂಗಿ, ಸೊಂಟದ ಮೇಲೆ ಲುಂಗಿಗೆ ಬಿಗಿದ ದಪ್ಪದ ಹಸಿರು ಬೆಲ್ಟು, ಮುಖದ ತುಂಬಾ ಕಪ್ಪು-ಬಿಳಿ ಮಿಶ್ರಿತ ಗಡ್ಡ, ಗುಳಿಬಿದ್ದ ಕಣ್ಣುಗಳು... ಅಜ್ಜನಿಗೆ ನಂಬಲಾಗಲಿಲ್ಲ... ಏನಾಗಿಬಿಟ್ಟಿದೆ ಇವನಿಗೆ... ಯಾಕೆ ಇಷ್ಟೊಂದು ಇಳಿದು ಹೋಗಿಬಿಟ್ಟಿದ್ದಾನೆ...
‘‘ಮಾವಾ...! ಮೌಲವಿ ಒಂದು ಕ್ಷಣ ಹಾವು ತುಳಿದವರಂತೆ ಬೆಚ್ಚಿಬಿದ್ದರು. ‘‘ಬನ್ನಿ ಮಾವ... ಒಳಗೆ ಬನ್ನಿ...’’ ತಡಬಡಿಸುತ್ತಾ ಅಜ್ಜನನ್ನು ಒಳಗೆ ಕರೆದರು.
ಅಜ್ಜ ಒಳಗಡಿ ಇಟ್ಟರು. ಅವರನ್ನು ತನ್ನ ಕೋಣೆಗೆ ಕರೆದುಕೊಂಡು ಹೋದ ಮೌಲವಿ ಕುಳಿತುಕೊಳ್ಳುವಂತೆ ಹೇಳಿ ತಾನು ಅವರ ಮುಂದೆ ಗೋಡೆಯಂತೆ ನಿಂತುಬಿಟ್ಟರು.
ಮೌಲವಿ ಮಾತನಾಡಬಹುದೆಂದು ಅಜ್ಜ... ಅಜ್ಜ ಮಾತನಾಡಬಹುದೆಂದು ಮೌಲವಿ... ಹೀಗೆ ಕ್ಷಣಗಳು ಕಳೆದುಹೋದವು. ಇಬ್ಬರ ಬಾಯಿಗಳೂ ಮಾತನಾಡುವುದನ್ನು ಮರೆತುಬಿಟ್ಟಂತಿತ್ತು. ಆ ಕೋಣೆ ತುಂಬಾ ಅಸಹನೀಯ ಮೌನ ಆವರಿಸಿಬಿಟ್ಟಿತ್ತು.
‘‘ಜಮೀಲಾ ಹೇಗಿದ್ದಾಳೆ ಮಾವ...?’’ ಮೌಲವಿಯ ಬಾಯಿಯಿಂದ ಮಾತು ಹೊರಬಿತ್ತು.

ಅಜ್ಜ ತಲೆ ಎತ್ತಿ ಅಳಿಯನ ಮುಖ ನೋಡಿದರು. ಅಳಿಯನ ಹಣೆ ತುಂಬಾ ನೆರಿಗೆಗಳು. ಕಣ್ಣುಗಳಿಂದ ಹೊರ ಧುಮುಕಲು ತಯಾರಾಗಿ ನಿಂತ ನೀರು...
ಅಜ್ಜ ಮಾತನಾಡಲಿಲ್ಲ. ಅವರು ಅಳಿಯನ ಬಾಯಿಯಿಂದ ಹೊರಟ ಮೊದಲ ಮಾತಿಗೆ ಕರಗಿ ಬಿಟ್ಟಿದ್ದರು. ಮತ್ತೆ ಮೌನ...

‘‘ಜಮೀಲಾ ಚೆನ್ನಾಗಿದ್ದಾಳಾ ಮಾವ...’’ ಮೌಲವಿ ಮಾತು ಈಗ ನಡುಗುತ್ತಿತ್ತು. ಅಜ್ಜ ಅಳಿಯನ ಮುಖವನ್ನೇ ನೋಡುತ್ತಾ ಕಲ್ಲಿನಂತೆ ಕುಳಿತುಬಿಟ್ಟಿದ್ದರು.
‘‘ಜಮೀಲಾ ಚೆನ್ನಾಗಿದ್ದಾಳಾ ಮಾವಾ... ನೀವೇಕೆ ಮಾತಾಡ್ತಾ ಇಲ್ಲ... ಅವಳಿಗೆ ಏನಾಗಿದೆ ಹೇಳಿ...’’ ಮೌಲವಿಯ ದುಃಖದ ಕಟ್ಟೆ ಒಡೆದೇಬಿಟ್ಟಿತ್ತು. ಅವರು ಎರಡು ಕೈಗಳಿಂದಲೂ ಮುಖ ಮುಚ್ಚಿಕೊಂಡು ಅಳುತ್ತಾ ಅಜ್ಜನ ಮುಂದೆ ಕುಸಿದು ಕುಳಿತರು.
‘‘ಜಮೀಲಾಳಿಗೆ ಏನೂ ಆಗಿಲ್ಲ’’
ಮೌಲವಿ ತಲೆ ಎತ್ತಿದರು.
ಅಜ್ಜ ಅಳಿಯನ ಮುಖ ನೋಡಿದರು. ಅವರ ಕೆಂಪು ಕೆಂಡದುಂಡೆಗಳಂತಿದ್ದ ಕಣ್ಣುಗಳಿಂದ ಇನ್ನೂ ನೀರು ಇಳಿಯುತ್ತಲೇ ಇತ್ತು. ಮಗಳ ಮೇಲೆ ಅಳಿಯನಿಗಿರುವ ಪ್ರೀತಿ, ಕಾಳಜಿ ಕಂಡು ಅವರ ಹೃದಯ ತುಂಬಿ ಬಂದಿತ್ತು.
‘‘ನಿನ್ನ ಮಗಳಿಗೆ ಒಂದು ಗಂಡು ನೋಡಿದ್ದೇನೆ. ನೀನು ಬಂದು ನಿಖಾಹ್ ನಡೆಸಿಕೊಡಬೇಕು’’
ಮೌಲವಿ ಇನ್ನೂ ಅಜ್ಜನ ಮುಖವನ್ನೇ ದಿಟ್ಟಿಸಿ ನೋಡುತ್ತಿದ್ದರು. ಮಾತನಾಡಲಿಲ್ಲ. ಅವರ ದೇಹದಿಂದ ಈಗ ನಿಟ್ಟುಸಿರೊಂದು ಹೊರಬಿತ್ತು.
‘‘ಅದು ನಿನ್ನ ಕರ್ತವ್ಯ. ಈ ಬಗ್ಗೆ ನಾನು ನಿನಗೆ ಏನೂ ಹೇಳಬೇಕಾಗಿಲ್ಲ..., ನೀನು ತಿಳಿದವನು’’
ಈಗಲೂ ಮೌಲವಿ ಅಜ್ಜನ ಮುಖವನ್ನೇ ನೋಡುತ್ತಿದ್ದರು. ತುಟಿ ಬಿಚ್ಚಲಿಲ್ಲ.
ಮೌಲವಿ ಮಾತನಾಡದ್ದು ಕಂಡು ‘‘ನಾನಿನ್ನು ಹೊರಡುತ್ತೇನೆ’’ ಎನ್ನುತ್ತಾ ಅಜ್ಜ ಎದ್ದು ನಿಂತರು.
‘‘ಮಾವಾ... ನಾನೀಗ ಎಲ್ಲಿಗೂ ಹೋಗುವುದಿಲ್ಲ. ನಾಲ್ಕು ವರ್ಷಗಳಿಂದ ಮನೆಯೊಳಗೇ ಇದ್ದೇನೆ. ನನ್ನ ಆರೋಗ್ಯ ಚೆನ್ನಾಗಿಲ್ಲ. ನನ್ನ ಮಗಳ ನಿಖಾಹ್‌ನ್ನು ನೀವೇ ನೆರವೇರಿಸಿಕೊಡಬೇಕು. ಇದು ನನ್ನ ಒಪ್ಪಿಗೆ ಮಾತ್ರವಲ್ಲ, ಬೇಡಿಕೆ.
ಅಜ್ಜ ಮಾತನಾಡಲಿಲ್ಲ. ಏನು ಅನಾರೋಗ್ಯ ನಿನಗೆ ಎಂದು ಕೇಳಬೇಕೆನಿಸಿದರೂ ಅವರ ನಾಲಗೆ ಹೊರಳಲಿಲ್ಲ. ಕೋಣೆಯಿಂದ ಹೊರಗೆ ಬಂದವರು ಚಾವಡಿಯ ಮಧ್ಯೆ ಆ ಹೆಣ್ಣನ್ನು ಕಂಡುನಿಂತರು.
(ಗುರುವಾರದ ಸಂಚಿಕೆಗೆ)

Writer - ಮುಹಮ್ಮದ್ ಕುಳಾಯಿ

contributor

Editor - ಮುಹಮ್ಮದ್ ಕುಳಾಯಿ

contributor

Similar News