ಕಾವೇರಿ ವಿವಾದ: 30ಕ್ಕೂ ಹೆಚ್ಚು ಖಾಸಗಿ ಬಸ್‌ಗಳಿಗೆ ಬೆಂಕಿ

Update: 2016-09-12 14:15 GMT

ಬೆಂಗಳೂರು, ಸೆ.12: ತಮಿಳುನಾಡಿಗೆ ಕಾವೇರಿ ನದಿ ನೀರು ಹಂಚಿಕೆ ವಿವಾದವನ್ನು ಮುಂದಿಟ್ಟುಕೊಂಡು ನಗರದೆಲ್ಲೆಡೆ ತಮಿಳುನಾಡು ನೋಂದಣಿಯ ಬಸ್-ಲಾರಿಗಳಿಗೆ ಬೆಂಕಿ ಇಡುವ ಕುಕೃತ್ಯಗಳು ಮುಂದುವರಿದಿದ್ದು, ಕೆಪಿಎನ್ ಟ್ರಾವೆಲ್ಸ್‌ಗೆ ಸೇರಿದ್ದ 30ಕ್ಕೂ ಅಧಿಕ ಬಸ್‌ಗೆ ಬೆಂಕಿ ಹಚ್ಚಲಾಗಿದೆ.

ದ್ವಾರಕನಾಥ ನಗರದಲ್ಲಿ ಶೆಡ್‌ನಲ್ಲಿ ನಿಲ್ಲಿಸಲಾಗಿದ್ದ ತಮಿಳುನಾಡು ನೋಂದಣಿಯ ಎರಡು ಬಸ್‌ಗಳಿಗೆ ಉದ್ರಿಕ್ತರು ಬೆಂಕಿಹಚ್ಚಿದ್ದಾರೆ. ಬೆಂಕಿಯ ಕೆನ್ನಾಲಿಗೆ ಶೆಡ್‌ನಲ್ಲಿ ನಿಲ್ಲಿಸಿದ್ದ ಉಳಿದ ಬಸ್‌ಗಳಿಗೆ ತಗಲಿದೆ ಎಂದು ಮೂಲಗಳು ತಿಳಿಸಿವೆ. ಬೆಂಕಿಯ ಕೆನ್ನಾಲಿಗೆಗೆ ಸಿಲುಕಿದ್ದ ಬಸ್‌ಗಳನ್ನು ಬಚಾವ್ ಮಾಡಲು ಅಗ್ನಿಶಾಮಕ ಸಿಬ್ಬಂದಿಗಳು ಶತಪ್ರಯತ್ನ ನಡೆಸುತ್ತಿದ್ದಾರೆ. ಇದೇ ವೇಳೆ, ನ್ಯೂಟಿಂಬರ್‌ಯಾರ್ಡ್ ಲೇಔಟ್‌ನಲ್ಲಿ ನಿಲ್ಲಿಸಲಾಗಿದ್ದ ತಮಿಳುನಾಡು ನೋಂದಣಿ ಹೊಂದಿದ್ದ ಎಸ್‌ಆರ್‌ಎಸ್ ಟ್ರಾವೆಲ್ಸ್ ಕಂಪೆನಿಯ ಬಸ್‌ಗೂ ಬೆಂಕಿ ಹಚ್ಚಲಾಗಿದೆ. ಸ್ಥಳದಲ್ಲಿ ಬೆಂಕಿಯ ಕೆನ್ನಾಲಿಗೆ ಜನವಸತಿ ಪ್ರದೇಶಕ್ಕೆ ಹಬ್ಬುವ ಭೀತಿ  ಎದುರಾಗಿದೆ.

ಕಾವೇರಿ ಗಲಾಟೆಗೆ ಸಂತೋಷ್ ಕಾರಣ: ಪರಮೇಶ್ವರ್

 ಬೆಂಗಳೂರಿನಲ್ಲಿ ಸೋಮವಾರ ಭುಗಿಲೆದ್ದಿರುವ ಕಾವೇರಿ ಗಲಾಟೆಗೆ ಫೇಸ್‌ಬುಕ್‌ನಲ್ಲಿ ಅವಹೇಳನಕಾರಿ ಹೇಳಿಕೆ ಪೋಸ್ಟ್ ಮಾಡಿದ್ದ ತಮಿಳುನಾಡಿನ ಸಂತೋಷ್ ಎಂಬ ಯುವಕನೇ ಕಾರಣ ಎಂದು ಗೃಹ ಸಚಿವ ಪರಮೇಶ್ವರ್ ಆರೋಪಿಸಿದ್ದಾರೆ.

ವಿಕಾಸಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಂಜಿನಿಯರ್ ವಿದ್ಯಾರ್ಥಿ ಸಂತೋಷ್ ವಿರುದ್ಧ ಪ್ರಕರಣದ ದಾಖಲಿಸಲಾಗಿದ್ದು, ಆತನ ಮನೆಯವರು ನಾಪತ್ತೆಯಾಗಿದ್ದಾರೆ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News