ಸಿಎಂ ಸಿದ್ದುಗೆ ಸಂಪೂರ್ಣ ಸಹಕಾರ ನೀಡಿದ ಮಾಜಿ ಪ್ರಧಾನಿ

Update: 2016-09-21 19:06 GMT
ಸಿಎಂ ಸಿದ್ದುಗೆ ಸಂಪೂರ್ಣ ಸಹಕಾರ ನೀಡಿದ ಮಾಜಿ ಪ್ರಧಾನಿ
  • whatsapp icon

ಬೆಂಗಳೂರು, ಸೆ. 22f : ದಿನಗಳೆದಂತೆ ಕಾವೇರಿ ವಿವಾದ ಜಟಿಲಗೊಳ್ಳುತ್ತಲೇ ಹೋಗುತ್ತಿರುವಾಗ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪಾಲಿಗೆ ದೊಡ್ಡ ತಲೆನೋವಾಗುವ ಸಾಧ್ಯತೆ ಇದ್ದ ಜೆಡಿಎಸ್ ವರಿಷ್ಠ ದೇವೇಗೌಡರೇ ಅವರ ಪಾಲಿನ ಆಪತ್ಭಾಂಧವರಾದರೆ ? ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ದಿನೇಶ್ ಅಮಿನ್ ಮಟ್ಟು ಅವರ ಬುಧವಾರ ತಡರಾತ್ರಿಯ ಫೇಸ್ ಬುಕ್ ಪೋಸ್ಟ್ ಪ್ರಕಾರ ಹೌದು ! 

ಮಟ್ಟು ಅವರ ಪ್ರಕಾರ " 15000 ಕ್ಯುಸೆಕ್ ನೀರು ತಮಿಳುನಾಡಿಗೆ ಬಿಡಬೇಕು ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿದ ದಿನದಿಂದ ಮಾಜಿ ಪ್ರಧಾನಿ ದೇವೆ ಗೌಡ ಅವರು ಮುಖ್ಯಮಂತ್ರಿಗಳ ಜತೆ ಸಂಪರ್ಕದಲ್ಲಿದ್ದಾರೆ. ಪ್ರತಿದಿನ ಅವರು ಸಿಎಂ ಜೊತೆ ಹಲವು ನಿಮಿಷಗಳ ಕಾಲ ಮಾತನಾಡಿದ್ದಾರೆ ". ಕಾವೇರಿ ವಿವಾದದಲ್ಲಿ ಸುಪ್ರೀಂ ಕೋರ್ಟ್ ನಲ್ಲಿ ರಾಜ್ಯಕ್ಕೆ ಹಿನ್ನಡೆ ಆಗಿರುವುದು ಸಿದ್ದರಾಮಯ್ಯನವರ ಪಾಲಿಗೆ ರಾಜಕೀಯವಾಗಿ ಅಗ್ನಿ ಪರೀಕ್ಷೆ. ಪಕ್ಷದೊಳಗೆ ಅವರನ್ನು ಕೆಳಗಿಳಿಸಲು ಪ್ರಯತ್ನಿಸುತ್ತಿರುವವರು, ಈಗಲೇ ಚುನಾವಣೆಯ - ಸಿಎಂ ಗಾದಿ ಹಿಡಿಯುವ ಮಾತನಾಡುವ ಬಿಜೆಪಿ ಹಾಗು ಸಿದ್ದರಾಮಯ್ಯ ನವರ ಪಾಲಿಗೆ ರಾಜಕೀಯ ಅಡೆತಡೆ ತರಲು ಒಂದು ಅವಕಾಶವನ್ನೂ ಕೈ ಬಿಡದ ಕುಮಾರಸ್ವಾಮಿಯವರ ನಡುವೆ ಸಿದ್ದರಾಮಯ್ಯ ಈ ಜಟಿಲ ಸಮಸ್ಯೆಯನ್ನು ಎದುರಿಸುವುದು ಬಹುದೊಡ್ಡ ಸವಾಲಾಗಿತ್ತು. ಆದರೆ ದೇವೇಗೌಡರ ಮುತ್ಸದ್ದಿ ನಡೆ ಈ ಪೈಕಿ ದೊಡ್ಡ ತಲೆನೋವನ್ನು ಸಿದ್ದರಾಮಯ್ಯನವರ ಪಾಲಿಗೆ ಶಮನ ಮಾಡಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. 

ದೇವೇಗೌಡರ ಈ ಪ್ರಬುದ್ಧ ನಡೆಯಿಂದ ಕುಮಾರಸ್ವಾಮಿ ಕೂಡ ಮೆತ್ತಗಾಗಿ ಒಗ್ಗಟ್ಟಿನ ಮಂತ್ರ ಪಠಿಸುತ್ತಿದ್ದಾರೆ ! ಇದು ಸಿದ್ದು ಪಾಲಿಗೆ ಸಣ್ಣ ಖುಷಿಯ ವಿಷಯವೇನಲ್ಲ. 

ಬುಧವಾರ ಸಿಎಂ ಖುದ್ದು ದೇವೇಗೌಡರನ್ನು ಅವರ ನಿವಾಸದಲ್ಲಿ ಭೇಟಿಯಾಗಿದ್ದಾರೆ. ಆಗಲೂ ಗೌಡರು ರಾಜಕೀಯ ಹಿರಿಯ ನೇತಾರನಂತೆ ಮಾತನಾಡಿದ್ದಾರೆ ಹಾಗು ತಮ್ಮ ಹಿರಿತನಕ್ಕೆ ತಕ್ಕಂತೆ ಮುಖ್ಯಮಂತ್ರಿಗೆ ಸಂಪೂರ್ಣ ಬೆಂಬಲ ಸೂಚಿಸಿ ಸಹಕಾರದ ಭರವಸೆ ನೀಡಿದ್ದಾರೆ. 

ಸದಾ ಹಾವು ಮುಂಗುಸಿಯಂತೆ ಜಗಳಾಡಿಕೊಂಡಿದ್ದ ಸಿದ್ದು ಹಾಗು ಹಿರಿ ಗೌಡರು ಕಾವೇರಿ ವಿಷಯದಲ್ಲಿ ಒಂದೇ ಧ್ವನಿಯಲ್ಲಿ ಮಾತನಾಡುತ್ತಿರುವುದು ರಾಜ್ಯದ ಪಾಲಿಗೂ ಸಂತಸದ ವಿಷಯ. ಇಂತಹ ಸಂದರ್ಭಗಳಲ್ಲಿ ರಾಜಕೀಯವನ್ನು ಮೀರಿ ಜನರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಹೆಜ್ಜೆ ಇಟ್ಟಿರುವುದು ವ್ಯಾಪಕ ಶ್ಲಾಘನೆಗೆ ಪಾತ್ರವಾಗಿದೆ. 

ಸರ್ವ ಪಕ್ಷ ಸಭೆಗೆ ಹೋಗದೆ ಇದ್ದ ಬಿಜೆಪಿ ವಿರುದ್ಧ ಜನರಲ್ಲಿ ಅಸಮಾಧಾನ ಇರುವುದು ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗವಾಗಿದೆ. ಇಂತಹ ಸಂದರ್ಭದಲ್ಲಿ ಸಿದ್ದುಗೆ ಗೌಡರು ಸಾಥ್ ನೀಡಿರುವುದು ಬಿಜೆಪಿ ಮಾತ್ರವಲ್ಲ ಕಾಂಗ್ರೆಸ್ ನೊಳಗೂ ಸಿದ್ದು ಕಾಲೆಳೆಯಲು ಪ್ರಯತ್ನಿಸುವವರಿಗೆ ಹಿನ್ನಡೆಯಾಗಿದೆ. 

ಮಟ್ಟು ಅವರ ಫೇಸ್ ಬುಕ್ ಪೋಸ್ಟ್ ನಲ್ಲಿ ಇದ್ದದ್ದು ಹೀಗೆ : 

ಕೆಲವು ವಿಷಯಗಳನ್ನು ಹೇಳಬೇಕೋ ಬೇಡವೋ ಎನ್ನುವುದು ನನಗೆ ಇನ್ನೂ ಗೊತ್ತಿಲ್ಲ, ಹೇಳಿಯೇ ಬಿಡುತ್ತೇನೆ..15000 ಕ್ಯುಸೆಕ್ಸ್ ನೀರುಹರಿಸಬೇಕೆಂದು ಸುಪ್ರೀಂ ಕೋರ್ಟ್ ಆದೇಶ ನೀಡಿದ ದಿನದಿಂದ ಎಚ್.ಡಿ.ದೇವೇಗೌಡರು ಮುಖ್ಯಮಂತ್ರಿಗಳ ಜತೆ ಸಂಪರ್ಕದಲ್ಲಿದ್ದಾರೆ. ಒಮ್ಮೊಮ್ಮೆ ದಿನಕ್ಕೆರಡು

ಬಾರಿ ಮಾತನಾಡಿದ್ದಾರೆ. ಈ ಮಾತುಕತೆ ೧೫ ನಿಮಿಷಕ್ಕಿಂತ ಮೊದಲು ಕೊನೆಗೊಂಡಿದ್ದೇ ಕಡಿಮೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News