ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಬಿಡಬೇಡಿ: ಸಿಎಂಗೆ ದೇವೇಗೌಡ ಸಲಹೆ
ಬೆಂಗಳೂರು, ಸೆ.21: ಯಾವುದೇ ಕಾರಣಕ್ಕೂ ತಮಿಳುನಾಡಿಗೆ ಒಂದು ಹನಿ ನೀರನ್ನೂ ಬಿಡುವುದು ಬೇಡ ಎಂದು ಸಿಎಂ ಸಿದ್ದರಾಮಯ್ಯರಿಗೆ ಮಾಜಿ ಪ್ರದಾನಿ ಎಚ್.ಡಿ. ದೇವೇಗೌಡ ಸಲಹೆ ನೀಡಿದ್ದಾರೆ.
ಮಾಜಿ ಪ್ರಧಾನಿ ದೇವೇಗೌಡರ ನಿವಾಸಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿದ್ದು, ಕಾವೇರಿ ವಿವಾದ ಕುರಿತಂತೆ ಸುಮಾರು ಒಂದು ಗಂಟೆಗೂ ಅಧಿಕ ಕಾಲ ಚರ್ಚೆ ನಡೆಸಿದರು.
ಕಾವೇರಿ ವಿಚಾರದಲ್ಲಿ ಯಾವುದೇ ಆತಂಕ ಬೇಡ. ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಬಿಡಬೇಡಿ. ರಾಜ್ಯದ ಪಾಲಿಗೆ ಇದು ಸಂಕಷ್ಟದ ಕಾಲವಾಗಿದೆ. ನೀರು ಬಿಡದೇ ಇದ್ದರೆ ನ್ಯಾಯಾಂಗ ನಿಂದನೆ ಎನ್ನಬಹುದು. ರಾಜ್ಯ ಸರಕಾರದ ವಿರುದ್ಧ ಕ್ರಮಕ್ಕೆ ಸುಪ್ರೀಂಕೋರ್ಟ್ ಮುಂದಾಗಬಹುದು.ನೀವು ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸಜ್ಜಾಗಿರಿ ಎಂದು ಸಲಹೆ ನೀಡಿದ್ದಾರೆ ಎನ್ನಲಾಗಿದೆ.
ಕುಡಿಯುವ ನೀರಿನ ವಿಚಾರ ರಾಜ್ಯದ ಪ್ರಥಮ ಆದ್ಯತೆಯಾಗಲಿ. ಸುಪ್ರೀಂಕೋರ್ಟ್ ಮತ್ತು ಕೇಂದ್ರ ಸರಕಾರದ ನಿರ್ಧಾರವನ್ನು ಕಾದು ನೋಡೋಣ. ನೀವು ಈಗಲೇ ರಾಜೀನಾಮೆ ನೀಡುವ ಅಗತ್ಯ ಇಲ್ಲ ಎಂದು ದೇವೇಗೌಡರು ಸಿಎಂಗೆ ಸಲಹೆ ನೀಡಿದರು.
ಈ ಸಂದರ್ಭ ಸುಪ್ರೀಂ ಕೋರ್ಟ್ ವಕೀಲ ಮೋಹನ ಕಾತರಕಿ ಮತ್ತು ಸಚಿವ ಮಹದೇವಪ್ಪ ಉಪಸ್ಥಿತರಿದ್ದರು.