ಮೋದಿ ಭೇಟಿಗೆ ಇನ್ನೂ ಉತ್ತರ ಬಂದಿಲ್ಲ: ಟಿ.ಬಿ.ಜಯಚಂದ್ರ
ಬೆಂಗಳೂರು, ಸೆ. 15: ತಮಿಳುನಾಡಿಗೆ ಕಾವೇರಿ ನದಿ ನೀರು ಹಂಚಿಕೆ ಸಂಬಂಧ ಮಾತುಕತೆ ನಡೆಸಲು ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ಸಮಯ ಕೋರಿದ್ದರು, ಇದುವರೆಗೂ ಯಾವುದೇ ಉತ್ತರ ಬಂದಿಲ್ಲ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ. ಜಯಚಂದ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಗುರುವಾರ ನಗರದ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಕಾವೇರಿ ನೀರು ಹಂಚಿಕೆ ವಿವಾದ ಸಂಬಂಧ ಸುಪ್ರೀಂಕೋರ್ಟ್ ಮತ್ತು ಮೇಲುಸ್ತುವಾರಿ ಸಮಿತಿ ಮುಂದೆ ಅನುಸರಿಸಬೇಕಾದ ಕಾನೂನಾತ್ಮಕ ಹೋರಾಟ ಕುರಿತ ಸಭೆಯಲ್ಲಿ ಪಾಲ್ಗೊಂಡು ತದನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಪ್ರಧಾನಿ ಮೋದಿ ಅವರೊಂದಿಗೆ ಯಾವಾಗ ಮಾತುಕತೆ ನಡೆಸಲಿದ್ದೀರಿ ಎಂಬ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವರು, ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತುಕತೆ ನಡೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗಾಗಲೇ ಪತ್ರ ಬರೆದಿದ್ದಾರೆ. ಆದರೆ, ಇದುವರೆಗೂ ಯಾವುದೇ ಉತ್ತರವಿಲ್ಲ. ಭೇಟಿಯ ಸಮಯಕ್ಕೆ ಕಾಯುತ್ತಿದ್ದೇವೆ ಎಂದು ಉತ್ತರಿಸಿದರು.
ಇನ್ನು ಸಭೆಯ ಬಗ್ಗೆ ಮಾತನಾಡಿದ ಅವರು, ಕಾವೇರಿ ವಿಚಾರದಲ್ಲಿ ಇದುವರೆಗೂ ಸರಕಾರ ಅನುಸರಿಸಿದ ಕಾನೂನಾತ್ಮಕ ಹೋರಾಟ, ಮುಂದೆ ಕೈಗೊಳ್ಳಬೇಕಾದ ನಿಲುವುಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಸಭೆಯಲ್ಲಿ ಪಾಲ್ಗೊಂಡ ತಜ್ಞರೆಲ್ಲರೂ, ಒಳ್ಳೆಯ ಸಲಹೆಗಳನ್ನು ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಸುಪ್ರೀಂಕೋರ್ಟ್ ಮತ್ತು ಮೇಲುಸ್ತುವಾರಿ ಸಮಿತಿ ಮುಂದೆ ವಾದ ಮಂಡಿಸಲು ನಮಗೆ ನೈತಿಕ ಶಕ್ತಿ ದೊರೆತಂತಾಗಿದೆ ಎಂದು ನುಡಿದರು.