ಸುಪ್ರೀಂ ತೀರ್ಪು ರಾಜ್ಯಕ್ಕಾದ ದೊಡ್ಡ ಅನ್ಯಾಯ: ಪರಮೇಶ್ವರ್

Update: 2016-09-12 13:08 GMT

ಬೆಂಗಳೂರು, ಸೆ.12: ಕಾವೇರಿ ನದಿ ನೀರು ಹಂಚಿಕೆ ಕುರಿತಂತೆ ಸಲ್ಲಿಸಲಾಗಿದ್ದ ಮರುಪರಿಶೀಲನಾ ಅರ್ಜಿ ಬಗ್ಗೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಕರ್ನಾಟಕದ ಪಾಲಿಗೆ ದೊಡ್ಡ ಅನ್ಯಾಯವಾಗಿದೆ. ತೀರ್ಪನ್ನು ಖಂಡಿಸಿ ಹಲವೆಡೆ ಹಿಂಸಾತ್ಮಕ ಪ್ರತಿಭಟನೆಗಳು ನಡೆಯುತ್ತಿವೆ. ಜನತೆ ಶಾಂತಿ ಕಾಪಾಡಬೇಕು ಎಂದು ರಾಜ್ಯ ಗೃಹಸಚಿವ ಡಾ. ಜಿ. ಪರಮೇಶ್ವರ್ ಮನವಿ ಮಾಡಿಕೊಂಡಿದ್ದಾರೆ.

ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಪ್ರೀಂ ತೀರ್ಪಿಗೆ ವಿರೋಧ ವ್ಯಕ್ತಪಡಿಸಿ ಲಾರಿ ಬಸ್‌ಗಳಿಗೆ ಹಾನಿ ಎಸಗಲಾಗಿದೆ. ತಮಿಳು ನಾಡಿನಲ್ಲಿ ಕರ್ನಾಟಕದ ಬಸ್‌ಗಳಿಗೆ ಹಾನಿ ಸಂಭವಿಸಿದೆ. ಕರ್ನಾಟಕದಲ್ಲಿ ತಮಿಳುನಾಡು ನೊಂದಣಿಯ 27 ವಾಹನಗಳಿಗೆ ಹಾನಿ ಮಾಡಿ ಬೆಂಕಿ ಹಚ್ಚಲಾಗಿದೆ. ಜನರು ಹಿಂಸಾತ್ಮಕ ಪ್ರತಿಭಟನೆಯನ್ನು ಕೈಬಿಟ್ಟು ಸಹನೆಯಿಂದ ವರ್ತಿಸಬೇಕು ಎಂದು ಮನವಿ ಮಾಡಿಕೊಂಡರು.

ರಾಜ್ಯದಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಲಾಗಿದೆ. ಡಿಜಿಪಿಗಳಿಗೂ ಸೂಚಿಸಲಾಗಿದೆ. ಬೆಂಗಳೂರು ಮಾತ್ರವಲ್ಲದೆ ಪಾಂಡವಪುರ, ಎಲ್ಲಾ ನಾಲ್ಕು ಡ್ಯಾಂಗಳ ಸಮೀಪ ಸೆಕ್ಷನ್ 144 ಹಾಕಲಾಗಿದೆ. ಕೇಂದ್ರದಿಂದ ಈಗಾಗಲೇ 10 ವಿಶೇಷ ಪಡೆಗಳನ್ನು ಕರೆಸಿಕೊಂಡಿದ್ದೇವೆ. ಇನ್ನೂ 10 ವಿಶೇಷ ಪಡೆಗಳನ್ನು ಕಳುಹಿಸಲು ಮನವಿ ಮಾಡಿಕೊಂಡಿದ್ದೇವೆ. 180ಕ್ಕೂ ಕೆಎಸ್‌ಆರ್‌ಪಿ ತುಕಡಿಗಳು, ಸುಮಾರು 20,000 ಹೋಮ್ಗಾರ್ಡ್ಸ್ ಸಿಬ್ಬಂದಿಯನ್ನು ರಾಜ್ಯಾದ್ಯಂತ ನಿಯೋಜಿಸಲಾಗಿದೆ ಎಂದು ಪರಮೇಶ್ವರ್ ತಿಳಿಸಿದರು.

ಜನ ಸಹಕರಿಸದಿದ್ದರೆ ಪರಿಸ್ಥಿತಿ ಹತೋಟಿಗೆ ಬರುವುದಿಲ್ಲ. ರಾಜ್ಯದ ಜನ ಶಾಂತಿ ಕಾಪಾಡಬೇಕು ಎಂದು ಪರಮೇಶ್ವರ್ ಮನವಿ ಮಾಡಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News