ಕಾದಂಬರಿ ಧಾರಾವಾಹಿ-21

Update: 2016-08-31 17:32 GMT

--ಅಳಿಯನ ಮನೆಯ ಆ ಹೆಣ್ಣು...--
‘‘ಊಟ ಮಾಡಿ ಹೋಗಿ...’’ ಆ ಹೆಣ್ಣು ಅವರ ಬಳಿ ಬಂದು ಹೇಳಿತು. ಅವಳ ಕಣ್ಣಲ್ಲಿ ನೀರಿತ್ತು.
‘‘ಇವಳು ಸಾರಾ. ಇವಳಿಗೆ ತಂದೆ, ತಾಯಿ, ಬಂಧುಗಳೂಂತ ಯಾರೂ ಇಲ್ಲ. ಅನಾಥೆ...’’ ಮೌಲವಿ ಅಜ್ಜನ ಹಿಂದೆ ನಿಂತು ಹೆಂಡತಿಯನ್ನು ಪರಿಚಯಿಸಿದರು. ಅವರ ಮಾತಿನಲ್ಲಿ ಸಾವಿರ ಉತ್ತರಗಳಿದ್ದವು.
ಅಜ್ಜ ಅವಳನ್ನೇ ನೋಡಿದರು. ತೇಪೆ ಹಾಕಿದ ಸೀರೆ, ಕುಪ್ಪಸ, ತಲೆಗೆ ಬಿಗಿದ ರುಮಾಲು. ಬೋಳು ಬೋಳಾದ ಕತ್ತು, ಕಿವಿ, ಕೈಯಲ್ಲಿ ಎರಡು ಗಾಜಿನ ಬಳೆಗಳು... ಅಜ್ಜ ಅವಳ ಬಳಿ ಸರಿದರು. ಅವಳ ತಲೆ ಸವರಿದರು... ಅವಳ ಕಣ್ಣಿಂದ ಉಕ್ಕಿದ ನೀರು ಕೆನ್ನೆಯ ಮೇಲೆ ಹರಿದಾಡಿತು... ಕಿಸೆಗೆ ಕೈ ಹಾಕಿದ ಅಜ್ಜ, ನೋಟಿನ ಕಂತೆಯೊಂದನ್ನು ತೆಗೆದು ಅವಳ ಕೈಗಿತ್ತು ಅಂಗಳ ಇಳಿದು ನಡೆದುಬಿಟ್ಟರು.
ದಾರಿಯುದ್ದಕ್ಕೂ ಅಜ್ಜನ ಕಣ್ಣ ಮುಂದೆ ಆ ಹೆಣ್ಣಿನ ದಯನೀಯ ಮುಖವೇ ತೇಲುತ್ತಿತ್ತಂತೆ. ಮನೆಗೆ ಬಂದವರೇ ಆರಾಮ ಕುರ್ಚಿಯಲ್ಲಿ ಒರಗಿ ಕುಳಿತು ಕಣ್ಣು ಮುಚ್ಚಿದರೂ ಆ ಅಸಹಾಯಕ, ಮುಗ್ಧ ಮುಖವೇ ಅವರನ್ನು ಕಾಡತೊಡಗಿತ್ತು. ಯಾಕೋ ಅವರಿಗೆ ಅಂದು ತುಂಬಾ ಆಯಾಸವಾದಂತಾಗಿತ್ತು. ಅಜ್ಜಿ ತಂದುಕೊಟ್ಟ ಹುಣಸೆ ಹುಳಿಯ ಶರ್ಬತ್ ಕುಡಿದವರೇ ಮತ್ತೆ ಕಣ್ಣು ಮುಚ್ಚಿದರು.

ಅಂದು ರಾತ್ರಿ ಅಜ್ಜಿಯನ್ನು ಪಕ್ಕ ಕುಳ್ಳಿರಿಸಿದ ಅಜ್ಜ ಅಳಿಯನ ಮನೆಯ ವಿಷಯವನ್ನೆಲ್ಲ ತಿಳಿಸಿದರಂತೆ. ಅವರು ಅಳಿಯನ ಬಗ್ಗೆ ಹೇಳುವುದಕ್ಕಿಂತಲೂ ಆ ಹೆಣ್ಣಿನ ಬಗ್ಗೆಯೇ ಹೇಳುತ್ತಿದ್ದರಂತೆ. ‘‘ನನಗೇಕೋ ಆ ಹೆಣ್ಣು ನನ್ನ ಮಗಳೇ ಎಂಬ ಭಾವನೆ ಬಂದು ಬಿಟ್ಟಿತು ಾತಿಮಾ’’ ಎಂದು ಬಿಟ್ಟರಂತೆ. ಆನಂತರ ಪ್ರತಿ ತಿಂಗಳೂ ಅಜ್ಜ ಅವಳಿಗೆ ಹಣ ಕಳುಹಿಸಿಕೊಡುತ್ತಿದ್ದರಂತೆ. ಈಗಲೂ ನನ್ನ ಮಗ ನಾಸರ್ ಅವಳಿಗೆ ತಿಂಗಳು ತಿಂಗಳು ಹಣ ಕಳುಹಿಸಿಕೊಡುತ್ತಿದ್ದಾನೆ. ಆ ಹೆಂಗಸು ಬದುಕಿರುವವರೆಗೂ ಅವಳಿಗೆ ತಿಂಗಳು-ತಿಂಗಳು ಅವಳ ಜೀವನಕ್ಕೆ ಬೇಕಾದಷ್ಟು ದುಡ್ಡು ಕಳುಹಿಸಿಕೊಡಬೇಕು ಎಂದು ಅಜ್ಜ ಸಾಯುವಾಗ ನಾಸರ್‌ನಲ್ಲಿ ಮಾತು ತೆಗೆದುಕೊಂಡಿದ್ದರು. ‘‘ನೀವು ಅಳಿಯನ ಮನೆಗೆ ಹೋಗಿದ್ದು, ಅವನು ಆರೋಗ್ಯ ಸರಿಯಿಲ್ಲ, ಮದುವೆಗೆ ಬರಲಿಕ್ಕೆ ಆಗುವುದಿಲ್ಲ, ನೀವೇ ನಿಖಾಹ್ ಮಾಡಿಕೊಡಿ ಎಂದಿದ್ದು, ಎಲ್ಲ ಜಮೀಲಾಳಿಗೆ ಹೇಳುವುದು ಬೇಡವೇ’’ ಅಜ್ಜಿ ಅಂಜುತ್ತಾ ಕೇಳಿದರಂತೆ.

‘‘ಹೇಳಬೇಕು, ಅವಕಾಶ ನೋಡಿ, ಅವಳು ಶಾಂತವಾಗಿರುವಾಗ ಹೇಳು’’
‘‘ನನಗೇಕೋ ಭಯವಾಗುತ್ತೆ, ಅವಳು ರಂಪಾಟ ಮಾಡಿದ್ರೆ?’’
‘‘ಏನು ಮಾಡಲಿಕ್ಕಾಗುತ್ತೆ, ಹೇಳುವುದನ್ನು ಹೇಳಲೇಬೇಕಲ್ಲ. ರಂಪಾಟ ಮಾಡಿದ್ರೆ ಸಹಿಸಿಕೊಳ್ಳುವುದು ಅಷ್ಟೇ. ಹೇಳದೆ ಇರಲಿಕ್ಕೆ ಆಗುತ್ತಾ...’’
ಅಜ್ಜಿ ಯೋಚಿಸುತ್ತಾ ನಿಂತುಬಿಟ್ಟರಂತೆ.
‘‘ಈಗಲೂ ಇವಳು ಮನಸ್ಸು ಮಾಡಿದರೆ ಅವನನ್ನು ಹೇಗಾದರೂ ಸಮಾಧಾನ ಮಾಡಿ ಈ ಮನೆಗೆ ಕರೆತರಬಹುದು. ಯಾವುದಕ್ಕೂ ಇವಳು ಒಪ್ಪಬೇಕಲ್ಲ. ನಾನು ಹೋದಾಗ ಅವನು ಮೊದಲು ಕೇಳಿದ್ದು ‘ಜಮೀಲಾ ಹೇಗಿದ್ದಾಳೆ’ ಅಂತ. ಅವನು ಎರಡನೆ ಸಲ ಕೇಳಿದಾಗಲೂ ನಾನು ಉತ್ತರಿಸದಿದ್ದಾಗ ಅವನು ಅತ್ತುಬಿಟ್ಟ’’ ಅಜ್ಜನ ಮಾತಿನಲ್ಲಿ ಅಸಹಾಯಕತೆ ತುಂಬಿತ್ತು.
ಮರುದಿನ ಅಜ್ಜಿ ನಿನ್ನ ದೊಡ್ಡಮ್ಮನನ್ನು ಪಕ್ಕದಲ್ಲಿ ಕುಳ್ಳಿರಿಸಿಕೊಂಡು ಸಮಾಧಾನದಿಂದ ವಿಷಯವನ್ನೆಲ್ಲ ಹೇಳಿದರಂತೆ. ದೊಡ್ಡಮ್ಮ ಮಾತೇ ಆಡಲಿಲ್ಲವಂತೆ. ಕೇಳಿಯೂ ಕೇಳದವರಂತೆ ಕುಳಿತುಬಿಟ್ಟಿದ್ದರಂತೆ. ಅಜ್ಜಿಗೆ ಮತ್ತೆ ಹೇಳಲು ಏನೂ ಇರಲಿಲ್ಲ. ‘‘ಈ ಕಲ್ಲು ಬಂಡೆಯ ಹತ್ತಿರ ಎಂತ ಮಾತನಾಡುವುದು’’ ಎಂದು ಅವರು ಎದ್ದು ಬಂದರಂತೆ.

ಸ್ವಲ್ಪಹೊತ್ತಿನ ನಂತರ ಹೋಗಿ ನೋಡಿದರೆ ನಿನ್ನ ದೊಡ್ಡಮ್ಮ ತನ್ನ ಸೀರೆ, ಬಟ್ಟೆಗಳನ್ನೆಲ್ಲ ಒಂದು ಚೀಲಕ್ಕೆ ತುಂಬಿಸುತ್ತಿರುವುದು ಕಂಡು ಅಜ್ಜಿ ಕೇಳಿದರು. ‘‘ಇದೇನು ಬಟ್ಟೆಗಳನ್ನೆಲ್ಲ ಚೀಲಕ್ಕೆ ತುಂಬಿಸುತ್ತಿದ್ದಿಯಾ?’’

ದೊಡ್ಡಮ್ಮ ಈಗಲೂ ಮಾತನಾಡಲಿಲ್ಲವಂತೆ.
‘‘ನಾನು ಮಾತನಾಡುತ್ತಿರುವುದು ಕೇಳಿಸ್ತಾ ಇದೆಯಾ ನಿನಗೆ?’’ ಅಜ್ಜಿ ಭಯ, ಕೋಪದಿಂದ ಏರು ಧ್ವನಿಯಲ್ಲಿ ಕೇಳಿದರು.
‘‘ನಾನಿನ್ನು ಈ ಮನೆಯಲ್ಲಿರುವುದಿಲ್ಲ... ಹೋಗ್ತೇನೆ’’
‘‘ಎಲ್ಲಿಗೆ?’’
‘‘ನನ್ನ ಮನೆಗೆ’’
‘‘ಅಲ್ಲಿ ಯಾರಿದ್ದಾರೆ ನಿನಗೆ?’’
‘‘ಇಲ್ಲಿ ಯಾರಿದ್ದಾರೆ ನನಗೆ?’’
‘‘ಏನು ಮಾತನಾಡ್ತಾ ಇದ್ದೀಯಾ ನೀನು?’’
‘‘................’’
‘‘ಹುಚ್ಚು ಹಿಡಿದಿದೆಯಾ ನಿನಗೆ?’’
‘‘ಹೌದು ಹುಚ್ಚು ಹಿಡಿದಿದೆ... ಹುಚ್ಚು ಹಿಡಿದಿದೆ ನನಗೆ... ಹುಚ್ಚಿ ಈ ಮನೆಯಲ್ಲಿರಬಾರದು. ನಾನು ನನ್ನ ಮನೆಯಲ್ಲಿ ಒಂಟಿಯಾಗಿ ಬದುಕಬಲ್ಲೆ’’
ಶಾಂತವಾಗಿದ್ದ ದೊಡ್ಡಮ್ಮ ಒಮ್ಮೆಲೆ ಆರ್ಭಟಿಸತೊಡಗಿದರು. ತಾಯಿ-ಮಗಳ ಬೊಬ್ಬೆ ಕೇಳಿದ ಅಜ್ಜ ಓಡಿ ಬಂದರಂತೆ.
‘‘ಏನು... ಏನಿದು ಜಗಳ?’’
‘‘ನೋಡಿ, ಇವಳು ಹೋಗುವುದಂತೆ’’ ಅಜ್ಜಿ ಅಜ್ಜನಿಗೆ ಒತ್ತಿ ನಿಂತು ಹೇಳಿದರು.
‘‘ಎಲ್ಲಿಗೆ?’’
‘‘ನೀವೇ ಕೇಳಿ?’’
‘‘ಏನು ಜಮೀಲಾ ಇದೆಲ್ಲ, ಎಲ್ಲಿಗೆ ಹೊರಟಿದ್ದು ನೀನು?’’ ಅಜ್ಜ ಮಗಳನ್ನು ಸಂತೈಸುವವರಂತೆ ಕೇಳಿದರು.
‘‘ನನ್ನ ಮನೆಗೆ’’
‘‘ಯಾಕೆ?’’
‘‘ನಿಮ್ಮ ಅಳಿಯನನ್ನು ನೋಡಿ ಬಂದಿರಾ. ಪಂಡಿತ, ವಿದ್ವಾಂಸ ಅಳಿಯನನ್ನು ಮಾತನಾಡಿಸಿ ಬಂದಿರಾ, ಇಷ್ಟೊಂದು ದ್ರೋಹ ಬಗೆದರೂ ನಿಮಗೆ ನಿಮ್ಮ ಮಗಳಿಗಿಂತಲೂ ಅಳಿಯನೇ ಹೆಚ್ಚಾಗಿ ಬಿಟ್ಟರಲ್ಲಪ್ಪ’’
‘‘ಹೆಚ್ಚು ಕಮ್ಮಿಯ ವಿಷಯ ಅಲ್ಲಮ್ಮಾ ಅದು... ಮಗಳ ಮದುವೆಯ ವಿಷಯ ಅವನಿಗೆ ತಿಳಿಸಲು ಹೋಗಿದ್ದೆ ಅಷ್ಟೆ.’’
‘‘ಬರ್ತೇನೆ ಎಂದರೆ ಕರೆದುಕೊಂಡು ಬರ್ತಿದ್ರಲ್ಲಾ’’
‘‘ಮದುವೆಯಾಗುವವಳು ನಿನ್ನೊಬ್ಬಳದೇ ಮಗಳಲ್ಲಾ, ಅವನಿಗೂ ಮಗಳೇ. ನಿಖಾಹ್ ಮಾಡಿಕೊಡಬೇಕಾದವನು ಅವನು. ಹೇಳುವುದು ನಮ್ಮ ಧರ್ಮ’’
‘‘ಧರ್ಮ...! ಹೆಂಡತಿ- ಮಕ್ಕಳು ಇದ್ದೂ ಯಾರಿಗೂ ಹೇಳದೆ ಕದ್ದುಮುಚ್ಚಿ ಇನ್ನೊಂದು ಮದುವೆಯಾಗುವುದೂ ಧರ್ಮ. ಅಲ್ಲವೇ ಅಪ್ಪ’’
‘‘ಹಾಗಲ್ಲಮ್ಮಾ, ನಾನು ಅವನ ಮೇಲಿನ ಪ್ರೀತಿಯಿಂದ ಹೋಗಿಲ್ಲ. ಅವನ ಮಗಳಿಗೆ ಮದುವೆ. ಆ ವಿಷಯದಲ್ಲಿ ಅವನಿಗೆ ಒಂದು ಮಾತು ಹೇಳಬೇಕಲ್ಲಾ.. ಅದಕ್ಕೆ ಹೋಗಿದ್ದೆ’’
ಅಜ್ಜಿ ಮಗಳ ಮಾತು ಕೇಳಿ ಹೈರಾಣಾಗಿ ಸೆರಗನ್ನು ಬಾಯಿಗೆ ಹಿಡಿದು ಅಜ್ಜನ ಹಿಂದೆ ಬಂದು ನಿಂತಿದ್ದರಂತೆ.

‘‘ಅಪ್ಪಾ, ಒಂದು ಮಾತು ಹೇಳುತ್ತೇನೆ. ಯಾವಾಗ ನೀವು ನನ್ನಲ್ಲಿ ಒಂದು ಮಾತು ಕೇಳದೆ, ಒಂದು ಮಾತೂ ಹೇಳದೆ ಅವರ ಮನೆಯ ಹೊಸಿಲು ಹತ್ತಿದಿರೋ ಇನ್ನು ನನ್ನಿಂದಾಗಲ್ಲಪ್ಪಾ. ಇನ್ನು ನಾನು ಈ ಮನೆಯಲ್ಲಿರೋದಿಲ್ಲ. ನಾನು ನನ್ನ ಮನೆಯಲ್ಲಿರುತ್ತೇನೆ. ನಾನು ಒಂಟಿಯಾಗಿ ಬದುಕಬಲ್ಲೆ. ನಾನು ಹೋಗುತ್ತೇನೆ. ನನ್ನನ್ನು ಯಾರೂ ತಡೆಯಬೇಡಿ. ಮದುವೆಯ ದಿನ ಬೆಳಗ್ಗೆ ಎಲ್ಲರಂತೆ ನಾನೂ ಬರುತ್ತೇನೆ. ನೀವು ಬೇಕಾದರೆ ನಿಮ್ಮ ಅಳಿಯನನ್ನು ಕರೆಸಿಕೊಳ್ಳಿ, ನನ್ನದೇನೂ ಅಭ್ಯಂತರವಿಲ್ಲ’’ ಎಂದವರೇ ದೊಡ್ಡಮ್ಮ ಬಟ್ಟೆಬರೆ ತುಂಬಿದ ಚೀಲ ಹಿಡಿದುಕೊಂಡು ಹೊರಟು ನಿಂತರಂತೆ. ‘‘ಬೇಡ ಜಮೀಲಾ... ಹಠ ಮಾಡಬೇಡ. ಈ ಹಟ ನಿನಗೆ ಒಳ್ಳೆಯದಲ್ಲ’’
ಅಜ್ಜಿ ಅವರನ್ನು ತಡೆದು ಹೇಳಿದರಂತೆ.
‘‘ಹೌದಮ್ಮಾ, ನಾನು ಹಟವಾದಿ. ನನ್ನನ್ನು ತಡೆಯಬೇಡಿ. ಈ ಜನ್ಮದಲ್ಲಿ ನಾನು ಯಾರನ್ನು ಬೇಕಾದರೂ ಕ್ಷಮಿಸಬಹುದು. ಆದರೆ ಅವರನ್ನು ಮತ್ತು ಅವರ ಜೊತೆ ಸೇರಿದವರನ್ನು ಎಂದೂ ಕ್ಷಮಿಸೋದಿಲ್ಲ, ನಾನು ಬರ್ತೇನೆ’’ ಎಂದವರೆ ದೊಡ್ಡಮ್ಮ ಅಜ್ಜ-ಅಜ್ಜಿ ನೋಡುತ್ತಿದ್ದಂತೆಯೇ ಜಗಲಿ ಇಳಿದು ನಡೆದೇಬಿಟ್ಟರಂತೆ.
ದೊಡ್ಡಮ್ಮ ಆ ಮೇಲೆ ಆ ಮನೆಯಲ್ಲೇ ಇರುವುದು. ಬೇಕಾದರೆ ನಾವೇ ಹೇಳಿ ಕಳುಹಿಸಬೇಕಷ್ಟೆ. ಅವರಾಗಿಯೇ ಬರುವುದಿಲ್ಲ. ಮಕ್ಕಳಿಗೆಲ್ಲ ಮದುವೆಯಾಗುವವರೆಗೂ ಯಾರಾದರೊಬ್ಬರು ಅವರ ಜತೆ ಇರುತ್ತಿದ್ದರು. ಮಕ್ಕಳಿಗೆಲ್ಲ ಮದುವೆಯಾದ ಮೇಲೆ ಪಕ್ಕದ ಮನೆಯ ಹೆಂಗಸೊಬ್ಬರನ್ನು ಅಲ್ಲಿ ಅವರ ಜೊತೆ ಉಳಿದುಕೊಳ್ಳಲು ಅಜ್ಜ ವ್ಯವಸ್ಥೆ ಮಾಡಿದ್ದರು. ಆ ಹೆಂಗಸು ಈಗಲೂ ಅಲ್ಲೇ ಇದೆ. ಅವರಿಗೆ ಅಡುಗೆಗೆ ಬೇಕಾದ ಎಲ್ಲ ಸಾಮಗ್ರಿಗಳೂ ಇಲ್ಲಿಂದಲೇ ಅಜ್ಜಿ ಕಳಿಸಿಕೊಡುವುದು.
ದೊಡ್ಡಮ್ಮನ ಮತ್ತೆರಡು ಮಕ್ಕಳಿಗೆ ಅಜ್ಜನೇ ಮದುವೆ ಮಾಡಿದ್ದು. ಪ್ರತಿ ಮಗಳ ಮದುವೆಯ ಸಂದರ್ಭದಲ್ಲೂ ಅಜ್ಜ ಅಳಿಯನ ಮನೆಗೆ ಹೋಗಿ ವಿಷಯ ತಿಳಿಸಿದ್ದರಂತೆ. ಆದರೆ ಅವರು ಬರಲಿಲ್ಲ. ಅಜ್ಜನೇ ನಿಖಾಹ್ ಮಾಡಿಕೊಟ್ಟದ್ದು. ಮೂವರು ಮೊಮ್ಮಕ್ಕಳನ್ನೂ ಅಜ್ಜ ಒಳ್ಳೆಯ ಕಡೆಗೆ ಕೊಟ್ಟಿದ್ದಾರೆ. ಎಲ್ಲರೂ ಸುಖವಾಗಿದ್ದಾರೆ.
ಮೌಲವಿ ಮಾತ್ರ ಅಂದು ಹೋದವರು ಮತ್ತೆ ಈ ಮನೆ ಕಡೆಗೆ ತಲೆ ಹಾಕಲಿಲ್ಲ. ಮೀನು ವ್ಯಾಪಾರಿ ಇಬ್ರಾಯಿ ಮೊನ್ನೆ ಆ ಕಡೆ ಹೋದವನು ಮೌಲವಿಯ ಮನೆಗೆ ಹೋಗಿದ್ದನಂತೆ. ಮೌಲವಿಯ ಅನಾರೋಗ್ಯ ಉಲ್ಬಣಿಸಿದೆ. ಹಾಸಿಗೆ ಹಿಡಿದಿದ್ದಾರೆ. ಇನ್ನು ಹೆಚ್ಚು ದಿನ ಬದುಕುವ ಲಕ್ಷಣ ಕಾಣುತ್ತಿಲ್ಲ. ಪ್ರತಿ ಉಸಿರಿಗೂ ಜಮೀಲಾ... ಜಮೀಲಾ... ಅಂತ ಕರೆಯುತ್ತಿದ್ದಾರೆ... ನನಗೆ ಸಾಯುವ ಮೊದಲೊಮ್ಮೆ ನನ್ನ ಜಮೀಲಾಳನ್ನು ನೋಡಬೇಕೂಂತ ಹಂಬಲಿಸುತ್ತಾ ಇದ್ದಾರೆ ಎಂದು ನಿನ್ನಜ್ಜಿಗೆ ನಿನ್ನೆ ಹೇಳಿದ್ದ. ಅದಕ್ಕೆ ನಿನ್ನೆ ಸಂಜೆ ಅಜ್ಜಿ ದೊಡ್ಡಮ್ಮನನ್ನು ಬರಲು ಹೇಳಿ ಕಳುಹಿಸಿದ್ದರು. ಅದಕ್ಕೆ ಇವತ್ತು ಬೆಳಗ್ಗೆ ದೊಡ್ಡಮ್ಮ ಬಂದದ್ದು.
ಅಜ್ಜಿ ದೊಡ್ಡಮ್ಮನಿಗೆ ಬುದ್ಧಿ ಹೇಳಿದರು. ಕೊನೆಗಾಲದಲ್ಲಾದರೂ ಹೋಗಿ ಗಂಡನಿಗೆ ಮುಖ ತೋರಿಸಿ ಬಾ, ಅವನು ಹಾಯಾಗಿ ಪ್ರಾಣ ಬಿಡಲಿ ಎಂದು ಒತ್ತಾಯಿಸಿದರು. ಅದಕ್ಕೆ ಈ ಜಗಳ, ಗಲಾಟೆ.

ಮತ್ತೆ ಸ್ವಲ್ಪಹೊತ್ತು ಮೌನವಾದ ಐಸು, ‘‘ಇದು ನಿನ್ನ ದೊಡ್ಡಮ್ಮನ ಕಥೆ. ಈ ಮನೆಯಲ್ಲಿ ಪ್ರತಿಯೊಬ್ಬರದ್ದೂ ಒಂದೊಂದು ಕಥೆಯಿದೆ. ಆ ಕಥೆಗಳನ್ನೆಲ್ಲ ಹೇಳುತ್ತಾ ಹೋದರೆ ಉಳಿದಿರುವ ನನ್ನ ಆಯುಷ್ಯ ಸಾಕಾಗಲಿಕ್ಕಿಲ್ಲ. ಈ ಮನೆಯ ಪ್ರತಿಯೊಂದು ಕಂಬಕ್ಕೂ ಒಂದೊಂದು ಕಥೆಯಿದೆ. ಈ ಕಥೆಗಳ ಹಿಂದಿನ ನೋವುಗಳನ್ನೆಲ್ಲಾ ಅನುಭವಿಸಿದವರು ನಿನ್ನ ಅಜ್ಜ. ಹೃದಯದಲ್ಲಿ ದೊಡ್ಡ ಅಗ್ನಿ ಪರ್ವತವೊಂದು ಬೆಂಕಿಯ ಜ್ವಾಲೆಯನ್ನು ಉಗುಳುತ್ತಿದ್ದರೂ ಹೊರಗೆ ನಗುತ್ತಾ, ಎಲ್ಲರನ್ನೂ ಸುಖವಾಗಿಡಲು, ಸಂತೋಷಪಡಿಸಲು ಹೆಣಗಾಡುತ್ತಾ ಕಳೆದು ಹೋದರು. ಈ ಅಜ್ಜಿ ಈ ಪ್ರಾಯದಲ್ಲೂ ಎಷ್ಟೊಂದು ನೋವು ಅನುಭವಿಸುತ್ತಿದ್ದಾರೆ ಗೊತ್ತಾ...’’
ಮತ್ತೆ ಐಸು ಮಾತನಾಡಲಿಲ್ಲ. ತಾಹಿರಾಳನ್ನು ಮಲಗಿಸಿ, ಹೊದಿಸಿ, ತಾನೂ ಮುದುಡಿ ಮಲಗಿಕೊಂಡಳು. ಆ ರಾತ್ರಿ ನಿದ್ದೆ ಅವಳ ಹತ್ತಿರ ಸುಳಿಯಲಿಲ್ಲ.
***

(ರವಿವಾರದ ಸಂಚಿಕೆಗೆ)

Writer - ಮುಹಮ್ಮದ್ ಕುಳಾಯಿ

contributor

Editor - ಮುಹಮ್ಮದ್ ಕುಳಾಯಿ

contributor

Similar News