ಸುಪ್ರೀಂ ತೀರ್ಪು ಕರ್ನಾಟಕದ ಪಾಲಿಗೆ ಮರಣಶಾಸನ: ಆರ್. ಅಶೋಕ್

Update: 2016-09-12 12:54 GMT

ಬೆಂಗಳೂರು, ಸೆ. 12: ಕಾವೇರಿ ನದಿ ನೀರು ಹಂಚಿಕೆ ಕುರಿತಂತೆ ಸಲ್ಲಿಸಲಾಗಿದ್ದ ಮರುಪರಿಶೀಲನಾ ಅರ್ಜಿ ಬಗ್ಗೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಕರ್ನಾಟಕದ ಪಾಲಿಗೆ ದೊಡ್ಡ ನೋವು ತರುವ ಮಾರಣಾಂತಿಕ ತೀರ್ಪು. ಇದು ಕರ್ನಾಟಕದ ಪಾಲಿಗೆ ಮರಣಶಾಸನ ಎಂದು ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ್ ಆರೋಪಿಸಿದ್ದಾರೆ.

ನಗರದ ಕುಮಾರಕೃಪ ಅತಿಥಿಗೃಹದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೊಣ್ಣೆ ಕೊಟ್ಟು ಹೊಡೆಸಿಕೊಳ್ಳುವ ಪರಿಸ್ಥಿತಿಗೆ ರಾಜ್ಯ ಸರ್ಕಾಸರ ಜನರನ್ನ ತಳ್ಳಿದೆ. ಸುಪ್ರೀಂ ತೀರ್ಪಿನಿಂದಾಗಿ ಡಿಸೆಂಬರ್ ವೇಳೆಗೆ ಬೆಂಗಳೂರಿಗೆ ದೊಡ್ಡ ಸಮಸ್ಯೆ ಉಂಟಾಗಲಿದೆ. ಸರ್ಕಾರ ಮೊದಲು ದಿನಕ್ಕೆ 10,000 ಕ್ಯುಸೆಕ್ ನೀರು ಬಿಡುವುದಾಗಿ ಒಪ್ಪಿಕೊಂಡಿದ್ದೇ ಇಷ್ಟಕ್ಕೆಲ್ಲಾ ಕಾರಣ. ಸುಪ್ರೀಂ ತೀರ್ಪಿನ ಮೂಲಕ ರಾಜ್ಯಕ್ಕೆ ಎರಡನೆ ಬಾರಿ ಮುಖಭಂಗವಾಗಿದೆ ಎಂದು ಹೇಳಿದರು.

ಜಲಸಂಪನ್ಮೂಲ ಸಚಿವರಿಗೆ ಕಾವೇರಿ ವಿಚಾರದಲ್ಲಿ ತಿಳುವಳಿಕೆಯಿಲ್ಲ. ಸರ್ವ ಪಕ್ಷ ಸಭೆಯಲ್ಲಿ ಒಂದು ಹನಿ ನೀರನ್ನೂ ತಮಿಳುನಾಡಿಗೆ ಬಿಡುವುದಿಲ್ಲ ಎಂದು ಹೇಳಲಾಗಿತ್ತು. ಆದರೆ ಈಗ ಮಾತಿಗೆ ತಪ್ಪಿ ನೀರು ಬಿಟ್ಟಿದ್ದಾರೆ. ಸರಕಾರ ಈ ಬಗ್ಗೆ ಗಂಭೀರ ನಿಲುವು ತಾಳಬೇಕಿದೆ. ಸಿಎಂ ಹಾಗೂ ಜಲಸಂಪನ್ಮೂಲ ಸಚಿವರು ಉಡಾಫೆ ಉತ್ತರ ನೀಡುವುದನ್ನು ಬಿಟ್ಟು ಮುಂದಿನ ಕ್ರಮ ಕೈಗೊಳ್ಳಲು ಮುಂದಾಗಬೇಕು. ಸರಕಾರ ತನ್ನ ಉದಾಸೀನತೆ ಬಿಡಬೇಕು ಎಂದು ಅಶೋಕ್ ಹೇಳಿದರು.

ತಮಿಳುನಾಡಿನಲ್ಲಿ ಕನ್ನಡಿಗರ ಮೇಲೆ ಹಲ್ಲೆಯಾಗುತ್ತಿದೆ. ಇಲ್ಲೂ ತಮಿಳಿಗರ ಮೇಲೆ ಹಲ್ಲೆ ನಡೆಸುವ ಯತ್ನಗಳು ನಡೆಯುತ್ತಿವೆ. ರಾಜ್ಯ ಸರಕಾರ ತಮಿಳಿಗರು ವಾಸವಿರುವ ಸ್ಥಳಗಳಲ್ಲಿ ಹೆಚ್ಚಿನ ಭದ್ರತೆ ಒದಗಿಸಬೇಕಿದೆ. ರಾಜ್ಯದ ಜನ ಇಂತಹ ಕಠಿಣ ಪರಿಸ್ಥಿತಿಯಲ್ಲಿ ಶಾಂತಿಯಿಂದ ಇರಬೇಕು ಎಂದು ಮನವಿ ಮಾಡಿಕೊಂಡರು.

ಪ್ರಧಾನಿ ಮೋದಿ ಮದ್ಯಸ್ತಿಕೆ ವಹಿಸಬೇಕೆಂಬ ದೇವೆಗೌಡರ ಹೇಳಿಕೆಗೆ ಪ್ರತಿಕ್ರಿಯಿಸಿದ ಅಶೋಕ್, ಈಗಾಗಲೇ ಕಾವೇರಿ ವಿಚಾರ ನ್ಯಾಯಾಧೀಕರಣದಲ್ಲಿದೆ ಕೋರ್ಟ್‌ನಲ್ಲಿದೆ. ಸರಕಾರ ಮೊದಲೇ ಈ ಬಗ್ಗೆ ಗಮನ ಹರೆಸಬೇಕಿತ್ತು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News