ಶುಲ್ಕ ಘೋಷಿಸದ ಖಾಸಗಿ ಶಾಲೆಗಳಿಗೆ ಬೀಗ: ಸಚಿವ ತನ್ವೀರ್ ಸೇಠ್ ಎಚ್ಚರಿಕೆ

Update: 2016-08-29 13:06 GMT

ಬೆಂಗಳೂರು, ಆ.28: ನಿಗದಿ ಮಾಡಿರುವ ಶುಲ್ಕವನ್ನು ಘೋಷಿಸದ ಶಾಲೆಗಳ ವಿರುದ್ಧ ಯಾವುದೇ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು. ಶಿಕ್ಷಣ ಇಲಾಖೆಯ ನಿಯಮಗಳನ್ನು ಉಲ್ಲಂಘಿಸಿವ ಶಾಲೆಗಳಿಗೆ ಬೀಗ ಜಡಿಯಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಸೋಮವಾರ ನಗರದ ಶಾಸಕರ ಭವನದಲ್ಲಿ ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
  ಖಾಸಗಿ ಶಾಲೆಗಳು ತರಬೇತಿ ಶುಲ್ಕವನ್ನು ಘೋಷಣೆ ಮಾಡಬೇಕು ಎಂದು ಸುಪ್ರಿಂ ಕೋರ್ಟ್ ಆದೇಶ ನೀಡಿದೆ. ಈ ಸಂಬಂಧ ಶಿಕ್ಷಣ ಇಲಾಖೆ ಖಾಸಗಿ ಶಾಲೆಗಳಿಗೆ ಶುಲ್ಕವನ್ನು ಘೋಷಣೆ ಮಾಡುವಂತೆ ಸುತ್ತೋಲೆಯನ್ನು ಹೊರಡಿಸಲಾಗಿದೆ. ಶುಲ್ಕದಲ್ಲಿನ ತಾರತಮ್ಯ, ಶುಲ್ಕವನ್ನು ಘೋಷಣೆ ಮಾಡದೇ ಇರುವುದು ಇಲಾಖೆಯ ಗಮನಕ್ಕೆ ಬಂದ ಕೂಡಲೇ ಅಂತಹ ಶಾಲೆಗಳಿಗೆ ಬೀಗ ಜಡಿದು ಮುಚ್ಚಲಾಗುವುದು ಎಂದು ಹೇಳಿದರು.
   ನಿಯಮ ಉಲ್ಲಂಘಿಸುವ ಶಾಲೆಗಳನ್ನು ಮುಚ್ಚುವ ಮುನ್ನ , ಆ ಶಾಲೆಯ ಮಕ್ಕಳನ್ನು ಹತ್ತಿರದ ಬೇರೊಂದು ಶಾಲೆಗೆ ಇಲಾಖೆ ನೇತೃತ್ವದಲ್ಲೇ ದಾಖಲಿಸಲಾಗುವುದು ಎಂದು ಸ್ಪಷ್ಟಪಡಿಸಿದ ಅವರು, ಶಿಕ್ಷಣದಲ್ಲಿ ತಾರತಮ್ಯ ವರ್ಗೀಕರಣ ಅತ್ಯಂತ ಅಪಾಯಕಾರಿ. ಬಡವರಿಗೆ -ಸರಕಾರಿ ಶಾಲೆ, ಮಧ್ಯಮ ವರ್ಗಗಳಿಗೆ -ಅನುದಾನಿತ, ಶ್ರೀಮಂತರಿಗೆ -ಖಾಸಗಿ ಶಾಲೆಗಳು ಎಂಬ ತಾರತಮ್ಯ ಶಿಕ್ಷಣದಲ್ಲಿ ಪಿಡುಗಾಗಿ ಪರಿಣಮಿಸಿದೆ. ಈ ತಾರತಮ್ಯವನ್ನು ನಿವಾರಿಸಿ ರಾಜ್ಯದಲ್ಲಿ ಏಕರೂಪ ಶಿಕ್ಷಣ ಜಾರಿಗೆ ತರುವುದೇ ನಮ್ಮ ಗುರಿ ಎಂದು ಹೇಳಿದರು.
   ನಾನು ಶಿಕ್ಷಣ ಇಲಾಖೆಯ ಸಚಿವನಾಗಿ ಅಧಿಕಾರ ವಹಿಸಿಕೊಂಡ 66 ದಿನಗಳಲ್ಲಿ ಇಲಾಖೆಯಲ್ಲಿ ಸಾಕಷ್ಟು ಸುದಾರಣೆಗಳನ್ನು ತಂದಿದ್ದೇನೆ. ಇಲಾಖೆಯಲ್ಲಿನ ಸಮಸ್ಯೆಗಳನ್ನು ಮನಗಂಡು ಅವುಗಳಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಅತ್ಯಲ್ಪ ಸಮಯದಲ್ಲೇ 80 ಸುತ್ತೋಲೆಗಳನ್ನು ಹೊರಡಿಸಲಾಗಿದೆ. 1999ರಿಂದ ತೆರವುಗೊಂಡಿದ್ದ ಶಿಕ್ಷಕರ ಸ್ಥಾನಕ್ಕೆ 12,000 ಶಿಕ್ಷಕ ,14,000 ಶಿಕ್ಷಕರ ನೇಮಕಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದರು.
   ದೇಶದ ಅಭಿವೃದ್ಧಿ ಕೇವಲ ಮಾತಿನಲ್ಲಿ ಹೇಳಿದರೆ ಸಾಧಿಸುವಂತದ್ದಲ್ಲ. ಮಕ್ಕಳಿಗೆ ಗುಣಮಟ್ಟ ಶಿಕ್ಷಣ ದೊರಕಿಸಿದಾಗ ಮಾತ್ರ ದೇಶ ಅಭಿವೃದ್ಧಿಯತ್ತ ಮುಖ ಮಾಡಲು ಸಾಧ್ಯ. ಸರಕಾರಿ ಶಾಲೆಗಳಲ್ಲಿ ಗುಣಮಟ್ಟ ಶಿಕ್ಷಣ ಕಲ್ಪಿಸಲು ಸರಕಾರ ಹೆಚ್ಚಿನ ಆದ್ಯತೆ ನೀಡಿದೆ. ಸರಕಾರಿ ಶಾಲೆಗಳನ್ನು ಮುಚ್ಚುವ ಹುನ್ನಾರ ನಡೆಯುತ್ತಿದೆ. ಇದಕ್ಕೆಲ್ಲಾ ಅವಕಾಶ ನೀಡುವುದಿಲ್ಲ. ಸರಕಾರಿ ಶಾಲೆಗಳಲ್ಲಿನ ಶಿಕ್ಷಕರು ತರಗತಿಗಳಿಗೆ ಹಾಜರಾಗದೇ ಇರುವುದು ನಮ್ಮ ಗಮನಕ್ಕೆ ಬಂದಿದೆ, ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
   ಆನ್‌ಲೈನ್ ಮೂಲಕ ದಾಖಲು: ಸರಕಾರಿ ಶಾಲೆಗಳಿಗೆ ಮಕ್ಕಳನ್ನು ದಾಖಲಿಸಲು ಮುಂದಿನ ವರ್ಷ ಆನ್‌ಲೈನ್ ವ್ಯವಸ್ಥೆ ಕಲ್ಪಿಸಲಾಗುವುದು. ಈ ವರ್ಷ ಸರಕಾರವೇ 60 ಲಕ್ಷಕ್ಕೂ ಅಧಿಕ ಮಂದಿ ವಿದ್ಯಾರ್ಥಿಗಳ ದಾಖಲಾತಿಯ ದತ್ತಾಂಶಗಳನ್ನು ಆನ್‌ಲೈನ್‌ಗೆ ಅಪ್‌ಲೋಡ್ ಮಾಡಲಾಗಿದೆ ಎಂದು ಹೇಳಿದರು.
    ಕಾರ್ಯಕ್ರಮದಲ್ಲಿ ಸಂಘದ ರಾಜ್ಯಾಧ್ಯಕ್ಷ ಡಾ.ಕೆ.ಹನುಮಂತಪ್ಪ ಮಾತನಾಡಿ, ಅನುದಾನಿತ ಶಾಲೆಗಳ ಮಕ್ಕಳಿಗೆ ಶೂ ಭಾಗ್ಯ, ಸಮವಸ್ತ್ರ, ಶೈಕ್ಷಣಿಕ ಪ್ರವಾಸ ಸೌಲಭ್ಯವನ್ನು ಕಲ್ಪಿಸಬೇಕು. ಶಿಕ್ಷಕರ ಸಮರ್ಪಕ ಬಡ್ತಿ ಕೊಡಲು ಹೊರಟ್ಟಿ ವರದಿಯನ್ನು ಜಾರಿಗೊಳಿಸಬೇಕು ಎಂದು ಸಚಿವರಿಗೆ ಬೇಡಿಕೆಗಳನ್ನು ಇಟ್ಟರು.
  ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಅಮರ್‌ನಾಥ್ ಪಾಟೀಲ್, ಖಜಾಂಚಿ ಟಿ. ಶಕುಂತಲಾ , ಪ್ರಧಾನ ಕಾರ್ಯದರ್ಶಿ ಟಿ.ರವಿಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News